ಕಥೆ: ಸಂವೇದನೆ

   ಬೇಲಿಯ ಮೇಲೆ ಕುಳಿತಿದ್ದ ಚೆಟ್ಟೆಯೊಂದನ್ನು ಹಿಡಿದು ಅದಕ್ಕೆ ನೂಲು ಕಟ್ಟಿಕೊಂಡು ಆದು ಹಾರುವುದನ್ನೇ ನೋಡುತ್ತಾ ಕಿಲಕಿಲ ನಗುತ್ತಿದ್ದ ಸುಮಾ ಸ್ವಲ್ಪ ಹೊತ್ತಿನಲ್ಲೇ ದೇವರಕೊಣೆಯಲ್ಲಿ ದೀಪದ ಬತ್ತಿ ಸರಿ ಮಾಡುತ್ತಿದ್ದ ಸಾಕಜ್ಜಿಯನ್ನು ನೋಡಿ, ಅಜ್ಜಿಯ ತೊಡೆಯ ಮೇಲೆ ಕುಳಿತುಕೊಳ್ಳಲು ಒಡೋಡಿ ಬರುತ್ತಿದ್ದಳು. ಇದನ್ನು ಕಂಡ ಸಾಕಜ್ಜಿ ಛೆ ಯಾಕೆ ಮಗಾ ಬಾಯೀ ಬಾರದ ಜೀವಿಗಳನ್ನು ಹಿಂಸೆ ಮಾಡಬಾರದು ಅಂತ ಅದೆಷ್ಟು ಸಾರಿ ಹೇಳಿದ್ದೇನೆ. ನೀನು ಕೇಳೋದೇ ಇಲ್ವಲ್ಲ, ನೀನು ಹೀಗೆ ಮಾಡಿದರೆ ಇನ್ನು ಮೇಲೆ ನಾನು ನಿನ್ನತ್ರ ಮಾತಾಡೋದೇ ಇಲ್ಲ, ನನ್ನನ್ನು ಅಜ್ಜಿ, ಅಜ್ಜಿ ಅಂತ ಕರೆಯಲೂ ಬೇಡ. ನೀನ್ಗಿನ್ನು ಕಥೆ ಗಿಥೆ ಏನೂ ಇಲ್ಲ,,, ಎಂದು ಗದರಿಸಿದರು ಅಜ್ಜಿಯ ಬೊಚ್ಚು ಬಾಯನ್ನೇ ಮಿಕ, ಮಿಕ ನೋಡುತ್ತಿದ್ದ ಸುಮಾ ಅಜ್ಜಿ ಬೈದ ಮೇಲೆ ಅಳುತ್ತಾ ಹೋಗಿ ತೋಟದಲ್ಲಿ ಕುಳಿತುಕೊಂಡಳು. ಅವಳಿಗೆ ಒಂದೇ ಯೋಚನೆ - ಛೇ ಎಂದೂ ಬೈಯದ ಅಜ್ಜಿ ಇವತ್ಯಾಕೆ ನನ್ನ ಮೇಲೆ ಕೋಪ ಮಾಡಿಕೊಂಡಿದ್ದು. ನನಗೇನೂ ತಿಳೀದೇ ಚಿಟ್ಟೇನ ಹಿಡಿದು ಬಿಟ್ನಪ್ಪಾ. ಇನ್ನು ನನಗೆ ಊಟ ಮಾಡಿಸೋರ್ಯಾರು ಹಟ್ಟಿಲಿರೋ ಕಂಬಳದ ದೊಡ್ಡ ಕೋಣ ರಾಮನ ಹತ್ತಿರ ಕರೆದುಕೊಂಡು ಹೋಗಿ ಅದಕ್ಕೆ ಹುಲ್ಲು, ಅಡಿಕೆ ಹೊಂಬಾಳೆ ತಿನ್ನಿಸುತ್ತಾ ಅದರ ಮೇಲೆಯೇ ಕೂರಿಸಿ ಕಥೆ ಹೇಳೋರ್ಯಾರು ? ಇನ್ನು ಇವುಗಳನ್ನೆಲ್ಲಾ ರಾಮನಿಗೆ ಕೊಡೋದು ಸಾಧ್ಯ ಇಲ್ಲ ಎಂದು ಗ್ರಹಿಸಿಯೇ ಅಕೆಗೆ ಇನ್ನೂ ದುಃಖ ಉಮ್ಮಳಿಸಿ ಬಂತು.
    ಕೈ ತೊಳೆಯಲೆಂದು ಹೊರಗಡೆ ಬಂದ ಸಾಕಜ್ಜಿ ದೂರದಲ್ಲಿ ಬಿಸಿಲಿನಲ್ಲಿ ಕುಳಿತು ಅಳುತ್ತಿದ್ದ ತನ್ನ ಮುದ್ದು ಸುಮಳನ್ನು ನೋಡಿ ಗಾಬರಿಯಿಂದ ಒಡೋಡಿ ಬಂದು ನನ್ನ ಚಿನ್ನಾ ಬಾರೋ ಹೇಗೆ ಬಿಸಿಲಿನಲ್ಲಿ ಮುಖ ಉಬ್ಬಿಸಿಕೊಂಡು ಕೂತಿದ್ದಿಯಾ ನೋಡು, ನಾನು ನಿನ್ಗೆ ಬೈದಿದೆಲ್ಲಾ ಬರೀ ತಮಾಷೆಗೆ ಎಂದು ಆಕೆಯನ್ನು ಬಾಚಿ ತಬ್ಬಿಕೊಂಡು ಒಳಗೆ ಬಂದು ಆಲೆಮನೆಯಿಂದ ತಂದ ಬಿಸಿ ಬಿಸಿ ಬೆಲ್ಲವನ್ನು ಕೊಟ್ಟರು. ಸಾಕಜ್ಜಿಯ ಆ ಪ್ರೀತಿಯ ಹೊನಲಲ್ಲಿ ಸುಮಳ ಕೋಪ ಕರಗಿ ನೀರಾಗಿತ್ತು. ಅಜ್ಜಿಯ ಮಾತಿನ ದಾಟಿ ಹರಿದಿತ್ತು. ಸುಮಾ ನಿನ್ನ ಅಜ್ಜನಿಗೂ ಕೋಣ ರಾಮನ್ನು ಕಂಡ್ರೆ ತುಂಬಾ ಪ್ರೀತಿ. ನಾನು ಹಾಕುತ್ತಿದ್ದಂತೆ ಮೊದಲು ಅವರೇ ಅದಕ್ಕೆ ತೋಟದಿಂದ ಹೊಂಬಾಳೆ ತಂದು ಹಾಕುತ್ತಿದ್ದರು. ಮೈಗೆ ಎಣ್ಣೆ ತಿಕ್ಕಿಸುತ್ತಿದ್ದರು. ರಾಮ ಒಮ್ಮೆ ಐತಿಹಾಸಿಕ ವಂಡಾರು ಕಂಬಳದಲ್ಲಿ ಪ್ರಥಮ ಬಹುಮಾನ ಗೆದ್ದಾಗ ಅದನ್ನು ಮೆರವಣಿಗೆ ಮಾಡಿ ಬೆಳ್ಳಿಯ ಕೋಡುಮಿಟ್ಟ್ಟಿ, ಗಮ್ಮಚಣ, ನೇಸಲಗಂಧ ಹಾಕಿಸಿ ಪೋಟೋ ತೆಗೆಸಿದ್ದರು." ಎಂದು ಹೆಬ್ಬಾಗಿಲಿಗೆ ತಗುಲಿಸಿಟ್ಟ ಗಟ್ಟಿ ಚೌಕಟ್ಟಿನ ರಾಮನ ಪೋಟೋದಡೆಗೆ ಕೈ ತೋರಿಸುತ್ತಿದ್ದರು. ಈ ಹೊತ್ತಿಗೆ ಸುಮನಿಗೆ ಅಲ್ಲೇ ನಿದ್ರೆಯ ಮಂಪರು ಕವಿಯುತ್ತಿತ್ತು. ಅವಳ ಮುದ್ದು ಮುಖದ ಮೇಲೆ ಸಾಕಜ್ಜಿಯ ನೆರಿಗೆಗಟ್ಟ್ಟಿದ ನೆನಪುಗಳು ಪ್ರತಿಬಿಂಬಿಸುತ್ತಿದ್ದವು. ಸುಮನ ಅಮ್ಮ ತನ್ನ ಮಗ ಗೋಪಾಲನ ಹೆಂಡತಿ, ಶ್ರೀಮಂತಿಕೆಯಲ್ಲಿ ಸಾರ ಸತ್ವವಿಲ್ಲದ ಆಹಾರ ತಿಂದು ಬೆಳೆದ ದೇಹ ಅವಳದ್ದು. ಸುಮ ಹುಟ್ಟಿ ಆರು ತಿಂಗಳಿಗೆ ಸೊಂಟ ನೋವೆಂದು ಮುಲುಗತೊಡಗಿದವಳು ಈ ಮೂವತ್ತರ ಹರೆಯದಲ್ಲಿಯೇ ಎಪ್ಪತ್ತರ ಮುದುಕಿಯಂತೆ ತೇಲುಗಣ್ಣು ಮಾಡುತ್ತಾಳೆ. ಇನ್ನು ಈ ಸುಮಾಳನ್ನು ನಾನೊಬ್ಬಳು ಇಲ್ಲದೇ ಇದ್ದರೆ ಹೇಗೆ ಸಾಕುತ್ತಿದ್ದಳೋ ಎನೋ ಸಧ್ಯ ನನ್ನ ಜೊತೆ ಸುಮಳಾದರೂ ಇದ್ದ್ದಾಳಲ್ಲ ಉಳಿದ ಮಕ್ಕಳು, ಸೊಸೆಯಂದಿರು ತಮ್ಮ ನರಪೇತಲ ಸಂಸಾರವನ್ನು ಕಟ್ಟಿಕೊಂಡು ಬೆಂಗಳೂರು, ಬೊಂಬಾಯಿ, ಪರದೇಶಗಳಲ್ಲಿ ಕಣ್ಣು ಕಾಣದವರಂತೆ ಜೀವಿಸುತ್ತಿದ್ದಾರೆ. ಅವರಿಗೆ ಬಂಧುಬಳಗ ಯಾರೂ ಬೇಡವಂತೆ. ಕೊನೆಗೆ ಹೆತ್ತ ತಾಯಿ, ಸತ್ತ ತಂದೆ ಕೂಡ ಎಂದು ಯೋಜಿಸುತ್ತಿರುವಾಗ ಸಾಕಜ್ಜಿಯ ಕಣ್ಣುಗಳಲ್ಲಿ ಹನಿಗೂಡಿತು.

  ಒಂದು ದಿನ ಮಧ್ಯಾಹ್ನ ಸುಮ ಅಜ್ಜಿ ಜೊತೆಗೆ ಚಾವಡಿಯಲ್ಲಿ ಮಲಗಿಕೊಂಡಿದ್ದಳು. ಹೊರಗಡೆ ಜಗಲಿಯಲ್ಲಿ ಗೋಪಾಲ ಭಟ್ಟರು ಯಾವುದೋ ಬ್ಯಾರಿ ಜೊತೆಗೆ ಎನನ್ನೋ ಮಾತನಾಡುತ್ತಿದ್ದರು. ಆಗ ಅಜ್ಜಿ ತನಗೆ ತಾನೇ ಎಷ್ಟು ಬೇಡ ಬೇಡ ಅಂದರೂ ಕೇಳುವುದಿಲ್ಲ ನಿನ್ನನ್ನು ಅ ಮಂಜುನಾಥನೇ ಕಾಪಾಡಬೇಕು ಎಂದು ಗೊಣಗುತ್ತಿದ್ದರು. ಸುಮ ಎನಜ್ಜೀ - ಎಂದಾಗ ಹೇಳಲು ಮನನ್ಸೊಪ್ಪದೇ ಏನಿಲ್ಲ ಎಂದರು. ಸುಮ ಪುನಃ ಪುನಃ ಅದನ್ನೇ ಕೇಳತೊಡಗಿದಾಗ ತಡೆಯಲಾರದೇ, ಎನೋಪ್ಪ ನಿನ್ನ ತಂದೆ ನಮ್ಮ ಕೋಣ ರಾಮನನ್ನು ಆ ಭಟ್ಕಳದ ಬ್ಯಾರಿಗೆ ಮಾರುತ್ತಾನಂತೆ. ನಾನು ಎಷ್ಟು ಹೇಳಿದರೂ ಕೇಳುವುದಿಲ್ಲ. ಇಷ್ಟು ದಿನ ಅದು ನಮ್ಮ ಸೇವೆ ಮಾಡಿದೆ. ಅಲ್ಲದೇ ರಾಮ ಈಗ ನನ್ನಂತೆಯೇ ಮುದಿಯಾಗಿ ಮೂಲೆ ಸೇರಿದೆ ಅಂತ ಮಾರಿ ಬಿಡುವುದೇ ಮಾರಿದರೂ ಪರ್ವಾಗಿಲ್ಲ. ಆ ಬ್ಯಾರದವನು ಅದನ್ನು ಸಾಕುತ್ತಾನೆಯೇ. ಕೊಂದು ತಿನ್ನುತ್ತಾನೆ. ಅಷ್ಟೇ ಎಂದು ಮತ್ತೆ ಗೊಣಗತೊಡಗಿದರು ಸಾಕಜ್ಜಿ ಸುಮನ ಮನಸ್ಸಿಗೆ ಈ ಸುದ್ದಿ ಗಾಬರಿಯನ್ನೇ ಹುಟ್ಟಿಸಿತು. ಏಕೆಂದರೆ ಸುಮ ಹೊಂಬಾಳೆಯನ್ನು ದೂರದಿಂದ ತರುತ್ತಿದ್ದಂತೆಯೇ ರಾಮ ಗಂಟೆಯ ಸದ್ದಿನೊಂದಿಗೆ ತಲೆ ಅಲ್ಲಾಡಿಸುತ್ತಾ ಅದನ್ನು ಕೊಡೆಂದು ಕೇಳುತ್ತಿತ್ತು. ಸುಮಳನ್ನು ಬೆನ್ನಮೇಲೆ ಹೊತ್ತು ಆನೆ ಅಂಬಾರಿ ಮಾಡುತ್ತಿತ್ತು. ತನ್ನ ತಲೆ ಗಡ್ಡವನ್ನು ನೇವರಿಸಲು ಒಡ್ಡಿಸಿಕೊಡುತ್ತಿತ್ತು. ಪ್ರತಿ ದಿನವೂ ಬೆಳಗ್ಗೆ ಹಿಂಡಿ ಕಲಗಚ್ಚನ್ನು ಕುಡಿದ ನಂತರ ಕೆಲಸದ ತಿಮ್ಮ ಉಳಿದಲ್ಲಾ ಜಾನುವಾರುಗಳ ಜೊತೆಗೆ ರಾಮನನ್ನು ಗುಡ್ಡೆಗೆ ಮೇಯಲು ಹೊಡೆದುಕೊಂಡು ಹೋಗುವಾಗ ರಾಮ ಅವುಗಳ ಮುಖಂಡನಂತೆ ಮುಂದೆ ನಡೆದು ಹೋಗಿ ದೂರ ದೂರದ ಹಾಡಿಗಳಿಗೂ ಹೋಗುತ್ತಿದ್ದರಿಂದ ವಾಪಸ್ಸು ಬರುವಾಗ ತಿಮ್ಮ ಚೂರಿಹಣ್ಣು, ನೇರಲೇ ಹಣ್ಣು, ಕಿಸ್ಕೂರಗಳನ್ನು ತಂದು ಸುಮನಿಗೆ ಕೊಡುತ್ತಿದ್ದ. ರಾಮ ಅನೇಕ ಕಂಬಳಗಳಲ್ಲಿ ನಿರೀಕ್ಷೆಗೂ ಮೀರಿದ ಜಯವನ್ನು ತಂದುಕೊಟ್ಟು ಭಟ್ಟರ ಮನೆಯ ಮರ್ಯಾದೆಯನ್ನು ಹೆಚ್ಚಿಸಿತ್ತು. ಹಾಗೂ ಇತ್ತೀಚಿನವರೆಗೂ ಅದು ನಲವತ್ತು ಮುಡಿ ಗದ್ದೆಯ ಬೇಸಾಯಕ್ಕೆ ಸಹಾಯಕನಾಗಿತ್ತು.

     ತಂದೆ ಹಾಗೂ ಬ್ಯಾರಿ ಏನೇನು ಮಾತನಾಡಿಕೊಳ್ಳುತ್ತಾರೆಂದು ಕೇಳಿಸಿಕೊಳ್ಳಲು ಸುಮ ಹೊರಗೆ ಓಡಿದಳು. ತಂದೆ ರಾಮನಿಗೆ ಮುನ್ನೂರು ರೂಪಾಯಿಯಾದರೂ ಸಿಗಬೇಕನ್ನುತ್ತಿದ್ದರು. ಬ್ಯಾರಿ ಕೇವಲ ರೂ.25.00 ಗಳಿಗೆ ಚರ್ಚೆ ಮಾಡುತ್ತಾ, ಬೇರೆ ಯಾರಾದರೂ ನಾನು ಈ ವ್ಯಾಪಾರಕ್ಕೆ ಒಪ್ಪುತ್ತಿರಲಿಲ್ಲ. ಆದರೆ ಈಗ ನೀವು ಧನಿಗಳು, ನಿಮ್ಮ ಮಾತನ್ನು ಮಿರಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದ. ಭಟ್ರು ಅದು ಹಟ್ಟಿಯಲ್ಲಿ ಸತ್ತರೆ ಅದನ್ನು ಅಲ್ಲಿಂದ ಸಾಗಿಸಿ ಹುಗಿಯಲು ಹತ್ತಿಪ್ಪತ್ತು ಆಳಾದರೂ ಬೇಕು. ಆ ಅಧ್ವಾನ ನನ್ನಿಂದಂತೂ ಸಾಧ್ಯವಿಲ್ಲ. ನೀನೇ ಅದನ್ನು ಸಾಯುವವರೆಗೆ ಸಾಕು. ನಿನಗೆ ನಾನು ಪ್ರತಿ ವಾರವೂ ಹಿಂಡಿ ಹುಲ್ಲನ್ನು ಕೊಡುತ್ತೇನೆ ಎನ್ನುತ್ತಿದರು. ಬ್ಯಾರಿ ಹಿಂದೆ ಮುಂದೆ ಸುತ್ತುತ್ತಾ ಎನನ್ನೋ ಹೇಳುತ್ತಿದ್ದ ಭಟ್ರು ಅವನನ್ನೆ ಕೆಕ್ಕರಿಸಿಕೊಂಡು ನೋಡುತ್ತಿದ್ದರು.

    ಆ ಬ್ಯಾರಿ ಹೋದ ಮೇಲೆ ಸುಮಳ ಮನಸ್ಸು ವ್ಯಗ್ರವಾಗಿತ್ತು. ಅವಳು ರಾಮನ ಹತ್ತಿರವೇ ಇದ್ದು ಅದರ ತಲೆ ನೇವರಿಸುತ್ತಿದ್ದಳು. ಸಂಜೆ ಹೊತ್ತಿಗೆ ಸಾಕಜ್ಜಿ ಅಡಿಕೆ ಹೊಂಬಾಳೆಯನ್ನು ರಾಮನಿಗೆ ಹಾಕಿ ಅದು ತಿನ್ನುತ್ತಿರುವುದನ್ನು ನೋಡಿ ಕಣ್ನೀರು ಹಾಕುತ್ತಿದ್ದ ಅಜ್ಜಿ ಯಾಕೆ ಅಳುತ್ತಾ ಇದ್ದಾರೆ ಎಂದು ಸುಮನಿಗೆ ಅರ್ಥವಾಗಿತ್ತು. ಅಪ್ಪಯ್ಯನಲ್ಲಿ ರಾಮನನ್ನು ಮಾರುವುದು ಬೇಡ ಎಂದು ಹೇಳಬೇಕೆನಿಸಿದರೂ ಅವರು ಪಕಾಸಿಗೆ ಸೇರಿಸಿಟ್ಟ ನಾಗರಬೆತ್ತ. ಭಯ ಹುಟ್ಟಿಸುತ್ತಿತ್ತು. ಕೊನೆಗೂ ನಿಸ್ಸಹಾಯಕಳಾದ ಸುಮ ಅಜ್ಜಿಯ ತಲೆಗೆ ತಾನೂ ಆತುಕೊಂಡು ಕಣ್ಣೀರು ಹಾಕತೊಡಗಿದಳು.

          ಮರುದಿನ ಬ್ಯಾರಿ ರಾಮನನ್ನು ಕೊಂಡೊಯ್ಯಲು ನಾಲ್ಕು ಜನರೊಡನೆ ಬಂದ. ಕೆಲಸದ ತಿಮ್ಮ ಅದನ್ನು ಹಟ್ಟಿಯಿಂದ ಹೊರತರಲು ಪ್ರಯತ್ನಿಸಿದಾಗ ರಾಮ ಎನು ಮಾಡಿದರೂ ಹೊರಬರಲೇ ಇಲ್ಲ. ಬ್ಯಾರಿ ಅದನ್ನು ಎಳೆದು ತರಲು ಹೋಗಿ ಕೋಲಿನಿಂದ ಅದರ ಬೆನ್ನಿನ ರಪರಪನೇ ಬಡಿದಾಗ ಅದು ಎದ್ದು ನಿಂತು ಅಲ್ಲಿದ್ದವರ ಮೇಲೇಲ್ಲಾ ಹಾಯಲು ಎರಗಿತು. ಬಂದವರೆಲ್ಲಾ ಹಿಂದೆ ಸರಿದಾಗ ಯಾವ ತಕರಾರೂ ಇಲ್ಲದಂತೆ ಬಂದು ಭಟ್ಟರ ಪಾದ ಮೂಸಿ ನಂತರ ಸಾಕಜ್ಜಿ, ಸುಮಳ ಅಮ್ಮನ ಹತ್ತಿರ ಹೋಯಿತು. ಸಾಕಜ್ಜಿ ಹಾಗೂ ಸುಮ ಅದರ ತಲೆ ನೇವರಿಸಿ ಜೋರಾಗಿ ಅಳುತ್ತಿದ್ದರು. ಭಟ್ಟರು ಅವರಿಗೆ ಸಮಾಧಾನ ಮಾಡಿ ತಾವೇ ಅದನ್ನು ಹೊಡೆದುಕೊಂಡು ಮುಂದೆ ಮುಂದೆ ಹೋಗತೊಡಗಿದರು. ಹೆಬ್ಬಾಗಿಲಿನ ಹತ್ತಿರ ಹೋದಾಗ ರಾಮ ಒಮ್ಮೆ ತಿರುಗಿ ನಿಂತು, ಸಾಕಜ್ಜಿಯನ್ನು, ಸುಮಳನ್ನೂ ಹಾಗೂ ಭಟ್ಟರ ಮನೆಯನ್ನೂ ಒಮ್ಮೆಲೇ ದೃಷ್ಟಿಸಿ ನೋಡಿತು. ಆಗ ಅದರ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಭಟ್ಟರು ಸಂಕೋಲೆಯನ್ನು ಜಗ್ಗಿದಾಗ ಸುಮ್ಮನೆ ಭಟ್ಟರ ಹಿಂದೆ ಹೊರಟು ಕಣ್ಮರೆಯಾಯಿತು.

       ಕೆಲವು ತಿಂಗಳುಗಳು ಕಳೆದವು. ಬ್ಯಾರಿ ಮಾತ್ರ ಪ್ರತೀವಾರ ಬಂದು ರಾಮನಿಗಾಗಿ ಹುಲ್ಲು ಹಿಂಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಅಜ್ಜಿ ಆಗಾಗ ಹೆಬ್ಬಾಗಿಲಿನಲ್ಲಿದ್ದ ರಾಮನ ಪೋಟೋವನ್ನು ನೋಡಿ ಒಂದು ಸಾರಿ ರಾಮನನ್ನು ನೋಡಿಕೊಂಡು ಬರಬೇಕು ಎನ್ನುತ್ತಿದ್ದರು. ಒಂದು ದಿನ ಜಗುಲಿಯಲ್ಲಿ ಬೆಕ್ಕಿನ ಮರಿ ಜೊತೆ ಆಟವಾಡುತ್ತಿದ್ದ ಸುಮ ಅಡಿಕೆ ವ್ಯಾಪಾರಕ್ಕಾಗಿ ಬಂದ ಒಬ್ಬ ಅಳು ತಂದೆಯಲ್ಲಿ ಭಟ್ರೆ ಹೇಳಿ ಕೇಳಿ ನೀವು ದೇವರ ಹೆಸರು ಹೇಳಿಕೊಂಡು ಸತ್ಯದಾರಿಯಲ್ಲಿ ಬದುಕುವವರು ನಿಮಗೆ ಈ ಮೋಸ ಎಲ್ಲ ಎಲ್ಲಿ ಅರ್ಥವಾಗಬೇಕು. ಆ ಬ್ಯಾರಿ ಕೊಂಡು ಹೋದ ಜಾನುವಾರುಗಳನ್ನು ಮೂರನೇ ದಿನವೇ ಕಸಾಯಿಖಾನೆಗೆ ಸಾಗಿಸಿಬಿಡುತ್ತಾನೆ. ಹೀಗೇಮಾಡಿ ನಾವು ಅಮ್ಮನವರಿಗೆ ಬಿಟ್ಟ ಕೋಣವೊಂದನ್ನು ವಾಯಿದೆ ಕಳೆಯೋದಿಕ್ಕೆ ಮುಂಚೆಯೇ ಬ್ಯಾರಿಗೆ ಕೊಟ್ಟಿದ್ದರಿಂದ ಈಗ ಪಾಪಿಷ್ಟರಾಗಿ ತಿರುಗುತ್ತಿದ್ದೇವೆ ಎಂದು ವ್ಯಾಪಾರದಲ್ಲಿ ತನಗೆ ನಷ್ಟವಾದದ್ದರ ಬಗ್ಗೆ ತಿಳಿಸುತ್ತಿದ್ದ ಅವರ ಮಾತು ಕೇಳಿದ ಸುಮಾಳ ಕಣ್ಣುಗಳು ತಿರುಗತೊಡಗಿದವು. ಸಾಕಜ್ಜಿ ಸುಮಾ ಸುಮಾ ಎಂದು ಕೂಗುತ್ತಾ ಬರುವಷ್ಟರಲ್ಲಿ ಜ್ವರ ಏರಿಯಾಗಿತ್ತು. ಭಟ್ಟರಿಗೆ ವಿಷಯ ತಿಳಿದು ಸುಮಳನ್ನು ಎತ್ತಿಕೊಂಡು ಹೋಗಿ ಹಾಸಿಗೆಯಲ್ಲಿ ಮಲಗಿಸಿದರು. ಸ್ವಲ್ಪ ಆರೈಕೆ ಮಾಡಿದ ಮೇಲೆ ಕಣ್ಣು ಬಿಟ್ಟ ಸುಮ ಅಪ್ಪಯ್ಯ ನನಗೆ ರಾಮ ಬೇಕು ಎಂದು ಕನವರಿಸತೊಡಗಿದಳು. ಭಟ್ಟರು ಸಾಕಜ್ಜಿ ಮುಖ ಮುಖ ನೋಡಿ ಗಾಬರಿಗೊಂಡರು. ಭಟ್ಟರು ಗಡಿಬಿಡಿಯಿಂದದ್ದು ಅವರ್ಸೆಯಿಂದ ನಾಟೀ ವ್ಯದ್ಯರನ್ನು ಕರೆತರಲು ಹೊರಟರು ಸಾಕಜ್ಜಿ ದೈವ ದೇವ್ರ ವಿವೇಚನೆಯಲ್ಲದೇ ನಿನ್ನ ಗಂಡ ರಾಮನನ್ನು ಮಾರಿಬಿಟ್ಟ. ಈಗ ನೋಡು ನಿಮ್ಮ ಪಾಪ ನಿಮ್ಮನ್ನೆ ಹುಡುಕಿಕೊಂಡು ಬಂದಿದೆ ಎಂದು ಸುಮಳ ಅಮ್ಮನನ್ನು ತರಾಟೆಗೆ ತೆಗೆದುಕೊಂಡರು. ಅವರಾದರೋ ಹೆತ್ತ ಕರುಳಿನ ಸಂಕಟ ತಡೆಯಲಾರದೇ, ಕೆಲಸದ ತಿಮ್ಮನನ್ನು ಕರೆದು ನಾಲ್ಕು ಪವನಿನ ಚಿನ್ನದ ಸರವೊಂದನ್ನು ಕೊಟ್ಟು ಏನಾದರೂ ಮಾಡಿ ಬೇಗ ಆ ಬ್ಯಾರಿಯಲ್ಲಿಗೆ ಹೋಗಿ ರಾಮನನ್ನು ಕರೆದುಕೊಂಡು ಬಾ ಎಂದು ಅವಲತ್ತುಕೊಂಡರು. ತಿಮ್ಮ ಹೋದ ಬೆನ್ನಲ್ಲೇ ಅವರ್ಸೆಯಿಂದ ಬಂದ ನಾಟೀ ವೈದ್ಯರು ಸುಮಳನ್ನು ಪರೀಕ್ಷಿಸಿ ಭಟ್ರೆ ನಿಮ್ಮ ಮಗು ಏಳಬೇಕೆಂದ್ರೆ ನೀವು ಆ ಕೋಣವನ್ನು ಹೇಗಾದ್ರು ಮಾಡಿ ಇಲ್ಲಿಗೆ ತಂದು ಒಮ್ಮೆ ತೋರಿಸಿಬಿಡಿ ಎಂದು ಹೇಳಿ ಹೊರಟರು ಭಟ್ಟರು ಕೈ ಕೈ ಹಿಸುಕಿಕೊಂಡು ತಲೆಮೇಲೆ ಕೈಹೊತ್ತು ದೇವರ ಪೋಟೋದಡೆಗೆ ಹೋಗಿ ಕೈಮುಗಿದರು.

ಬಿ.ಬಾಲಕೃಷ್ಣ ಬೈಂದೂರು
    ಇದೇ ಹೊತ್ತಿಗೆ ಮನೆ ಕೆಳಗಿನ ನಲವತ್ತು ಮುಡಿಯ ಅಂಚಿನ ಮೇಲೆ ಕೆಲಸದ ತಿಮ್ಮ ಹೋಯ್ ಯಜಮಾನ್ರೇ ನಮ್ಮ ಕೋಣು ಆ ಬ್ಯಾರಿ ಕೊಟ್ಗೆಯಿಂದ ಒಂದು ತಿಂಗಳ ಅಚೇಗೆ ತಪಸ್ಕಂಡ ಓಡಿಹೋಯಿತಂಬ್ರ. ಇವತ್ತಿನೊರಿಗೂ ಸಿಕ್ಕಿಲ್ಲಂಬ್ರ ನಾನೆ ಅಲ್ಲೇಲ್ಲಾ ಹುಡ್ಕಿ ವಾಪಸ್ ಬಂದೆ ಎಂದು ಕೂಗುತ್ತಾ ಓಡಿಬರುತ್ತಿದ್ದ ತಿಮ್ಮನ ಮಾತು ಕೇಳಿ ಭಟ್ಟರ ಮನಸ್ಸು ತಳ ಒಡದ ಹಡಗಿನಂತಾಯಿತು. ಅವರು ತಲೆ ಬಡಿದುಕೊಳ್ಖುತ್ತಾ ಅಳತೊಡಗಿದರು.ಸಾಕಜ್ಜಿ ಮೌನವಾಗಿ ಸುಮಳನ್ನೇ ದಿಟ್ಟಿಸುತ್ತಿದ್ದರು. ಕ್ಷಣ ಹೊತ್ತು ಸರಿದಿತ್ತಷ್ಷೇ, ಗಣಗಣ ಗಂಟೆಯ ಸದ್ದು ಕೇಳುತ್ತಿದ್ದಂತೆಯೇ ಮನೆಯ ತೊಡಮೆಯನ್ನು ಮುರಿದುಕೊಂಡು ನೇರವಾಗಿ ಕಣಕ್ಕೇ ಧಾವಿಸಿತ್ತು ಅವರ ಮನೆಯ ಮೆಚ್ಚಿನ' ಕೋಣ ರಾಮ. ಅದರ ಬೆನ್ನು, ಮುಖಗಳಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿತ್ತು. ತಿಂಗಳುಗಳಿಂದ ನೀರು ಕಾಣದೇ ಮ್ಯೆಯೆಲ್ಲಾ ಜಿಡ್ಡುಗಟ್ಟಿತ್ತು. ರಾಮ ಬಂದ ಸ್ವಲ್ಪ ಹೊತ್ತಿನಲ್ಲೇ ಭಟ್ಟರ ಮನೆಯಲ್ಲಿ ಸಂಭ್ರಮ ತುಂಬಿತು. ರಾಮನಿಗೆ ಸ್ನಾನ ಮಾಡಿಸಿ ಔಷಧಿ ಹಚ್ಚಿ ಕೊಟ್ಟಿಗೆಯಲ್ಲಿ ಮಲಗಿಸಿದ ಮೇಲೆ ಎದ್ದ ಸುಮಳಿಗೆ ಜ್ವರ ಇಳಿದಿತ್ತು, ರಾಮನ ಮುಖಕ್ಕೆ ಆತುಕೊಂಡು ಆನಂದ ಭಾಷ್ಪ ಸುರಿಸುತ್ತಿದ್ದ ಸುಮಳನ್ನು ನೋಡಿ ಸಾಕಜ್ಜಿ ಹಾಗೂ ಭಟ್ಟರ ಕಣ್ಣುಗಳಲ್ಲಿ ಹನಿಗೂಡಿತು.

ಲೇಖಕರು ಯುವ ಬರಹಗಾರರು ಹಾಗೂ ಕವಿ.


ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com