ಸಂದರ್ಶನ - ಭಾಷಾ ಪ್ರಬುದ್ಧತೆಯಿಂದ ಉತ್ತಮ ಸಾಹಿತ್ಯ ರಚನೆ ಸಾಧ್ಯ: ಕೆ. ಕೆ. ಕಾಳಾವರ್ಕರ್

ಕುಂದಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ. ಅಧ್ಯಕ್ಷರಾಗಿ ದಲಿತ ಸಾಹಿತಿ ಕೆ. ಕೆ. ಕಾಳಾವರ್ಕರ್.

 ಕೆ. ಕೆ. ಕಾಳಾವರ್ಕರ್
ಕುಂದಾಪುರ: ಡಿ.8ರಂದು ನಡೆಯಲಿರುವ ಕುಂದಾಪುರ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದಲಿತ ಸಾಹಿತಿ ಹರಿದಾಸ ಕೆ. ಕೃಷ್ಣ ಕಾಳಾವರ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ದಲಿತ ಸಾಹಿತಿಯೊಬ್ಬರನ್ನು ಆಯ್ಕೆ ಮಾಡಿರುವ ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್  ಬದಲಾವಣೆಗೆ ತೆರೆದುಕೊಂಡಿರುವುದು ಮಾತ್ರ ಸಕಾರಾತ್ಮಕ ಬೆಳವಣಿಗೆಯೇ ಸರಿ. ಅರ್ಹ ವ್ಯಕ್ತಿಯನ್ನೇ ಆಯ್ಕೆ ಮಾಡುವುದರ ಮೂಲಕ ಸಾಹಿತ್ಯ, ಸಂಸ್ಕ್ರತಿಗಳು ಜಾತಿ ಮತಗಳನ್ನು ಮೀರಿ ನಿಲ್ಲುವಂತವುಗಳು ಎಂಬುದನ್ನು ತೋರಿಸಿಕೊಟ್ಟಿದೆ.

ಹರಿದಾಸ ಕೆ. ಕೃಷ್ಣ ಕಾಳಾವರ್ಕರ್
     ಕುಂದಾಪುರ ತಾಲೂಕಿನ ಕಾಳಾವರದ ಗರಗದ್ದೆಯ ಬಡ ದಲಿತ ಕುಟುಂಬದಲ್ಲಿ ಕಾಳಪ್ಪ ಮತ್ತು ಚಿಕ್ಕು ದಂಪತಿಗಳ ಮಗನಾಗಿ 1943ರ ಜುಲೈ 1 ರಂದು ಜನಿಸಿದ ಹರಿದಾಸ ಕೆ. ಕೃಷ್ಣ ಕಾಳಾವರ್ಕರ್ ಸಾಹಿತಿಯಾಗಿ, ಜನಪದ ಹಾಡುಗಾರರಾಗಿ, ನಾಟಕ ರಚನಾಕಾರರಾಗಿ, ರಂಗ- ಚಿತ್ರ ನಟರಾಗಿ, ಕಲಾ ನಿರ್ದೇಶಕರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ಸಮಾಜ ಸೇವಕರಾಗಿ  ವಿವಿಧ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕೆ. ಕೆ. ಕಾಳಾವರ್ಕರ್ ಎರಡು ತಿಂಗಳ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದರು. ತಾಯಿ ಜನಪದ ಹಾಡುಗಾರ್ತಿಯಾಗಿದ್ದರು. ಜಂಗಮರ ಕಥೆ, ಆರತಿ ಹಾಡುಗಳು, ಲಾವಣಿ ಹಾಡುಗಳು, ಮದುವೆ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು.  ತನ್ನ 12ನೇ ವಯಸ್ಸಿನಲ್ಲಿ ತಾಯಿಯೂ ಇಹಲೋಕ ತ್ಯಜಿಸಿದಾಗ ಇವರಲ್ಲಿ ಉಳಿದದ್ದು ಆಗಾಗ್ಗೆ ಕೇಳುತ್ತಿದ್ದ ಜನಪದ ಹಾಡಿನ ಧಾಟಿ ಮಾತ್ರವಾಗಿತ್ತು. ಮುಂದೆ  ತಾಯಿಯ ಪ್ರೇರಣೆಯಿಂದ ಇವರು ಜನಪದ ಸಾಹಿತ್ಯದಲ್ಲಿ ತನ್ನನ್ನು ತೊಡಗಿಸಿಕೊಂಡರು.
   ಕುಂದಾಪುರದ ಬೋರ್ಡ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದ ದಿನಗಳಲ್ಲಿಯೇ ನಟನೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಕಾಳಾವರ್ಕರ್ ನಟಿಸುವ ಆಸಕ್ತಿ ಹೊಂದಿದ್ದರಾದರೂ ದಲಿತ ಎಂಬ ಕಾರಣಕ್ಕೆ ಶಾಲೆಯ ನಾಟಕ ತಂಡದಲ್ಲಿ ಇವರಿಗೆ ನಟಿಸುವ ಅವಕಾಶ ದೊರೆಯುತ್ತಿರಲಿಲ್ಲ. ಕೊನೆಗೂ ಛಲ ಬಿಡದೇ ತನ್ನ ನೆಚ್ಚಿನ ಹೆಡ್ ಮಾಸ್ಟರರ ಸಹಕಾರದಿಂದ ಕ್ರಿಶಿಯನ್, ಮುಸ್ಲಿಂ ಹಾಗೂ ದಲಿತ ಸಮುದಾಯದ ಹುಡುಗರನ್ನೇ ಸೇರಿಸಿಕೊಂಡು ನಾಟಕ ಪ್ರದರ್ಶನ ನಿಡಿ ಸೈ ಏನಿಸಿಕೊಂಡಿದ್ದರು.
     ಯಾರ ಹೆಂಡತಿ ಚೆಲುವೆ(1958), ಹುಲಿ ಬೇಟೆ(1959), ಪಾಲಿಗೆ ಬಂದ ಪಂಚಾಮೃತ(1960), ಮೂಕನ ಮದುವೆ(1966), ವಿಧಿ ಸಂಕಲ್ಪ(1967), ಬೆಳಕಿನೆಡೆಗೆ(1968), ಕಾಲ(1987), ಸದಾ ಎನ್ನ ಹೃದಯದಲಿ(1987), ಶಿಲ್ಪಿ(1995), ಊರುಗೋಲು(1996), ಪ್ರಶಸ್ತಿ(1996), ತಾಯ್ತನ(2007), ನಿಸರ್ಗ(2007) ಇವು ಕಾಳಾವರ್ಕರ್ ರಚಿಸಿದ ಪ್ರಮುಖ ನಾಟಕಗಳು. ಇವರ  'ಕಾಲ' ನಾಟಕ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ 100ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವುದಲ್ಲದೇ ಇದೇ ಕಥೆಯನ್ನಾಧರಿಸಿ ಚಿತ್ರ ನಿರ್ದೇಶಕ ರಾಜ್ ಬಲ್ಲಾಳ್ ನಿರ್ದೇಶಿಸಿದ 'ಕಾಲ' ತುಳು ಚಲನಚಿತ್ರಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ದೊರಕಿರುವುದು ಇವರ ಸಾಧನೆಗೆ ಸಿಕ್ಕ ಗೌರವವಾಗಿದೆ.
    ಗೀತಗುಚ್ಛ(2002),ಶ್ರೀ ದೇವಿ ರಕ್ತೇಶ್ವರಿ ವೈಭವ ಕಥಾ ಸಿಂಚನ(2008) ಪೌರಾಣಿಕ ಪ್ರಸಂಗಗಳನ್ನು ರಚಿಸಿ ಪ್ರದರ್ಶಿಸಿರುವುದಲ್ಲದೇ, ಅಪಾರ ದೈವ ಭಕ್ತರಾದ ಕಾಳಾವರ್ಕರ್ ವಿಘ್ನೇಶ್ವರ ಮಹಿಮೆ(1975), ಶ್ರೀ ಶಬರಿಮಲೆ ಕ್ಷೇತ್ರ ಮಹತ್ವ(1985), ಭಕ್ತ ಪ್ರಹ್ಲಾದ(2002), ಭಕ್ತಿ ಪ್ರಭಾವ(2003), ಕೌಸಲ್ಯಾ ಪರಿಣಯ(2000), ಶ್ರೀ ಕೊಲ್ಲೂರು ಮೂಕಾಂಬಿಕೆ ಮಹತ್ಮೆ(1995), ಶ್ರೀ ಕಚ್ಚೂರು ಮಾಲ್ತಿ ದೇವಿ ಮಹಾತ್ಮೆ(2010) ಎನ್ನುವ ಹರಿಕಥಾ ಕಾಲಕ್ಷೇಪ ಪ್ರಸಂಗಗಳನ್ನು ಬರೆದು ಪ್ರದರ್ಶಿಸಿದ್ದಾರೆ.
    ಯಕ್ಷಗಾನದಲ್ಲಿಯೂ ಒಲವು ಹೊಂದಿ ರಚಿಸಿದ ಗಿರಿಕನ್ಯೆ(2007), ಚಿರಂಜೀವಿ(2008), ಪ್ರೇಮಾಂಜಲಿ(2011), ನಾಗಾಂಬಿಕೆ(2011) ಮುಂತಾದ ಪ್ರಸಿದ್ಧ ಯಕ್ಷಗಾನ ಕಥಾ ಪ್ರಸಂಗಗಳು ಯಶಸ್ವಿ ಪ್ರದರ್ಶನ ಕಂಡಿದೆ. ಚಲನಚಿತ್ರ ಉದ್ದೇಶಿತ ಮೂರು ಕಥೆಗಳ 'ಕಥಾಸಂಚಯ' ಎಂಬ ಪುಸ್ತಕವನ್ನೂ ಕಾಳವರ್ಕರ್  ಬರೆದಿದ್ದಾರೆ.
    ಉಳಿದಂತೆ ಕೊಳಲುವಾದನ, ತಬಲಾ, ಹಾರ್ಮೋನಿಯಂ, ಡೋಲಕ್ ಹೀಗೆ ಎಲ್ಲಾ ಸಂಗೀತ ಸಾಧನಗಳನ್ನೂ ಗುರುವಿಲ್ಲದೇ ಕಲಿತ ಇವರು  ಭಜನೆ, ಜನಪದ ಹಾಡುಗಳ ಮೂಲಕ ಕರಾವಳಿಯುದ್ದಕ್ಕೂ ಪ್ರದರ್ಶನ ನೀಡಿ ತನ್ನದೇ ಛಾಪು ಮೂಡಿಸಿದ್ದಾರೆ.
      1963ರಲ್ಲಿ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದಿದ್ದ ಕಾಳವರ್ಕರ್ ಮೂವತ್ತ ಮೂರು ವರ್ಷಗಳ ಕಾಲ ಉಪವಿಭಾಗಾಧಿಕಾರಿಗಳ ಕಚೇರಿ, ಪುರಸಭೆಯ ಕಚೇರಿ ಹಾಗೂ ಉಪ ಖಜಾನಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದಾರೆ. ವೃತ್ತಿ, ಪ್ರವೃತ್ತಿಯ ಜೋತೆಯಲ್ಲಿ ದಲಿತ ಸಮುದಾಯಗಳಿಗಾಗುತ್ತಿದ್ದ ಸಾಮಾಜಿಕ ಶೋಷಣೆಯ ವಿರುದ್ಧವೂ ಧ್ವನಿ ಎತ್ತಿರುವ ಕಾಳಾವರ್ಕರ್  ಅಂದಿನ ಸಾಮಾಜಿಕ ಪಿಡುಗುಗಳಾಗಿದ್ದ ಎಂಜಲನ್ನ ತಿನ್ನುವುದು ಮತ್ತು ಕೊಡುವುದನ್ನು ವಿರೋಧಿಸಿ, ಹೋಟೆಲ್ ಹಾಗೂ ದೇವಸ್ಥಾನಗಳಲ್ಲಿ ದಲಿತರ ಪ್ರವೇಶ ನಿಷೇಧ ವಿರೋಧಿಸಿ ಹೊರಾಟ ನಡೆಸಿ, ದಲಿತ ರೋಗಿಗಳ ವಸತಿ, ಶುಶ್ರೂಷೆ ಮುಂತಾದವುಗಳಿಗೆ ಸ್ಪಂದಿಸಿ ಸಮಾಜದಲ್ಲಿ ದಲಿತರಿಗೂ ಸಮಾನ ಸ್ಥಾನಮಾನ ಕಲ್ಪಿಸಿದ್ದರು.

ಕಾಳಾವರ್ಕರ್ ಬದುಕಿನ ಚಿತ್ರಣದ ಕಾದಂಬರಿ!
   1997ರಲ್ಲಿ ಲೇಖಕ ಶ್ರೀನಿವಾಸ ಕಾಳಾವಾರ ಬರೆದ 'ನಡೆದು ಬಂದ ದಾರಿ' ಕಾದಂಬರಿ ಕಾಳಾವರ್ಕರ್ ಅವರ ಜೀವನ ಚರಿತ್ರೆಯನ್ನು ಆಧರಿಸಿ ಬರೆದ ಕಾದಂಬರಿಯಾಗಿದೆ. ದಲಿತ ನೇತಾರ ಕೆ. ಕೆ. ಕಾಳಾವರ್ಕರ್ ಅವರ ಬದುಕಿನ ಚಿತ್ರಣವನ್ನು ಇಲ್ಲಿ ತೆರೆದಿಡಲಾಗಿದೆ. ಇದು ಜೀವಂತ ವ್ಯಕ್ತಿಯೊಬ್ಬನ ಬದುಕಿನ ಚಿತ್ರಣವನ್ನು ಆಧರಿಸಿ ಬರೆದ ದಕ್ಷಿಣ ಭಾರತದ ಮೊದಲ ಕಾದಂಬರಿ ಎಂಬ ಕೀರ್ತಿಗೂ ಪಾತ್ರವಾಗಿವುದಲ್ಲದೇ ಐದು ಭಾಷೆಗಳಿಗೆ ಅನುವಾಗೊಂಡಿದೆ.
     ಹೀಗೆ ವಿವಿಧ ಕ್ಷೇತ್ರಗಳಲ್ಲಿ ಬಿಡುವಿರದೇ ತೊಡಗಿಸಿಕೊಂಡಿರುವ ಕಾಳವರ್ಕರ್ ಅವರನ್ನು ಹತ್ತಾರು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದು, ಸರಕಾರಕ್ಕೆ ಮಾತ್ರ ಇವರ ಸಾಧನೆ ಕಾಣಿಸದಿರುವುದು ವಿಪರ್ಯಾಸವೇ ಸರಿ. ಅದೇನೆ ಇರಲಿ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾಳಾವರ್ಕರ್ ಅವರನ್ನು ಈ ಬಾರಿಯ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆಮಾಡಿರುವುದು ಅಭಿನಂದನಾರ್ಹವಾದುದು.

ಕಾಳಾವರ್ಕರ್ ಅವರೊಂದಿಗೆ ಕುಂದಾಪ್ರ ಡಾಟ್ ಕಾಂ(*) ಸಂದರ್ಶನ:

*ಯುವ ಸಮುದಾಯ ಮತ್ತು ಸಾಹಿತ್ಯದ ನಂಟು ಇಂದು ಹೇಗಿದೆ?
ಕಾಳಾವರ್ಕರ್: ಆಧುನಿಕತೆಗೆ ಮಾರು ಹೋಗಿರುವ ಯುವ ಸಮುದಾಯ ಮೊಬೈಲ್ ಮುಂತಾದ ಸಾಧನಗಳೊಂದಿಗೆ ತಮ್ಮ ಹೆಚ್ಚಿನ ಸಮಯವನ್ನು ವ್ಯಯಿಸುತ್ತಿದ್ದಾರೆ. ಇದರಿಂದ ಹೊರಬಂದು ಸಾಹಿತ್ಯದ ಅಭ್ಯಾಸ ಮಾಡಬೇಕಾಗಿದೆ. ಮೊಬೈಲ್ ನಲ್ಲಿ ಸಮಯ ವ್ಯರ್ಥ ಮಾಡುವ ಬದಲಿಗೆ ಹೆಚ್ಚೆಚ್ಚು ಸಾಹಿತ್ಯವನ್ನು ಅಭ್ಯಸಿಸಿ, ಸಾಹಿತ್ಯದೆಡೆಗೆ ಒಲವು ಮೂಡಿಸಿಕೊಳ್ಳಬೇಕಾಗಿದೆ.

*ಯುವಕರಲ್ಲಿ ಭಾಷಾಭಿಮಾನ, ಸಾಹಿತ್ಯಾಭಿಮಾನ ಮೂಡಿಸಲು ಏನು ಮಾಡಬಹುದು? 
ಕಾಳಾವರ್ಕರ್ : ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ತರಗತಿಗಳಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆಯನ್ನು ಕಡ್ಡಾಯವಾಗಿ ನಿಷೇಧಿಸಿ, ಈ ಹಂತದಿಂದಲೇ ಕನ್ನಡ ಭಾಷಾ ಕಲಿಕೆಗೆ ಹೆಚ್ಚು ಪ್ರಾಶಸ್ತ್ಯ ದೊರಕಿಸಿಕೊಟ್ಟಾಗ ಮಾತ್ರ ಕನ್ನಡದ ಬಗೆಗೆ ಅಭಿರುಚಿ ಮೂಡಲು ಸಾಧ್ಯವಾಗುತ್ತದೆ. ಕನ್ನಡವನ್ನು ಪ್ರೀತಿಸುವುದು ಹೆತ್ತ ತಾಯಿಯನ್ನು ಆದರಿಸಿದಂತೆ. ಭಾಷೆಯಲ್ಲಿ ಹಿಡಿತ ಸಾಧಿಸಿದಾಗ ಮಾತ್ರ ಉತ್ತಮ ಸಾಹಿತ್ಯ ರಚನೆ ಸಾಧ್ಯ. ಅಭಿಮಾನ ಮೂಡಲು ಸಾಧ್ಯ.

*ಕನ್ನಡ ಭಾಷೆ ಉಳಿಸಿ ಬೆಳೆಸುವುದೆಲ್ಲವೂ ರಾಜಕೀಯ ಪ್ರೇರಿತವಾಗಿದೆಯೇ?
ಕಾಳಾವರ್ಕರ್ : ಹೌದು. ಭಾಷೆಯ ಉಳಿವು ಉತ್ತಮವಾದ ಶಿಕ್ಷಣದಿಂದಲೂ ಸಾಧ್ಯ. ನ್ಯಾಯಾಂಗದಂತೆ ಶಿಕ್ಷಣವನ್ನೂ ಕೂಡ ಸ್ವತಂತ್ರ ಅಂಗವನ್ನಾಗಿ ಮಾಡಬೇಕು. ಇಲ್ಲಿ ರಾಜಕಾರಣಿಗಳು ಮೂಗು ತೂರಿಸಬಾರದು. ಶಿಕ್ಷಕರುಗಳಗಳನ್ನು ಸರಕಾರದ ಗುಲಾಮರಂತೆ ಎಲ್ಲದಕ್ಕೂ ದುಡಿಸಿಕೊಳ್ಳುವುದನ್ನು ಕಡಿಮೆ ಮಾಡಿ ಅವರು ಪಾಠದ ಜೋತೆಗೆ ಕಲೆ, ಸಾಹಿತ್ಯ, ಸಂಗೀತದ ಕುರಿತಾದ ಮಕ್ಕಳಲ್ಲಿ ಅಭಿರುಚಿ ಮೂಡಿಸುವಂತೆ ಹೆಚ್ಚೆಚ್ಚು ಪ್ರೇರೆಪಿಸಬೇಕು.

*ಜನಪದ ಸಾಹಿತ್ಯದ ಮತ್ತು ನಾಟಕ ಕುರಿತಾಗಿ ನಿಮ್ಮ ಅಭಿಪ್ರಾಯ
ಕಾಳಾವರ್ಕರ್: ಜನಪದ ಸಾಹಿತ್ಯದಿಂದ ದೊರೆಯುವ ಸಂತೋಷ ಮತ್ತೆಲ್ಲೂ ಕಾಣಸಿಗುವುದಿಲ್ಲ. ಇದು ಹಾಸ್ಯದ ವಿಡಂಬನೆಯಾಗಿದ್ದು, ನಿತ್ಯ ಜೀವನವನ್ನು ಪ್ರಾಸ ಬದ್ಧವಾಗಿ ಈ ಸಾಹಿತ್ಯ ಕಟ್ಟಿಕೊಡುತ್ತೆ. ಇಲ್ಲಿ ಹಾಡುವ ಧಾಟಿ ತಿಳಿದಿದ್ದರೆ ಸಾಕು ಯಾವ ಸಂಗೀತ ಸಾಧನಗಳು ಬೇಕೆನಿಸುವುದಿಲ್ಲ.
   ನಾಟಕದಲ್ಲಿನ ಸಂಫಟನಾ ಶಕ್ತಿ ಬೆರೆಲ್ಲೂ ಕಾಣಸಿಗುವುದಿಲ್ಲ. ಇಲ್ಲಿ ಜಾತಿ ಮತ ಭೇದವಿರುವುದಿಲ್ಲ. ಸಮಾಜದಲ್ಲಿನ ಅಂಕುಡೊಂಕುಗಳನ್ನು ಸಮರ್ಥವಾಗಿ ವ್ಯಕ್ತಪಡಿಸುವು ಮತ್ತು ತಿದ್ದುವ ಶಕ್ತಿ ನಾಟಕಕ್ಕಿದೆ.

*ಜಾತಿಯ ಕಂದಕ ಅಂದಿಗಿಂತ ಇಂದು ಹೇಗೆ ಭಿನ್ನವಾಗಿದೆ?
ಕಾಳಾವರ್ಕರ್: ಹಿಂದೆಲ್ಲ ಜಾತಿಭೇದ ಇತ್ತಾದರೂ ಪರಸ್ಪರರಲ್ಲಿ ಪ್ರೀತಿ ವಿಶ್ವಾಸವಿತ್ತು. ಬ್ರಾಹ್ಮಣರಿಗೆ ಅಂದು ವಿಶೇಷ ಗೌರವ ಕೊಡುತ್ತಿದ್ದುದು ಜಾತಿಯ ಕಾರಣದಿಂದಲ್ಲ ಬದಲಾಗಿ ಅವರು ನಮ್ಮ ಗುರುಗಳ ಎಂಬ ಪೂಜ್ಯ ಭಾವದಿಂದ. ಸಮಾಜದ ಒಗ್ಗಟ್ಟಿಗೂ ಜಾತಿಯತೆಗೂ ಅಂದಿನ ದಿನಗಳಲ್ಲಿ ಸಂಬಂಧವೇ ಇರುತ್ತಿರಲಿಲ್ಲ ಆದರೆ ಇಂದು ಜಾತಿಯನ್ನೇ ಅಸ್ತ್ರವನ್ನಾಗಿಸಿಕೊಂಡು ಸಮಾಜನ್ನು ಒಡಿಯುತ್ತಿದ್ದಾರೆ, ಹೊಡೆದಾಡುತ್ತಿದ್ದಾರೆ.  ಒಂದು ಕೋಮಿಗೆಷ್ಡೇ ಸಿಮಿತವಾಗಿರುವ ಸರಕಾರದ ಕಾನೂನುಗಳ ದುರುಪಯೋಗ ಕೂ ಇಂದು ಹೆಚ್ಚಾಗಿದೆ. ಎಲ್ಲ ಮತಧರ್ಮದಲ್ಲಿಯೋ ಬಡವರಿದ್ದು ಎಲ್ಲರಿಗೂ ಸಮಾನ ಅವಕಾಶವಿರಬೇಕು. ಕೇವಲ ಜಾತೀಯತೆಯನ್ನೇ ಮುಂದಿರಿಸಿಕೊಂಡು ಯಾರೂ ಯಾರಿಗೂ ನಿಂದೆ ಮಾಡಬಾರದು.

*ಕುಂದಾಪ್ರ ಕನ್ನಡದ ಕುರಿತು.
ಕಾಳಾವರ್ಕರ್: ಅತ್ಯಂತ ಸರಳ ಮತ್ತು ಅಚ್ಚ ಕನ್ನಡದ ಭಾಷೆ ಕುಂದ ಕನ್ನಡ. ಭಾಷೆಯನ್ನು ಮಾತನಾಡುವಾಗಲೇ ಮುಖದಲ್ಲೊಂದು ಮಂದಸ್ಮಿತ ಮೂಡುತ್ತದೆ. ಕುಂದಾಪ್ರ ಕನ್ನಡ ನಿಘಂಟು ರಚನೆಯಾಗಿರುವುದು ಈ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ.
- ಸುನಿಲ್ ಬೈಂದೂರು

 ಕುಂದಾಪ್ರ ಡಾಟ್ ಕಾಂ

ಕಾಳಾವರ್ಕರ್ ಅವರು ಕುಂದಗನ್ನಡದಲ್ಲಿ ಹಾಡಿದ ಜನಪದ ಹಾಡು.ತನ್ನ ಮನೆಯಲ್ಲಿ ಪ್ರಶಸ್ತಿ & ಸಂಗೀತ ಸಾಧನಗಳೊಂದಿಗೆ ಕಾಳವರ್ಕರ್