ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್: ಕಲೆ, ಸಾಹಿತ್ಯ ಸಂಸ್ಕೃತಿಗಳ ಸಂಗಮ

ಮೂಡುಬಿದಿರೆ: ಶಿಕ್ಷಣ ಜೊತೆಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು ನುಡಿಯ ಜ್ಯೋತಿಯನ್ನು ಬೆಳಗುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಗೆ ಕ್ಷಣಗಣನೆ ಆರಂಭಗೊಂಡಿದೆ. ಶಿಸ್ತು, ಸಮಯಪ್ರಜ್ಞೆ ಮತ್ತು ಅಚ್ಚುಕಟ್ಟುತನದಿಂದಲೇ ಸಾಹಿತ್ಯ, ಸಂಸ್ಕೃತಿ ಪ್ರಿಯರನ್ನು ಸೆಳೆದಿದ್ದ ಅಳ್ವಾಸ್ ನುಡಿಸಿರಿ ಹಾಗೂ ವಿರಾಸತ್ ಈ ಭಾರಿ ಒಟ್ಟಾಗಿ ಆಯೋಜನೆಗೊಂಡಿದ್ದು ಡಿ.19ರ ಮಧ್ಯಾಹ್ನ ಮೂರು ಗಂಟೆಗೆ ಉದ್ಘಾಟನೆಗೊಳ್ಳಲಿದೆ. ನಾಲ್ಕು ದಿನಗಳ ಕಾಲ ನಡೆಯುವ  ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್  ಕಾರ್ಯಕ್ರಮಕ್ಕೆ ಲಕ್ಷಾಂತರ ಕನ್ನಡ ಮನಸ್ಸುಗಳು ಸಾಕ್ಷಿಯಾಗಲಿದ್ದಾರೆ.

ನುಡಿಸಿರಿ - ವಿರಾಸತ್ ಒಂದು ಹಿನ್ನೋಟ: (ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಆನ್ಲೃನ್ ವಿಶೇಷ ಸಂಚಿಕೆ ಓದಿ)

ಆಳ್ವಾಸ್ ನುಡಿಸಿರಿ:
  2003ರಲ್ಲಿ ಮೂಡುಬಿದಿರೆಯಲ್ಲಿ ಅಚ್ಚುಕಟ್ಟುತನ ಮತ್ತು ಶಿಸ್ತಿನಿಂದ  ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪ್ರೇರೆಪಿತತೊಂಡು 2004ರಲ್ಲಿ  ಪ್ರಾರಂಭವಾದ “ಆಳ್ವಾಸ್ ನುಡಿಸಿರಿ” ಇಂದು ಅಪಾರ ಜನಮೆಚ್ಚುಗೆ ಗಳಿಸಿದೆ. ಪ್ರತೀ ವರ್ಷವೂ ಸುಂದರವಾದ ಪರಿಕಲ್ಪನೆಯೊಂದಿಗೆ ಮೂರು ದಿನಗಳ ಕಾಲ ನಡೆಯುತ್ತಿದ್ದ ಸಮ್ಮೇಳನ ನಾಡಿನ ನೂರಾರು ಸಾಹಿತಿಗಳ, ವಿದ್ವಾಂಸರುಗಳ ವಿಚಾರ ಧಾರೆಗಳು ತನ್ಮೂಲಕ ಕನ್ನಡದ ಮನಸ್ಸನ್ನು ತಟ್ಟುತ್ತಿದ್ದವು
     ಕನ್ನಡ ಸಾಹಿತ್ಯ ಸಂಸ್ಕೃತಿ, ವಿವಿಧ ವಿಚಾರ ಗೋಷ್ಠಿಗಳು, ಕಥಾಸಮಯ, ವಿಶೇಷ ಉಪನ್ಯಾಸಗಳು, ಮಾತಿನ ಮಂಟಪ , ಹಾಸ್ಯ ಗೋಷ್ಠಿಗಳು ಒಂದೆಡೆಯಾದರೆ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ರಸದೌತಣ ಮೂರು ದಿನವೂ ನಡೆದು ಸಾಹಿತ್ಯ ಕಲಾಭಿಮಾನಿಗಳನ್ನು ರಂಜಿಸಿದ್ದರೇ, ಸಾಧಕರಿಗೆ ಸನ್ಮಾನ, ಆಗಮಿಸುವ ಸಾಹಿತ್ಯಾಭಿಮಾನಿಗಳಿಗೆ ಊಟ, ವಸತಿ ವ್ಯವಸ್ಥೆ ಹೀಗೆ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿದೆ.
   ನುಡಿಸಿರಿಗೂ ಮೊದಲು ‘ಆಳ್ವಾಸ್ ಚಿತ್ರಸಿರಿ’ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಕಾರ್ಯಾಗಾರ ನಡೆಯುತ್ತಿದೆ. ಚಿತ್ರಕಲಾ ಜಗತ್ತಿನಲ್ಲಿ ವಿಶಿಷ್ಟ ಸಾಧನೆಗೈದ ರಾಜ್ಯದ ಖ್ಯಾತ ಕಲಾವಿದರಿಗೆ ಸಾಧನೆ ಗುರುತಿಸಿ ‘ಚಿತ್ರಸಿರಿ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ. ಖ್ಯಾತ ನಾಮರಾದ ಚಿತ್ರ ಕಲಾವಿದರೆಲ್ಲಾ ಇದರಲ್ಲಿ ನಿರಂತರ ಭಾಗಿಗಳಾಗುತ್ತಿದ್ದಾರೆ.
    ಈ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾತ್ರವಲ್ಲ ಕಾಸರಗೋಡು, ಚೆನ್ನೈ, ಮುಂಬೈ, ದೆಹಲಿ ಮುಂತಾದೆಡೆಗಳಿಂದ  ಸಾವಿರಾರು ಪ್ರತಿನಿಧಿಗಳು  ಆಗಮಿಸುತ್ತಾರೆ. 

ಆಳ್ವಾಸ್ ವಿರಾಸತ್:
   1990ರಲ್ಲಿ ನಡೆಯುತ್ತಿದ್ದ ಸ್ಪಿಕ್‌ಮೆಕೆ ಉತ್ಸವವನ್ನು ಮೂಡುಬಿದಿರೆಯಲ್ಲಿ ಆರಂಭಿಸಿ ಜನರ ಉತ್ಸವವಾಗಿಸಿದ್ದ ಡಾ. ಮೋಹನ್ ಆಳ್ವ ಮೊದಲು ಕಾಲೇಜುಗಳಲ್ಲಿ, ನಂತರ ಸಾವಿರ ಕಂಬದ ಬಸದಿಯ ಹಿನ್ನೆಲೆಯಲ್ಲಿ ತೆರೆದುಕೊಂಡ ಸಂಭ್ರಮದಲ್ಲಿ ವಿದ್ಯಾರ್ಥಿಗಳಲ್ಲದೆ, ಸಾರ್ವಜನಿಕರು ಭಾಗವಹಿಸುವುದನ್ನು ಸ್ಪಿಕ್‌ಮೆಕೆ ಆಕ್ಷೇಪಿಸಿದಾಗ ಸರ್ವರಿಗಾಗಿ ವಿರಾಟ್ ವಿರಾಸತ್ ಕಾರ್ಯಕ್ರಮ ರೂಪಿಸಿದರು. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಐದರಿಂದ ಆರು ದಿನಗಳ ಕಾಲ ನಡೆಯುತ್ತಿದ್ದ  ಸಾಂಸ್ಕೃತಿಕ  ಉತ್ಸವದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರು ಪಾಲ್ಗೊಳ್ಳುತ್ತಿದ್ದರು. ಪ್ರತೀ ದಿನದ ಮೊದಲ ಅವಧಿಯು ಶಾಸ್ತ್ರೀಯ ಸಂಗೀತಕ್ಕೆ ಮಿಸಲಾಗಿದ್ದು ಎರಡನೆಯ ಅವಧಿಯು ಶಾಸ್ತ್ರೀಯ ಮತ್ತು ಜನಪದ ನೃತ್ಯಗಳನ್ನು ಒಳಗೊಂಡಿರುತ್ತಿದ್ದವು.
 ಪ್ರತಿದಿನವೂ ಕಾರ್ಯಕ್ರಮದಲ್ಲಿ ಸುಮಾರು ೨೦೦೦೦ ಪ್ರೇಕ್ಷಕರು ಪಾಲ್ಗೊಂಡು ಸಾಂಸ್ಕ್ರತಿಕ ಇನಿದನಿಯಲ್ಲಿ ಮುಳುಗೆದ್ದು ಕಣ್ಮನವನ್ನು ತುಂಬಿಕೊಳ್ಳುತ್ತಾರೆ. ಅದೆಷ್ಟೋ ಕಲಾಪ್ರಿಯರು ದೇಶ ವಿದೇಶಗಳಿಂದಲೂ ಆಗಮಿಸುತ್ತಾರೆ. ಜನಸಾಗರವೇ ತುಂಬಿಕೊಂಡು ಅದ್ಭುತ ರಮ್ಯ ಜಗತ್ತೊಂದು ಶೋಭಾವನದಲ್ಲಿ ರೂಪುಗೊಳ್ಳುತ್ತಿತ್ತು.
     ರಾಷ್ಟ್ರೀಯ ಮಟ್ಟದ ಶ್ರೇಷ್ಠ ಕಲಾವಿದರೊಬ್ಬರನ್ನು ಆಳ್ವಾಸ್ ವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆಳ್ವಾಸ್ ವಿರಾಸತ್ ಕಾರ್ಯಕ್ರಮದ ಒಂದು ವಾರ ಮುಂಚಿತವಾಗಿ ‘ವರ್ಣ ವಿರಾಸತ್’ ಮತ್ತು ‘ಶಿಲ್ಪ ವಿರಾಸತ್’ ಎನ್ನುವ ಚಿತ್ರಕಲೆ ಹಾಗೂ ಶಿಲ್ಪಕಲೆಗಳಿಗೆ ಸಂಬಂಧಿಸಿದ ಶಿಬಿರವನ್ನು ಏರ್ಪಡಿಸಲಾಗುತ್ತಿತ್ತು. ಈ ಶಿಬಿರದಲ್ಲಿ ರಾಷ್ಟ್ರೀಯ – ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಧಾರೆಯೆರೆಯುತ್ತಿದ್ದರು.

ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್

    ಕಳೆದ 9 ವರ್ಷಗಳಿಂದ ನಡೆಯುತ್ತಿರುವ ನುಡಿಸಿರಿ ಮತ್ತು 19 ವರ್ಷಗಳಿಂದ ನಡೆಯುತ್ತಿರುವ ವಿರಾಸತ್‌ ಈ ಭಾರಿ ಒಟ್ಟಿಗೆ ನಡೆಯುತ್ತಿದ್ದು, ನಾಲ್ಕು ದಿನಗಳ ಕಾಲ ಜೈನಕಾಶಿಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಮೂಡುಬಿದಿರೆ ಸಂಭ್ರಮದಿಂದ ಅಣಿಯಾಗಿದ್ದು, ದೇಶ-ವಿದೇಶಗಳಿಂದ ಆಗಮಿಸುತ್ತಿರುವ 8 ಲಕ್ಷಕ್ಕೂ ಅಧಿಕ ಸಾಹಿತ್ಯ, ಸಂಸ್ಕೃತಿ, ಕಲಾಸಕ್ತರನ್ನು ಸ್ವಾಗತಿಸಲಿದೆ. 
    ಕನ್ನಡ ಮನಸ್ಸು: ಅಂದು ಇಂದು ಮುಂದು ಎಂಬ ಪರಿಕಲ್ಪನೆಯೊಂದಿಗೆ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ. ಬಿ.ಎ. ವಿವೇಕ್ ರೈ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದ ಉದ್ಘಾಟನೆಗೂ ಮೊದಲು  5 ಸಾವಿರ ಕಲಾವಿದರನ್ನು ಒಳಗೊಂಡ ವೈಭವೋಪೇತ ಮೆರವಣಿಗೆಯೊಂದಿಗೆ ಆರಂಭಗೊಳ್ಳುವ ಸಂಭ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ.
      ಜನಪದ ಸಿರಿ, ವಿದ್ಯಾರ್ಥಿ ಸಿರಿ, ಕೃಷಿ ಮೇಳಗಳು  ಪ್ರಮುಖವಾಗಿ ಗಮನ ಸೆಳೆಯಲಿದ್ದು ನಾಲ್ಕೂ ದಿನವೂ 4 ವೇದಿಕೆಗಳಲ್ಲಿ ವಿವಿಧ ವಿಚಾರ ಗೋಷ್ಟಿ, ಕವಿ-ಕಥಾ ಸಮಯ ಮುಂತಾದವುಗಳು ನಡೆಯಲಿದ್ದು, 9 ವೇದಿಕೆಗಳಲ್ಲಿ ಸಾಸ್ಕೃತಿಕ ಜಗತ್ತು ಅನಾವರಣಗೊಳ್ಳಲಿದೆ. ನೂರಾರು ಕನ್ನಡದ ಖ್ಯಾತ ಸಾಹಿತಿಗಳು, ಕಲಾವಿದರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
      ಕೊಳಲು, ಮದಂಗ, ಯಕ್ಷಗಾನ ಸಹಿತ ನಾದಲೋಕದ ಫ್ಯೂಷನ್, ಸಮುದ್ರನಟನಮ್, ರಾಜಸ್ಥಾನಿ, ಒಡಿಸ್ಸಿ, ಗುಜರಾತಿ, ಕಥಕ್, ಗೋಟಿಪುವ, ಮಣಿಪುರಿ, ಮಲೇಶಿಯಾದ ತಂಡಗಳ ಪ್ರದರ್ಶನ. ಸ್ಥಳೀಯ ತಂಡಗಳ ವೈಭವ. ರಾಜೇಶ್ ಕಷ್ಣನ್, ಎಂ.ಡಿ.ಪಲ್ಲವಿ, ಅಜಯ್ ವಾರಿಯರ್ ಸೇರಿದಂತೆ 30ರಷ್ಟು ರಾಜ್ಯಮಟ್ಟದ ಗಾಯಕರಿಂದ ಸಂಗೀತ ರಸಸಂಜೆ, ತತ್ವ, ಜನಪದ ಹಾಡುಗಳ ರಸಲೋಕ. ಯಕ್ಷಗಾನ, ಪ್ರಾತ್ಯಕ್ಷಿಕೆ, ತಾಳಮದ್ದಳೆ, ನಾಟಕ, ರೂಪಕ, ಯಕ್ಷ-ಗಾನ ವೈಭವ, ಹಾಸ್ಯ ಸಂಭ್ರಮ. ಕೃಷಿ ಮೇಳದಲ್ಲಿ 10 ವಿಚಾರಗೋಷ್ಠಿಗಳು. ರಾಜ್ಯದೆಲ್ಲೆಡೆಯ ಕೃಷಿಕರ ಮುಖಾಮುಖಿ ಸೇರಿದಂತೆ ಈ ಹಿಂದಿನ ಒಂಬತ್ತು ನುಡಿಸಿರಿಗಳ ಅದ್ಯಕ್ಷರುಗಳಿಗೆ ಸನ್ಮಾನ, ಸಾಧಕರುಗಳಿಗೆ, ಹಿರಿಯರಿಗೆ, ಗಡಿನಾಡು, ಹೊರನಾಡು ಹಾಗೂ ವಿದೇಶಿ ಕನ್ನಡಿಗರಿಗೆ ಸನ್ಮಾನ ನಡೆಯಲಿದೆ.

 8 ಲಕ್ಷ ಪ್ರತಿನಿಧಿಗಳ ನಿರೀಕ್ಷೆ:

  ರಾಜ್ಯದ ಎಲ್ಲಾ ಜಿಲ್ಲೆಗಳು, ಹೊರನಾಡು ಮತ್ತು ವಿದೇಶಗಳಲ್ಲಿ ಸೇರಿ ಒಟ್ಟು 80 ಘಟಕಗಳ ಪ್ರತಿನಿಧಿಗಳು ಸೇರಿದಂತೆ ಇತರರು ಮೂಡುಬಿದಿರೆಗೆ ಆಗಮಿಸುತ್ತಿದ್ದು  ಈಗಾಗಲೇ  ಒಟ್ಟು 1 ಲಕ್ಷ ಪ್ರತಿನಿಧಿಗಳು ತಮ್ಮ ಹೆಸರು ನೋಂದಾಯಿಸಿದ್ದು, ಅವರಿಗಾಗಿ ಸರ್ವ ವ್ಯವಸ್ಥೆಗಳನ್ನು ಮಾಡಲಾಗಿದೆ. ನಾಲ್ಕು ದಿನಗಳಲ್ಲಿ ಒಟ್ಟು 8 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದ್ದು ದಿನಕ್ಕೆ 2 ಲಕ್ಷ ಮಂದಿಗೆ ಭೋಜನ ವ್ಯವಸ್ಥೆ ಇದೆ. ಒಟ್ಟು 30 ಕೌಂಟರ್‌ಗಳಲ್ಲಿ ಊಟ ಬಡಿಸಲಾಗುತ್ತದೆ.  

ಹೊರೆಕಾಣಿಕೆ:

ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಹೊರೆ ಕಾಣಿಕೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೂ ಮೊದಲ ಬಾರಿಗೆ  ವಿಸ್ತರಿಸಿದೆ. ಮಂಡ್ಯದಿಂದ ಬೆಲ್ಲ, ಬೆಳಗಾವಿಯಿಂದ ಸಕ್ಕರೆ, ರಾಯಚೂರು-ಗಂಗಾವತಿಯಿಂದ ಅಕ್ಕಿ,  ದಕ್ಷಿಣ ಕನ್ನಡ ಮುಂತಾದೆಡೆಗಳಿಂದ ತೆಂಗಿನಕಾಯಿ ಹೀಗೆ ಊಟಕ್ಕೆ ಬೇಕಾದ ಸಾಮಗ್ರಿಗಳು ರಾಜ್ಯದ ಎಲ್ಲ ಕಡೆಗಳಿಂದ ಹರಿದು ಬಂದಿದೆ. 

ಎಲ್ಲವೂ ಮನಮೋಹಕ:

ವಸ್ತು ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನಗಳಿಗೆ ಈಗಾಗಲೇ ಚಾಲನೆ ದೊರೆತಿದೆ. ಸುಮಾರು ತೆಂಕು, ಬಡಗಿನ ಯಕ್ಷಗಾನ ಕಿರೀಟಗಳು, ಯಕ್ಷಗಾನ ವೇಷದ ಪ್ರತಿಕೃತಿಗಳು, 5 ಸಾವಿರಕ್ಕೂ ಮಿಕ್ಕಿದ ಗೂಡುದೀಪಗಳು, ಬಣ್ಣದ ದೀಪಗಳು, ಆನೆಗಳ ಮುಖವಾಡಗಳು, ಬೇತಾಳ, ತಟ್ಟಿರಾಯ, ನುಡಿಸಿರಿ ವೇದಿಕೆಯ ಮುಂದೆ  ದೊಡ್ಡ ರಥ, ಥರ್ಮಾ ಕೋಲ್ ನಲ್ಲಿ ಅರಳಿದ 18 ಅಡಿ ಎತ್ತರದ ಬಾಹುಬಲಿ, ಗಣಪತಿ, ಕೋಟಿ, ಚೆನ್ನಯ, ಶಿಲಾ ಬಾಲಿಕೆಯರು, ಕೃಷಿ ಮೇಳದ ಅಂಗಣದಲ್ಲಿ ಧಾನ್ಯ, ತರಕಾರಿಗಳಿಂದ ರಥ, ಮಂಟಷ, ಕೆಸರು ಗದ್ದೆ ಮುಂದಾದವುಗಳು ನೋಡುಗನ ಕಣ್ಣರಳಿಸಿವೆ.


ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com