ಸುವರ್ಣ ಸಂಭ್ರಮಕ್ಕೆ ಸಜ್ಜಾದ ಭಂಡಾರ್ಕಾರ್ಸ್ ಕಾಲೇಜು. ನಡೆದು ಬಂದ ಹಾದಿಯ ಒಂದು ಪಕ್ಷಿನೋಟ

ಕುಂದಾಪ್ರ ಕನ್ನಡದ ಸೊಗಡು, ಧಾರ್ಮಿಕ- ಪ್ರಾಕೃತಿಕ ವೈವಿಧ್ಯತೆ, ವಿಶಿಷ್ಟವಾದ ಜನಜೀವನ ಇಷ್ಟಕ್ಕೆ ಮಾತ್ರ ಕುಂದಾಪುರ ಸಿಮೀತವಾಗಿರದೇ ಶೈಕ್ಷಣಿಕ ರಂಗದಲ್ಲೂ ಸಾಕಷ್ಟು ಪ್ರಗತಿಯನ್ನು ಸಾಧಿಸಿರುವುದು ಗಮನಾರ್ಹವಾದುದು. ಉನ್ನತ ಶಿಕ್ಷಣವೆಂಬುದು ಕನಸಿನ ಮಾತಾಗಿದ್ದ ಕಾಲದಲ್ಲಿ ಆರಂಭಗೊಂಡ ಅಚ್ಚಕನ್ನಡದೂರಿನ ಹೆಮ್ಮೆಯ ಭಂಡಾರ್ಕಾರ್ಸ್ ಕಾಲೇಜು ಐವತ್ತು ವರ್ಷಗಳ ಸಂಭ್ರಮಾಚರಣೆಗೆ ಸಚ್ಚಾಗಿದೆ. ಈ ನಡುವೆ ಕಾಲೇಜು ಸಾಗಿಬಂದ ಹಾದಿಯತ್ತ ಒಂದು ಪಕ್ಷಿನೋಟ 

       ಅರ್ಧ ಶತಮಾನಕ್ಕೂ ಮೊದಲು ಉನ್ನತ ಶಿಕ್ಷಣವೆಂಬುದು ಕುಂದಾಪುರದ ಸುತ್ತಲಿನ ಪರಿಸರದವರಿಗೆ ಕನಸಿನ ಮಾತಾಗಿತ್ತು. ಒಂದೋ ಶಿಕ್ಷಣವನ್ನು ಮೊಟಕುಗೊಳಿಸಬೇಕು ಇಲ್ಲವೇ ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ದೂರದ ಉರುಗಳಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಇಂತಹ ಸಂದರ್ಭದಲ್ಲಿ 1957ರಲ್ಲಿ ಉರಿನ ಹಿರಿಯರು ಕಾಲೇಜು ಸ್ಥಾಪನೆಯ ಪ್ರಸ್ತಾಪಕ್ಕೆ  ಮುಂದಾದರು. ಈ ಮದ್ಯೆ ಕುಂದಾಪುರಲ್ಲಿ ರೋಟರಿ ಕ್ಲಬ್ ಸ್ಥಾಪನೆಗೊಂಡಿತ್ತು. 1960ರಲ್ಲಿ ರೋಟರಿಯ ಮೂಲಕ  ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಮಣಿಪಾಲದ ಶಿಲ್ಪಿ ಡಾ. ಟಿ.ಎಂ.ಎ. ಪೈಗಳಲ್ಲಿ ಬೇಡಿಕೆ ಇರಿಸಲಾಯಿತು.
      ರೋಟರಿಯವರ ಪ್ರಯತ್ನ ವ್ಯರ್ಥವಾಗಲಿಲ್ಲ.  ಡಾ| ಪೈಗಳು ಸಹಕಾರ ನೀಡಲು ಮುಂದಾದರು. ಉರಿನವರಿಗೆ ಶಿಕ್ಷಣ ಸಂಸ್ಥೆ ತಮ್ಮದೆಂಬ ಭಾವನೆ ಬರಬೇಕೆಂದು ಉರಿನವರಿಂದ ಕನಿಷ್ಥ ಮೂಲಧನವನ್ನು ಸಂಗ್ರಹಿಸಬೇಕೆಂಬ ಷರತ್ತನ್ನು ಅವರು ವಿಧಿಸಿದ್ದರು. ಷರತ್ತಿಗೆ ಒಪ್ಪಿದ ಕುಂದಾಪುರಿಗರು ಸಾಮಾಜಿಕ ಕಾರ್ಯಕರ್ತ ಕೆ. ಎಲ್. ಭಂಡಾರಿಯವರ ಮೂಲಕ ಬಹ್ರೇನಿನ್ ನಲ್ಲಿ ಖ್ಯಾತ ವೈದ್ಯರಾಗಿದ್ದ ಡಾ| ಅಚ್ಚುತ ಶ್ರೀನಿವಾಸ್ ಭಂಡಾರ್ಕರರಿಗೆ 25 ಸಾವಿರ ರೂ ನೆರವು ನೀಡುವಂತೆ ಪತ್ರ ಬರೆದರು. ಪತ್ರಕ್ಕೆ ಸ್ವಂದಿಸಿದ ಅವರು ನಿರೀಕ್ಷೆಗೂ ಮೀರಿ 2 ಲಕ್ಷ ರೂ ಹಣವನ್ನು ಕಳುಹಿಸಿದ್ದರು. ಹೀಗೆ ಶಿಕ್ಷಣ ಪ್ರೇವಿಗಳಿರ್ವರ ಸಹಕಾರದಿಂದ 1963 ಜುಲೈ 11ರಂದು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಅಸ್ತಿತ್ವಕ್ಕೆ ಬಂತು. ತನ್ಮೂಲಕ ನೂರಾರು ಕುಟುಂಬಗಳಿಗೆ ಬೆಳಕಾಯಿತು.  ಶಿಕ್ಷಣ ಕ್ರಾಂತಿಯ ಮೂಲಕ ಕುಂದಾಪುರದ ಚಿತ್ರಣವನ್ನೇ ಬದಲಿಸಿದ ಕಾಲೇಜು ಇಂದು ರಾಜ್ಯದ ಪ್ರತಿಷ್ಠಿತ ಕಾಲೇಜುಗಳ ಪೈಕಿ ಒಂದೆನಿಸಿದೆ.
      ನರಿಬ್ಯಾಣ ಎಂದು ಕರೆಯಲ್ಪಡುತ್ತಿದ್ದ ಸ್ಥಳದಲ್ಲಿ ಆರಂಭಗೊಂಡ ಕಾಲೇಜು ಮೊದಲ ವರ್ಷದಲ್ಲಿ ಉಳಿದ ಅಕಾಡೆಮಿ ಕಾಲೇಜುಗಳಿಗಿಂತ ಹೆಚ್ಚಿನ ವಿದ್ಯಾರ್ಥಿ ಸಂಖ್ಯಾಬಲ ಹೊಂದಿತ್ತು. ಮುಂದೆ ವಿಶ್ವಸ್ಥ ಮಂಡಳಿ ನೇಮಕ, ಹೊಸ ಕಟ್ಟಡ ಶಿಲನ್ಯಾಸದ ಬಳಿಕ 1964 ಫೆ.20ರಂದು ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಮೈಸುರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಕಾಲೇಜಿನ ಕಟ್ಟಡವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ್ದರು. ಉರ ದಾನಿಗಳಿಂದ ಪೀಠೋಪಕರಣ ಮುಂತಾದವುಗಳ ವ್ಯವಸ್ಥೆ ಕ್ರಮೇಣ ಆಗಿತ್ತು.
    ಡಾ ಟಿಎಂಎ ಪೈ                        ಡಾ. ಎ ಎಸ್ ಭಂಡಾರ್ಕಾರ್                   ಡಾ. ಹೆಚ್ ಶಾತಾರಾಮ್
 ಕಾಲೇಜಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಾಂಶುಪಾಲರುಗಳ ಪಾತ್ರ ಗಮನಾರ್ಹವಾದುದು. ಅವರುಗಳ ಪರಿಶ್ರಮ ಹಾಗೂ ಕಾರ್ಯನಿಷ್ಠೆಯಿಂದ ಇಂದಿಗೂ ಕಾಲೇಜು ಉನ್ನತ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡ ಪ್ರೋ. ಕೆ.ಜಿ.ಶೆಣೈ ಎರಡು ವರ್ಷಗಳ ಕಾಲ ಸಂಸ್ಥೆಗೆ ಸೇವೆ ಸಲ್ಲಿಸಿದ್ದರು. ನಂತರ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡ ಪ್ರೊ. ಟಿ. ಕೃಷ್ಣರಾಯರು ಧೀರ್ಘ 11 ವರ್ಷಗಳ ವರೆಗೆ ಪ್ರಾಂಶುಪಾಲರಾಗಿದ್ದುಕೊಂಡು ಕಾಲೇಜಿನ ಬೆಳವಣಿಗೆಗೆ ಸಹಕಾರಿಯಾದರು. 1976ರಲ್ಲಿ ಡಾ. ಹೆಚ್. ಶಾಂತಾರಾಮ್ ಅವರು ಪ್ರಾಂಶುಪಾಲರಾಗಿ ಅಧಿಕಾರವನ್ನು ವಹಿಸಿಕೊಂಡು ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾಗಿದ್ದಲ್ಲದೇ ಇಂದಿಗೂ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಹಾಗೂ ಕಾಲೇಜಿನ ವಿಶ್ವಸ್ಥ ಮಂಡಳಿಯಲ್ಲಿದ್ದು ಕಾಲೇಜನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತ್ತಿದ್ದಾರೆ. 
ಕಾಲೇಜಿನ ಆಡಳಿತ ಸೌಧ
    ಕಾಲೇಜು ಆರಂಭಿಸಿದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತು. ಅವಶ್ಯಕತೆಗೆ ಅನುಗುಣವಾಗಿ ಹೊಸ ಕಟ್ಟಗಳ ನಿರ್ಮಾಣದ ತಯಾರಿ ನಡೆಯಿತು. ಈ ನಡುವೆ ಹಾಜಿ ಎನ್. ಸಿ. ಕೋಯಾಕುಟ್ಟಿಯವರ ಸಹಕಾರದಿಂದ ಎನ್. ಸಿ. ಕೋಯಾಕುಟ್ಟಿ ಸಭಾಭವನ ಬಳಿಕ ವಿದ್ಯಾರ್ಥಿ, ಅಧ್ಯಾಪಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಿಂಡಿಕೇಟ್ ಬ್ಯಾಂಕ್ ನ ವಿಸ್ತರಣಾ ಕಛೇರಿ ವಿಜ್ಞಾನ ಸೌಧದ ಕೆಳಗೆ ತೆರೆಯಲ್ಪಟ್ಟಿತು. ಈತನ್ಮಧ್ಯೆ 1979ರ ಜನವರಿಯಲ್ಲಿ ಯು. ಜಿ.ಸಿ .ಅನುಮತಿಯ ಮೇರೆಗೆ 5ಲಕ್ಷ ರೂಪಾಯಿಗಳ  ಅಂದಾಜು ವೆಚ್ಚದ ಗ್ರಂಥಾಲಯ ಮಾತ್ರವಲ್ಲದೆ ಮೇಲಿನ ಎರಡು ಅಂತಸ್ತುಗಳ ತರಗತಿಗಳನ್ನು ಉಪಯೋಗಿಸುವುದೆಂದು ತೀರ್ಮಾನಿಸಿ ಕಟ್ಟಡ ಶಿಲನ್ಯಾಸವಾಯಿತು. ಈ ನಡುವೆಯೇ ಉದ್ಯಮಿ ಆರ್. ಎನ್. ಶೆಟ್ಟಿಯವರ  ದೇಣಿಗೆಯಿಂದ ಆರ್. ಎನ್. ಶೆಟ್ಟಿ ಸಭಾಂಗಣ ನಿರ್ಮಾಣಗೊಂಡಿತು. 1979ರ ಜೂನ್ ತಿಂಗಳಲ್ಲಿ ಮಡಿದ ಮಣಿಪಾಲ ಪಿತಾಮಹ ಡಾ. ಟಿ.ಎಂ.ಎ. ಪೈಗಳು ಪುಣ್ಯಸ್ಮರಣೆಗಾಗಿ ಡಾ. ಟಿ.ಎಂ.ಎ ಪೈ ಸೌಧ ಹಾಗೂ ಬಯಲು ರಂಗಮಂದಿರಕ್ಕೆ ಮಾಧವ ಮಂಟಪ ನಿರ್ಮಿಸಲಾಯಿತು.
     1987-88 ಕಾಲೇಜಿಗೆ ಬೆಳ್ಳಿಹಬ್ಬ. ವಿಜ್ಞಾನ ಸೌಧ ಮತ್ತು ಡಾ ಟಿ.ಎಂ.ಎ ಪೈ ಸೌಧವನ್ನು ಜೋಡಿಸುವ ಪ್ರಧಾನ ಕಟ್ಟಡ ಉದ್ಘಾಟನೆಗೊಂಡಿತು. ಅಕಾಡೆಮಿಯ ಸ್ವರ್ಣಮಹೋತ್ಸವದ ವರ್ಷ ಇದಕ್ಕೆ ಅಕಾಡೆಮಿ ಸ್ವರ್ಣಮಹೋತ್ಸವ ಸೌಧ ಎಂದು ಹೆಸರಿಸಲಾಯಿತು. ಮುಂದೆ 1999ರಲ್ಲಿ ಉದ್ಯಮಿ ಪ್ರಭಾಕರ್ ತೋಳಾರರ ದೇಣಿಗೆಯಿಂದ ಶ್ರೀ ಪ್ರಭಾಕರ ತೋಳಾರ್ ಒಳಾಂಗಣ ಕ್ರೀಡಾಂಗಣ, 2000ನೇ ಇಸವಿಯಲ್ಲಿ  ಮಧೂಸೂದನ ಡಿ. ಕುಶೆ ಅವರು ನೀಡಿದ ದೇಣಿಗೆಯಿಂದ  ದಿ. ರಾಧಾಬೈ  ಮೂರಂತಸ್ತಿನ ರಂಗ ಅಧ್ಯಯನ ಕೇಂದ್ರ ಉದ್ಘಾಟನೆಗೊಂಡಿತು. ರಂಗ ಅಧ್ಯಯನ ಕೇಂದ್ರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದು ಒಂದು ವರ್ಷದ ನಾಟಕ ಡಿಪ್ಲೋಮಾ ಕೋರ್ಸನ್ನು ನಡೆಸುತ್ತಿದೆ ಮತ್ತು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಆಹ್ವಾನಿತ ಉಪನ್ಯಾಸಗಳನ್ನು ನೀಡುತ್ತಿದೆ.
     ಆರಂಭದ ದಿನಗಳಲ್ಲಿ ಆಯ್ದ ವಿಷಯಗಳಿಗಷ್ಟೇ ಸೀಮಿತವಾಗಿದ್ದ ವಿಜ್ಞಾನ ವಿಭಾಗವನ್ನು ವಿಸ್ತರಿಸಲಾಯಿತು. ಡಾ. ವಿ.ಕೆ.ಆರ್. ಆಚಾರ್ಯ ಅವರ ದೇಣಿಗೆಯಿಂದ ಕಂಪ್ಯೂಟರ್ ಶಿಕ್ಷಣ ಆರಂಭಗೊಂಡಿತು. 2001-02ರಲ್ಲಿ ಬಿಬಿಎಂ ಮತ್ತು ಬಿಸಿಎ, 2005-06ರಲ್ಲಿ ಕಲಾ ವಿಭಾಗಕ್ಕೆ ಪತ್ರಿಕೋದ್ಯಮ, ಇಂಗ್ಲೀಷ್, ಮನಃಶಾಸ್ತ್ರ, ವಿಜ್ಞಾನ ವಿಭಾಗಕ್ಕೆ ಸೂಕ್ಷ್ಮಾಣು ಜೀವಶಾಸ್ತ್ರ, ಜೈವಿಕ ರಸಾಯನಶಾಸ್ತ್ರ ಸೇರ್ಪಡೆಗೊಂಡಿತು. 2012-13 ಶೈಕ್ಷಣಿಕ ವರ್ಷದಿಂದ ಎಂಕಾಂ ಸ್ನಾತಕೋತ್ತರ ಪದವಿಯ ಕೋರ್ಸುಗಳು ಆರಂಭಗೊಂಡವು. 
      2005-06ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಬಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣಗೊಂಡಿತು. 2010ರಲ್ಲಿ ಡಾ. ರಾಮದಾಸ ಎ. ಭಂಡಾರ್ಕಾರ್ ಅವರ ಕೊಡುಗೆಯಾಗಿ ಸುಸಜ್ಜಿತವಾದ 'ಡಾ. ಹೆಚ್. ಶಾಂತಾರಾಮ್ ಗಣಕ ವಿಜ್ಞಾನ ಸೌಧ ನಿರ್ಮಾಣಗೊಂಡಿತು.
ಗಣಕ ವಿಜ್ಞಾನ ಸೌಧ

ದರ್ಶನ ವಾರ್ಷಿಕ ಸಂಚಿಕೆ
     ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕ ಸಂಚಿಕೆ ದರ್ಶನ ತನ್ನ ವೈಶಿಷ್ಟ್ಯಪೂರ್ಣ ಬರಹಗಳಿಂದಾಗಿ ರಾಜ್ಯದ ಗಮನ ಸೆಳೆದಿದೆ. 1997-98ರಿಂದ ಮಂಗಳೂರು ವಿಶ್ವವಿದ್ಯಾನಿಲಯ ನಡೆಸುವ ವಾರ್ಷಿಕಾಂಕ ಸ್ವರ್ಧೆಯಲ್ಲಿ ಸತತವಾಗಿ 14 ಭಾರಿ ಪ್ರಥಮ ಬಹುಮಾನವನ್ನು ಪಡೆದಿದೆ. ಕಾಲೇಜಿನ ವಾರ್ಷಿಕಾಂಕ ವಿದ್ಯಾರ್ಥಿಗಳ ಬರವಣಿಗೆಗೆ ಪ್ರೋತ್ಸಾಹಿಸಿದ್ದಲ್ಲದೇ, ಕುಂದಾಪುರದ ಸಂಸ್ಕೃತಿ, ಜನಜೀವನವನ್ನು ನಾಡಿಗ ಪರಿಚಯಿಸಿದೆ. 

ಗ್ರಂಥಾಲಯ
ಗ್ರಂಥಾಲಯ
    ಸುಮಾರು 80,000ಕ್ಕೂ ಅಧಿಕ ಪುಸ್ತಕಗಳಿರುವ ಭಂಡಾರ್ಕಾರ್ಸ್ ಕಾಲೇಜಿನ ಗ್ರಂಥಾಲಯ ಕಾಲೇಜಿನ ಕೀರ್ತಿಕಳಸದಂತಿದೆ. 1.25 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀಮತಿ ಉಷಾ ಶಾಂತಾರಾಮ್ ಮೆಮೋರಿಯಲ್ ಗ್ರಂಥಾಲಯ ಕಟ್ಟಡ 2004 ಫೆ.25ರಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಕುಲಸಚಿವರಾದ ಪದ್ಮವಿಭೂಷಣ ಡಾ. ರಾಮದಾಸ ಪೈಗಳಿಂದ ಉದ್ಘಾಟನೆಗೊಂಡಿತ್ತು. ನಾಲ್ಕು ಅಂತಸ್ತಿನ ಕಟ್ಟಡ ಗ್ರಂಥಾಲಯ, ಆಕರ ಗ್ರಂಥ ವಿಭಾಗ, ಸೆಮಿನಾರ್ ಹಾಲ್, ಕಲಾ ಗ್ಯಾಲರಿಗಳನ್ನು ಒಳಗೊಂಡಿದೆ. ಗಣಕೀಕೃತ ಬಾರ್ ಕೋಡಿಂಗ್, ಒಪನ್ ಎಕ್ಸ್ಸ್ ಸಿಸ್ಟಮ್, ಆನ್ಲೈನ್ ಪಬ್ಲಿಕ್ ಎಕ್ಸೆಸ್ ಕೆಟಲಾಗ್, ಬಡ ವಿದ್ಯಾರ್ಥಿಗಳಿಗೆ ಬುಕ್ ಬ್ಯಾಂಕ್ ಯೋಜನೆ, ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಅಂತರ್ಜಾಲ ಸೌಲಭ್ಯ ಮುಂತಾದವುಗಳು ಗ್ರಂಥಾಲಯದ ವಿಶೇಷತೆಗಳು. ಗ್ರಂಥಪಾಲಕ ಆನಂದ ಅವರ ವಿಶೇಷ ಮುತುವರ್ಜಿಯಿಂದ ಇಲ್ಲಿನ ಗ್ರಂಥಾಲಯ ವಿದ್ಯಾರ್ಥಿಗಳನ್ನು ಸೆಳೆಯುವಂತೆ ಮಾಡಿದೆ.

ಸುವರ್ಣ ಸೌಧ

   ಕಾಲೇಜಿನ ಸುವರ್ಣ ಮಹೋತ್ಸವದ ನೆನಪಿಗಾಗಿ ಸುಮಾರು ನಾಲ್ಕು ಕೋಟಿ ರೂಗಳ ವೆಚ್ಚದಲ್ಲಿ ಕಾಲೇಜಿನ ಆಡಳಿತ ಸೌಧವನ್ನು ನಿರ್ಮಿಸಲಾಗಿದ್ದು ಇದೂ ಕೂಡ ಕಾಲೇಜಿನ ಬೆಳವಣಿಗೆಯಲ್ಲಿ ಗಮನಾರ್ಹವಾದ ಅಂಶವಾಗಿದೆ.

ಕಾಲೇಜಿಗೆ ನ್ಯಾಕ್ ನಿಂದ 'ಎ' ಗ್ರೇಡ್
      ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ 'ನ್ಯಾಕ್' ಸಮಿತಿಯು ಕಾಲೇಜಿನ ಪರಿವೀಕ್ಷಣೆ ನಡೆಸಿ ಉನ್ನತ ಶ್ರೇಣಿಯಾದ 'ಎ' ಗ್ರೇಡ್ ನೀಡಿರುವುದು ಕಾಲೇಜಿಗೆ ಸಾಧನೆಗೆ ಹಿಡಿದ ಕನ್ನಡಿಯಂತಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿರುವ ಕಾಲೇಜಾದರೂ ಪ್ರತಿವರ್ಷವೂ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ರ್ಯಾಂಕ್ ಪಡೆತ್ತಿರುವ ಕಾಲೇಜಿನ ಶೈಕ್ಷಣಿಕ ಸಾಧನೆ ಗಮನಾರ್ಹವಾದುದುದು. ಕೇವಲ ಪಾಠ-ಪಠ್ಯಗಳಲ್ಲಷ್ಟೇ ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ಕಾಲೇಜು ಗುರುತಿಸಿಕೊಂಡಿದೆ. 1982ರಿಂದ ಆಧ್ಯಾತ್ಮಿಕ ಶಿಬಿರಗಳನ್ನು ಆಯೋಜಿಸುವಲ್ಲಿ ಹೊಸ ಹೆಜ್ಜೆಯನ್ನಿಟ್ಟ ಮಂಗಳೂರು ವಿಶ್ವವಿದ್ಯಾನಿಲಯದ ಮೊದಲ ಕಾಲೇಜು ಎಂಬು ಹೆಗ್ಗಳಿಕೆ ಕಾಲೇಜಿನದು. ಪ್ರತಿ ವರ್ಷ ಕಾಲೇಜಿನಲ್ಲಿ ಆಯೋಜಿಸುತ್ತಾ ಬಂದಿರುವ ಜೀವನ ಮೌಲ್ಯ ಶಿಬಿರಗಳು ವಿದ್ಯಾರ್ಥಿಗಳನ್ನಷ್ಟೇ ಅಲ್ಲದೇ ಸ್ಥಳಿಯರನ್ನು ಆಕರ್ಷಿಸಿದೆ. 1976ರಿಂದ ನ.1ರಂದು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. 2011ರಿಂದ ಯಕ್ಷಗಾನ ಪ್ರಶಸ್ತಿಯನ್ನು ಹಾಗೂ ಡಾ ಹೆಚ್. ಶಾಂತಾರಾಮ್ ಗಮಕ ಸಾಹಿತ್ಯ ಮತ್ತು ಡಾ ಹೆಚ್. ಶಾಂತಾರಾಮ್ ಗಮಕ ವಾಚನ-ವ್ಯಾಖ್ಯಾನ ಪ್ರಶಸ್ತಿಗಳನ್ನು ಆಯಾ ಕ್ಷೇತ್ರದ ಸಾಧಕರಿಗೆ ನೀಡಲಾಗುತ್ತಿದೆ.
       ಕಾಲೇಜಿನಲ್ಲಿರುವ ಮಾನವ ಸಂಪನ್ಮೂಲ, ವಿದ್ಯಾರ್ಥಿ ಕ್ಷೇಮಪಾಲನಾ, ಅಹವಾಲು ಪರಿಹಾರ ವಿಭಾಗ, ದತ್ತಿನಿಧಿ, ಉಚಿತ ವೈದ್ಯಕೀಯ ತಪಾಸಣೆ, ವಿದ್ಯಾರ್ಥಿನಿಲಯಗಳ ಸೌಲಭ್ಯ  ಮುಂತಾದವುಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಸೌಹಾರ್ದತೆ ಮತ್ತು ಸೇವಾ ಮನೋಭಾವವನ್ನು ರೂಢಿಸುವಲ್ಲಿ ನೆರವಾಗಿದ್ದರೆ, ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ವಿಜ್ಞಾನ, ವಾಣಿಜ್ಯಶಾಸ್ತ್ರ ಮುಂತಾದವುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಂಘಗಳಿದ್ದು ವಿವಿಧ ಉಪನ್ಯಾಸ, ಶಿಬಿರಗಳ ಮೂಲಕ ವಿದ್ಯಾರ್ಥಿಗಳನ್ನು ಕ್ರೀಯಾಶೀಲರನ್ನಾಗಿಸಿದೆ. ಕಾಲೇಜಿನ ಸೆಂಟ್ರಲ್ ಕಂಪ್ಯೂಟಿಂಗ್ ಸೌಲಭ್ಯ, ಇನ್ಪ್ಲಿವನೆಟ್, ಡಾಕ್ಯುಮೆಂಟರಿ ಅರ್ಕೈವ್, ಭಾಷಾ, ಮನಶಾಸ್ತ್ರ ಹಾಗೂ ವಿಜ್ಞಾನ ಪ್ರಯೋಗಾಲಯಗಳು, ಡಾ ಎ. ಎಸ್. ಭಂಡಾರ್ಕಾರ್ ಸಸ್ಯೋದ್ಯಾನ, ಐತಿಹಾಸಿಕ ವಸ್ತುಗಳ ಸಂಗ್ರಹಾಲಯ ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾದ ವಾತಾವರಣ ನಿರ್ಮಿಸಿದ್ದರೇ, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತೆರೆಯಲಾಗಿರುವ 42 ಸರ್ಟಿಫಿಕೇಟ್ ಕೋರ್ಸಗಳು ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ತಣಿಸುವಲ್ಲಿ ನೆರವಾಗಿದೆ. 
    ವಿದ್ಯಾರ್ಥಿಗಳು ಶೈಕ್ಷಣಿಕ ಉನ್ನತಿಯೊಂದಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಗಮನಾರ್ಹವಾದುದು.ಈವರೆಗೆ ಕಾಲೇಜಿನಲ್ಲಿ ಕಲಿತ ಸುಮಾರು 22,000ದಷ್ಟು ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಮಟ್ಟದ ಸೇವೆ ಸಲ್ಲಿಸುತ್ತಿದ್ದು ಕಾಲೇಜಿನ ಕೀರ್ತಿಯನ್ನು ಜಗದೆತ್ತರಕ್ಕೆ ಏರಿಸಿದ್ದಾರೆ.
      ಡಿ.13ರಿಂದ ಕಾಲೇಜಿನಲ್ಲಿ ಸುವರ್ಣ ಮಹೋತ್ಸವದ ಸಂಭ್ರಮ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಭೋಧಕ-ಭೋದಕೇತರ ಸಿಬ್ಬಂದ್ದಿ ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ವಿವಿಧ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಈ ಶೈಕ್ಷಣಿಕ ವರ್ಷದಲ್ಲಿ ವಿವಿಧ ವಿಭಾಗಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ವಿಚಾರಗೋಷ್ಟಿ, ಕಾರ್ಯಾಗಾರ, ವಸ್ತು ಪ್ರದರ್ಶನ, ಸಾಂಸ್ಕೃತಿಕ ಸ್ವರ್ಧೆಗಳನ್ನು ಆಯೋಜಿಸಲಾಗಿತ್ತು. ವಿಶ್ವದ ವಿವಿಧೆಡೆ ನೆಲೆಸಿರುವ ಹಳೆವಿದ್ಯಾರ್ಥಿಗಳು, ಉರ ನಾಗರಿಕರು ಕಾಲೇಜಿನ ಸುವರ್ಣ ಸಂಭ್ರಮದಲ್ಲಿ ಪಾಲ್ಗೋಳ್ಳುವಂತೆ ಕಾಲೇಜು ಆಹ್ವಾನಿಸಿದೆ.

- ಸುನಿಲ್ ಬೈಂದೂರು
For Latest College News updates Click here

For Golden Jubilee Schedule and Invitation Click here

For all News on Social: Follow us on Facebook and Twitter


 ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com