ಅಂತರ್ಜಾಲದಲ್ಲಿ ಕುಂದಾಪುರಿಗರನ್ನು ಬೆಸೆದ 'ನಮ್ಮ ಕುಂದಾಪುರ' ಗುಂಪು.

 ಕುಂದಾಪುರ(15-12-2013): ದೂರ ದೂರದ ಉರುಗಳಲ್ಲಿ ಉದ್ಯೋಗ ಮುಂತಾದ ಕಾರಣಗಳಿಂದ ನೆಲೆಸಿರುವ ಕುಂದಾಪುರಿಗರಿಗೆ ಪರಸ್ಪರರ ಪರಿಚಯ ಇಲ್ಲದೆ ಇರಬಹುದು ಆದರೆ 'ನಮ್ಮ ಕುಂದಾಪುರ' ಎಂಬ ಫೆಸ್ಬುಕ್ ಗುಂಪಿನ ಪರಿಚಯ ಸಾಮಾನ್ಯವಾಗಿ ಎಲ್ಲಾ ಫೆಸ್ಬುಕ್ ಬಳಕೆದಾರರಿಗೆ ತಿಳಿದೇ ಇರುತ್ತೆ. ವಿಶ್ವಾದ್ಯಂತ ನೆಲೆಸಿರುವ ಕುಂದಾಪುರಿಗರಿಗೆ ತಮ್ಮೂರ ಅಭಿಮಾನವನ್ನು ವ್ಯಕ್ತಪಡಿಸುವ ಸಲುವಾಗಿ ಮತ್ತು ಇಲ್ಲಿನ ಕಲೆ, ಭಾಷೆ, ಸಾಹಿತ್ಯ ಸಂಸ್ಕೃತಿ ಹಾಗೂ ನೆನಪುಗಳ ಮೂಲಕ ಉರಿನ ಚಿತ್ರಣವನ್ನು ಕಟ್ಟಿಕೊಡುವುದರೊಂದಿಗೆ ತಮ್ಮೂರ ಪ್ರೀತಿಯನ್ನು ಹೆಚ್ಚಿಸುವ ಸಲುವಾಗಿ 2010ರಲ್ಲಿ ಫೆಸ್ಬುಕ್ ನಲ್ಲಿ ಆರಂಭಗೊಂಡ ಗುಂಪು 'ನಮ್ಮ ಕುಂದಾಪುರ'. ಮೊದಲ ತಿಂಗಳಲ್ಲಿ 50 ಜನರಿದ್ದ ಗುಂಪಿನ ಸಂಖ್ಯಾಬಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು ಸದ್ಯ ಸುಮಾರು 28,000 ಸದಸ್ಯರಿದ್ದಾರೆ. ಗುಂಪಿನ ಸದಸ್ಯರುಗಳು ವಿವಿಧ ವಿಚಾರಗಳ ಬಗ್ಗೆ ಹರಟುತ್ತಾ, ಚರ್ಚಿಸುತ್ತಾ, ನೆನಪುಗಳನ್ನು ಮೆಲಕು ಹಾಕುತ್ತಾ ವಿವಿಧ ಮಾಹಿತಿಗಳನ್ನು ನೀಡುತ್ತಾ ದಿನದಲ್ಲಿ ಒಮ್ಮೆಯಾದರೂ ಗುಂಪಿನ ಒಳಹೊಕ್ಕು ಬರುತ್ತಾರೆ. ನಿಜಕ್ಕೂ ಅದು ಕುಂದಾಪುರವನ್ನು ಸುತ್ತಿ ಬಂದ ಅನುಭವವೇ ಸರಿ. 
   'ನಮ್ಮ ಕುಂದಾಪುರ' ಗುಂಪು ಕೇವಲ ಇಷ್ಟಕ್ಕೆ ಸೀಮಿತವಾಗಿರದೇ ಕುಂದಾಪುರಿಗರ ಉದ್ಯಮಗಳನ್ನು ಇತರರಿಗೆ ಪರಿಚಯಿಸತ್ತಾ, ಕುಂದಾಪುರಿಗರಿಗೆ ಉದ್ಯೋಗ ಮಾಹಿತಿಯಂತಹ ಉಪಯುಕ್ತ ಮಾಹಿತಿಗಳನ್ನು ನಿರಂತರವಾಗಿ ನಿಡುತ್ತಾ ಸಕಾರಾತ್ಮಕವಾಗಿ ಬೆಳೆದು ಬಂದಿರುವುದನ್ನು ಮೆಚ್ಚಲೇಬೇಕು. ಇದುವರೆಗೆ ಉರಿನ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸುಮಾರು 290 ಪೋಟೋ ಆಲ್ಬಂ ಇಲ್ಲಿರುವುದು ಕೂಡ ಗಮನಾರ್ಹ.
  ಗುಂಪಿನ ಕಾರ್ಯಚಟುವಟಿಕೆ ಕೇವಲ ಇಷ್ಟಕ್ಕೆ ಮುಗಿಯದೇ ವಿಶೇಷವೆಂಬಂತೆ ಆಂತರ್ಜಾಲದಲ್ಲಿ ಭೇಟಿಯಾದ, ಪರಿಚಯವಾದ ಗುಂಪಿನ ಸದಸ್ಯರುಗಳನ್ನು ಒಗ್ಗೂಡಿಸಿ, ಆಯಾ ಉರುಗಳಲ್ಲಿ 'ನಮ್ಮ ಕುಂದಾಪುರ ಗುಂಪಿನ ಸದಸ್ಯರ ಸಹಮಿಲನ' ಕಾರ್ಯಕ್ರಮಗಳನ್ನು ಆಯೋಜಿಸಿ ಸದಸ್ಯರುಗಳ ಸ್ನೇಹ ಬೆಸುಗೆಗೆ ಇದು ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. ಇದುವರೆಗೆ ಬೆಂಗಳೂರಿನಲ್ಲಿ ಮೂರು ಭಾರಿ, ಅಮೇರಿಕಾದಲ್ಲಿ 2 ಭಾರಿ, ಮಂಬೈ ಹಾಗೂ ಕುಂದಾಪುರದಲ್ಲಿ ಒಂದು ಭಾರಿ ಸಹಮಿಲನನ್ನು ಆಯೋಜಿಸಲಾಗಿದೆ. ಇನ್ನೂ ಮುಂದುವರಿದ ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿ ಕೆಲವು ನಿತ್ಯದ ಪರಿಕರಗಳನ್ನು ಓದಗಿಸಿರುವುದು ಮತ್ತು ಗಲ್ಫ್ ನಲ್ಲಿ 'ನಮ್ಮ ಕುಂದಾಪುರ' ಗುಂಪಿನ ಹೆಸರಲ್ಲಿ ಕ್ರಿಕೆಟ್ ಮ್ಯಾಚ್ ಆಯೋಜಿಸಿದ್ದುದು ಗುಂಪಿನ ಹೆಚ್ಚುಗಾರಿಕೆಯೇ ಸರಿ. ಗುಂಪಿನ ಸದಸ್ಯರಾದ ಕ್ಲಿಂಟನ್ ಡಿಸೋಜ ಲೋಗೋ ರಚಿಸಿ ಕೊಟ್ಟಿದ್ದರೆ, ದಿನೇಶ್ ಹೊಳ್ಳ ಕವರ್ ಫೇಜ್ ವಿಸ್ಯಾಸಗೊಳಿಸಿ ಗುಂಪಿಗೊಂದು ಕಳೆ ತುಂಬಿದ್ದಾರೆ. ಉಳಿದಂತೆ ಸಂಜಯ್ ಮೊವಾಡಿಯಂತಹ ಅನೇಕ ಕೀಯಾಶೀಲ ಯುವಕರು ಕಾರ್ಯಕ್ರಮಗಳಿಗೆ ತಕ್ಕಂತೆ ವಿವಿಧ ರೀತಿಯ ವಿನ್ಯಾಸಗಳನ್ನು ರಚಿಸುವುದು, ಪ್ರಚಾರಗೊಳಿಸುವುದು ಮುಂತಾದವುಗಳಲ್ಲಿ ಸಕ್ರಿಯರಾಗಿದ್ದಾರೆ.

ನಮ್ಮ ಕುಂದಾಪುರ ಗುಂಪಿನ ಹಿಂದಿನ ಶಕ್ತಿ ರಾಧಾಕೃಷ್ಣ ಶೆಟ್ಟಿ  
ರಾಧಾಕೃಷ್ಣ ಶೆಟ್ಟಿ
     ಆರಂಭದ ದಿನಗಳಂದ ಇಂದಿನ ತನಕವೂ ಈ ಗುಂಪಿನ ನಿರ್ವಾಹಕ ರಾಧಾಕೃಷ್ಣ ಶೆಟ್ಟಿಯವರು ಗುಂಪಿನ ಬಗೆಗೆ ತಾವು ಹಾಕಿಕೊಂಡು ಬಂದಿರುವ ಎಲ್ಲಾ ಯೋಜನೆಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾ, ಇಲ್ಲಿ ಪ್ರಕಟವಾಗುವ ಪ್ರತಿ ವಿಚಾರಗಳನ್ನೂ ಮೆಚ್ಚುತ್ತಾ, ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ, ಅಭಿನಂದಿಸುತ್ತಾ ಅದೇ ಉತ್ಸಾಹ ಗುಂಪಿನ ಸದಸ್ಯರಲ್ಲಿ ತುಂಬುತ್ತಾ ಸಕ್ರೀಯವಾಗಿದ್ದಾರೆ.
     ಅಮೇರಿಕಾದಲ್ಲಿರುವ ಮಗನ ಮನೆಗೆ ತೆರಳಿದ್ದಾಗ ಪ್ರಪಂಚದಾದ್ಯಂತ ನೆಲೆಸಿರುವ ಕುಂದಾಪುರಿಗರನ್ನು ಒಂದೆಡೆ ಬೆಸೆಯುವುದು ಹೇಗೆಂಬ ಇವರ ಆಲೋಚನೆ ನಮ್ಮ ಕುಂದಾಪುರ ಎಂಬ ಫೆಸ್ಬುಕ್ ಗ್ರೂಪಿನ ಮೂಲಕ ಮೂರ್ತರೂಪ ಪಡೆಯಿತು. ಕುಂದಾಪುರ ತಾಲೂಕಿನ ಯರುಕೋಣೆಯವರಾದ ರಾಧಾಕೃಷ್ಣ ಶೆಟ್ಟಿ ಕಂಬದಕೋಣೆ, ಕುಂದಾಪುರದ ಹಿಂದೂ ಹೈಸ್ಕೂಲ್, ಬೋರ್ಡ್ ಹೈಸ್ಕೂಲ್ ಗಳಲ್ಲಿ ಪಿಯುಸಿ ವರೆಗಿನ ಶಿಕ್ಷಣ ಪಡೆದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದ ಬಳಿಕ ಕಂಬದಕೋಣೆಯ ಶಾಲೆಯಲ್ಲಿ ಶಿಕ್ಷಕರಾಗಿ ಒಂದು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ತದನಂತರ ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದ ಬಳಿಕ ವಿಜಯಾ ಬ್ಯಾಂಕ್ ಗೆ ಸೇರಿದರು. ವಿವಿಧ ಊರುಗಳಲ್ಲಿ ಆಧಿಕಾರಿಯಾಗಿ ಸೇವೆ ಸಲ್ಲಿಸಿದ ಬಳಿಕ ನಿವೃತ್ತಿ ಹೊಂದಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. 
     ಒಟ್ಟಿನಲ್ಲಿ ಫೆಸ್ಬುಕ್ ನಲ್ಲಿ ಅನವಶ್ಯಕವಾಗಿ ಸಮಯ ಹರಣ ಮಾಡುತ್ತಾರೆ ಎಂಬ ಆಪಾದನೆಯ ನಡುವೆಯು ಒಂದು ಒಳ್ಳೆಯ ಉದ್ದೇಶದಿಂದ ಈ ಗುಂಪನ್ನು ರಚಿಸಿ, ಇತರ ಸದಸ್ಯರುಗಳಲ್ಲಿ ಉರಿನ ಅಭಿಮಾನ ಹೆಚ್ಚಿಸುತ್ತಿರುವ, ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿರುವ ಗುಂಪಿನ ಕಾರ್ಯ ಮಾತ್ರ ಶ್ಲಾಘನೀಯವಾದುದು.
-ಸುನಿಲ್ ಬೈಂದೂರು
***

 ವಿವಿಧೆಡೆ ಜರುಗಿದ 'ನಮ್ಮ ಕುಂದಾಪುರ ಗುಂಪಿನ ಸದಸ್ಯರ ಸಹಮಿಲನ'



ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com