ನಂಬಿಕೆ - ಮೂಢ ನಂಬಿಕೆ.

     ಒಂದಾನೊಂದು ಊರಿನಲ್ಲಿ ಒಂದು ಮನೆ. ಅಲ್ಲೊಂದು ಕರಿ ತುಂಟ ಬೆಕ್ಕು. ಮನೆ ಒಳಹೊರ ಓಡಾಡುತ್ತ ಚೂಟಿಯಾಗಿತ್ತು. ಆ ಮನೆಯಲ್ಲಿ ಅಂದು ಹಿರಿಯರ ದಿವಸ. ಹಿರಿಯರಿಗೆ ಇಷ್ಟವಾದ ಕಜ್ಜಾಯ ಮಾಡಿ ಬಾಳೆಲೆಯಲ್ಲಿ ಹಾಕಿದ್ದರು. ಅಷ್ಟೊತ್ತಿಗೆ ಎಲ್ಲಿಂದಲೋ ಓಡಿಬಂದ ಬೆಕ್ಕು ಇಲಿ ಅಟ್ಟಿಸಿಕೊಂಡು ಅತ್ತಿತ್ತ ಓಡುತ್ತ ಬಾಳೆಲೆಗೆ ಹಾಕಿಟ್ಟಿದ್ದನ್ನೆಲ್ಲ ಚಲ್ಲಾಪಿಲ್ಲಿ ಮಾಡಿತು. ಅಂದಿನಿಂದ ಹಿರಿಯರ ದಿವಸ ಮಾಡುವಾಗ ತೊಂದರೆಯಾಗದಿರಲಿ ಎಂದು ಆ ಕರಿಬೆಕ್ಕನ್ನು ಬುಟ್ಟಿಯಡಿ ಕವುಚಿ ಹಾಕತೊಡಗಿದರು. ಪ್ರತಿವರ್ಷ ಈ ರಿವಾಜು ಹೀಗೇ ಮುಂದುವರೆಯಿತು. ಮನೆಯ ತಲೆಗಳು ಬದಲಾದರೂ ಮುಂದುವರೆಯಿತು.
      ಕೊನೆಗೊಂದು ವರ್ಷ ಆ ಮನೆಯಲ್ಲಿ ಕರಿಬೆಕ್ಕು ಇಲ್ಲವಾಯಿತು. ಇದ್ದ ಬೆಕ್ಕು ಬೂದುಬಣ್ಣದ್ದಾಗಿತ್ತು. ಅಯ್ಯೋ ಏನು ಮಾಡುವುದು? ಕೂಡಲೇ ಆಚೀಚೆ ಮನೆ ಹುಡುಕಿ ಯಾರದೋ ಮನೆಯ ಕರಿಬೆಕ್ಕು ತಂದು ಬುಟ್ಟಿಯಡಿ ಕವುಚಿ ಹಾಕಿದರು. ಕಾರ್ಯ ಮುಗಿದ ಕೂಡಲೇ ವಾಪಸು ಒಯ್ದು ಬಿಟ್ಟರು. ಪ್ರತಿವರ್ಷ ಹಿರಿಯರ ದಿನದಂದು ಕರಿಬೆಕ್ಕು ತಂದು ಕವುಚಿ ಹಾಕುವುದು, ಮುಗಿದ ಮೇಲೆ ಬಿಡುವುದು ಮುಂದುವರೆದು ಬಂತು.
     ಯಾವುದೋ ಅನುಕೂಲಕ್ಕೆ ಶುರುವಾದ ರೂಢಿ ಕೊನೆಗೆ ಸಂಪ್ರದಾಯವಾಗುವುದು; ಅರ್ಥದ ತಳಬುಡವಿಲ್ಲದೆ ಹೋದರೂ ಆಚರಣೆಗಳು ನಮ್ಮ ನಡುವೆ ಉಳಿದುಬಂದಿರುವುದು ಹೀಗೆ. 
       ನಂಬಿಕೆ, ಮೂಢನಂಬಿಕೆಗಳ ನಡುವಿನ ಗೆರೆ ತುಂಬ ತೆಳು. ನಂಬಿಕೆ ವ್ಯಕ್ತಿಯಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿದರೆ, ತಪ್ಪು ಗ್ರಹಿಕೆಗಳಿಂದ ಹುಟ್ಟಿಕೊಳ್ಳುವ ಮೂಢನಂಬಿಕೆ ಭಯ ಮತ್ತು ಅವಲಂಬನೆಯನ್ನು ಉಂಟುಮಾಡುತ್ತದೆ. ಸ್ವಸಾಮರ್ಥ್ಯವನ್ನು ಮರೆಸುತ್ತದೆ. ಮೌಢ್ಯದ ಅಪಾಯ ಇಲ್ಲಿಗೇ ನಿಲ್ಲುವುದಿಲ್ಲ: ಅದು ನಡೆಯುತ್ತಿರುವ ಎಲ್ಲ ರೂಢಿಗಳಿಗೂ ಪರಂಪರೆಯ ಸೋಗು ಮೂಡಿಸುತ್ತದೆ; ಆಚರಣೆಗಳು ಧರ್ಮ ಮತ್ತು ನೈತಿಕತೆಯ ಜೊತೆಗೆ ಸೇರಿಕೊಂಡು ಪ್ರಶ್ನಿಸುವ ಮನೋಭಾವವನ್ನು, ಬದುಕಿನ ಚಲನಶೀಲತೆಯನ್ನು ನಾಶಮಾಡುತ್ತವೆ. ಇವೆಲ್ಲ ನೇರವಾಗಿ ಆಚರಿಸುವ ವ್ಯಕ್ತಿಯ ಮೇಲೆ, ಪರೋಕ್ಷವಾಗಿ ಕುಟುಂಬ-ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತವೆ.
       ಮೂಢನಂಬಿಕೆ ಕುರಿತು ಚರ್ಚೆ ನಡೆಯುತ್ತಿರುವ ಈ ಹೊತ್ತು ‘ಇನ್ಮೇಲೆ ಕರಿಮಣಿ ಸರನೂ ಹಾಕ್ಕಳೋ ಹಂಗಿಲ್ಲಂತೆ, ಕೊಳ್ಳಲ್ಲಿ ರುದ್ರಾಕ್ಷಿ ಸರ ಹಾಕಿದ್ರೂ ಅಪರಾಧವಂತೆ’ ಎಂಬ ಅರೆ ಕುಹಕ, ಅರೆ ಉತ್ಪ್ರೇಕ್ಷೆಯ ಮಾತುಗಳನ್ನು ಜನ ಅಲ್ಲಿಲ್ಲಿ ಮಾತನಾಡಿಕೊಳ್ಳುವುದ ಕೇಳುತ್ತೇನೆ. ‘ದೇವ್ರಿಗೆ ಹರಕೆ ಹೊತ್ಕಳೋವಾಗ ಜಾಗ್ರತೆ’ ಎಂಬ ಮಾತು ಜನರ ಬಾಯಲ್ಲಿ ಬರುವಾಗ ಮೂಢನಂಬಿಕೆ ವಿರೋಧಿ ಕಾನೂನು ಜಾರಿಯಾಗಿದ್ದೇ ಹೌದಾದರೆ ಇವರು ಯಾವ್ಯಾವುದನ್ನೆಲ್ಲ ನಿಲ್ಲಿಸಬಹುದು? ಇನ್ನೆಷ್ಟು ತೆರೆಮರೆಯಲ್ಲಿ ಮುಂದುವರೆಯಬಹುದು? ಎಂದು ಯೋಚಿಸುತ್ತೇನೆ. 
        ಇಷ್ಟು ಬರೆವ ಹೊತ್ತಿಗೆ ಮರದಿಂದ ಕೆಳಗೆ ಬಿದ್ದವನೊಬ್ಬನನ್ನು ಅಗೋ ಆ ವಾಹನದಲ್ಲಿ ಕರೆತಂದರು. ಪರೀಕ್ಷಿಸಲಾಗಿ ಅವನಾಗಲೇ ಗತಪ್ರಾಣನಾಗಿದ್ದ. ಹಾಗೆಂದ ಕೂಡಲೇ ಕರೆತಂದ ವಾಹನದವರು ಲಗುಬಗೆಯಿಂದ ದೇಹವಿಳಿಸಿ ಹೋದರು - ಶವ ಸಾಗಿಸಿದ ವಾಹನದಲ್ಲಿ ಬೇರೆ ಗಿರಾಕಿಗಳು ಹತ್ತುವುದಿಲ್ಲ ಎಂಬ ಕಾರಣಕ್ಕೆ! ರೋದಿಸುವ ಬಂಧುಗಳು ಆಂಬುಲೆನ್ಸ್ ಅಥವಾ ಅನ್ಯಧರ್ಮೀಯರ ವಾಹನಕ್ಕಾಗಿ ಹುಡುಕುತ್ತಿರುವಾಗ ನನ್ನಲ್ಲಿ ಈ ಸಾಲುಗಳು ಮೂಡುತ್ತಲಿವೆ..

***
       ನಂಬಿಕೆ, ಮೂಢನಂಬಿಕೆಗಳೆರಡೂ ಎಲ್ಲರಲ್ಲಿ ಬೇರೆಬೇರೆ ರೂಪದಲ್ಲಿ ಮನೆ ಮಾಡಿವೆ. ಆದರೂ ಗ್ರಾಮೀಣ, ಅನಕ್ಷರಸ್ಥ, ಬಡ ಶೋಷಿತ ವರ್ಗಗಳಲ್ಲಿ; ಅಸಹಾಯಕತೆ ಹಾಗೂ ಅಪರಿಹಾರ್ಯ ಕಷ್ಟಗಳಿರುವಲ್ಲಿ ಮೂಢನಂಬಿಕೆಯೂ ಹೆಚ್ಚು. ಅಲ್ಲದೇ ಪುರುಷರಿಗಿಂತ ಮಹಿಳೆಯರಲ್ಲಿ ಅಂಥ ನಂಬಿಕೆಗಳು ಹೆಚ್ಚು. ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ ಉದ್ಯೋಗಸ್ಥರಲ್ಲಿ ೮೦% ಮಹಿಳೆಯರು ಮೂಢನಂಬಿಕೆಗಳನ್ನು ಪ್ರದರ್ಶಿಸಿ ಸಮರ್ಥಿಸಿಕೊಂಡರೆ; ಪುರುಷರಲ್ಲಿ ೬೮% ಜನರು ಅಂಥ ನಂಬಿಕೆಗಳನ್ನು ಹೊಂದಿರುತ್ತಾರೆ. ಕುಟುಂಬ, ಸಮಾಜದಲ್ಲಿ ಮಹಿಳೆಗೆ ನೀಡಲಾದ ಎರಡನೆ ದರ್ಜೆಯ ಸ್ಥಾನಮಾನ, ಜವಾಬ್ದಾರಿ, ದೈಹಿಕ ಭಿನ್ನತೆ, ಅಧಿಕಾರ ಹೀನತೆ, ಭಾವುಕತೆ ಹಾಗೂ ಇವೆಲ್ಲ ತಂದೊಡ್ಡುವ ಅಸಹಾಯಕತೆ - ಇವು ಮಹಿಳೆಯರನ್ನು ಪ್ರಶ್ನಿಸದೇ ಒಪ್ಪಿಕೊಳ್ಳುವ; ಇರುವುದನ್ನು ಇರುವ ಹಾಗೇ ಮುಂದುವರೆಸುವ ಉಪಕರಣಗಳಾಗುವಂತೆ ಮಾಡಿವೆ. ಹೀಗಿರುವಾಗ ಹೆಣ್ಣಿನಲ್ಲಿ ಮೌಢ್ಯ ಹೆಚ್ಚಿದ್ದರೆ ಅದೇನೂ ಆಶ್ಚರ್ಯವಲ್ಲ. ಈ ವ್ಯವಸ್ಥೆ ಹಾಗಿರಲೆಂದೇ ಅವಳನ್ನು ರೂಪುಗೊಳಿಸಿದೆ. 
        ಪುರುಷ ಪ್ರಧಾನ ಸಮಾಜ ಅವಳನ್ನು ಯಾವ್ಯಾವ ರೀತಿಯ ಖೆಡ್ಡಾದಲ್ಲಿ ಕೆಡವಿದೆ ಎಂದರೆ ದಾಸ್ಯವೇ ಹೆಣ್ಣಿಗಿರಬೇಕಾದ ಪರಮಶ್ರೇಷ್ಠ ಗುಣ ಎಂದು ಬಿಂಬಿಸಲಾಗುತ್ತದೆ. ಎಷ್ಟೋ ಸಲ ಇದನ್ನು ಒಪ್ಪಿಕೊಳ್ಳದ ರೆಬೆಲ್ ಮನಸ್ಸು ತನ್ನ ವಿರೋಧವನ್ನು ವ್ಯಕ್ತಿತ್ವ ಬದಲಾವಣೆಯ ಮೂಲಕ ತೋರಿಸುತ್ತದೆ. ಗಾಯಗೊಂಡ, ಪೂರ್ಣ ಅರಳದ ಅಸಹಾಯಕ ನಿರ್ಲಕ್ಷಿತ ಮನಸ್ಸು ಇತರರ ಗಮನ ತನ್ನೆಡೆ ಸೆಳೆದುಕೊಳ್ಳಲು; ತನ್ನ ವಿರೋಧ ಪ್ರಕಟಪಡಿಸಲು; ಪ್ರಾಮುಖ್ಯತೆ ಹೆಚ್ಚಿಸಿಕೊಳ್ಳಲು ಅನೇಕ ಉಪಾಯಗಳನ್ನು ಅಪ್ರಜ್ಞಾಪೂರ್ವಕವಾಗಿ ಹೂಡುತ್ತಿರುತ್ತದೆ. ಇಂಥ ಉಪಾಯಗಳಲ್ಲಿ ಎದ್ದು ಕಾಣುವುದು ‘ಮೈಮೇಲೆ ಬರುವುದು’. ‘ಮೈಮೇಲೆ ಬರುವ’ವರ ಹಿನ್ನೆಲೆ ಶೋಧಿಸಿದರೆ ಅದು ಹಠಮಾರಿ ಸ್ವಭಾವದವರಲ್ಲಿ ಹೆಚ್ಚು ಎಂಬ ವಾಸ್ತವ ಬೆಳಕಿಗೆ ಬರುತ್ತದೆ. ದೆವ್ವ, ಭೂತ, ಗಾಂವ್ಟಿ ದೈವಗಳು ಎಷ್ಟು ಮಹಿಳಾ ಸ್ನೇಹಿಗಳೆಂದರೆ ಹುಡುಹುಡುಕಿ ಹೆಣ್ಮಕ್ಕಳ ಮೇಲೇ ಬರುತ್ತವೆ. ದೆವ್ವ ಎಂದರೆ ಅತೃಪ್ತ ಆತ್ಮ ಎಂಬ ನಂಬಿಕೆಯಿದೆ. ನಿಜ. ಆದರೆ ಅತೃಪ್ತಗೊಂಡ ಆತ್ಮ ಸತ್ತವರದಲ್ಲ, ಮೈದುಂಬುವ ವ್ಯಕ್ತಿಯದು! 
          ಬಹಳಷ್ಟು ಹೆಣ್ಣುಮಕ್ಕಳ ಮನೋದೈಹಿಕ ಕಾಯಿಲೆಗಳಿಗೂ ಇಂಥ ಅಂಶಗಳೇ ಕಾರಣವಾಗಿರುತ್ತವೆ. ಮನೋಕ್ಲೇಷವನ್ನು ಹೊರತೋರ್ಪಡಿಸಲು ಅಸಾಧ್ಯವಾದಾಗ ಅದು ದೈಹಿಕ ಲಕ್ಷಣಗಳ ರೂಪದಲ್ಲಿ - ವೈದ್ಯಕೀಯವಾಗಿ ಕಾರಣ ಪತ್ತೆಯಾಗದ ಹೊಟ್ಟೆನೋವು, ತಲೆನೋವು, ನಿಶ್ಶಕ್ತಿ, ತಲೆಸುತ್ತು, ಬವಳಿ ಬೀಳುವುದು ಇತ್ಯಾದಿ - ಹೊರಕಾಣಿಸಿಕೊಳ್ಳುತ್ತದೆ. ಇದು ತೀವ್ರತರವಾದಾಗ ವ್ಯಕ್ತಿತ್ವದ ಬದಲಾವಣೆಗಳು ಸಂಭವಿಸಿ ವಿಚಿತ್ರವಾಗಿ ವರ್ತಿಸಲು ಶುರುಮಾಡುತ್ತಾರೆ. ಆದರೆ ಕುಟುಂಬದವರು ಅದಕ್ಕೆ ಮಾನಸಿಕ ಆಘಾತ ಕಾರಣವೆಂದು ನಂಬುವುದೇ ಇಲ್ಲ. ‘ಮನೇಲಿ ಎಲ್ಲ ಚೆನ್ನಾಗಿದೆ, ಏನೋ ಸಣ್ಣಪುಟ್ಟ ಎಲ್ಲರಿಗೂ ಇರಬೋದಾದಂಥ ತೊಂದರೆ ಇದೆಯೇ ಹೊರತು ‘ಮಾನಸಿಕ’ ಆಗುವಂಥದೇನೂ ಇಲ್ಲ’ ಎಂದೇ ವಾದಿಸುತ್ತಾರೆ. ಅವಳಿಗೊಂದು ಸ್ಥಾನವಿಲ್ಲದ ಕಡೆ ಅವಳ ಕಾಯಿಲೆ, ಮನಸ್ಸುಗಳಿಗೂ ವಿಶೇಷ ಸ್ಥಾನವಿರುವುದಿಲ್ಲ. ಅವಳ ಒಳಮನದ ಸೂಕ್ಷ್ಮ ಏರಿಳಿತಗಳು ಕಾಯಿಲೆಯಾಗಿ ಕಾಣಿಸುವುದಿಲ್ಲ. ಎಂದೇ ಮೊದಲು ಮಾಟಗಾರ, ಮಂತ್ರಗಾರ, ನೋಟ ನೋಡುವವ, ದೆವ್ವ ಬಿಡಿಸುವವರ ಬಳಿ ಹೋಗಿ ಅಲ್ಲಿ ಗುಣಕಾಣದ ಸಮಸ್ಯೆಗಳಷ್ಟೇ ವೈದ್ಯರ ಬಳಿ ಬರುತ್ತವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಇನ್ನೆಷ್ಟೋ ಆತ್ಮಹತ್ಯೆಗಳಲ್ಲಿ ಕೊನೆಯಾಗುತ್ತವೆ.
        ಹೆಣ್ಣುಮಕ್ಕಳ ಆರೋಗ್ಯ ಸಂಬಂಧಿ ತಪ್ಪು ತಿಳುವಳಿಕೆ, ಮೌಢ್ಯಗಳು ಹುಟ್ಟಿನಿಂದ ಸಾವಿನವರೆಗೆ ವಿಸ್ತರಿಸಿವೆ. ಮಡಿ, ಮುಟ್ಟು, ಮೈಲಿಗೆಗಳು ಅವಳ ಜೀವ ಹಿಂಡುತ್ತವೆ. ಪೂಜಾ ಸಮಾರಂಭ-ವಿಶೇಷ ಕಾರ್ಯಕ್ರಮ-ತೀರ್ಥಯಾತ್ರೆಗಳು ನಡೆಯುವ ಹೊತ್ತಿನಲ್ಲಿ ಹೆಣ್ಣುಮಕ್ಕಳು ತಮ್ಮ ‘ಡೇಟ್’ ಹಿಂದೆ, ಮುಂದೆ ಮಾಡಲು ಪಡುವ ಪಡಿಪಾಟಲು ನೋಡಿದರೆ ಇನ್ನು ನೂರು ವರ್ಷವಾದರೂ ‘ಆ ಮೂರು ದಿನಗಳ’ಲ್ಲಿ ತಾವು ಶುದ್ಧ ಎಂದು ಅವರು ಭಾವಿಸುವ ಸಾಧ್ಯತೆಯಿಲ್ಲ. ಆಕಾಶವೇ ತಲೆಮೇಲೆ ಬಿದ್ದವರಂತೆ ಗುಂಪುಗುಂಪಾಗಿ ಬರುವ ಹೆಂಗಳೆಯರ ಮುಟ್ಟಿನ ದಿನಗಳನ್ನು ಬದಲಾಯಿಸಲು ಹೆಣಗಾಡುತ್ತ ಆ ಸುದೀರ್ಘ ಲೆಕ್ಕಾಚಾರದಲ್ಲಿ ಅವರಿಗೆ ಬೈಯಬೇಕೆಂದುಕೊಂಡಿದ್ದೆಲ್ಲ ಮರೆತುಬಿಡುತ್ತೇನೆ. ಈ ಸಲವಂತೂ ಆಯಿತು, ಇನ್ನು ಮುಂದೆಯಾದರೂ, ಕೊನೆ ಪಕ್ಷ ಅವರ ಮಕ್ಕಳಿಗಾದರೂ ಹೀಗೆ ಮಾಡದಿರಲಿ ಎಂದು ಮಾನವ ಸಂತಾನೋತ್ಪತ್ತಿ ಕ್ರಿಯೆಯ ಮೂಲವಾದ ಋತುಚಕ್ರದ ಪಾವಿತ್ರ್ಯತೆಯ ಬಗ್ಗೆ ಹೇಳುತ್ತೇನೆ. ಎಷ್ಟು ಒಳಗಿಳಿಯುವುದೋ, ಎಷ್ಟು ಈ ಕಿವಿಯಿಂದ ಆ ಕಿವಿಗೆ ಹಾಗೇ ಹಾರಿಹೋಗುವುದೋ ಅಂತೂ ಗುಂಪು ಹೊರಬೀಳುವಾಗಿನ ಗುಸುಗುಸು ಕೇಳಿದರೆ ಇನ್ನೊಮ್ಮೆ ‘ಮುಟ್ಟು ಮುಂದೆ ಹೋಗುವ ಮಾತ್ರೆ’ ಕೇಳಲು ‘ಅಮ್ಮ’ನ ಬಳಿ ಬರಬಾರದು ಎಂದು ಅವರು ಗೊಣಗಿಕೊಳ್ಳುತ್ತಿರುವಂತೆ ಅನಿಸುತ್ತದೆ. 
          ಮಂತ್ರಿಸಿಕೊಟ್ಟ ಪಾಯಸ ಕುಡಿದರೆ ಹೊಟ್ಟೆಯಲ್ಲಿ ಕಾಲು ಕೆಳಗಾಗಿ ಬೆಳೆದ ಗರ್ಭಸ್ಥ ಮಗು ತಿರುಗಿ ತಲೆ ಕೆಳಗೆ ಬಂದು ನಾರ್ಮಲ್ ಡೆಲಿವರಿ ಆಗುವುದೆಂದು ನಂಬುತ್ತಾರೆ. ಯಾವ ತಾರೀಖು, ಎಷ್ಟು ಘಂಟೆಗೆ ಮಗು ಹುಟ್ಟಿದರೆ ಒಳ್ಳೆಯದೆಂದು ಮೊದಲೇ ಮಗುವಿನ ಜಾತಕ ಬರೆಸಿಕೊಂಡು ಅಷ್ಟು ಗಂಟೆಗೆ ಸರಿಯಾಗಿ ಸಿಸೇರಿಯನ್ ಮಾಡುವಂತೆ ವೈದ್ಯರನ್ನು ಕೇಳುತ್ತಾರೆ. ಮೊದಲ ಮಕ್ಕಳು ಹೆಣ್ಣಾಗಿದ್ದರಂತೂ ಯಾವ ಆಸ್ಪತ್ರೆಗೆ ಹೋದರೆ ಗಂಡು ಹುಟ್ಟುವುದೆಂದು ಹೆರಿಗೆಯ ಮುನ್ನಾದಿನ ಜ್ಯೋತಿಷಿಗಳ ಸಲಹೆ ಕೇಳುತ್ತಾರೆ. ಚಿಕನ್ ತಿಂದೇ ಗರ್ಭಪಾತವಾಯಿತು: ಡಾಕ್ಟರು ಕೊಟ್ಟ ಟಾನಿಕ್ ಗುಳಿಗೆ ತಿಂದು ಮಗು ಬೆಳೆದು ಹೆರಿಗೆ ಕಷ್ಟವಾಯಿತು ಎಂದು ನಂಬುತ್ತಾರೆ. ಗ್ರಹಣ, ಅದರಲ್ಲೂ ಅಮಾವಾಸ್ಯೆ ದಿನ ಆದಷ್ಟೂ ಹೆರಿಗೆ ಆಗದಂತೆ ನೋಡಿಕೊಳ್ಳಲು ವೈದ್ಯರನ್ನು ವಿನಂತಿಸುತ್ತಾರೆ. ಮುಟ್ಟಾದ ಎಷ್ಟನೇ ದಿನ, ಹೇಗೆ ಹೇಗೆ ಗಂಡ ಹೆಂಡತಿ ಕೂಡಿದರೆ ಗಂಡು ಮಗುವಾಗುತ್ತದೆ ಎಂದು ನಂಬಿ ಚೈನೀಸ್ ಕ್ಯಾಲೆಂಡರು ಅನುಸರಿಸುತ್ತಾರೆ. 
       ಹಾಕುತ್ತ ಹೋದರೆ ಎಲ್ಲ ವಾಕ್ಯಗಳಿಗೂ ಆಶ್ಚರ್ಯ ಸೂಚಕ ಚಿಹ್ನೆ ಹಾಕಬೇಕು. ಹೆರಿಗೆ ಎಂಬ ಒಮ್ಮೆ ಸತ್ತು ಮತ್ತೆ ಹುಟ್ಟುವ ಕ್ರಿಯೆಯ ವಿಷಯದಲ್ಲಿ ಮನುಷ್ಯ ಸಮಾಜ ಹೆಂಗಸಿಗೆ ಕೊಡುವ ಮಾನಸಿಕ ಹಿಂಸೆಗಳಿಗೆ ಎಷ್ಟೊಂದು ಮುಖಗಳು!
       ಹೀಗೆ ಆರೋಗ್ಯ ಮತ್ತು ಆಹಾರ - ಈ ಎರಡೇ ವಿಷಯಗಳ ಕುರಿತು ನೋಡಿದರೂ ತಪ್ಪು ತಿಳುವಳಿಕೆಗಳು ಹಾಗೂ ಮೂಢನಂಬಿಕೆಗಳು ಅಗಾಧವಾಗಿ, ಆಳವಾಗಿ ಇವೆ. ಈಗಲೂ ಜನರಲ್ ಪ್ರಾಕ್ಟೀಸಿನಲ್ಲಿ ನೋಡುವಂತೆ ಅರ್ಧಕ್ಕಿಂತ ಹೆಚ್ಚು ರೋಗಿಗಳು ತಮ್ಮ ಕಾಯಿಲೆಗೆ ಕೇವಲ ವೈದ್ಯರನ್ನು, ಅವರ ಚಿಕಿತ್ಸೆಯನ್ನು ನಂಬುವುದಿಲ್ಲ. ಅದರ ಜೊತೆಗೆ ತಮ್ಮ ಮನೆ ಮದ್ದು ಅಥವಾ ಮನೆದೇವರ ಸಲಹೆ, ಅದು ಕೊಟ್ಟ ಪ್ರಸಾದ, ಸೂಚನೆಗಳನ್ನು ಪಾಲಿಸಿಯೇ ಬಂದಿರುತ್ತಾರೆ. ಅರಿಶಿನ ಕಾಮಾಲೆ ಎಂಬ ಕಾಯಿಲೆ ಬರಲು ಕಾರಣ, ಪರಿಹಾರ, ಲಭ್ಯವಿರುವ ಚಿಕಿತ್ಸೆ ಎಲ್ಲ ತಿಳಿಹೇಳಿದ ಬಳಿಕವೂ ಮನೆಗೆ ಹೋಗಿದ್ದೇ ಕೈ ಸುಡಿಸಿಕೊಂಡು ಬರುತ್ತಾರೆ. ಎಲುವು ಮುರಿದವರು, ‘ಮುರಿದಿದೆ ಎಂದು ಹೇಳಲಷ್ಟೇ ಎಕ್ಸ್‌ರೇ ಮಾಡಿ, ಮುಂದಿನ ಜಬಾದಾರಿ ನಾವು ನೋಡಿಕೊಳ್ತೇವೆ’ ಎಂದು ನೇರವಾಗಿ ಹೇಳುತ್ತಾರೆ. ಹಸುಗೂಸು, ಮಕ್ಕಳಿಗೆ ಬೇರೆಬೇರೆ ಕಾರಣಗಳಿಗಾಗಿ ಅಪಸ್ಮಾರ(ಫಿಟ್ಸ್) ಬಂದಿದ್ದರೂ ಅದಕ್ಕೆ ಬಾಲಗ್ರಹ, ಕಣ್ಣಿ ಎಂಬಿತ್ಯಾದಿ ನಾಮವಿಶೇಷಣಗಳ ಅಡಿಯಲ್ಲಿ ಹಣೆಮೇಲೆ ಬಳೆಯ ಚುಳಕೆಯಿಂದ ಸುಟ್ಟು, ನೆತ್ತಿಗೇನನ್ನೋ ಬಡಿದು ತಮ್ಮ ಚಿಕಿತ್ಸೆ ನಡೆಸುತ್ತಾರೆ. ಬುದ್ಧಿಮಾಂದ್ಯ ಮಕ್ಕಳನ್ನು ಶೈತಾನ/ದೆವ್ವ ಬಡಿದ ವ್ಯಕ್ತಿಗಳು ಎಂದು ಮೊದಮೊದಲು ಕೊಲ್ಲಲಾಗುತ್ತಿತ್ತಂತೆ. ತೊನ್ನು ಎಂಬ ಕಾಯಿಲೆಯಲ್ಲದ ಚರ್ಮದ ಕಾಯಿಲೆ ಹಾಗೂ ಅದನ್ನು ಹೊಂದಿರುವ ವ್ಯಕ್ತಿಗಳು ಇನ್ನಿಲ್ಲದ ಮೌಢ್ಯಕ್ಕೆ ಬಲಿಯಾಗಿದ್ದಾರೆ. ತೊನ್ನು ಹಿಡಿದವರು ಅಪಶಕುನ ಸೂಚಕ ವ್ಯಕ್ತಿಗಳು ಎಂಬಂತೆ ಇವತ್ತಿಗೂ ಪರಿಗಣಿಸಲಾಗುತ್ತದೆ. 
         ೨೦೦೨ರಲ್ಲಿ ರೆವರೆಂಡ್ ಅಲೆಕ್ಸ್ ಆರ್ಬಿಟೋ ಎಂಬ ಫಿಲಿಪೀನ್ಸ್ ವ್ಯಕ್ತಿ ಭಾರತಕ್ಕೆ ಬಂದ. ಕೊಯ್ಯದೇ, ಕತ್ತರಿಸದೇ, ಒಂದು ಹನಿ ರಕ್ತವನ್ನೂ ಸುರಿಸದೇ ತಾನು ‘ಸೈಕಿಕ್ ಸರ್ಜರಿ’ ಮಾಡಿ ಗಡ್ಡೆಗಳನ್ನು ಮಾಯ ಮಾಡಿ ಬಿಡುವುದಾಗಿ ಹೇಳಿಕೊಂಡ. ಅವನು ಭಾರತವಷ್ಟೇ ಅಲ್ಲ, ಹಲವು ದೇಶಗಳಲ್ಲಿ ಹೀಗೆ ಆಪರೇಷನ್ ಇಲ್ಲದೇ ಕೇವಲ ಕೈಯಲ್ಲಿ ಮುಟ್ಟಿ ಗೆಡ್ಡೆ ಕರಗಿಸಿದ್ದ! ಅಂಥವನು ಬರುತ್ತೇನೆ ಎಂದಿದ್ದೇ ಇಲ್ಲೂ ದೊಡ್ಡ ಕ್ಯಾಂಪ್ ಒಂದನ್ನು ಸಂಘಟಿಸಲಾಯ್ತು. ಹಲವರ ವಿರೋಧ ಇದ್ದರೂ ಲೆಕ್ಕಿಸದೇ ಆತನನ್ನು ಕರೆಸಲಾಯ್ತು. ಅವನ ಚಿಕಿತ್ಸೆ ಶುರುವಾಗಿತ್ತಷ್ಟೇ, ಕೋರ್ಟ್ ಬಂಧನದ ಆಜ್ಞೆ ಜಾರಿಮಾಡಿತು. ಆತ ಕೂಡಲೇ ಪರಾರಿಯಾಗಿ ಆಶ್ಚರ್ಯಕರ ರೀತಿಯಲ್ಲಿ ಫಿಲಿಪೀನ್ಸ್‌ಗೆ ತಪ್ಪಿಸಿಕೊಂಡು ಹೋದ.
        ಜನರಿಗೆ ಪಂಗನಾಮ ಎಳೆಯಲು ಫಿಲಿಪೀನ್ಸ್‌ನಿಂದ ಯಾರೋ ಬರಬೇಕಾದ ಅವಶ್ಯಕತೆಯಿರಲಿಲ್ಲ. ಆರೋಗ್ಯ ಕುರಿತ ಅಜ್ಞಾನ ನಮ್ಮಲ್ಲಿ ಎಷ್ಟರಮಟ್ಟಿಗೆ ವ್ಯಾಪಕವಾಗಿದೆಯೆಂದರೆ ಮಾರಿಗೊಬ್ಬ, ಮೊಳಕ್ಕೊಬ್ಬ ನಕಲಿ ವೈದ್ಯ ರಾಜಾರೋಷವಾಗಿ ಸುಳ್ಳು ಬೋರ್ಡು ತಗಲಿಸಿಕೊಂಡು ಪ್ರಾಕ್ಟೀಸ್ ಮಾಡಲು ಸಾಧ್ಯವಾಗಿದೆ. ಬೂದಿ ಕೊಟ್ಟು ಕಾಯಿಲೆ ಗುಣಪಡಿಸುವೆನೆಂದು ಹೇಳಿ ನಂಬಿಸಿ ಬದುಕಲು ಈ ದೇಶದಲ್ಲಿ ಸಾಧ್ಯವಿದೆ. ಅಂಥವರು ರೋಚಕವಾಗಿ ಹೇಳುವ ಹಸಿಸುಳ್ಳುಗಳನ್ನು ಜನ ಹಾಗೇ ನಂಬುತ್ತಾರೆ. ಕ್ಯಾನ್ಸರ್, ಏಡ್ಸ್‌ನಂತಹ ಮಾರಣಾಂತಿಕ ರೋಗಗಳನ್ನು; ಇನ್ನೆಷ್ಟೋ ಗುಣವಾಗದ ಕಾಯಿಲೆಗಳನ್ನು ತಾವು ಖಂಡಿತಾ ಗುಣಪಡಿಸುವುದಾಗಿ, ಇಲ್ಲದಿದ್ದರೆ ಹಣ ವಾಪಸು ನೀಡುವುದಾಗಿ ಸಾರುವ ನಕಲಿ ವೈದ್ಯರ ಪಡೆಯೇ ನಮ್ಮ ದೇಶದಲ್ಲಿದೆ. 
       ದುಬಾರಿಯಾಗಿರುವ ಆಧುನಿಕ ವೈದ್ಯಸೇವೆ, ತುಟಿ ಹೊಲಿದುಕೊಂಡ ಯಂತ್ರಗಳಂತಿರುವ ತಜ್ಞವೈದ್ಯರು, ದಿಕ್ಕೆಡಿಸುವ ಉಚಿತ ಸಲಹೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ದೊರಕದ ಕಾಳಜಿ, ಕಾಯಿಲೆ-ಅದಕ್ಕೆ ಲಭ್ಯವಿರುವ ಚಿಕಿತ್ಸೆ ಕುರಿತ ಅಜ್ಞಾನ - ಈ ಎಲ್ಲ ಕಾರಣಗಳಿಂದ ಬಹುಪಾಲು ಬಡವರು ನಕಲಿಗಳ ಮೊರೆಹೋಗುವುದು ಅನಿವಾರ್ಯವಾಗಿದೆ. ದುಬಾರಿ ಆಸ್ಪತ್ರೆಗಳು ಅವರು ಅಂಥ ವ್ಯವಸ್ಥೆಗೆ ಜೋತುಬೀಳುವಂತೆ ಮಾಡಿರುವುದು ಅರ್ಧ ಸತ್ಯವಾದರೆ; ವೈಜ್ಞಾನಿಕ ಸತ್ಯ ಏನೆಂದು ತಿಳಿಯುವ ಕನಿಷ್ಠ ಕುತೂಹಲವೂ ಜನರ ಟೆಂಪರಮೆಂಟಿನಲ್ಲಿ ಇಲ್ಲದಿರುವುದು ಮೌಢ್ಯ ಬೆಳೆಯಲು ಇನ್ನೊಂದು ಕಾರಣವಾಗಿದೆ.

***

ಇತ್ತೀಚಿನ ವರ್ಷಗಳಲ್ಲಿ - ಅದರಲ್ಲೂ ಮಾಹಿತಿ ಕ್ರಾಂತಿ ಸಂಭವಿಸಿದ ೨೧ನೇ ಶತಮಾನದ ಸಾಫ್ಟ್‌ವೇರ್ ಯುಗದಲ್ಲಿ ಎಷ್ಟೊಂದು ಮೌಢ್ಯದ ಘಟನೆಗಳು ಸಂಭವಿಸಿವೆ? ಸಂಭವಿಸುತ್ತಿವೆ?!
        ಕಳೆದ ವರ್ಷ ಡಿಸೆಂಬರ್ ೨೧ಕ್ಕೆ ಪ್ರಪಂಚ ಮುಳುಗೇ ಹೋಗುತ್ತೆನ್ನುವ ಗುಲ್ಲು ಶುರುವಾಯಿತು. ‘ಡೂಮ್ಸ್ ಡೆ’ ಕುರಿತು ನಾಸ್ಟ್ರಡಾಮಸ್ ವ್ಯಾಖ್ಯಾನವನ್ನೂ ಸಹಾಯಕ್ಕೆ ಪಡೆದು ಊಹಿಸಲಾಯಿತು. ಅದಕ್ಕಿಂತ ಮೊದಲೂ ಪ್ರಪಂಚ ಕೊನೆಯಾಗಿ ನಾಶವಾಗುವ ಕುರಿತು ಕೆಲ ಡೆಡ್‌ಲೈನ್‌ಗಳನ್ನು ಕೊಡಲಾಗಿತ್ತು. ಅವರ ದುರದೃಷ್ಟಕ್ಕೆ ಅಂಥದೇನೂ ಸಂಭವಿಸದೇ ಎಲ್ಲ ಕೇಡಿಗರನ್ನೂ-ಕೇಡುಗಳನ್ನೂ ತನ್ನ ಮೈಮೇಲೆ ಹೊತ್ತ ಭೂಮ್ತಾಯಿ ಕ್ಷಮಯಾ ಧರಿತ್ರಿಯಾಗಿ ಎಂದಿನಂತೆ ತಿರುಗತೊಡಗಿದಳು. ಕೆಲ ವರ್ಷಗಳ ಕೆಳಗೆ ಗಣೇಶನ ಮೂರ್ತಿ ಹಾಲು ಕುಡಿಯುತ್ತದೆಂದು ಎದ್ದ ಗುಲ್ಲು ಕಾಡ್ಗಿಚ್ಚಿನಂತೆ ಹರಡಿ ದೇಶದ ಎಲ್ಲ ಗಣಪತಿಯ ಕ್ಯಾಲೆಂಡರುಗಳೂ, ಗುಡಿಗಳೂ ಹಾಲು ಕುಡಿಸುವವರಿಂದ ಕಿಕ್ಕಿರಿದು ತುಂಬಿದವು. ಸನಲ್ ಎಡಮರುಕು ಎಂಬಾತ ಜೀಸಸ್‌ನ ಮೂರ್ತಿ ಕಣ್ಣೀರು ಸುರಿಸಿತೆಂದು ಹೇಳಿ ವಿವಾದವಾಗಿತ್ತು. ನಂತರ ತನ್ನ ಬಂಧನವಾಗಬಹುದೆಂದು ತಿಳಿದ ಆತ ಫಿನ್ಲೆಂಡಿಗೆ ಹೋದವ ವಾಪಸಾಗದೇ ಅಲ್ಲೇ ಉಳಿದ.
      ನರಬಲಿ ಒಂದು ಅಮಾನುಷ ಮೌಢ್ಯ. ಈ ವರುಷ ಕರ್ನಾಟಕದಲ್ಲಿ ನಡೆದ ಒಂದು ನರಬಲಿಯ ಪ್ರಕರಣವನ್ನು ಗಮನಿಸಿರಬಹುದು. ನೆಲದಾಳದಲ್ಲಿರುವ ನಿಧಿ ಹುಡುಕುವ ಮೊದಲು ನಿಧಿ ಕಾಯುವ ಶಕ್ತಿಗಳನ್ನು ಸಂಪ್ರೀತಗೊಳಿಸಲು ನರಬಲಿ ಕೊಡುತ್ತಿದ್ದು ಅದು ಇಂದಿನವರೆಗೂ ಅಲ್ಲಿಲ್ಲಿ ನಡೆಯುತ್ತಿದೆ. ನರಬಲಿಗೆ ಈಡಾಗುತ್ತಿದ್ದವರು ಬಡ ಮಹಿಳೆಯರು ಮತ್ತು ಮಕ್ಕಳು ಎಂದು ಬೇರೆ ಹೇಳಬೇಕಿಲ್ಲ. ಮಾಟಗಾತಿಯರೆಂಬ ಶಂಕೆಯಿಂದ ನಡೆಸುವ ಕೊಲೆಗಳು, ಮಾಟ ಮಾಡುವುದೆಂಬ ಬ್ಲ್ಯಾಕ್ ಮ್ಯಾಜಿಕ್ ಕುರಿತು ಜನರಿಗಿರುವ ಭಯ - ಇವೂ ಮೌಢ್ಯದ ಪರಮಾವಧಿಗಳೇ. ಇತ್ತೀಚೆಗೆ ನ್ಯಾಷನಲ್ ಕಮಿಷನ್ ಫಾರ್ ವುಮೆನ್, ‘ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ’ ಉಲ್ಲೇಖಿಸಿ ಮಾಡಿದ ವರದಿಯಲ್ಲಿ ಹೇಳಿರುವಂತೆ ೨೦೦೮ರಿಂದ ಈಚೆಗೆ ೭೬೮ ಮಹಿಳೆಯರು ಮಾಟಗಾತಿ ಎಂಬ ಶಂಕೆಯ ಮೇಲೆ ಕೊಲೆಯಾಗಿದ್ದಾರೆ. ದಕ್ಷಿಣದ ರಾಜ್ಯಗಳಿಗಿಂತ ಉತ್ತರದ ರಾಜ್ಯಗಳಲ್ಲಿ ಮಾಟದ ಪಿಡುಗು ಹೆಚ್ಚು. ಹಾಗೇ ಬುದ್ಧಿವಂತರ ರಾಜ್ಯ ಕೇರಳದಲ್ಲೂ ಮಾಟ-ಜ್ಯೋತಿಷ್ಯದ ಪಿಡುಗು ಘನವಾಗಿದೆ.
      ೭೪% ಸಾಕ್ಷರತೆ ಇರುವ ನಮ್ಮ ದೇಶದಲ್ಲಿ ಜನರ ಮೌಢ್ಯವನ್ನೇ ಬಂಡವಾಳವಾಗಿಸಿ ಇಂಥ ಹಗಲು ದರೋಡೆ ನಡೆಯುತ್ತಿರುವುದು ಹೇಗೆ? ಅವರಿಗೆ ಯಾರ ಕುಮ್ಮಕ್ಕಿದೆ? ಕೇವಲ ವಂಚಕರಿಗೆ, ಪುರೋಹಿತ ವರ್ಗದವರಿಗೆ ಕಾಸು ಗಿಟ್ಟಿಸಿಕೊಡುವ ಇಂಥವನ್ನು ಜನರಿಗೆ ಮಾಹಿತಿ, ಶಿಕ್ಷಣ ನೀಡಿ ಸರಿಪಡಿಸಬೇಕಲ್ಲವೆ? 
       ಶಿಕ್ಷಣವು ಮೌಢ್ಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದಾದರೂ ಶಿಕ್ಷಿತರ ಮೌಢ್ಯ ಬೇರೆಯೇ ಬಗೆಯದು ಮತ್ತು ಅದು ಅನಕ್ಷರಸ್ಥರ ಮೌಢ್ಯಕ್ಕಿಂತ ಅಪಾಯಕಾರಿಯಾದುದು. ಅರೆಬೆಂದ ಕಾಳನ್ನು ಅನ್ನವನ್ನಾಗಿಸಲೂ ಬಾರದು; ಹಿಟ್ಟನ್ನಾಗಿಸಲೂ ಬಾರದು. ವಿದ್ಯಾವಂತರ ಮೌಢ್ಯ ಅವರಿಗಷ್ಟೇ ಅಪಾಯಕರವಲ್ಲ, ಅದಕ್ಕಿಂತ ಹೆಚ್ಚು ಅವರನ್ನು ನೋಡಿ ಇತರರು ಅನುಕರಿಸುವುದರಿಂದ ಅಪಾಯಕಾರಿಯಾಗುತ್ತದೆ. ಡಾಕ್ಟರು, ಎಂಜಿನಿಯರು, ಲಾಯರುಗಳೆಲ್ಲ ಎಂಜಲೆಲೆ ಮೇಲೆ ಉರುಳುತ್ತಾರೆ ಎನ್ನುವುದು ಮಡೆಸ್ನಾನಕ್ಕೆ ವಿಶೇಷ ಮಾನ್ಯತೆಯನ್ನು ಜನ ಸಾಮಾನ್ಯರ ಮನಸ್ಸಿನಲ್ಲಿ ಮೂಡಿಸುತ್ತದೆ. ಇಸ್ರೋ ವಿಜ್ಞಾನಿಯೇ ತಿರುಪತಿ ತಿಮ್ಮಪ್ಪನೆದುರು ಉಪಗ್ರಹ ಮಾದರಿ ಇಟ್ಟು ಪೂಜಿಸಿದ ಮೇಲೆ; ತಮ್ಮ ಆರಾಧ್ಯ ದೈವ ಕ್ರಿಕೆಟಿಗ ಆಷಾಢಬಲಿ ಮಾಡಿದ ಮೇಲೆ; ವೈದ್ಯರೇ ಆಪರೇಷನ್ನಿಗೆ ಮೊದಲು ಪೂಜೆ ಮಾಡುವರೆಂದ ಮೇಲೆ - ಇನ್ನು ಪಾಮರರಾದ ತಾವು ಕುಂಕುಮ-ವಿಭೂತಿ-ಜ್ಯೋತಿಷ ನಂಬುವುದೇನೂ ದೊಡ್ಡದಲ್ಲ ಎಂದೇ ಜನಸಾಮಾನ್ಯ ಭಾವಿಸುತ್ತಾನೆ. ಹೀಗೆ ಅಕ್ಷರ ಕಲಿತವರು ಹಾಗೂ ಗಣ್ಯರು ವ್ಯವಸ್ಥಿತವಾಗಿ ಮೌಢ್ಯ ಹರಡಲು ಕಾರಣವಾಗುತ್ತಾರೆ.
        ವಸ್ತುಸ್ಥಿತಿ ಹೀಗಿರುವಾಗ ವಿಜ್ಞಾನಿಗಳೂ ಸೇರಿದಂತೆ ಎಷ್ಟೋ ಜನ ಜ್ಯೋತಿಷ್ಯ ಒಂದು ವಿಜ್ಞಾನ ಎಂದು ನಂಬುತ್ತಾರೆ. ೨೦೦೬ರಿಂದ ದೆಹಲಿ ವಿಶ್ವವಿದ್ಯಾಲಯದ ಸಂಸ್ಕೃತ ಭಾಷೆ ಕಲಿಯುವ ಪದವಿ ವಿದ್ಯಾರ್ಥಿಗಳು ಮೂರನೇ ವರ್ಷದಲ್ಲಿ ಜ್ಯೋತಿಷ್ಯ-ವಾಸ್ತು ಶಾಸ್ತ್ರ - ಆಯುರ್ವೇದವನ್ನು ಕಂಪಲ್ಸರಿ ವಿಷಯವನ್ನಾಗಿ ಕಲಿಯಬೇಕು. ಶುಕ್ರವಾರ ಸಂಜೆಯಾದ ಮೇಲೆ ಮನೆಯಿಂದ ಹೊರಗೆ ಹಾಲು-ಸಕ್ಕರೆ-ಹಣ ಹೊರಹೋದರೆ ಲಕ್ಷ್ಮಿಯೇ ತಮ್ಮ ಕೈಬಿಟ್ಟಳೆಂದು ೯೦% ಜನ ಭಾವಿಸುವ ದೇಶದಲ್ಲಿ ಇಂಥ ವಿಷಯಗಳನ್ನು ಪದವಿ ತರಗತಿಗೆ ಕಲಿಸುವ ಔಚಿತ್ಯವೇನು? ಯುವ ಪೀಳಿಗೆಯಲ್ಲಿ ಶಿಕ್ಷಣವು ವೈಜ್ಞಾನಿಕ ಮನೋಭಾವ ಬೆಳೆಸಬೇಕೇ ಹೊರತು, ಪರಂಪರೆಯ ಹೆಸರಿನಲ್ಲಿ ತುಕ್ಕು ಹಿಡಿದ ಶಾಸ್ತ್ರ ಪುರಾಣಗಳನ್ನು ಶಾಸ್ತ್ರೀಯವಾಗಿ ಕಲಿಯುವ ಅವಶ್ಯಕತೆಯಿಲ್ಲ. ಸಂಸ್ಕೃತ ವಿಶ್ವವಿದ್ಯಾಲಯಗಳೂ, ಜ್ಯೋತಿಷ್ಯ ಕೋರ್ಸುಗಳೂ ಶುರುವಾಗಲು ತುದಿಗಾಲ ಮೇಲೆ ಕಾಯುತ್ತಿರುವ ಈ ದಿನಗಳಲ್ಲಿ ‘ಫೇಯ್ತ್ ಹೀಲಿಂಗ್’ ಕೂಡಾ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ಜನರ ಮೌಢ್ಯ ಉಳಿದು, ಬೆಳೆದು ಬರಲು ಅವರ ಅಜ್ಞಾನದ ಜೊತೆಗೆ ಇಂಥ ಎಲ್ಲ ಸಂಗತಿಗಳೂ ಪೂರಕವಾಗಿರುವುದನ್ನು ಗಮನಿಸಬೇಕಿದೆ. 
        ಜನರಿಗೆ ತಿಳುವಳಿಕೆ-ಜಾಗೃತಿ ನೀಡಬೇಕಾದ ಮಾಧ್ಯಮಗಳು ದಿನನಿತ್ಯ ಜ್ಯೋತಿಷ್ಯ-ಭವಿಷ್ಯ ಕಾರ್ಯಕ್ರಮ ಪ್ರಸಾರ ಮಾಡುತ್ತವೆ. ಭಾನಾಮತಿ, ದೆವ್ವ ಭೂತದ ಸುಳ್ಳು ಕತೆಗಳನ್ನು ಧಾರಾವಾಹಿಯಾಗಿಸುತ್ತವೆ. ‘ಯಾಕಂತ ಗೊತ್ತಿಲ್ಲ, ಯಾರ‍್ಗೂ ಗೊತ್ತಿಲ್ಲ..’ ಎಂದು ಗೊಗ್ಗರು ದನಿಯಲ್ಲಿ ಹಸಿಸುಳ್ಳು ಬಿತ್ತರಿಸುವ ಚಾನೆಲ್‌ಗಳು ಅನಕ್ಷರಸ್ಥರಲ್ಲಿ ಮೌಢ್ಯ ಬಿತ್ತನೆ ಮಾಡುವ ಉಪಕರಣವಾಗಿವೆ. ಭೂತದೆವ್ವದ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಜಯಭೇರಿ ಹೊಡೆಯುತ್ತವೆ. ಮಕ್ಕಳಿಗೆ ಹೇಳುವ ಕತೆಗಳಲ್ಲೂ ದೆವ್ವ-ಭೂತ-ಬೇತಾಳಗಳು ಸುಳಿಯುತ್ತಾರೆ. ಅಷ್ಟೇ ಅಲ್ಲ, ವಿದೇಶೀ ಹ್ಯಾರಿ ಪಾಟರ್ ಮಾಟವಿದ್ಯೆಯ ಬಗೆಗೆ ಏನೇನೋ ಜ್ಞಾನವನ್ನು ಪುಟ್ಟ ಮಕ್ಕಳ ಮನಸ್ಸಿನಲ್ಲಿ ತುಂಬಿದ್ದಾನೆ. ಮಕ್ಕಳಲ್ಲಿ ಇವು ಒಂದು ಮಟ್ಟದವರೆಗೆ ಕಲ್ಪನಾಶಕ್ತಿ ಬೆಳೆಸಬಹುದಾದರೂ ಪ್ರಶ್ನೆ ಕೇಳಲಾರದ ಮೊದ್ದುತನವನ್ನೂ ಸೃಷ್ಟಿಸುತ್ತದೆ. 
       ನಮ್ಮ ಜನನಾಯಕರು ಯಾರೋ ಸಾಧುವಿಗೆ ಬಿದ್ದ ಕನಸು ನಂಬಿ ನಿಧಿಯ ಶೋಧಕ್ಕೆ ಅನುಮತಿ ನೀಡುತ್ತಾರೆ. ಅಧಿಕಾರದ ಕಾರಿಡಾರುಗಳಲ್ಲಿ ಹೋಮ ಹವನ ನಡೆಸುತ್ತ, ಚಾಮರಾಜ ನಗರವೇ ಅಪಶಕುನದ ಊರು ಎಂಬ ಮೌಢ್ಯವನ್ನು ಪೋಷಿಸುತ್ತಾರೆ. ಸೆಕ್ಯುಲರ್ ಆಗಿರಬೇಕಾದ ಸರ್ಕಾರಗಳೇ ತೀರ್ಥ-ಪ್ರಸಾದ ವಿನಿಯೋಗ ಮಾಡುತ್ತ; ತೀರ್ಥ ಯಾತ್ರೆಗೆ ಸಬ್ಸಿಡಿ ಕೊಡುತ್ತ ಆರ್ಟ್ ಆಫ್ ಲಿವಿಂಗ್‌ಗಳಿಗೆ ಪುಕ್ಕಟೆ ನೂರಾರು ಎಕರೆ ಜಾಗ ನೀಡುತ್ತವೆ. ಮಠಮಾನ್ಯಗಳಿಗೆ ಕೋಟ್ಯಂತರ ಅನುದಾನ ಕೊಡುತ್ತ; ಜ್ಯೋತಿಷ್ಯ, ವಾಸ್ತುವನ್ನು ವಿಶ್ವವಿದ್ಯಾಲಯ ಪಠ್ಯವಾಗಿಸುತ್ತ; ಜನರನ್ನು ಧಾರ್ಮಿಕವಾಗಿ ಸಂಪ್ರೀತಗೊಳಿಸಲು ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಲಾಗುತ್ತದೆ.  
       ಆದರೆ ಇಂಥ ಅರೆ ನಂಬಿಕೆಗಳು ಧಾರ್ಮಿಕತೆಯೂ ಅಲ್ಲ; ನೈತಿಕತೆಯೂ ಅಲ್ಲ; ಆಧ್ಯಾತ್ಮವಂತೂ ಖಂಡಿತಾ ಅಲ್ಲ ಎಂದು ಹೇಳುವವರಾರು? ಹೀಗೆ ಹೇಳಿದರೆ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’ ಆಗುತ್ತದೆ.
        ಹೀಗಿರುತ್ತ ಕೇವಲ ಕಾನೂನು ಜಾರಿಯಿಂದ ಮೌಢ್ಯ ನಾಶವಾಗಬಹುದೆಂದು ನಿಮಗೆ ಅನಿಸುತ್ತದೆಯೆ? ನನಗನಿಸುವುದಿಲ್ಲ. ನಮ್ಮ ಜನರ ಬಳಿ ಗುದ್ದಾಡುತ್ತ ಸಾಧ್ಯವಾದಷ್ಟು ವೈಜ್ಞಾನಿಕ, ವೈಚಾರಿಕ ವಿಷಯಗಳನ್ನು ಅವರಿಗೆ ತಟ್ಟುವಂತೆ ಕತೆಯಾಗಿಸಿ ಹೇಳುವುದೇ ಸರಿಯಾದ  ದಾರಿ ಎನಿಸುತ್ತಿದೆ..

ಡಾ ಎಚ್ ಎಸ್ ಅನುಪಮಾ ವೃತ್ತಿಯಲ್ಲಿ ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಬಳಿಯ ಕವಲಕ್ಕಿಯಲ್ಲಿ ವೈದ್ಯರಾಗಿದ್ಡಾರೆ. ಪ್ರವೃತ್ತಿಯಲ್ಲಿ ಖ್ಯಾತ ಬರಹಗಾರ್ತಿ, ಕವಯಿತ್ರಿ. 
ಕುಂದಾಪ್ರ ಡಾಟ್ ಕಾಂ- editor@kundapra.com