ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸುವರ್ಣ ಸಂಭ್ರಮ. ಡಿ 13ರಿಂದ ಚಾಲನೆ

ಕುಂದಾಪುರ: ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಸಾರ್ಥಕ ಐವತ್ತು ವರ್ಷಗಳನ್ನು ಪೂರೈಸಿದ್ದು, ಸುವರ್ಣ ಮಹೋತ್ಸವದ ಸಂಭ್ರಮ ಡಿಸೆಂಬರ್ 13 ರಿಂದ 21 ತನಕ ಕಾಲೇಜಿನ ಮಾಧವ ಮಂಟಪದಲ್ಲಿ ನಡೆಯಲಿದೆ. 50 ವರ್ಷಗಳ ಅವಧಿಯಲ್ಲಿ ಕಾಲೇಜಿನಿಂದ ಶಿಕ್ಷಣ ಪೂರೈಸಿದ ಅಸಂಖ್ಯಾತ ಮಂದಿ ದೇಶ ವಿದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಹಳೆ ವಿದ್ಯಾರ್ಥಿಗಳ ಸಮಾವೇಶದೊಂದಿಗೆ ಸುವರ್ಣ ಸಂಭ್ರಮ ಕಾರ್ಯಕ್ರಮದ ವಿದ್ಯುಕ್ತ ಪ್ರಾರಂಭ ನಡೆಯಲಿದೆ ಎಂದು ಮಣಿಪಾಲ ಆಕಾಡೆಮಿ ಆಫ್ ಜನರಲ್ ಎಜುಕೇಶನ್‍ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.     ಹಳೆವಿದ್ಯಾರ್ಥಿಗಳು ಸಂಸ್ಥೆಗೆ ಬೆನ್ನೆಲುಬು. ಆದ್ದರಿಂದ ಬೇರೆ ಬೇರೆ ಕಡೆ ವಿವಿಧ ಹುದ್ದೆಗಳನ್ನು ಆಲಂಕರಿಸಿರುವ ಹಳೆ ವಿದ್ಯಾರ್ಥಿಗಳನ್ನೇ ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ. 2013ರ ಪ್ರಾರಂಭದಲ್ಲಿ ಸುವರ್ಣ ಮಹೋತ್ಸವ ವರ್ಷಾಚರಣೆಗೆ ಚಾಲನೆ ನೀಡಿದ್ದು, ಸುವರ್ಣ ಸಂಭ್ರಮದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು, ಸಾಂಸ್ಕೃತಿಕ ಪ್ರದರ್ಶನ, ಇತರ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಅನಾವರಣ ಸತತ ಏಳು ದಿನಗಳ ಕಾಲ ನಡೆಯಲಿದೆ. ಕಾಲೇಜಿನ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳು (1963 ಇಸವಿ) ಡಿ.12ರಂದು ಪೂರ್ವಾಹ್ನ 10 ಗಂಟೆಗೆ ಕಾಲೇಜಿನ ತಮ್ಮದೆಯಾದ ದೇಣಿಗೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, 100ರಿಂದ 150 ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳು ಅಂದು ಭಾಗವಹಿಸಲಿದ್ದಾರೆ. ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಸುವರ್ಣ ಮಂದಿರವನ್ನು ನಿರ್ಮಿಸಿ ಉದ್ಘಾಟಿಸಲಾಗಿದೆ. ಕಾಲೇಜಿನ ರಂಗ ಅಧ್ಯಯನ ಕೇಂದ್ರಕ್ಕೆ 10ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಬಯಲು ರಂಗಮಂಟಪವನ್ನು ನಿರ್ಮಿಸಲಾಗಿದ್ದು, ಡಿ.19ರಂದು ಉದ್ಘಾಟನೆಗೊಳ್ಳಲಿದೆ.. ಡಿ.19 ರಿಂದ 22ರ ತನಕ ನಾಟಕೋತ್ಸವ ನಡೆಯಲಿದೆ. ಮುಖ್ಯವಾಗಿ ಹಳೆ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ರಂಗಭೂಮಿಯಲ್ಲಿ ಹೆಸರುಗಳಿಸಿದ ವಸಂತ ಬನ್ನಾಡಿ, ಸುರೇಶ ಆನಗಳ್ಳಿ ನಿರ್ದೇಶನ ನಾಟಕಗಳು ಪ್ರದರ್ಶನವಾಗಲಿದೆ ಎಂದು ಅವರು ತಿಳಿಸಿದರು.     ( For Best Mobile view Click Here)
     
    ಸುವರ್ಣ ಮಂದಿರ ಮತ್ತು ಹೊಸ ಬಯಲು ರಂಗ ಮಂದಿರ ನಿರ್ಮಾಣ ಸುವರ್ಣ ಮಹೋತ್ಸವದ ಸವಿನೆನಪಾಗಿ ಉಳಿಯಲಿವೆ. ಜೊತೆಯಲ್ಲಿ ಸ್ಮರಣ ಸಂಚಿಕೆ ರೂಪಿಸುವ ಯೋಜನೆ ಕೂಡಾ ಇದೆ. ಹಳೆಯ ತರಗತಿಗಳನ್ನು ಉನ್ನತೀಕರಣಗೊಳಿಸುವುದು, ಇಂದಿನ ಶಿಕ್ಷಣಕ್ಕೆ ತಕ್ಕಂತೆ ತರಗತಿ ಕೊಠಡಿಗಳನ್ನು ಪರಿವರ್ತಿಸುವ ಪ್ರಕ್ರಿಯೆ ಹಂತಹಂತವಾಗಿ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ಶಾಂತಾರಾಮ ಪ್ರಭು, ಪದವಿ ಕಾಲೇಜಿನ ಪ್ರಾಂಶುಪಾಲ ಡಾ,ನಾರಾಯಣ ಶೆಟ್ಟಿ, ಪ.ಪೂ.ಕಾಲೇಜಿನ ಪ್ರಾಂಶುಪಾರಾದ ಜಿ.ಎಂ.ಗೊಂಡ ಹಾಗೂ ಹಿರಿಯ ಉಪನ್ಯಾಸಕರು ಉಪಸ್ಥಿತರಿದ್ದರು.

ಡಿ.13 ಶುಕ್ರವಾರ ಹಳೆ ವಿದ್ಯಾರ್ಥಿ ಸಂಘದ ದಿನಾಚರಣೆ-ಹಳೆ ವಿದ್ಯಾರ್ಥಿಗಳ ಸಮಾವೇಶ, ಮಧ್ಯಾಹ್ನ 1-30ರಿಂದ 4-30ರ ತನಕ ಅಭಿವಂದನೆ ಮತ್ತು ಮನೋರಂಜನೆ, ಸಂಜೆ 5ರಿಂದ ಸಭಾ ಕಾರ್ಯಕ್ರಮದಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರಶಸ್ತಿ ಪ್ರದಾನ, ಸಾಧಕ ಹಳೆ ವಿದ್ಯಾರ್ಥಿಗಳಿಗೆ, ರ್ಯಾಂಕ್ ವಿಜೇತರಿಗೆ, ನಿವೃತ್ತ ಪ್ರಾಂಶುಪಾಲರಿಗೆ ಸಮ್ಮಾನ, ರಾತ್ರಿ 8ರಿಂದ ಸಂಗೀತ ರಸಮಂಜರಿ ಮತ್ತು ನೃತ್ಯ ನಡೆಯಲಿದೆ. 

ಡಿ.14ರಂದು ಸುವರ್ಣ ಸಂಭ್ರಮಾಚರಣೆ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಪುರ ಮೆರವಣಿಗೆ, ಮಧ್ಯಾಹ್ನ 2ಕ್ಕೆ ವಸ್ತು ಪ್ರದರ್ಶನ ಉದ್ಘಾಟನೆ, ಮಧ್ಯಾಹ್ನ 3.30ಕ್ಕೆ ಸುವರ್ಣ ಸಭೆ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿದ್ದಾರೆ. ಮಣಿಪಾಲ ಕಾಡೆಮಿ ಆಫ್ ಜನರಲ್ ಎಜುಕೇಶನ್‍ನ ಕುಲ ಸಚಿವರಾದ ಡಾ. ರಾಮದಾಸ್ ಎಂ.ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6ಕ್ಕೆ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿದ್ಯ, ಪ್ರಾಧ್ಯಾಪಕ ಬಳಗದವರಿಂದ ನಾಟಕ ‘ಬಿಷಪರ ಕ್ಯಾಂಡಲ್ ಸ್ಟಿಕ್’ ನಡೆಯಲಿದೆ.

 ಡಿ.15ರಂದು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಲಿದ್ದು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಉದ್ಘಾಟಿಸಲಿದ್ದಾರೆ. 

ಡಿ.16 ಮತ್ತು 17ರಂದು  ವಾಣಿಜ್ಯ ವಿಭಾಗದ ಸಂಯೋಜಕತ್ವದಲ್ಲಿ ಯು.ಜಿ.ಸಿ ಪ್ರಾಯೋಜಿತ ‘ಬಂಡವಾಳ ಮಾರುಕಟ್ಟೆ-ಪ್ರಸಕ್ತ ವಿದ್ಯಮಾನಗಳು’ ಈ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.

 ಡಿ.17 ಮತ್ತು ಡಿ.18ರಂದು ವಿ.ವಿ ಮಟ್ಟದ ಅಂತರ್ ಕಾಲೇಜು ಸ್ಪರ್ಧಾ ವೈವಿದ್ಯ ‘ಸ್ವರ್ಣಾಂಜಲಿ’ ನಡೆಯಲಿದೆ.

 ಡಿ.19ರಂದು ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ನಡೆಯಲಿದೆ. 

ಡಿ. 20ರಂದು  ಛದ್ಮವೇಷ ಸ್ಪರ್ಧೆ, ಪ್ರಾವಿಣ್ಯತಾ ಬಹುಮಾನ ವಿತರಣೆ, ಮಧ್ಯಾಹ್ನ ವಿದ್ಯಾರ್ಥಿಗಳಿಂದ ಯಕ್ಷಗಾನ ‘ದ್ರೌಪದಿ ಪ್ರತಾಪ’ ನಡೆಯಲಿದೆ.

 ಡಿ.21ರಂದು ಪದವಿ ಕಾಲೇಜು ವಾರ್ಷಿಕೋತ್ಸವ ನಡೆಯಲಿದ್ದು, ಮಧ್ಯಾಹ್ನ ವಿದ್ಯಾರ್ಥಿಗಳಿಂದ ನಾಟಕ ‘ಚೋರ ಚರಣ ದಾಸ’, ಕಾಲೇಜು ಅಧ್ಯಾಪಕರಿಂದ ಯಕ್ಷಗಾನ ‘ಧರ್ಮಾಂಗದ ದಿಗ್ವಿಜಯ’ ನಡೆಯಲಿದೆ.



ಕುಂದಾಪ್ರ ಡಾಟ್ ಕಾಂ- editor@kundapra.com