ಆರ್ಟ್ ಗ್ಯಾಲರಿಗೆ ನುಗ್ಗಿದ ಮರಿ ಹುಲಿಗಳು!
    ಚಿತ್ರಕಲಾ ಶಾಲೆಗಳು ಹತ್ತಾರು ಹುಲಿಗಳು. ಎಲ್ಲಾ ಮರಿ ಹುಲಿಗಳು! ಈ ಅಮಾಯಕ ಹುಲಿಮರಿಗಳು ಕಂಡು ಬಂದಿದ್ದು ಕುಂದಾಪುರದ ಸಾಧನ ಸಂಗಮ ಸಂಸ್ಥೆಯಲ್ಲಿ. ಶರನ್ನವರಾತ್ರಿಯ ಅಂತಿಮ ದಿನ ಈ ದೃಶ್ಯ ಕಂಡು ಬಂತು.
   ಬೀದಿಯಲ್ಲಿ ಹುಲಿವೇಷ ಬಂದಾಗ ಅಚ್ಛರಿಯಿಂದ ಬೆರಗು ಕಂಗಳಿಂದ ನೋಡುವ ಮಕ್ಕಳಲ್ಲಿ ಹುಲಿ ವೇಷದ ಬಗೆಗಿರುವ ಕೌತುಕಕ್ಕೆ ಪ್ರಾತ್ಯಕ್ಷಿಕೆಯ ಉತ್ತರ ನೀಡುವ ಪ್ರಯತ್ನ ಸಾಧನ ಸಂಗಮ ಸಂಸ್ಥೆ ಮಾಡಿದೆ. ಸ್ವತಃ ಮಕ್ಕಳಿಗೆ ಹುಲಿವೇಷವನ್ನು ಹಾಕಿಸುವ ಈ ವಿಭಿನ್ನ ಪ್ರಯತ್ನಕ್ಕೆ ಮಕ್ಕಳಿಂದ ವ್ಯಕ್ತವಾಗಿದ್ದು ಅದ್ಬುತ ಪ್ರತಿಕ್ರಿಯೆ.
    ಹುಲಿಯ ಮುಖ ವರ್ಣಿಕೆಯೇ ಮರೆಯಾಗುತ್ತ, ಆ ಜಾಗದಲ್ಲಿ ಮುಖವಾಡ ಆಕ್ರಮಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕಲಾವಿದನ ಕುಂಚ ಕಲೆಯಿಂದ ಮುಖದಲ್ಲಿ ಹುಲಿಯ ವದನ ಚಿತ್ರಿಸುವ ಮೂಲಕ ಮಕ್ಕಳಿಗೆ ಹುಲಿಯ ಮುಖವರ್ಣಿಕೆ ಮಾಡಲಾಯಿತು. ವೇಷದ ಹಿಂದಿರುವ ಕುತೂಹಲವನ್ನು ಮಕ್ಕಳು ಸ್ವತಃ ಅನುಭವಿಸುವ ಮೂಲಕ ತಣಿಸಿಕೊಂಡರು.
    ಕಲಾವಿದರಾದ ರವಿ ಕುಮಾರ್ ಹಾಗೂ ಸುರೇಶ ಮಕ್ಕಳ ಮುಖಕ್ಕೆ ಹುಲಿಯನ್ನು ಚಿತ್ರಿಸಿದರು. ಭಿನ್ನ ವಿಭಿನ್ನ ಕ್ರೂರ ರಸವನ್ನು ಮುಖದಲ್ಲಿ ರೇಖೆಗಳ ಮೂಲಕ ಬಿಂಬಿಸಿದರು. ಆಕ್ರ್ಯಾಲಿಕ್ ಪ್ರಾಬ್ರಿಕ್ ಬಣ್ಣವನ್ನು ಬಳಿಸಿದ್ದು, ಬಣ್ಣ ಒಣಗಿದಂತೆ ಅದು ಪುಡಿಯಾಗಿ ಉದುರಿಹೋಗುವ ಗುಣವನ್ನು ಹೊಂದಿದ್ದು, ಯಾವುದೇ ಅಪಾಯಕಾರಿಯಲ್ಲವಾದ್ದರಿಂದ ಮಕ್ಕಳು ಆಸಕ್ತಿಯಿಂದ ಬಣ್ಣ ಹಾಕಿಸಿಕೊಂಡರು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಕೂಡಾ ಭಾಗವಹಿಸಿ, ತಮ್ಮ ಮಕ್ಕಳ ಮುಖದಲ್ಲಿ ಹುಲಿಯನ್ನು ಕಂಡರು. ಈ ಯೋಚನೆಯ ರೂವಾರಿ ನಾರಾಯಣ ಐತಾಳ್, ಚಿತ್ರಕಲಾವಿದ ಮಂಜುನಾಥ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.

ವರದಿ ನಾಗರಾಜ್ ವಂಡ್ಸೆ


ಕುಂದಾಪ್ರ ಡಾಟ್ ಕಾಂ- editor@kundapra.com