ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಗೆ ಚಾಲನೆ- ವಿಶ್ವಕ್ಕೆ ತೆರೆದುಕೊಂಡ ಜಾಗತೀಕರಣ ಬದುಕಿಗೆ ಮಾರಕವಾಗದಿರಲಿ: ಡಾ. ಡಿ. ವಿರೇಂದ್ರ ಹೆಗ್ಗಡೆ


ಮೂಡುಬಿದಿರೆ, ರತ್ನಾಕರವರ್ಣಿ ವೇದಿಕೆ: ವಿಶ್ವಕ್ಕೆ ತೆರೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗಿ ಹುಟ್ಟಿಕೊಂಡ ಜಾಗತೀಕರಣ ಇಂದು ಜನವಿರೋಧಿ, ಪರಿಸರ ವಿರೋಧಿಯಾಗಿ ರೂಪುಗೊಳ್ಳುತ್ತಿರುವುದು ದೊಡ್ಡ ದುರಂತವಾಗಿದ್ದು ಅದು ಸ್ಥಳಿಯ ಸಂಸ್ಕೃತಿ ಹಾಗೂ ಜನಜೀವನವನ್ನು ಅಳಿವಿನಂಚಿಗೆ ತಂದು ನಿಲ್ಲಿಸಿದೆ. ಸರಕಾರ ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೊದಲು ಜನರ ಹಿತಾಸಕ್ತಿಗಳನ್ನು ಪರಿಗಣಿಸುವುದು ಅಗತ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ  ಹೆಗ್ಗಡೆ ಹೇಳಿದರು.

   ಅವರು ಮೂಡುಬಿದಿರೆಯ ರತ್ನಾಕರವರ್ಣಿ ವೇದಿಕೆಯಲ್ಲಿ ಜರುತ್ತಿರುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಒಂದು ಚಿಕ್ಕ ಉರಿನಲ್ಲಿ ವಿಶ್ವ ನುಡಿಸಿಯಂತಹ ಪರಿಕಲ್ಪನೆ ಮೂಡಿಬಂದಿರುವುದೇ ವಿಶಿಷ್ಟವಾಗಿದ್ದು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕಲೆ, ಸಾಹಿತ್ಯ, ಸಾಂಸ್ಕೃತಿಕ ಹೃದಯಗಳನ್ನು ಬೆಸೆಯಬಹುದಾಗಿದೆ ಎಂದರು. ಸರಿಸುಮಾರು ಎರಡನೇ ಮಹಾಯುದ್ದದಲ್ಲಿ ಹಿಂಸೆ, ಸಾವು ನೋವುಗಳಿಂದ ಶಾಂತಿ ಕದಡಿದಾಗ ನಮಗೆ ವಿಶ್ವದ ಪರಿಕಲ್ಪನೆ ಹುಟ್ಟಿಕೊಂಡಿತ್ತು. ಅಂತಹ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿ ಸಂಗೀತದ ಮೂಲಕವೇ ಶಾಂತಿಯನ್ನು ಸಾರಲಾಯಿತು. ಸಾಹಿತ್ಯ, ಸಂಗೀತದ ಶಕ್ತಿಯೇ ಅಂತದ್ದು ಎಂದವರು ನುಡಿದರು.

ತುಳು ಹೆತ್ತ ತಾಯಿಯಾದರೆ ಕನ್ನಡ ಸಾಕಿದ ತಾಯಿ:
 ದಕ್ಷಿಣ ಕನ್ನಡಿಗರಿಗೆ ತುಳು ಹೆತ್ತತಾಯಿಯಾದರೆ ಕನ್ನಡ ಸಲಹಿದ ತಾಯಿಯಂತೆ. ಕನ್ನಡದ ಕಡೆಗಣನೆ ಮಾಡಲಾಗುತ್ತಿದೆ ಎಂಬ ಭಾವನೆ ಹಲವರಲ್ಲಿತ್ತು. ಆದರೆ ನುಡಿಸಿರಿಯಂತಹ ಕಾರ್ಯಕ್ರಮಗಳು ಆಪಾದನೆಯನ್ನು ಸುಳ್ಳಾಗಿಸಿದೆ ಎಂದರು.


ವಿಶ್ವ ನುಡಿಸಿರಿ ವಿರಾಸತ್ ನ ಸರ್ವಾಧ್ಯಕ್ಷ ಡಾ. ಬಿ. ಎಂ ವಿವೇಕ ರೈ ಮಾತನಾಡಿ ತಾಲೂಕು ಕೇಂದ್ರವೂ ಅಲ್ಲದ ಮೂಡುಬಿದಿರೆಯಂತಹ ಗ್ರಾಮದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಡಾ ಮೋಹನ್ ಆಳ್ವರು ನುಡಿಸಿರಿ ಹೆಸರಿನಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಬದುಕನ್ನು ಬಹುರೂಪವಾಗಿ ಕಟ್ಟುತ್ತಾ, ಎಲ್ಲಾ ವರ್ಗದ ಕನ್ನಡ ಮನಸ್ಸುಗಳನ್ನು ಕಟ್ಟುವ ಮತ್ತು ಆ ಮೂಲಕ ಕರ್ನಾಟಕದ ಸಾಂಸ್ಕೃತಿಕ ಏಕೀಕರಣ ಮಾಡುವ ಹೊಸ ಉಪಕ್ರಮವನ್ನು ಹುಟ್ಟುಹಾಕಿದ್ದಾರೆ. ಸಮ್ಮೇಳನಗಳು ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದು ಹೇಳಿಕೊಂಡು ಬಂದ ಸಂಗತಿಗಳನ್ನು ಸದ್ದಿಲ್ಲದಂತೆ ಆಳ್ವರು ಮಾಡಿ ತೋರಿಸಿದ್ದಾರೆ ಎಂದರು
    ನಾವು ಭಾವಲೋಕದಲ್ಲಿ ಭಾವಿಸಿದ ಕನ್ನಡವೆಲ್ಲಾ ಕನ್ನಡ ವಿಶ್ವದೊಳಗೆ ಅಡಕವಾಗಿದೆ. 'ಭೂವಿ ಎನ್ನವ ಮಂಡಲದಲ್ಲಿ ಅಡಕವಾಗಿರುವ ಕನ್ನಡನಾಡು ವಿಶಿಷ್ಟವಾದುದು' ಎಂದು ಕವಿರಾಜಮಾರ್ಗ ಹೇಳುವಾಗ 9ನೇ ಶತಮಾನದ ಕಾಲಕ್ಕೆ ಕನ್ನಡ ನಾಡು ತನ್ನದೇ ಆದ ಅನನ್ಯತೆಯನ್ನು ಸ್ವಂತಿಕೆಯನ್ನು ಹೊಂದಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಹಾಗಾಗಿ ವಿಶ್ವದ ಒಳಗೆ ಕನ್ನಡ ಸೇರಿದ್ದರೂ ಕನ್ನಡವೇ ವಿಶ್ವ ಎನ್ನವ ಪರಿಕಲ್ಪನೆಯಲ್ಲಿ ನಾವು ಇಲ್ಲಿ ಸೇರಿದ್ದೆವೆ.
     ಓ ನನ್ನ ಚೇತನ ಆಗು ನೀ ಅನಿಕೇತನ ಎನ್ನುವ ಕುವೆಂಪು ಅವರ ಕವನದ ಸಾಲುಗಳು ಭಾಷಣ, ಬರಹಗಳ ಉದ್ಧರಣೆಗೆ ಮಾತ್ರ ಸೀಮಿತವಾಗಿರದೇ, ಜಾತಿ ಮತ ಪಂಥಗಳ ಆಮಿಷ ಮತ್ತು ಆಘಾತದಿಂದ ಛಿದ್ರವಾಗಿ  ಹೋಗಿರುವ ನಮ್ಮ ಕನ್ನಡ ನಾಡನ್ನು ಮತ್ತೆ ಒಟ್ಟು ಮಾಡಲು ಸಾಮಾಜಿಕ ಪ್ರನಾಳಿಕೆಯಾಗಿ ಬಳಕೆಯಾಗಬೇಕು. ರಾಜಕೀಯ ಪಕ್ಷಗಳು, ಧಾರ್ಮಿಕ ಸಂಸ್ಥೆಗಳು, ಸಾಮಾಜಿಕ ಸಂಫಟನೆಗಳು, ಆಡಳಿತ ಚುಕ್ಕಾಣಿ ಹಿಡಿದವರು ಇವರೆಲ್ಲರೂ ಆತ್ಮಾವಲೋಕನ ಮಾಡಿಕೊಂಡು ನಿಜಾರ್ಥದಲ್ಲಿ ಕರ್ನಾಟಕ ಏಕೀಕರಣವನ್ನು ಮತ್ತೆ ಸಾಧಿಸಲು ವಿಶ್ವ ನುಡಿಸಿರಿ ಸಂದೇಶವಾಹಿನಿಯಾಗಲಿ ಎಂಬುದೇ ನಮ್ಮ ಆಶಯ ಎಂದವರು ಹೇಳಿದರು.
      ಹಳ್ಳಿಯೇ ಒಂದು ವಿಶ್ವ ಎನ್ನವ ಮಾತನ್ನು ಅದರ ನಿಜಾರ್ಥದಲ್ಲಿ ಗ್ರಹಿಸುವುದು ಇದು ಸಕಾಲ. ಸ್ವಾವಂಲಂಬಿಯಾದ ಹಳ್ಳಿಯು ವಿಶ್ವದ ಒಂದು ಇಷ್ಟಲಿಂಗವಾಗಿ ನಮ್ಮ ಅಂಗಯಲ್ಲಿ ಒಂದು ನಿಲ್ಲಬೇಕು.ದೇಸಿ ಕೃಷಿಗೆ ಹೊಸ ತಂತ್ರಜ್ಞಾನ ಬಳಸಿ ಸ್ಥಳೀಯವಾಗಿ ಮತ್ತು ಪ್ರಾದೇಶಿಕವಾಗಿ ಮಾರುಕಟ್ಟೆಯ ಸಮರ್ಪಕ ನಿರ್ಮಾಣವಾದಾಗ ಮಾತ್ರ ಹಳ್ಳಿಗಳು ಉಸಿರಾಡುತ್ತವೆ.

ಕೃಷಿ ಭೂಮಿ ಮಾರಾಟ ನಿಲ್ಲಲಿ, ವಿದ್ಯತ್ ಸ್ಥಾವರ ಬೇಡ:
 ಕರ್ನಾಟಕದಲ್ಲಿ ಕೃಷಿಭೂಮಿಯನ್ನು ದೊಟ್ಟ ಪ್ರಮಾಣದಲ್ಲಿ ಮಾರಾಟಮಾಡಲಾಗುತ್ತಿದ್ದು ಕೃಷಿಭೂಮಿಯನ್ನು ಪರಿವರ್ತಿಸಿ ಕೈಗಾರಿಕೆಗಳಿಗೆ ಮತ್ತು ಕಟ್ಟಡ ನಿರ್ಮಾಣಗಳಿಗೆ ಬಳಸುವುದನ್ನು ನಿಲ್ಲಿಸಬೇಕು.  ಸರಕಾರ ಕೃಷಿ ಭೂಮಿಯನ್ನು ಕೃಷಿಯೇತರರು ಕೊಳ್ಳುವ ಕಾನೂನನ್ನು ತರುವ ಬದಲಿಗೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಸಮರ್ಪಕ ಮಾರುಕಟ್ಟೆಯಂತಹ ಸಮಗ್ರ ಸೌಲಭ್ಯವನ್ನು ಒದಗಿಸಿ ಸಂತೃಪ್ತಿಯ ಬದುಕನ್ನು ಸಾಧಿಸುವ ಅವಕಾಶ ಕಲ್ಪಿಸಿಕೊಡಬೇಕು.ಕೃಷಿಯ ಸಮೃದ್ಧ ಪ್ರದೇಶಗಳಲ್ಲಿ ಕೈಗಾರಿಗೆಗಳನ್ನು ಸ್ಥಾಪಿಸುವುದು ಮಾರಕವಾಗಿದ್ದು ಮೂಡುಬಿದಿರೆಯಿಂದ ಕೂಗಳತೆಯ ದೂರದಲ್ಲಿರುವ ನಿಡ್ಡೋಡಿಯಲ್ಲಿ ಸ್ಥಾಪಿಸಲಾಗುತ್ತದೆ ಎನ್ನಲಾಗುತ್ತಿರುವ ವಿದ್ಯುತ್ ಸ್ಥಾವರ ಯೋಜನೆಯನ್ನು ಸರ್ಕಾರ ಕೈಬಿಡಬೇಕು. ನಂದಿಕೂರಿನ ಯುಪಿಸಿಎಲ್ ವಿದ್ಯುತ್ ಸ್ಥಾವರದ ಭಯಾನಕ ದುಷ್ಪರಿಣಾಮಗಳ ಅರಿವಿರುವವರು ನಿಡ್ಡೋಡಿಯ ಯೋಜನೆಯನ್ನು ಸಮರ್ಥಿಸುವುದಿಲ್ಲ.
    ಕರ್ನಾಟಕದ ಕರಾವಳಿಯಲ್ಲಿನ ನದಿಗಳನ್ನು ತಿರುಗಿಸುವ ಯೋಜನೆಯ ಬದಲು ಪುರಾತನವಾದ ನೀರಿನ ಆಸರೆಗಳಾದ ಹಳ್ಳ, ಕೆರೆ, ಬಾವಿ,  ತೋಡು, ನದಿ, ಮದಕ ಮುಂತಾದವುಗಳನ್ನು ಪುನರುಜ್ಜೀವನಗೋಳಿಸಿ ಸ್ಥಳೀಯ ಮಟ್ಟದಲ್ಲಿಯೇ ನೀರಿನ ಕೊರತೆಯನ್ನು ನೀಗಿಸಲು ಮುಂದಾಗಬೇಕು.ಪಶ್ಷಿಮ ಸಮುದ್ರ ಮಲಿನವಾಗದಂತೆ ನೋಡಿಕೊಂಡು ಮತ್ಸ್ಯ ಸಂಪತ್ತನ್ನು ಕಾಪಾಡಿಕೊಳ್ಳಬೇಕಿದೆ. ವಿಶ್ವ ನೈಸರ್ಗಿಕ ಪರಂಪರೆಯಲ್ಲಿ ಗುರುತಿಸಿಕೊಂಡಿರುವ ಪಶ್ಚಿಮ ಘಟ್ಟಗಳನ್ನು ಸಂರಕ್ಷಸಿಟ್ಟುಕೊಳ್ಳುವುದರ ಜೊತೆಗೆ ಕಾಡಿನ ನಡುವೆ ಹುಟ್ಟಿ ಬೆಳೆದ ಮಲೆಯ ಮಕ್ಕಳಿಗೆ ಹಕ್ಕುಗಳನ್ನು ಕೊಡುವುದು ನಮ್ಮ ಆದ್ಯತೆಯಾಗಬೇಕು.

ಗ್ರಾಮೀಣ ವಿಶ್ವವಿದ್ಯಾನಿಲಯ:
ಕರ್ನಾಟಕದಲ್ಲಿ ಗ್ರಾಮೀಣ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಆಂದೂಲನ ರೂಪದ ಗ್ರಾಮೀಣ ವಿಶ್ವವಿದ್ಯಾನಿಲಯ ಆರಂಭಿಸಬೇಕು. ತನ್ಮೂಲಕ ಶಿಕ್ಷಣ ಮತ್ತು ಅಭಿವೃದ್ಧಿ ಎನ್ನುವ ಪರಿಕ್ಪನೆಗಳಿಗೆ ಹೊಸ ಅರ್ಥ ಕಲ್ಪಿಸಬಹುದಾಗಿದೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ:
     ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೆಪ ಮಾತ್ರಕ್ಕೆ ದೊರೆತಿದ್ದು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ  ಶಾಸ್ತ್ರೀಯ ಭಾಷೆಯ ಅನುದಾನ ಅತೀ ಕಡಿಮೆಯಾಗಿದ್ದ ಅದಕ್ಕಾಗಿ ಪೂರ್ಣ ಪ್ರಮಾಣದ ಪ್ರತ್ಯೇಕ ಕೇಂದ್ರವೊಂದು ಕರ್ನಾಟಕದಲ್ಲಿ ಕೂಡಲೇ ಆರಂಭವಾಗಬೇಕು. ಶಾಸನಗಳ ಅನುವಾದ ಮತ್ತು ಗಣಕೀಕರಣ, ಸಾಹಿತ್ಯ ಕೃತಿಗಳ ಗಣಕೀಕರಣ, ಬಹುಭಾಷಾ ಶಬ್ಧಗಳ ರಚನೆ, ಪ್ರಾಚೀನ ಅನ್ಯಶಾಸ್ತ್ರಿಯ ಕನ್ನಡದ ಸಂಬಂಧದ ಸಂಶೋಧನೆ ಹೀಗೆ ಹಲವಾರು ವಿಷಯಗಳ ಕುರಿತಾಗಿ  ಶಾಸ್ತ್ರೀಯ ಭಾಷಾ ಕೇಂದ್ರದಿಂದ ಕೆಲಸಗಳು ನಡೆಯಬೇಕಿದೆ ಎಂದವರು ಹೇಳಿದರು
    ವಿಶ್ವ ನುಡಿಸಿರಿ ವಿರಾಸತ್ ನ ರೂವಾರಿ ಡಾ. ಎಂ ಮೋಹನ್ ಆಳ್ವ ಅತಿಥಿಗಳನ್ನು ಸ್ವಾಗತಿಸುತ್ತಾ ಕಳೆದ ಒಂಬತ್ತು ವರ್ಷಗಳಲ್ಲಿ ನುಡಿಸಿರಿ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು.

    ಕಾರ್ಯಕ್ರಮದಲ್ಲಿ  ಪರಿಸರ ಮತ್ತು  ಅರಣ್ಯ ಸಚಿವ ಬಿ ರಮಾನಾಥ ರೈ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ ಖಾದರ್, ಯುವಜನ ಸೇನೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್, ಶಾಸಕರುಗಳಾದ ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್ ಅಂಗಾರ್, ಮಂಗಳೂರು ಉತ್ತರದ ಜಿ. ಆರ್. ಲೋಬೋ. ದಕ್ಷಿಣದ ಮೊದಿನಗ ಬಾವ, ಕಾರ್ಕಳ ಕ್ಷೇತ್ರದ ಸನೀಲ್ ಕುಮಾರ್, ನಾಡೋಜ ಸುಕ್ರಿ ಬೊಮ್ಮಗೌಡ, ಕಸಪಾ ಅಧ್ಯಕ್ಷ ಪುಂಡಲೀಕ ಹಾಲಂಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
     ಪೂರ್ವ ನುಡಿಸಿರಿಗಳ ಅಧ್ಯಕ್ಷರುಗಳಾದ ಡಾ ಬರಗೂರು ರಾಮಚಂದ್ರಪ್ಪ, ಡಾ. ಎಸ್. ಎಲ್. ಭೈರಪ್ಪ, ಡಾ. ಚಂದ್ರಶೇಖರ ಕಂಭಾರ, ಪ್ರೋ. ಜಿ. ವೆಂಕಟಸುಬ್ಬಯ್ಯ, ಡಾ ಚನ್ನವೀರ ಕಣವಿ, ಡಾ. ಹಂಪ ನಾಗರಾಜಯ್ಯ, ಡಾ. ಎಂ. ಎಂ. ಕಲುಬುರ್ಗಿ, ಶ್ರಿಮತಿ ವೈದೇಹಿ, ಡಾ. ಎಸ್. ನಿಸಾರ್ ಅಹಮದ್ ಇವರುಗಳನ್ನು ಸನ್ಮಾನಿಸಲಾಯಿತು.

ಪೋಟೋಗಳು: ನಿತೀಶ್ ಪಿ ಬೈಂದೂರು