
ನವರಾತ್ರಿ ಒಂಭತ್ತು ರಾತ್ರಿಗಳ ಸಮೂಹ. ಈಗ ಎರಡು ನವರಾತ್ರಿ ವಿಶೇಷವಾಗಿದ್ದು, ಆಚರಣೆಯಲ್ಲಿದೆ. ಒಂದು ಶರನ್ನವರಾತ್ರಿ ಇನ್ನೊಂದು ಚೈತ್ರ ನವರಾತ್ರಿ. ಈಗ ನಾವು ಆಚರಿಸುವುದು ಶರನ್ನವರಾತ್ರಿ.
ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ. ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ, ಎರಡನೇ ದಿನ ದೇವಜಾತ ದುರ್ಗಾಪೂಜಾ, ಮೂರನೇ ದಿನ ಮಹಿಷಾಸುರ ಮರ್ಧಿನಿ ದುರ್ಗಾಪೂಜಾ, ನಾಲ್ಕನೇ ದಿನ ಶೈಲ ಜಾತಾ ದುರ್ಗಾಪೂಜಾ, ಐದನೇ ದಿನ ದೂಮೃಹಾ ದುರ್ಗಾಪೂಜಾ, ಆರನೇ ದಿನ ಚಂಡ-ಮುಂಡ ಹಾ ದುರ್ಗಾಪೂಜಾ, ಏಳನೇ ದಿನ ರಕ್ತ ಬೀಜ ಹಾ ದುರ್ಗಾಪೂಜಾ, ಎಂಟನೇ ದಿನ ನಿಶುಂಭ ಹಾ ದುರ್ಗಾಪೂಜಾ.(ದುರ್ಗಾಷ್ಠಮಿ), ಒಂಭತ್ತನೇ ದಿನ ಶುಂಭ ಹಾ ದುರ್ಗಾಪೂಜಾ. ಏಳನೇ ದಿನ ಅಂದರೆ ಸಪ್ತಮಿಯಿಂದ ತ್ರಿದಿನ ದುರ್ಗಾಪೂಜಾ ಎಂದೂ ಮಾಡುತ್ತಾರೆ. ಮಹಾಕಾಳಿ, ಮಹಾಲಕ್ಷ್ಮಿ,ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ, ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ಇದು ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನನ್ನು ಕೊಂದ ದಿನ ಹಾಗೂ ದ್ವಾಪರ ಯುಗದಲ್ಲಿ ಪಾಂಡವರು ಕೌರವರನ್ನು ಸೋಲಿಸಿದ ದಿನವೂ ಹೌದು. ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ.
ಘಟಸ್ಥಾಪನೆಯ ಮಹತ್ವ: ನವರಾತ್ರಿಯನ್ನು ಏಕೆ ಆಚರಿಸುತ್ತೇವೆ? ಬ್ರಹ್ಮಾಂಡವು ಒಂದು ಘಟ(ಮಡಕೆ)ಯಂತಿದೆ. ಈ ಘಟರೂಪಿ ಬ್ರಹ್ಮಾಂಡದಲ್ಲಿ ಅವತರಿಸಿದ ತೇಜಸ್ವೀ ಆದಿಶಕ್ತಿಯನ್ನು, ಒಂಬತ್ತು ದಿನಗಳ ಕಾಲ ನಿರಂತರ ಉರಿಯುವ ನಂದಾದೀಪದ ಮಾಧ್ಯಮದಿಂದ ಪೂಜಿಸುವುದೇ ನವರಾತ್ರಿಯನ್ನು ಆಚರಿಸುವ ಉದ್ದೇಶವಾಗಿದೆ. ಮನೆಯಲ್ಲಿ ಘಟಪೂಜೆಯನ್ನು ಮಾಡಿದರೆ, ಶ್ರೀ ದುರ್ಗಾ ದೇವಿಯ ತತ್ವದ ಲಾಭವಾಗುವುದಲ್ಲದೆ ಮನೆಯ ವಾಸ್ತು ಕೂಡ ಚೈತನ್ಯಮಯವಾಗುತ್ತದೆ.
ಅಖಂಡ ದೀಪಪ್ರಜ್ವಲನೆ: ಭಕ್ತರು ಒಂಬತ್ತು ದಿನಗಳ ಕಾಲ ಉರಿಸುವ ದೀಪ, ನವರಾತ್ರ್ಯೋತ್ಸವದ ವೈಶಿಷ್ಟ್ಯ. ಗುಜರಾತಿನಲ್ಲಿ, ನವರಾತ್ರಿಯ ಸಮಯದಲ್ಲಿ ಅನೇಕ ತೂತುಗಳಿರುವ ಮಣ್ಣಿನ ಮಡಕೆಯಲ್ಲಿ ದೀಪವನ್ನು ಇಟ್ಟು ಪೂಜಿಸಲಾಗುತ್ತದೆ. ಸ್ತ್ರೀಯರ ಮಾತೃಶಕ್ತಿಯ ಪ್ರತೀಕವಾಗಿ ಒಂಬತ್ತು ದಿನಗಳ ಕಾಲ ಈ 'ದೀಪಗರ್ಭ'ವನ್ನು ಪೂಜಿಸುತ್ತಾರೆ. ನವರಾತ್ರಿ ಮತ್ತು ಇತರ ಧಾರ್ಮಿಕ ವಿಧಿಗಳಲ್ಲಿ ದೀಪವು ಅಖಂಡವಾಗಿ ಉರಿಯುತ್ತಿರುವುದು ಪೂಜಾವಿಧಿಯ ಭಾಗವಾಗಿರುತ್ತದೆ. ಗಾಳಿ, ದೀಪದೆಣ್ಣೆ ಕಮ್ಮಿ ಆಗುವುದು, 'ಬತ್ತಿ'ಗೆ ಕಾಡಿಗೆ ಹಿಡಿಯುವುದು ಮುಂತಾದ ಕಾರಣಗಳಿಂದ ದೀಪವು ಆರಿ ಹೋದರೆ, ಆ ಕಾರಣಗಳಿಗೆ ಸೂಕ್ತ ಪರಿಹಾರ ಮಾಡಿ, ದೀಪವನ್ನು ಪುನಃ ಉರಿಸಬೇಕು. ಇದಲ್ಲದೇ, ದೀಪವು ಆರಿ ಹೋಗಿದ್ದಕ್ಕೆ, ಪ್ರಾಯಶ್ಚಿತ್ತವಾಗಿ ಪೂಜಿಸಲ್ಪಡುವ ದೇವತೆಯ ನಾಮಜಪವನ್ನು ೧೦೮ ಅಥವಾ ೧೦೦೦ಸಲ ಜಪಿಸಬೇಕು.
ನವರಾತ್ರಿಯ ಸಮಯದಲ್ಲಿ ಶ್ರೀ ದುರ್ಗಾ ದೇವಿಯ ನಾಮಜಪವನ್ನು ಮಾಡುವುದರ ಮಹತ್ವ: ನವರಾತ್ರಿಯ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾರ್ಯರತವಾಗುವ ಶಕ್ತಿತತ್ವವನ್ನು ಗ್ರಹಿಸಲು ಈ ಸಮಯದಲ್ಲಿ 'ಶ್ರೀ ದುರ್ಗಾದೇವ್ಯೈ ನಮಃ |' ನಾಮಜಪವನ್ನು ಸತತವಾಗಿ ಮಾಡಬೇಕು.
ನವರಾತ್ರಿಯ ಆಚರಣೆ ಮತ್ತು ಮಹತ್ವ
ನಾರದರು, ರಾಮನಿಂದ ರಾವಣನ ವಧೆಯಾಗಬೇಕೆಂದು ರಾಮನಿಗೆ ಈ ವ್ರತ ವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಮಾಡಿದ ಮೇಲೆಯೇ ರಾಮನು ರಾವಣನನ್ನು ಸಂಹರಿಸಿದನು. ದೇವಿಯು ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧ ಮಾಡಿ ನವಮಿಯ ರಾತ್ರಿ ಅವನನ್ನು ಸಂಹರಿಸಿದಳು. ಅಂದಿನಿಂದ ಅವಳಿಗೆ ಮಹಿಷಾಸುರ ಮರ್ದಿನಿ ಎಂಬ ಹೆಸರು ಬಂದಿತು.

ದಸರಾ

ಕುಂದಾಪ್ರ ಡಾಟ್ ಕಾಂ- editor@kundapra.com