ಎಲ್ಲೆ ಮೀರಿದ ಕೋಮುವಾದಿ ಸಂಘಟನೆಗಳ ನೈತಿಕ ಪೊಲೀಸ್ ಗಿರಿ

   ರ್ನಾಟಕದ ಕರಾವಳಿಯಲ್ಲಿ ಹಿಂದೂ ಕೋಮುವಾದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಈಗ ಮಂಗಳೂರಿಗೆ ಹಿಂದೂ ಕೋಮುವಾದಕ್ಕಿಂತಲೂ ಅಪಾಯಕಾರಿಯಾಗಿ ಬೆಳೆಯುತ್ತಿರುವುದಕ್ಕೆ ನಿನ್ನೆ ಮಂಗಳೂರಿನಲ್ಲಿ ನಡೆದ ಎರಡು ಘಟನೆಗಳು ಸಾಕ್ಷಿ. ಮುಸ್ಲಿಂ ಸಂಘಟನೆಗಳ ಕೋಮುವಾದ ಇಂದು ನಿನ್ನೆಯದ್ದಲ್ಲ. ಇಂತಹ ಘಟನೆಗಳ ಬಗ್ಗೆ ಮೂರು ವರ್ಷದ ಹಿಂದೆಯೇ ವರದಿಯಾಗಿದೆ. ಆಗೆಲ್ಲಾ ಮುಸ್ಲಿಂ ಕೋಮುವಾದಿ ಸಂಘಟನೆಗಳ ವೇದಿಕೆಯಲ್ಲಿ ನಿಂತು ಮಾನವ ಹಕ್ಕು, ಕೋಮುವಾದದ ಬಗ್ಗೆ ಮಾತನಾಡುವ ಜಾತ್ಯಾತೀತರು, ಬುದ್ದಿಜೀವಿಗಳಲ್ಲಿ ಕೇಳಿದರೆ “ದಾಳಿಯನ್ನು ಪಿಎಫ್‌ಐ ಮಾಡಿದೆ ಎನ್ನುವುದಕ್ಕೆ ಸ್ಟ್ರಾಂಗ್ ಎವಿಡೆನ್ಸ್” ಕೇಳಿದ್ದರು. ಈಗ ನಾವು ಪಿಎಫ್‌ಐ‌ಯನ್ನು ಪ್ರಶ್ನಿಸುತ್ತಿಲ್ಲ. ಪಿಎಫ್‌ಐ‌ಯನ್ನು ಕೋಮು ಸೌಹಾರ್ದದ ಹೆಸರಲ್ಲಿ ಸಮರ್ಥಿಸುತ್ತಿರುವ ಸೆಕ್ಯೂಲರಿಸ್ಟ್‌ಗಳನ್ನು ಪ್ರಶ್ನಿಸುತ್ತೇವೆ.
      ಅಂದು ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಮೂಡಬಿದ್ರೆಯ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಮಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಗೆಳೆಯರಾಗಿದ್ದು ಮಂಗಳೂರಿಗೆ ಕಾರ್‍ಯನಿಮಿತ್ತ ಹೊರಟಿದ್ದರು. ಇದನ್ನು ತಿಳಿದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಾರ್‍ಯಕರ್ತರು ಯುವಕ ಮತ್ತು ಯುವತಿ ಇದ್ದ ಬಸ್ಸನ್ನು ಹತ್ತಿದ್ದಾರೆ. ಬಸ್ಸು ಮಂಗಳೂರಿನ ಹಂಪನಕಟ್ಟೆಯ ಬಳಿ ನಿಂತಾಗ ಯುವಕ ಮತ್ತು ಯುವತಿ ಬಸ್ಸಿನಿಂದ ಇಳಿದಿದ್ದನ್ನು ಗಮನಿಸಿದ ಕಾರ್‍ಯಕರ್ತರು ಕೂಡಾ ಬಸ್ಸಿನಿಂದ ಇಳಿದು ಹಿಂದೂ ಯುವಕನಿಗೆ ಥಳಿಸಿದ್ದಾರೆ. ತಕ್ಷಣ ಸ್ಥಳೀಯರು ದಾಳಿಗೊಳಗಾದ ಹಿಂದೂ ಯುವಕನನ್ನು ರಕ್ಷಣೆ ಮಾಡಿದ್ದರಿಂದ ಹೆಚ್ಚಿನ ಜೀವಾಪಾಯಗಳು ಆಗಿಲ್ಲ. ಮುಸ್ಲಿಂ ಯುವತಿಯನ್ನು ಅಪಹರಿಸಿದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಾರ್‍ಯಕರ್ತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಬಂದರು ಪೊಲೀಸರು ಸ್ಥಳಕ್ಕೆ ಬಂದು ಸೇರಿದ್ದ ಜನರನ್ನು ಚದುರಿಸಿದ್ದಾರೆ.
ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಗೆಳೆಯರಾಗಿರಬಹುದು ಅಥವಾ ಇನ್ನೇನಾಗಿದ್ದರೂ ಆಗಿರಬಹುದು. ಅದನ್ನು ಕೇಳುವ ಅಧಿಕಾರ ಈ ಸಂಘಟನೆಗಳಿಗೆ ಕೊಟ್ಟವರ್‍ಯಾರು? ಯುವತಿ ಮುಸ್ಲಿಮಳು ಎಂಬ ಒಂದೇ ಮಾನದಂಡದಲ್ಲಿ ಆಕೆಯನ್ನು ಬಲಾತ್ಕಾರವಾಗಿ ವಾಹನದಲ್ಲಿ ಕುಳ್ಳಿರಿಸಿ ಅವರಿಗೆ ಬೇಕಾದ ಸ್ಥಳಗಳಿಗೆ ಕೊಂಡೊಯ್ದು ಬುದ್ದಿ ಹೇಳುವ ಅಥಾರಿಟಿಯನ್ನು ಸಂಘಟನೆಗಳಿಗೆ ನೀಡಿದವರ್‍ಯಾರು? ಈ ಬಗ್ಗೆ ಬಂದರು ಪೊಲೀಸ್ ಠಾಣೆಯನ್ನು ಕೇಳಿದರೆ “ಇಂತಹ ಘಟನೆ ಆಗಿರುವ ಬಗ್ಗೆ ಮಾಹಿತಿಯೇ ಇಲ್ಲ” ಎನ್ನುತ್ತಾರೆ. ಅದಕ್ಕೂ ಕಾರಣವಿದೆ. ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆದರೆ ಆಯಾ ಠಾಣೆಯ ಅಧಿಕಾರಿಯನ್ನು ಹೊಣೆ ಮಾಡಲಾಗುವುದು ಎಂದು ಸರಕಾರ ಹೇಳಿರುವುದರಿಂದ ಈಗ ಪೊಲೀಸರು ನೈತಿಕ ಪೊಲೀಸ್ ಗಿರಿ ನಡೆದಿದೆ ಎಂಬುದನ್ನು ಒಪ್ಪಿಕೊಳ್ಳುವುದೇ ಇಲ್ಲ. ಒಂದೋ ನೈತಿಕ ಪೊಲೀಸ್ ಗಿರಿ ಘಟನೆಯನ್ನು ಯಾರಾದರೂ ಚಿತ್ರೀಕರಿಸಿ ಸಾಕ್ಷ್ಯ ಇಟ್ಟುಕೊಂಡಿರಬೇಕು ಇಲ್ಲವಾದರೆ ನೈತಿಕ ಪೊಲೀಸ್ ಗಿರಿಗೆ ಒಳಗಾದ ಸಂತ್ರಸ್ತರು ದೂರು ಕೊಡಬೇಕು. ಇಲ್ಲವಾದರೆ ಪೊಲೀಸರೇ ಘಟನೆಯನ್ನು ಮುಚ್ಚಿ ಹಾಕಿಬಿಡುತ್ತಾರೆ.
      ಇದಾದ ಸ್ವಲ್ಪ ಹೊತ್ತಿನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದಿಂದ ಭೀಕರವಾದ ಇನ್ನೊಂದು ನೈತಿಕ ಪೊಲೀಸ್ ಗಿರಿ ನಡೆದಿದೆ.
ಮಂಗಳೂರಿನಿಂದ ಪ್ರಸಾರವಾಗುವ “ಕರಾವಳಿ ಅಲೆ” ಪತ್ರಿಕೆಯ ವಿಟ್ಲ ವರದಿಗಾರ ವಿ.ಟಿ. ಪ್ರಸಾದ್ ಎಂಬವರು ತನ್ನ ಮನೆಯ ಪಕ್ಕದ ಮುಸ್ಲಿಂ ಮಹಿಳೆ ಅಲೀಮಾ ಎಂಬವರ ಮನೆ ಬೀಳುವ ಸ್ಥಿತಿಯಲ್ಲಿರುವುದನ್ನು ಕಂಡು ಪತ್ರಿಕೆಯಲ್ಲಿ ಸುದ್ದಿ ಮಾಡಿದ್ದರು. ಸುದ್ದಿಗೆ ಸ್ಪಂದಿಸಿದ ವಿಟ್ಲದ ಮುಸ್ಲಿಂ ಉದ್ಯಮಿಗಳು ಹಣದ ಸಹಕಾರ ನೀಡುವ ಭರವಸೆ ನೀಡಿದ್ದರು. ತನ್ನ ಮನೆಯ ಪಕ್ಕದಲ್ಲಿರುವ ಮನೆಯಾಗಿದ್ದರಿಂದ ಈ ಬಗ್ಗೆ ಕಾಳಜಿ ವಹಿಸಿದ್ದ ವಿ.ಟಿ. ಪ್ರಸಾದ್ ಮನೆಯ ರಿಪೇರಿಗೆ ಹಣವನ್ನು ದಾನಿಗಳಿಂದ ಸಂಗ್ರಹಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದಕೊಂಡ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಾರ್‍ಯಕರ್ತರು ಪ್ರಸಾದ್ ರನ್ನು ಭೇಟಿಯಾಗಿ “ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಮನೆಗೆ ಬೇಕಾದಷ್ಟು ಮರ ಒದಗಿಸುತ್ತೇವೆ. ನೀವು ಈ ಬಗ್ಗೆ ವರದಿ ಮಾಡಬೇಕು” ಎಂದಿದ್ದರಂತೆ. ಆದರೆ ಅಲೀಮಾರ ಮನೆ ನಿರ್ಮಾಣಕ್ಕೆ ಬೇಕಾದಷ್ಟು ಹಣವನ್ನು ಮುಸ್ಲಿಂ ಉಧ್ಯಮಿಗಳು ಅದಾಗಲೇ ನೀಡಿದ್ದರಿಂದ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕೊಡುಗೆಯನ್ನು ತಿರಸ್ಕರಿಸಿದ್ದರು. ಇದು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಆಕ್ರೋಶಕ್ಕೆ ಕಾರಣವಾಗಿತ್ತು. ಮುಸ್ಲಿಂ ಮಹಿಳೆಯ ಮನೆ ರಿಪೇರಿ ಮಾಡಲು ಈತ ಯಾರು ಎಂಬ ಪ್ರಶ್ನೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಮಧ್ಯೆ ಎದ್ದಿತ್ತು.
     ಮದ್ಯಾಹ್ನ 12 ಗಂಟೆಯ ವೇಳೆಗೆ ವಿ.ಟಿ. ಪ್ರಸಾದ್ ತನ್ನ ಮನೆಯ ಪಕ್ಕದಲ್ಲಿದ್ದ ಶಾಲೆಯ ಸಿಬ್ಬಂದಿಗಳ ಬಳಿ ಮಾತನಾಡುತ್ತಿದ್ದಾಗ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಾರ್‍ಯಕರ್ತನೊಬ್ಬ ಕರೆ ಮಾಡಿ ಭೇಟಿಯಾಗುವಂತೆ ತಿಳಿಸಿದ್ದ. ಸುದ್ದಿಯ ಯಾವುದಾದರೂ ವಿಷಯವಿರಬಹುದೆಂಬ ಊಹೆಯಲ್ಲಿ ವಿ.ಟಿ. ಪ್ರಸಾದ್ ಆತನನ್ನು ಭೇಟಿಯಾದರು. ಆದರೆ ಆತ ಸುಮಾರು 40 ಜನರ ಗುಂಪಿನೊಂದಿಗೆ ಬಂದಿದ್ದ. ತಕ್ಷಣವೇ ಆ 40 ಕ್ಕೂ ಅಧಿಕ ಮಂದಿ ವಿ.ಟಿ. ಪ್ರಸಾದ್ ಮೇಲೆ ದಾಳಿ ನಡೆಸಿದ್ದಾರೆ. ತಲೆ, ಮುಖ, ಸೊಂಟಕ್ಕೆ ಮಾತ್ರವಲ್ಲದೆ ಎಲ್ಲೆಂದರಲ್ಲಿ ತುಳಿದು ಮೈ ಮೇಲೆ ಅನೇಕ ಮಂದಿ ನಿಂತು, ಕುಣಿದು ಅಮಾನವೀಯವಾಗಿ ವರ್ತಿಸಿದ್ದಾರೆ. ವಿ.ಟಿ. ಪ್ರಸಾದ್‌ಗೆ ಪ್ರಜ್ಞೆ ತಪ್ಪಿದ ನಂತರ ರಿಕ್ಷಾವೊಂದರಲ್ಲಿ ಹಾಕಿ ಅಲೀಮಾನ ಮನೆಯ ಅಂಗಳಕ್ಕೆ ಎಳೆದುಕೊಂಡು ಹೋಗಿ ಮತ್ತೆ ಹಲ್ಲೆ ನಡೆಸಿದ್ದಾರೆ. ಪ್ರಜ್ಞೆ ತಪ್ಪಿದ್ದ ಒರ್ವ ವ್ಯಕ್ತಿಯ ಮೇಲೆ 40 ಜನರ ಗುಂಪು ಅಮಾನವೀಯವಾಗಿ ಹಲ್ಲೆ ನಡೆಸಿದೆ. ನಂತರ ಪ್ರಸಾದ್‌ರನ್ನು ಅಂಬ್ಯೂಲೆನ್ಸ್‌ನಲ್ಲಿ ಸಾಗಿಸುವ ಸಂದರ್ಭದಲ್ಲಿ ಅಂಬ್ಯೂಲೆನ್ಸ್ ನಿಲ್ಲಿಸಿ ಪ್ರಜ್ಞೆ ತಪ್ಪಿ ಮಲಗಿದ್ದ ಪ್ರಸಾದ್‌ರನ್ನು ಮತ್ತೆ ಎಳೆದು ಹಲ್ಲೆ ನಡೆಸಿದೆ. ಈ ಬಗ್ಗೆ ಅಂಬ್ಯೂಲೆನ್ಸ್ ಚಾಲಕ ದೂರು ಕೊಡಲು ನಿರ್ಧರಿಸಿದ್ದಾರೆ.
     ಈ ಎರಡೂ ಘಟನೆಗಳನ್ನೂ ಪಾಪ್ಯೂಲರ್ ಫ್ರಂಟ್ ಅಫ್ ಇಂಡಿಯಾ ಸಕ್ರಿಯವಾಗಿ ಕೆಲಸ ಮಾಡಿದೆ. ದಾಳಿಯನ್ನು ಸಂಘಟಿಸಿದೆ. ವಿಪರ್ಯಾಸ ಎಂದರೆ ಈ ಮೂಲಭೂತವಾದಿ ಮತ್ತು ಕೋಮುವಾದಿ ಸಂಘಟನೆಗಳ ವೇದಿಕೆಯಲ್ಲೇ ನಿಂತುಕೊಂಡು ಕೆಲವೊಂದು ಜಾತ್ಯಾತೀತರು ಕೋಮುವಾದದ ವಿರುದ್ದ ಮತ್ತು ಮಾನವ ಹಕ್ಕಿನ ಬಗ್ಗೆ ಭಾಷಣ ಹೊಡೆಯುತ್ತಿರುವುದು. ಮೂರು ವರ್ಷಗಳ ಹಿಂದೆ ಇದೇ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ನಗರದ ಕೇಂದ್ರ ಭಾಗದಲ್ಲಿ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯ ಮೇಲೆ ಹಲ್ಲೆ ನಡೆಸಿತ್ತು. ಈ ಬಗ್ಗೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಜೊತೆ ಗುರುತಿಸಿಕೊಂಡಿರುವ ಮಾನವ ಹಕ್ಕು ಕಾರ್‍ಯಕರ್ತರನ್ನು ಕೇಳಿದರೆ “ನಮಗೆ ಸ್ಟ್ರಾಂಗ್ ಎವಿಡೆನ್ಸ್ ಕೊಡಿ” ಎನ್ನುತ್ತಾರೆ. ಅದೆಷ್ಟೋ ಅಮಾಯಕ ಯುವಕ ಯುವತಿಯರ ಮೇಲೆ ನಡೆದ ಹಲ್ಲೆ, ಸುರಿದ ರಕ್ತ, ಹರಿದ ಕಣ್ಣೀರು, ಆದ ಅವಮಾನಗಳು ಇವರುಗಳಿಗೆ ಎವಿಡೆನ್ಸ್ ಆಗಿ ಕಾಣದಿದ್ದರೆ ಅಂತವರಿಗೆ ಎವಿಡೆನ್ಸ್ ನೀಡುವ ಅಗತ್ಯ ಇಲ್ಲ.

ಸೌಜನ್ಯ: - ನಸೂ, ವರ್ತಮಾನ


ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com