ಮತ್ತೆ ಮತ್ತೆ ಕಾಡುವ ಹುಲಿವೇಷ......

    “ಹೌದು. ನವರಾತ್ರಿ ಮುಗಿದಿದೆ. ಆದರೆ  ಅಬ್ಬರಿಸುವ ಹುಲಿವೇಷದ ಡೋಲು - ತಾಸೆಯ ಸದ್ದು ಮಾತ್ರ ಕಿವಿಗಳಲ್ಲಿ ಇನ್ನೂ ಪ್ರತಿಧ್ವನಿಸುತ್ತಿದೆ.ಅದು ಹುಲಿ ವೇಷ ಮಾಡುವ ಮೋಡಿ. ಉಡುಪಿ - ಮ0ಗಳೂರು ತನ್ನ ಹುಲಿವೇಷಕ್ಕೆ ಪ್ರಸಿದ್ಧಿಯನ್ನು ಪಡೆದಿರುವಂತಾದ್ದು. ಅದರಲ್ಲೂ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಹುಲಿವೇಷದ ರೀತಿ ಅತ್ಯಂತ ವಿಭಿನ್ನವಾದದ್ದು. ಹೌದು. ಪ್ರತೀ ಸಲ ನವರಾತ್ರಿ ಹಬ್ಬ ಬಂದಾಗಲೂ ಗಂಗೊಳ್ಳಿ ಹಾಗೂ ಅದರ ಸುತ್ತಮುತ್ತಲ ಊರಿನ ಜನತೆ ಅದೊಂದು ಹುಲಿವೇಷದ ವಿಭಿನ್ನ ತಮಟೆಯ ಸದ್ದಿಗಾಗಿ ಇನ್ನಿಲ್ಲದಂತೆ ಮೈಯೆಲ್ಲಾ ಕಿವಿಯಾಗಿಸಿಕೊಂಡು ಕಾಯುತ್ತಿರುತ್ತಾರೆ.. ಗಂಗೊಳ್ಳಿಯ ಹುಲಿವೇಷವನ್ನು ಯಾವಾಗ ನೋಡುತ್ತೀವೋ ಎನ್ನುವ ಕಾತರತೆ ಅವರ ಕಂಗಳಲ್ಲಿ ಇಣುಕುತ್ತಿರುತ್ತದೆ. ಅದು ಗಂಗೊಳ್ಳಿಯ ಹುಲಿಗಳ ತಾಕತ್ತು.”
     “ಹೌದು. ಇಲ್ಲಿನ ಹುಲಿವೇಷಕ್ಕೆ ಐವತ್ತಕ್ಕೂ ಅಧಿಕ ವರುಷಗಳ ಇತಿಹಾಸವಿದೆ. ಅದಕ್ಕಿಂತ ಹೆಚ್ಚಾಗಿ  ಇಲ್ಲಿನ ಹುಲಿಗಳ ವೇಷ ಅತ್ಯಂತ ವಿಭಿನ್ನವಾಗಿರುವಂತಾದ್ದು ಮತ್ತು ಆಕರ್ಷಣೀಯವಾದದ್ದು. ಇಲ್ಲಿನ ಹುಲಿ ವೇಷಗಳ ಕಲೆಗಾರಿಕೆ ಈ ವಲಯದಲ್ಲಿ ಮಾತ್ರ ಕಂಡುಬರುವಂತಾದ್ದು. ಎಲ್ಲಾ ಹುಲಿಗಳಂತೆ ದೊಡ್ಡ ದೊಡ್ಡ ಪಟ್ಟೆಗಳನ್ನು ಇಲ್ಲಿ ಎಳೆಯುವುದಿಲ್ಲ. ಎದೆ ಹೊಟ್ಟೆ ಹಾಗು ಬೆನ್ನಿನ ಭಾಗದಲ್ಲಿ ಹಾಗು ಭುಜಗಳ ಬಳಿ,ತೊಡೆಗಳ ಹುಲಿ ಅಥವಾ ಸಿಂಹಗಳ ಚಿತ್ರ(ನವಿಲು,ಜಿಂಕೆ,ಓಂ,ಹೂವು ಇತ್ಯಾದಿಗಳನ್ನು ಬಿಡಿಸುವುದುಂಟು.), ಇಲ್ಲವೇ ಹೂವುಗಳನ್ನು ಆಕರ್ಷಕವಾಗಿ ಚಿತ್ರಿಸಿ ಉಳಿದ ಭಾಗಗಳಲ್ಲಿ ಸಣ್ಣ ಸಣ್ಣ ಕಪ್ಪು ಪಟ್ಟೆಗಳನ್ನು ಬಿಡಿಸಿ ಅದರೊಳಗೆ ಕೆಂಪು ಬಣ್ಣವನ್ನು ತುಂಬಲಾಗುತ್ತದೆ. ಕೈ ಹಾಗು ಕಾಲುಗಳ ಮಧ್ಯ ಭಾಗದಲ್ಲಿ ಹಾದುಹೋಗುವ ಬೆನ್ನುಮೂಳೆಯನ್ನು ಹೋಲುವ ಸುರುಳಿಯಾಕಾರದ ಚಿತ್ರಿಕೆಗಳೂ ಆಕರ್ಷಕ. ಹುಲಿಗಳಲ್ಲಿ ಹಳದಿ ಹಾಗು ಬಿಳಿ ಬಣ್ಣದ ಹುಲಿಗಳೆಂದು ಎರಡು ತೆರನಾದ ಹುಲಿವೇಷಗಳನ್ನು ಹಾಕಲಾಗುತ್ತದೆ. ದೊಡ್ಡ ಗುಂಪುಗಳಲ್ಲಿ ಒಂದೆರಡು ಚಿರತೆಯ ವೇಷಗಳನ್ನು (ಚಿಟ್ಟೆ ಹುಲಿ) ಹಾಕಲಾಗುತ್ತದೆ. ಇವುಗಳ ಜೊತೆಗೊಬ್ಬ ನಕ್ಕು ನಗಿಸುವ ಬೇಟೆಗಾರ ಕೂಡ ಇರುತ್ತಾನೆ.ವಿಶಿಷ್ಠ ಸಂಧರ್ಭ ಗಳನ್ನು ಬಿಟ್ಟರೆ ನವರಾತ್ರಿಯ ಹೊರತಾಗಿ ಬೇರೆ ಸಮಯದಲ್ಲಿ ಈ ಹುಲಿವೇಷಗಳು ಗ0ಗೊಳ್ಳಿಯಲ್ಲಿ ಕಾಣಸಿಗುವುದಿಲ್ಲ.”
    “ಇಲ್ಲಿನ ವಿಶಿಷ್ಠ ಶೈಲಿಯ ಹುಲಿ ವೇಷದ ಕುಣಿತ ಮತ್ತು ಅದಕ್ಕೆ ಹಾಕುವ ತಾಸೆ ಮತ್ತು ಡೋಲಿನ ಪೆಟ್ಟುಗಳು ತೀರಾ ಕ್ರಮಬಧ್ಧವಾದದ್ದು.ಇಲ್ಲಿನ ಹುಲಿಕುಣಿತದಲ್ಲಿ ವಿಶೇಷ ಸರ್ಕಸ್ಸುಗಳು ನೆಗೆತಗಳು ಯಾವುದೂ ಇರುವುದಿಲ್ಲ. ಆದರೆ ಸಾಮಾನ್ಯ ಕುಣಿತ  ಮತ್ತು ಮೂರು ಪೆಟ್ಟಿನ ತಾಸೆ ಸದ್ದಿಗೆ  ಇವರು ಕುಣಿಯುವ ರೀತಿಗೆ ಎಂಥವರೂ ತಲೆದೂಗಬೇಕು. ಒಮ್ಮೊಮ್ಮೆ ರೌದ್ರ ರೂಪದಲ್ಲಿ ಹುಲಿಗಳ ಅಬ್ಬರಿಸುವಿಕೆಯ ರೀತಿಯಂತೂ ಬೆಚ್ಚಿ ಬೀಳಿಸುವಂತಿರುತ್ತದೆ. ಬೇಟೆಗಾರನನ್ನು ಆಕ್ರಮಿಸಿ ಅವನನ್ನು ಕೊಲ್ಲುವ ಸನ್ನಿವೇಶಗಳು, ಬೇಟೆಗಾರ `ಢುಳಿಂ ಪಚಿಕ್' ಎಂದು ಕೊನೆಯಲ್ಲೊಮ್ಮೆ ಕೂಗಿ ಎಲ್ಲರನ್ನೂ ನಗಿಸುವ ರೀತಿ, ಚೇಳು ಬಾಗಿ ಹಣ ತೆಗೆಯುವುದು, ನಿ0ಬೆ ಹಣ್ಣು ಒಡೆಯುವುದು.. ಈ ಎಲ್ಲದಕ್ಕೂ ಗಂಗೊಳ್ಳಿಯ ಹುಲಿಗಳಿಗೆ ಅವುಗಳೇ ಸಾಟಿ. ಸಮಾನ್ಯವಾಗಿ ಫಿಲ್ಮೀ ಹಾಡುಗಳಿ0ದ ಈ ಹುಲಿಗಳು ದೂರ ದೂರ.”
     “ರಾತ್ರಿಯಿಡಿ ಎಚ್ಚರವಾಗಿದ್ದುಕೊಂಡು ಮೈಗೆ ಬಣ್ಣಹಚ್ಚಿಕೊಳ್ಳುವ ಹುಲಿವೇಷಧಾರಿಗಳ ಸಹನಗೆ ನಿಜಕ್ಕೂ ಸಲಾಂ ಹೇಳಲೇ ಬೇಕು. ಈ ಹುಲಿಗಳಗೆ ಬಣ್ಣ ಹಾಕುವುದೇ ಒಂದು ದೊಡ್ಡ ಸಾಹಸ. ಮೈಯಿಡಿ ಬಣ್ಣಬಳಿಯುವುದರಿಂದ ಹಿಡಿದು ಅಷ್ಟು ಚಿತ್ತಾರಗಳನ್ನು ಕೇವಲ ಬ್ರಶ್ ನ ಸಹಾಯದಿಂದಲೇ ಮೂಡಿಸುವ ಕಲಾವಿದರ ಕೈ ಚಳಕವೂ ಗ್ರೇಟ್. ಉಮಾನಾಥ ದೇವಾಡಿಗ ಮತ್ತವರ ಕಲಾ ಬಳಗ ಇದಕ್ಕೆ ಪ್ರಸಿಧ್ಧಿಯನ್ನು ಪಡೆದಿದೆ. ಇತ್ತೀಚೆಗೆ ಒಂದಷ್ಟು ಹುಲಿವೇಷಧಾರಿಗಳು ಸ್ಪ್ರೇ ಪೈಂಟ್ ಮತ್ತು ಪಟ್ಟಿಗಳ ಮೊರೆ ಹೋಗಿರುವುದು ನಿಜ. ಜನತೆ  ಹಳೆಯ ಸಾಂಪ್ರದಾಯಿಕ ಹುಲಿಗಳನ್ನೇ  ಹೆಚ್ಚು ಮೆಚ್ಚುತ್ತಿದ್ದಾರೆ.”
     “ಆರಂಭದಲ್ಲಿ ದೇವಾಡಿಗ ಸಮುದಾಯದವರು ಮಾತ್ರ ಈ ವೇಷಗಳನ್ನು ಹಾಕುತ್ತಲಿದ್ದರಾದರೂ ಕಾಲಕ್ರಮೇಣ ಎಲ್ಲಾ ವರ್ಗದ ಜನರೂ ವೇಷಗಳನ್ನು ಧರಿಸಿ ಜನರನ್ನು ರಂಜಿಸುತ್ತಿದ್ದಾರೆ. ಈ ವೇಷಧಾರಿಗಳ ಮಟ್ಟಿಗೆ ಹುಲಿವೇಷ ಹಾಕುವುದು ಕಲೆಯ ಆರಾಧನೆ. ರಾಮ ದೇವಾಡಿಗ, ಬಾಬು,ಶೀನ, ಜಗನ್ನಾಥ  ಮು0ತಾದವರೆಲ್ಲಾ ಒಂದು ಕಾಲದಲ್ಲಿ ತಮ್ಮ ಅದ್ಭುತ ಎನ್ನಿಸುವಂತಹ ಹುಲಿವೇಷದ ಕಲೆಗಾರಿಕೆಯ ಪಟ್ಟುಗಳಿಂದ ಅತ್ಯಂತ ಜನಪ್ರಿಯತೆಯನ್ನು ಪಡೆದವರು. ಈಗಿನ ಯುವ ಜನತೆಗೆ ಈ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗಿಲ್ಲ. ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಈ ಬಾರಿ ಹುಲಿವೇಷಧಾರಿಗಳ ಸಂಖ್ಯೆ ಆರವತ್ತನ್ನು ಮೀರಿತ್ತು. ವರುಷದಿಂದ ವರುಷಕ್ಕೆ ಹುಲಿವೇಷಗಳನ್ನು ಹಾಕುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಕ್ಕಳಿಗಂತೂ ಇದೊಂದು ಬಿಡಲಾರದ ಆಕರ್ಷಣೆ. ತಮ್ಮ ಪುಟ್ಟ ಮಕ್ಕಳನ್ನು ಇಲ್ಲಿನ ತಾಯಂದಿರು ಹುಲಿವೇಷಧಾರಿಗಳ ಕೈಯಲ್ಲಿ ಎತ್ತಿಸಿಕೊಂಡು ಧನ್ಯತೆ ಅನುಭವಿಸುತ್ತಾರೆ. ಮಕ್ಕಳು ಇದರಿಂದ ಮುಂದೆ ಧೈರ್ಯವಂತರಾಗಿ ಬೆಳೆಯುತ್ತಾರೆ ಎನ್ನುವ ನಂಬಿಕೆ ಅವರದ್ದು.”
    “ಅದೇನೇ ಇರಲಿ ಗಂಗೊಳ್ಳಿಯ ಹುಲಿವೇಷದ ಗತ್ತು ಗೈರತ್ತು ಹಾಗು ಗಮ್ಮತ್ತು ಮತ್ತುಸೊಬಗಿನ ಚಂದವೇ ಬೇರೆ ಎನ್ನುವುದನ್ನು ಎಂಥವರೂ ಒಪ್ಪಿಕೊಳ್ಳಲೇ ಬೇಕು. ಈ ನಡುವೆ ಕೆಲವರು ಇದರ ನಿಜವಾದ ಮಹತ್ವವನ್ನರಿಯದೆ ಒಟ್ಟಾರೆಯಾಗಿ ಕುಣಿಯುತ್ತಾ ಬಾರಿಸುತ್ತಾ ಒಂದು ಅದ್ಭುತ ಸಾಂಸ್ಕ್ರತಿಕ ಕಲೆಗೆ ಅಪಚಾರವೆಸಗುತ್ತಿರುವುದು ದುರಂತ. ಕೋಮು ಸಾಮರಸ್ಯದ ಪ್ರತೀಕವಾಗಿಯೂ ಗಂಗೊಳ್ಳಿಯ ಹುಲಿವೇಷಗಳು ಕೀರ್ತಿ ಪಡೆದಿವೆ. ಹೌದು ಅದೇನೇ ಇದ್ದರೂ ನವರಾತ್ರಿ ಮುಗಿದರೂ ಈ ಹುಲಿಗಳು ಮತ್ತೆ ಮತ್ತೆ ಕಾಡುತ್ತಿವೆ. ಅನ್ನೋದು ಸತ್ಯ. ಸಾಧ್ಯ ಆದರೆ  ಮುಂದಿನ ಬಾರಿ  ಗಂಗೊಳ್ಳಿಗೆ ಬಂದರೆ ಈ ಹುಲಿಗಳನ್ನು ನೋಡುವುದನ್ನ ಮರೀಬೇಡಿ.”
                      - ನರೇಂದ್ರ ಎಸ್ ಗಂಗೊಳ್ಳಿ.
nsgangolli@yahoo.com 







ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com