ಹೂವಿನಕೋಲು: ಕರಾವಳಿಯ ಸಾಂಪ್ರದಾಯಿಕ ಕಲೆ

ಹೂವಿನಕೋಲು ಕಲಾಪ್ರದರ್ಶನ 

  "ನಾರಾಯಣಾಯ ನಮೋ ನಾರಾಯಣಾಯ, ನಾಭಿ ಕಮಲಕೆ ಶರಣು ನಾರಾಯಣಾಯ, ಗುರುದೈವ ಗಣಪತಿಗೆ ಶರಣು ಶರಣೆಂದು, ಲೇಸಾಗಿ ಹರಸುವೆವು ಬಾಲಕರು ಇಂದು" ಎಂಬ ಪೀಠಿಕೆಯನ್ನು ಹಾಕುತ್ತಾ ಪೌರಾಣಿಕ ಪ್ರಸಂಗದಿಂದ ಆಯ್ದ ಭಾಗವನ್ನು ಯಕ್ಷಗಾನ ತಾಳಮದ್ದಳೆಯ ಕಿರುರೂಪದಲ್ಲಿ ಪ್ರಸ್ತುತಪಡಿಸುವ ಕರ್ನಾಟಕ ಕರಾವಳಿಯ ವಿಶಿಷ್ಟ ಸಾಂಪ್ರದಾಯಿಕ ಕಲಾಪ್ರಕಾರವಾದ ಹೂವಿನಕೋಲು ಕಲೆ ಕುಂದಾಪುರ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಸಂಚಾರ ಕಂಡುಕೊಂಡಿದೆ.

  ವರ್ಷಕ್ಕೊಮ್ಮೆ ನವರಾತ್ರಿಯ ಸಮಯದಲ್ಲಿ ಹಳ್ಳಿಹಳ್ಳಿಗಳಿಗೆ ಸಂಚಾರ ಹೊರಡುವ ಹೂವಿನಕೋಲು ತಂಡದಲ್ಲಿ ಭಾಗವತ, ಮದ್ದಳೆಕಾರ ಮತ್ತು ಇಬ್ಬರು ಬಾಲಕರು ಅರ್ಥಧಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಪೌರಾಣಿಕ ಪ್ರಸಂಗಗಳಲ್ಲಿನ ಯುದ್ಧ, ದುಃಖ, ವೀರಾವೇಶ ಮತ್ತಿತರ ಆಯ್ದ ಸನ್ನಿವೇಶಗಳನ್ನು ಬಳಸಿಕೊಂಡು 20ರಿಂದ 25 ನಿಮಿಷಗಳ ಕಾಲ ಈ ಪ್ರದರ್ಶನ ನಡೆಯುತ್ತದೆ. ಅರ್ಥವನ್ನು ಹೇಳುವ ಬಾಲಕರು ತಮ್ಮ ಕೈಯಲ್ಲಿ ಹೂವಿನಿಂದ ಅಲಂಕೃತವಾದ ಕೋಲುಗಳನ್ನು ಹಿಡಿದಿರುತ್ತಾರೆ. ಪ್ರತೀ ಊರಿನಲ್ಲಿ ಆಹ್ವಾನವಿತ್ತ ಮನೆ ಸೇರಿದಂತೆ ಇನ್ನಿತರ ಮನೆಗಳಿಗೆ ಹೂವಿನಕೋಲು ತಂಡದವರು ಭೇಟಿ ನೀಡಿ ಕಲಾಪ್ರದರ್ಶನವನ್ನು ನೀಡುತ್ತಾರೆ. ಮನೆಯ ಚಾವಡಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮನೆಮಂದಿಯೇ ಪ್ರೇಕ್ಷಕರು. ಅಕ್ಕಪಕ್ಕದ ಮನೆಯವರೂ ಬಂದು ಈ ಕಲೆಯ ಆಸ್ವಾದನೆಯನ್ನು ಮಾಡುವುದಿದೆ. ಕಲಾಸೇವೆಯನ್ನು ನೀಡಿದವರಿಗೆ ಮನೆಯವರು ತಮ್ಮ ಯಥಾಶಕ್ತಿಯ ಕಾಣಿಕೆಯನ್ನು ಸಲ್ಲಿಸುವುದು ವಾಢಿಕೆ.
     
   ಹೂವಿನಕೋಲು ಕಲಾಪ್ರಕಾರಕ್ಕೆ ಹೊಸತನವನ್ನು ನೀಡಿದ ಮರವಂತೆಯ ಹೆಸರಾಂತ ಯಕ್ಷಗಾನ ಕಲಾವಿದ ದಿ. ನರಸಿಂಹ ದಾಸ್ ಅವರ ಪುತ್ರರಾದ ಕಲಾವಿದ ದೇವರಾಜ ದಾಸ್ ಅವರು ಅಕ್ಟೋಬರ್ 9ರಂದು ಉಪ್ಪುಂದದ ಹಲವೆಡೆ ಹೂವಿನಕೋಲು ಕಲಾಪ್ರದರ್ಶನವನ್ನು ನಡೆಸಿಕೊಟ್ಟರು. ಪರಂಪರಾಗತವಾಗಿ ಬಂದ ಈ ಕಲೆಯನ್ನು ತಮ್ಮ ತಂದೆಯವರಿಂದ ಕಲಿತಿರುವ ದೇವರಾಜ ದಾಸ್ ಅವರು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಜೀವನ ನಿರ್ವಹಣೆಯ ದೃಷ್ಟಿಯಿಂದಲ್ಲವಾದರೂ ಪರಂಪರೆಯಿಂದ ಬಂದಿರುವ ಈ ಕಲಾಪ್ರಕಾರವು ನಶಿಸಬಾರದು ಎಂಬ ಉದ್ದೇಶದಿಂದ ಕಳೆದ ಹಲವಾರು ವರ್ಷಗಳಿಂದ ಅಲ್ಲಲ್ಲಿ ಹೂವಿನಕೋಲು ತಿರುಗಾಟವನ್ನು ನಡೆಸುತ್ತಿದ್ದೇವೆ. ಕಲಾಸಕ್ತರ ಸೂಕ್ತ ಪ್ರೋತ್ಸಾಹ ದೊರಕಿದಲ್ಲಿ ಈ ಕಲೆ ಮುಂದಿನ ಪೀಳಿಗೆಗೂ ತಲುಪಬಹುದು ಎನ್ನುತ್ತಾರೆ ದೇವರಾಜ್. 
    
   ಯಕ್ಷಗಾನ ಕಲಾವಿದರೂ ಆದ ದೇವರಾಜ್ ಅವರು ವಿವಿಧೆಡೆ ಆಸಕ್ತರಿಗೆ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದು, ಅವರ ಜೊತೆಗೆ ಮರವಂತೆಯ 5 ಮತ್ತು 6ನೇ ತರಗತಿಯಲ್ಲಿ ಕಲಿಯುತ್ತಿರುವ ಇಬ್ಬರು ಬಾಲಕರು ಹೂವಿನಕೋಲು ಅರ್ಥಧಾರಿಗಳಾಗಿ ಪಾಲ್ಗೊಂಡು ಕಲಾಪ್ರಾವೀಣ್ಯವನ್ನು ಪಡೆಯಲು ತವಕಿಸುತ್ತಿದ್ದಾರೆ. ಆಧುನಿಕ ಪ್ರವೃತ್ತ್ತಿಯ ನಡುವಲ್ಲಿ ಹೂವಿನಕೋಲುವಿನಂತಹ ಕಲಾಪ್ರಕಾರಗಳಿಗೆ ಮನ್ನಣೆ ಕಡಿಮೆಯಾಗುತ್ತಿದ್ದರೂ ದೇವರಾಜ ದಾಸ್ ಮತ್ತು ತಂಡದವರು ಹೂವಿನಕೋಲು ಕಲಾಸೇವೆಯನ್ನು ಬಹಳ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುತ್ತಿದ್ದಾರೆ. 
    
ಹೂವಿನಕೋಲು ಕಲೆಗೆ ಪ್ರೋತ್ಸಾಹ ಅಗತ್ಯ
    ಕರ್ನಾಟಕದ ಕರಾವಳಿ ಭಾಗದಲ್ಲಿ ಮಾತ್ರ ಕಾಣಬಹುದಾದ ಅಪರೂಪದ ಸಾಂಪ್ರದಾಯಿಕ ಕಲೆಯಾದ ಹೂವಿನಕೋಲು ಕಲೆಯನ್ನು ಹಳ್ಳಿಗಳಲ್ಲಿ ಇಂದು ಹಿರಿಯ ತಲೆಮಾರಿನ ಒಂದಷ್ಟು ಮಂದಿ ಮಾತ್ರ ಸ್ವಾಗತಿಸುವ ಪರಿಸ್ಥಿತಿಯಿದೆ. ಆಧುನಿಕ ಮನಸ್ಕರಿಗೆ, ಯುವಜನರಿಗೆ ಇಂತಹ ಕಲೆಗಳು ಬೇಡವಾಗಿರುವುದು ವಿಷಾದಕರ ಸಂಗತಿ. ಪರಂಪರಾಗತ ಕಲೆಗೆ ಸೂಕ್ತ ಮನ್ನಣೆಯಿತ್ತು ಅದನ್ನು ಉಳಿಸಿ ಪ್ರೋತ್ಸಾಹಿಸಿ ಬೆಳೆಸುವ ಕಲಾಗೌರವದ ಪ್ರವೃತ್ತಿಯ ಅಗತ್ಯವಿದೆ. ಹೂವಿನಕೋಲು ಕಲಾವಿದರನ್ನು ಸರಕಾರವೂ ಗುರುತಿಸುವಂತಾಗಬೇಕು.           - ಓಂಗಣೇಶ್ ಉಪ್ಪುಂದ.


ವರದಿ ಕೃಪೆ: ಚಂದ್ರ ಕೆ. ಹೆಮ್ಮಾಡಿ
ಚಿತ್ರ: ಓಂಗಣೇಶ್ ಉಪ್ಪುಂದ.

ಕುಂದಾಪ್ರ ಡಾಟ್ ಕಾಂ- editor@kundapra.com