ಪಡುಕೋಣೆ, ನಾಡಾ-ಗುಡ್ಡೆಅಂಗಡಿಯ ಮಾರ್ಗ ದುಸ್ತರ

ಕುಂದಾಪುರ: ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೋಣೆ, ನಾಡಾ-ಗುಡ್ಡೆಅಂಗಡಿ ಹಾಗೂ ಸೇನಾಪುರ ಸಂಪರ್ಕ ರಸ್ತೆಯಲ್ಲಿ ಉಂಟಾಗಿರುವ ಭಾರೀ ಹೊಂಡಗುಂಡಿಗಳಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ಭಾರೀ ತೊಂದರೆಯಾಗಿದೆ. ಇಲ್ಲಿನ ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚಿ ದುರಸ್ತಿ ಕಾರ್ಯ ನಡೆಯದಿರುವುದರಿಂದ ನಾಗರಿಕರಿಗೆ ನೆಮ್ಮದಿಯ ಸಂಚಾರ ಮರೀಚಿಕೆಯಾಗಿದೆ.
     ಪಡುಕೋಣೆ ಕಾಲೇಜು, ಗುಡ್ಡೆಅಂಗಡಿ-ಸೇನಾಪುರ ಕಿರುಸೇತುವೆ, ಸೇನಾಪುರ ಗ್ರಾಮಕರಣಿಕರ ಕಚೇರಿ ಮತ್ತು ನಾಡಾ-ಬಂಟ್ವಾಡಿ ಪ್ರವೇಶದ್ವಾರದ ಬಳಿಯಲ್ಲಿ ರಸ್ತೆಯಲ್ಲಿ ಘಾತಕ ಹೊಂಡಗಳು ಉಂಟಾಗಿವೆ. ಹೊಂಡಗುಂಡಿಗಳಿಂದ ಕೂಡಿದ ಇಲ್ಲಿನ ರಸ್ತೆಯಲ್ಲಿ ಸಂಚರಿಸುವಾಗ ಸಮುದ್ರದ ಅಲೆಗಳ ನಡುವೆ ಓಲಾಡುತ್ತಾ ತೇಲಾಡುತ್ತಾ ಸಾಗುವ ದೋಣಿಯಂತಹ ಅನುಭವ ಉಂಟಾಗುತ್ತದೆ. ರಸ್ತೆಯ ಅಪಾಯಕಾರಿ ಸ್ಥಿತಿಯಿಂದಾಗಿ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ಬಸ್ಸುಗಳಲ್ಲಿ ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು, ಗರ್ಭಿಣಿ ಮಹಿಳೆಯರು ಪ್ರಯಾಣ ಕೈಗೊಳ್ಳಲು ಭಯಪಡುವ ಸ್ಥಿತಿ ಉಂಟಾಗಿದೆ. 
   ನಾಡಾ-ಗುಡ್ಡೆಅಂಗಡಿ ರಸ್ತೆ ದುರಸ್ತಿಗೆ ಆಗ್ರಹಿಸಿ ಕ್ಷೇತ್ರದ ಶಾಸಕರು, ಸಂಸದರು ಹಾಗೂ ಸ್ಥಳೀಯ ಜನಪ್ರತಿನಿದಿಗಳಿಗೆ ಈಗಾಗಲೇ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಅವರು ಜಾಣಕಿವುಡುತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯ ಜನತೆ ತೀವ್ರ ಆಕ್ರೋಶದಿಂದ ನುಡಿದಿದ್ದಾರೆ. ರಸ್ತೆ ಸಂಚಾರಕ್ಕೆ ಸಂಪೂರ್ಣ ಅಯೋಗ್ಯವಾಗಿದ್ದು, ವಿಪರೀತ ಹದಗೆಟ್ಟಿದ್ದರೂ ಆಡಳಿತ ವರ್ಗ ಕಿಂಚಿತ್ತೂ ಗಮನವನ್ನು ಹರಿಸದೇ ದಿವ್ಯಮೌನ ತಳೆದಿದ್ದರ ಬಗ್ಗೆ ನಾಡಾ-ಗುಡ್ಡೆಅಂಗಡಿ ನಾಗರಿಕರು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದು, ಇಲ್ಲಿನ ರಸ್ತೆಯ ದುರಸ್ತಿ ಕಾರ್ಯ ಮತ್ತಷ್ಟು ವಿಳಂಬಗೊಂಡಲ್ಲಿ ಪ್ರತಿಭಟನೆಯ ಮೂಲಕ ಹೋರಾಟ ಅನಿವಾರ್ಯ ಎಂದು ತಿಳಿಸಿದ್ದಾರೆ.

ಚಿತ್ರ-ವರದಿ: ಸಿ. ಕೆ. ಹೆಮ್ಮಾಡಿ

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com