ರೂಪಕಲಾ ಕುಂದಾಪುರ: ಕಲಾಪ್ರಿಯರಿಗೆ ಹಾಸ್ಯದ ರಸದೌತಣ ಬಡಿಸಿದ ನಾಟಕ ಸಂಸ್ಥೆ

   ಆಡು ಮುಟ್ಟದ ಸೊಪ್ಪಲ್ಲ ರೂಪಕಲಾ ಕುಂದಾಪುರ ತಂಡದ ನಾಟಕ ನೋಡದ ಕಲಾ ಪ್ರೇಮಿಗಳಿಲ್ಲ ಎಂದರೆ ಅತಿಶಯೋಕ್ತಿಯಾಗದು. 'ಮೂರು ಮುತ್ತು' ನಾಟಕವನ್ನು ಯಾರು ನೋಡಿಲ್ಲ ಹೇಳಿ. ಪ್ರೇಕ್ಷಕರನ್ನು ಹಾಸ್ಯದ ಕಡಲಲ್ಲಿ ತೇಲಿಸುವ ಕುಂದಾಪುರ ರೂಪಕಲಾ ತಂಡದವರ ಸುಪ್ರಸಿದ್ಧ ನಾಟಕವಿದು. ಸಹಜ ಅಭಿನಯ, ಹೊಸ ಪ್ರಯೋಗದ ಮೂಲಕ ವರ್ಷಾನುಗಟ್ಟಲೆ ಪ್ರೇಕ್ಷಕನ ಮನವನ್ನು ಗೆದ್ದು ಇಂದಿಗೂ ಯಶಸ್ವೀ ಪ್ರದರ್ಶನವನ್ನು ಕಾಣುತ್ತಿದೆ. 'ಮೂರು ಮುತ್ತು' ನಾಟಕ 1,000 ಕ್ಕೂ ಮೀರಿ ಪ್ರದರ್ಶನ ಕಂಡು ಮುನ್ನುಗ್ಗುತ್ತಿರುವ ಸಂದರ್ಭದಲ್ಲಿ  ಕುಂದಾಪ್ರ ಡಾಟ್ ಕಾಂ ರೂಪಕಲಾ ಕುಂದಾಪುರದ ವ್ಯವಸ್ಥಾಪಕ, ನಿರ್ದೇಶಕ, ನಟ ಕೆ. ಸತೀಶ್ ಪೈ ಅವರನ್ನು ಸಂದರ್ಶಿಸಿತು.

ರೂಪಕಲಾ ಕುಂದಾಪುರ ನಾಟಕ ಸಂಸ್ಥೆಯ ಸಾಕಾರ ಮೂರ್ತಿ ಕುಳ್ಳಪ್ಪು
ದಿ. ಬಾಲಕೃಷ್ಣ ಪೈ (ಕುಳ್ಳಪ್ಪು)
     ನಾಟಕದ ಬಗೆಗಿನ ಉತ್ಕಟ ಆಸಕ್ತಿ, ಅವಿರತ ಪರಿಶ್ರಮ ಹಾಗೂ ಬೆಂಬಿಡದ ಕಲಾ ಬದುಕಿನ ಸೆಳೆತದಿಂದಾಗಿ ತನ್ನ ಜೀವಮಾನವನ್ನು ರಂಗಭೂಮಿಗಾಗಿಯೇ ಅರ್ಪಿಸಿದ ಕಲಾವಿದ ದಿ. ಕುಳ್ಳಪ್ಪು ಅಲಿಯಾಸ್ ಬಾಲಕೃಷ್ಣ ಪೈ
    1932ರಲ್ಲಿ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ನೆರಳಕಟ್ಟೆಯಲ್ಲಿ ಜನಿಸಿದ ಕುಳ್ಳಪ್ಪು ತನ್ನ ಬಾಲ್ಯದ ದಿನಗಳಲ್ಲಿಯೇ ಎಕಪಾತ್ರ ಅಭಿನಯ, ಹರಿಕತೆ, ಹೂವಿನ ಕೋಲು, ಯಕ್ಷಗಾನ, ಹಾಡು, ನೃತ್ಯಗಳ ಬಗೆಗೆ ಅತೀವ ಆಸಕ್ತಿ ಹೊಂದಿದ್ದರು. ತನ್ನ ತಾಯಿಯ ಕಣ್ಣು ತಪ್ಪಿಸಿ ಶಾಲೆಗೆ ಹೋಗುವ ಬದಲು ಕುಂದಾಪುರಕ್ಕೆ ಬರುತ್ತಿದ್ದ ನಾಟಕ ಕಂಪೆನಿಯಲ್ಲಿ ಕಾಲ ಕಳೆಯುತ್ತಿದ್ದರು. ಮುಂದೆ ನಾಟಕದ ಅತೀವ ಸೆಳೆತದಿಂದಾಗಿ ತನ್ನ ಒಂಬತ್ತನೇ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಸ್ವಯಂ ಸ್ಪೂರ್ತಿಯಿಂದ ನಾಟಕ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ ನಾಟಕದ ಹಿಂದಿನ ಪರಿಶ್ರಮವನ್ನು ಅರಿಯುತ್ತಾ ಬಂದರು.
    ಅಂದಿನ ದಿನಗಳಲ್ಲಿ ಪ್ರಸಿದ್ದ ನಾಟಕ ಕಂಪೆನಿಗಳಾಗಿದ್ದ ಜೈ ಕರ್ನಾಟಕ ನಾಟಕ ಮಂಡಳಿ, ಗುಬ್ಬಿ ಕಂಪೆನಿ, ಗಜಾನನ ನಾಟಕ ಮಂಡಳಿ, ಸುಬ್ಬಯ್ಯ ನಾಯ್ಡು ಕಂಪೆನಿ, ವಿವಿ ನಾಯಕ್ ಕಂಪೆನಿ, ಹುಲಿಮನೆ ಸೀತಾರಾಮಶಾಸ್ತ್ರಿ ಕಂಪೆನಿ, ಮಾಸ್ಟರ್ ಹಿರಿಯಣ್ಣಯ್ಯ ಕಂಪೆನಿ, ಏಣಗಿ ಬಾಳಪ್ಪ ಕಂಪೆನಿ ಮುಂತಾದವುಗಳಲ್ಲಿ ಗೇಟ್ ಕೀಪರ್ ಆಗಿ, ಕಲಾವಿದರುಗಳಿಗೆ ಸಹಾಯಕರಾಗಿ ದುಡಿಯುತ್ತಿದ್ದರು. ಕುಳ್ಳಪ್ಪು ಇದನ್ನು ಫೀಸು ಕೊಡದೇ ಕಲಿಯಬಹುದಾದ ನಾಟಕ ಶಿಕ್ಷಣ ಎಂದೇ ತಿಳಿದಿದ್ದರು. ಇಲ್ಲಿ ಕೆಲಸ ಮಾಡುತ್ತಾ ವೇದಿಕೆ ನಿರ್ಮಿಸುವುದರಿಂದ ಹಿಡಿದು, ವೇದಿಕೆಯ ಹಿಂದಿನ ಕೆಲಸಗಳು, ಮೇಕಪ್, ಸಂಗೀತ, ನಟನೆಯ ಬಗ್ಗೆ ತಿಳಿದುಕೊಳ್ಳತ್ತಾ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು.
       ಆ ಕಾಲಕ್ಕೆ ರಂಗಭೂಮಿಯಲ್ಲಿ ಪ್ರಸಿದ್ಧಿ ಹೊಂದಿದ್ದ ಡಾ. ರಾಜ್ ಕುಮಾರ್, ಪುಟ್ಟಣ್ಣ ಕಣಗಾಲ್, ಉಮ್ಮೇರ್ಜಿ, ಚನ್ನಬಸಪ್ಪ, ಕೊಟ್ಟೂರಪ್ಪ, ಹುಲಿಮನೆ ಸಿತಾರಾಮ ಶಾಸ್ತ್ರಿ ಮುಂತಾದವರುಗಳ ಸ್ನೇಹ ಸಂಪಾದಿಸಿ ನಾಟಕದ ಒಂದೊಂದೇ ಮಜಲುನ್ನು ಕುಳ್ಳಪ್ಪು ತಿಳಿದುಕೊಳ್ಳುತ್ತಿದ್ದರು.
      ಮುಂದೆ ಕುಂದಾಪುರದಲ್ಲಿ ಹವ್ಯಾಸಿ ನಾಟಕ ಕಲಾವಿದರುಗಳನ್ನೊಳಗೊಂಡ 'ಗಂಡಾಂತರ ಕಂಪೆನಿ'ಯನ್ನು  ಸ್ಥಾಪಿಸಿ ಅದರ ಮೂಲಕ ಎರಡನೇ ಮಹಾಯುದ್ಧದ ಸಂತ್ರಸ್ಥರಿಗೆ ಧನಸಹಾಯ ಮಾಡಲು ಬೀದಿ ನಾಟಕ, ಪ್ರಹಸನಗಳ ಮೂಲಕ ಹಣಸಂಗ್ರಹಿಸುವುದು, ಆಗಷ್ಟೇ ಸ್ಥಾಪನೆಗೊಂಡಿದ್ದ ಸಿಂಡಿಕೇಟ್ ಬ್ಯಾಂಕ್ ನ ಪಿಗ್ಮಿ, ರೇವಣಿಗಳ ಕುರಿತಾಗಿ ಅರಿವು ಮೂಡಿಸುವುದು ಮುಂತಾದವುಗಳನ್ನು ಮಾಡಿಕೊಂಡಿದ್ದರು. ಕಾರಣಾಂತರಗಳಿಂದ ಮುಂದೆ ಗಂಡಾಂತರ ಕಂಪೆನಿಯಲ್ಲಿ ಮುಚ್ಚಲಾಯಿತು. ಬಳಿಕ 1951ರಲ್ಲಿ 'ರೂಪರಂಗ' ಎನ್ನುವ ನಾಟಕ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಹಲವಾರು ನಾಟಕಗಳನ್ನು ಪ್ರದರ್ಶಿಸಿದರು.
       ರೂಪರಂಗದಿಂದ ರಾಜ್ಯ ಮಟ್ಟದ ನಾಟಕ ಸ್ವರ್ಧೆಗಳಲ್ಲಿ ಭಾಗವಹಿಸಿ ಸತತವಾಗಿ ನಾಲ್ಕು ವರ್ಷ ಟಿಪ್ಪುಸುಲ್ತಾನ್, ರಾಜಾ ಹರಿಶ್ಚಂದ್ರ, ಕಲ್ಯಾಣಿ, ಸ್ವಾಮಿನಿಷ್ಠೆ ನಾಟಕಗಳಲ್ಲಿನ ಹಾಸ್ಯ ಪಾತ್ರಕ್ಕಾಗಿ ಉತ್ತಮ 'ಹಾಸ್ಯ ನಟ' ಬಹುಮಾನವನ್ನು ಪಡೆದಿದ್ದರು. ಮುಂದೆ ಕೆಲವೊಂದು ಭಿನ್ನಾಭಿಪ್ರಾಯಗಳಿಂದಾಗಿ ರೂಪರಂಗದಿಂದ ಕುಳ್ಳಪ್ಪು ಹೊರಬಂದರು.
    ನಾಟಕಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡಿದ್ದ ಕುಳ್ಳಪ್ಪು 1972ರಲ್ಲಿ 'ರೂಪಕಲಾ' ಎಂಬ ನಾಟಕ ಸಂಸ್ಥೆಯನ್ನು ಆರಂಭಿಸಿದರು. ಇಂದಿಗೂ ರೂಪಕಲಾ ಸಕ್ರಿಯವಾಗಿದ್ದು ಇದರ ಬ್ಯಾನರನಡಿಯಲ್ಲಿ ಕನ್ನಡ ನಾಟಕಗಳನ್ನು, ಮಾತೃಭಾಷಾ ಪ್ರೇಮದಿಂದ ಕಟ್ಟಿದ 'ಶ್ರೀ ಲಕ್ಷ್ಮೀವೆಂಕಟೇಶ ಕೊಂಕಣಿ ನಾಟಕ ಸಭಾ'ದ ಬ್ಯಾನರನ ಅಡಿಯಲ್ಲಿ ಕೊಂಕಣಿ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ.

ಸಿನೆಮಾದಲ್ಲೂ ಆಸಕ್ತಿ:
     ಸಿನೆಮಾ ರಂಗದಲ್ಲೂ ಅತೀವ ಆಸಕ್ತಿ ಹೊಂದಿದ್ದ ದಿ. ಕುಳ್ಳಪ್ಪು ಧರ್ಮಸೆರೆ, ಬಾಲರಾಯನ ಕಥೆಗಳು, ಅತಿಮಧುರ ಅನುರಾಗ ಚಿತ್ರಗಳಲ್ಲಿ ಸಣ್ಣ ಪಾತ್ರ ಮಾಡಿದ್ದರು. 1979ರಲ್ಲಿ ಕನ್ನಡದ ಪ್ರಸಿದ್ಧ ನಟರುಗಳಾದ ಅಂಬರೀಶ್, ಆರತಿ, ಮುಸುರಿ ಕೃಷ್ಣಮೂರ್ತಿ, ಮೈಸೂರು ಲೋಕೆಶ್, ಸುಧೀರ್, ರೇಖಾ ಮುಂತಾದ ತಾರಾಗಣವನ್ನೊಳಗೊಂಡಿದ್ದ  'ಆಕಸ್ಮಿಕ' ಚಿತ್ರವನ್ನು ನಿರ್ದೇಶಿಸಿದ್ದರಾದರೂ ಆರ್ಥಿಕ ಅಡಚಣೆಯಿಂದಾಗಿ ಚಿತ್ರ ಬಿಡುಗಡೆಗೊಳ್ಳಲಿಲ್ಲ. 
   ಸಿನೆಮಾ ಮಾಡಿ ಎಲ್ಲವನ್ನೂ ಕಳೆದುಕೊಂಡಿದ್ದ  ಕುಳ್ಳಪ್ಪು ಬಳಿಕ 1987ರಲ್ಲಿ 'ಬಾಲಕೃಷ್ಣ ಮಿತ್ರ ಮಂಡಳಿ' ಎಂಬ ವೃತ್ತಿಪರ ನಾಟಕ ಸಂಸ್ಥೆಯನ್ನು ಸ್ಥಾಪಿಸಿ ಅಲ್ಲಿಯೂ ನಷ್ಟ ಅನುಭವಿಸಿದರು. 

     1955ರಲ್ಲಿ ರಾಜಕೀಯ ಪ್ರವೇಶಿಸಿದ್ದ ಕುಳ್ಳಪ್ಪು ಹತ್ತು ವರ್ಷಗಳ ಕಾಲ ಕುಂದಾಪುರ ಪಂಚಾಯತ್ ನ ಸದಸ್ಯರಾಗಿ, 20 ವರ್ಷಗಳ ಕಾಲ ಪುರಸಭೆಯ ಸದಸ್ಯರಾಗಿ, ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ದುಡಿದಿದ್ದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಸದಸ್ಯರಾಗಿ, ಉಡುಪಿ ಜಿಲ್ಲಾ ಹೋಟೆಲ್ ಮಾಲಿಕರ ಸಂಘದ ಕಾರ್ಯದರ್ಶಿಯಾಗಿ ಹೀಗೆ ಹತ್ತಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

      ಕುಳ್ಳಪ್ಪು ಕುಂದಾಪುರದಲ್ಲಿ ಪ್ರಸಿದ್ದ ಹೋಟೆಲ್ ಹೊಂದಿದ್ದರಾದರೂ ಇವರ ಮಡದಿ ಹೋಟೆಲ್ ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ನಾಟಕದಿಂದ ಸಂಪಾದನೆ ಇಲ್ಲವಾಗಿತ್ತು. 1990ರ ದಶಕದಲ್ಲಿ ಟಿ.ವಿ. ಧಾರಾವಾಹಿಗಳ ಪರ್ವ ಆರಂಭವಾದ ಪರಿಣಾಮವಾಗಿ ಜನ ನಾಟಕ ನೋಡಲು ಬರುವುದನ್ನೇ ಕಡಿಮೆ ಮಾಡಿದ್ದರು. ನಾಟಕ ಮಾಡುವುದನ್ನೇ ನಿಲ್ಲಿಸಲು ಮನೆಯವರೆಲ್ಲಾ ಹೇಳಿದಾಗ ಒಪ್ಪದ ಕುಳ್ಳಪ್ಪು ಕೊನೆಯದಾಗಿ ಒಂದು ನಾಟಕ ಬರೆಯುವುದಾಗಿ ಹೇಳಿ ಮೂರು ಮುತ್ತು  ನಾಟಕ ಬರೆದರು. 1994ರಲ್ಲಿ ಮೂರು ಮುತ್ತು ನಾಟಕ ಕೊಂಕಣಿಯಲ್ಲಿ 'ತೀನ್ ರತ್ನ್' ಎಂಬ ಹೆಸರಿನಲ್ಲಿ ಪ್ರದರ್ಶನಗೊಂಡಿತು. ಮುಂದೆ ಅದನ್ನು ಕನ್ನಡಕ್ಕೆ ಅನುವಾದಿಸಿ ಪ್ರದರ್ಶಿಸಲಾಯಿತು. ಮೊದಲ ಕೆಲವಾರು ವರ್ಷ ಇದಕ್ಕೂ ಪ್ರೇಕ್ಷಕರು ಕಡಿಮೆ ಇದ್ದಿತ್ತಾದರೂ ಕ್ರಮೇಣ ಅದು ಜನಪ್ರೀಯತೆಯನ್ನು ಕಂಡುಕೊಂಡಿತು.

      ಕುಳ್ಳಪ್ಪು ಒಟ್ಟು 36 ಕನ್ನಡ ಮತ್ತು ಕೊಂಕಣಿ ನಾಟಕಗಳನ್ನು ಬರೆದಿದ್ದು 50ಕ್ಕೂ ಹೆಚ್ಚು ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ರಾಮ ಲಕ್ಷ್ಮಣ, ನಗುವುದೋ ಅಳುವುದೋ, ಅವನಲ್ಲ ಇವನು, ನನಗೆ ಮದುವೆ ಬೇಡ, ಉರಲ್ಲಿ ಸುದ್ದಿ ಹುಡುಗಿ ಪೆದ್ದಿ, ಮುಂತಾದವುಗಳು ಇವರು ರಚಿಸಿ ನಿರ್ದೇಶಿಸಿದ ಪ್ರಮುಖ ನಾಟಕಗಳು.
   ಇವರ ಕಲಾಸೇವೆಯನ್ನು ಮೆಚ್ಚಿ ಕರ್ನಾಟಕ ರಾಜ್ಯ ಕನ್ನಡ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ನೂರಾರು ಸಂಘಟನೆಗಳು ಗೌರವಿಸಿ ಸನ್ಮಾನಿಸಿವೆ.

ತಾನು ಸತ್ತರು ನಾಟಕ ನಿಲ್ಲಬಾರದು.
     ಕುಳ್ಳಪ್ಪು 2009 ರ ಜನವರಿ 23 ರಂದು ನಿಧನರಾದರು. ತಾನೂ ಸತ್ತರೂ ನಾಟಕ ನಿಲ್ಲಬಾರದು. ತನ್ನ ಶ್ರಾದ್ಧಾಕಾರ್ಯಗಳನ್ನು ಮಾಡದಿದ್ದರೂ ಪರವಾಗಿಲ್ಲ ನಾಟಕವನ್ನು ಮುಂದುವರಿಸಿಕೊಂಡ ಹೋಗಬೇಕು ಎಂಬುದು ಅವರ ಆಶಯವಾಗಿತ್ತು. ಜನವರಿ ತಿಂಗಳು ಪೂರ್ತಿ ನಾಟಕಕ್ಕೆ ದಿನ ನಿಗದಿಯಾಗಿದ್ದರೂ ಅವರು ಸಾಯುವ ದಿನ ಮಾತ್ರ ನಾಟಕವಿದ್ದಿರಲಿಲ್ಲ. ಅವರ ಅಂತ್ಯಕ್ರಿಯೆಗಳನ್ನು ನೆರವೇರಿಸಿ ತಂದೆಯ ಆಸೆಯಂತೆ ಮರುದಿನವೇ ನಿಗದಿಯಾಗಿದ್ದ ನಾಟಕವನ್ನು ಪ್ರದರ್ಶಿಸಿ ಅವರ ಮಕ್ಕಳು ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದರು.

ತಂದೆಯ ಹಾದಿಯಲ್ಲಿ ಮಕ್ಕಳು:
ಸಂತೋಷ್ ಪೈ          ಸತೀಶ ಪೈ
    ಕುಳ್ಳಪ್ಪು ರಚಿಸಿ ನಿರ್ದೇಶಿಸುತ್ತಿದ್ದ ನಾಟಕಗಳಲ್ಲಿ ಆರಂಭದ ದಿನಗಳಿಂದಲೇ ಚಿಕ್ಕ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರ ಮಕ್ಕಳಾದ ಕೆ. ಸತೀಶ್ ಪೈ ಮತ್ತು ಕೆ. ಸಂತೋಷ್ ಪೈ ತಂದೆಯ ನಿಧನದ ಬಳಿಕ ಪೂರ್ಣ ಪ್ರಮಾಣದಲ್ಲಿ ನಾಟಕದಲ್ಲಿ ತೊಡಗಿಕೊಂಡರು. ಹಿರಿಯ ಮಗ ಸಂತೋಷ ಪೈ ನಾಟಕ ಕಲಾವಿದರಾಗಿ, ನಿರ್ದೇಶಕರಾಗಿ, ಸಂಗೀತ ನಿರ್ದೇಶಕರಾಗಿ, ಗೀತ ರಚನಕಾರಕಾಗಿ ರಂಗಭೂಮಿಯ ವಿವಿಧ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಪಡೆದಿರುವ ಸತೀಶ್ ಮಣಿಪಾಲದ ಕೆಎಂಸಿಯ ಕಾಫ್ಸ್ ನಲ್ಲಿ ಬಿ. ಫಾರ್ಮಾ ವೃತ್ತಿಪರ ಕೋರ್ಸ್ ಮುಗಿಸಿದ್ದಾರೆ.  ತಂದೆಯೊಂದಿಗೆ ಬಾಲ ನಟನಾಗಿ, ಸಹನಿರ್ದೇಶಕನಾಗಿ ಸೈ ಎನಿಸಿಕೊಂಡಿರುವ ಇವರ ಅಭಿನಯವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಈವರೆಗೆ ಒಂಬತ್ತು ಕನ್ನಡ ಹಾಗೂ ಒಂಬತ್ತು ಕೊಂಕಣಿ ನಾಟಕಗಳನ್ನು ಬರೆದು ನಿರ್ದೇಶಿಸಿ, ನಟಿಸಿದ್ದಾರೆ. 
    ರಾಮಕೃಷ್ಣ ಗೋವಿಂದ, ಅವನಲ್ಲ ಇವನು, ಪಾಪ ಪಾಂಡು, ಸುಸೈಡ್ ಸುಂದರ, ಗೋಲ್ ಮಾಲ್, ದತ್ತು ಪುತ್ರ, ಮಾಸ್ಟರ್ ಪ್ಲಾನ್, ರಂಗ ಮಂಟಪ ಇವುಗಳು ಸತೀಶ್ ಪೈ ನಿರ್ದೇಶನದ ಪ್ರಮುಖ ನಾಟಕಗಳು. ಇವರ ಮುರಾರಿ ಮಗ MBBS ನಾಟಕ ಶೀಘ್ರವೇ ತೆರೆಗೆ ಬರಲಿದೆ. ಸತೀಶ್ ತಮ್ಮ ಪ್ರತಿ ನಾಟಕದಲ್ಲೂ ವಿಭಿನ್ನವಾದ ಪ್ರಯೋಗ ಮಾಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವರ ನಿರ್ದೇಶನದ ಎಲ್ಲಾ ನಾಟಕಗಳು ಮುನ್ನೂರಕ್ಕೂ ಅಧಿಕ ಪ್ರದರ್ಶನವನ್ನು ಕಂಡಿದೆ.
     ಸತೀಶ್ ಪೈ ಅವರ ತಮ್ಮ ಸಂತೋಷ ಪೈ ತನ್ನ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಂಪೂರ್ಣವಾಗಿ ನಾಟಕ ರಂಗದಲ್ಲೇ ತೊಡಗಿಸಿಕೊಂಡಿದ್ದಾರೆ. ಇವರೊಂದಿಗೆ ಅಶೋಕ್ ಶಾನುಭೋಗ್ ನಾಟಕದ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. 'ಮೂರು ಮುತ್ತು' ನಾಟಕ ಆರಂಭವಾಗಿ ಇಂದಿನ ತನಕ ಈ ಮೂವರು ತಮ್ಮ ಪಾತ್ರಗಳನ್ನು ಬದಲಿಸದೆ ನಿರಂತರವಾಗಿ ನಟಿಸುತ್ತಿದ್ದಾರೆ. 'ರೂಪಕಲಾ'ದಲ್ಲಿ ಸದ್ಯ 16 ಜನ ಕಲಾವಿದರಿದ್ದು  ಹುಡುಗಿಯ ಪಾತ್ರದಲ್ಲಿ ಪ್ರಶಾಂತ್ ಭಟ್ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ನಾಗೇಶ್ ಕಟ್ಪಾಡಿ, ನವೀನ್ ಭಟ್, ನಂದನ್ ಪೈ, ನಾಗರಾಜ್ ಖಾರ್ವಿ, ಜನಾರ್ಧನ್ ಖಾರ್ವಿ, ಶರತ್ ಪೂಜಾರಿ, ದೀಪಕ್, ಗೌರವ್ ಪ್ರಭು, ದೇವಿಪ್ರಸಾದ್, ಸಂತೋಷ ಶೆಣೈ, ಅಶೋಕ್ ಭಂಡಾರ್ಕಾರ್ ಜೋತೆಗಿದ್ದರೆ ಗಣೇಶಪ್ರಸಾದ್ ಶೆಣೈ ಸಂಗೀತದಲ್ಲಿ ಸಹಕರಿಸುತ್ತಿದ್ದಾರೆ. 

       ಸತೀಶ್ ಪೈ ಅವರ ರಂಗಭೂಮಿ ಸಾಧನೆಯನ್ನು ಪರಿಗಣಿಸಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದೆಹಲಿ ಕನ್ನಡ ಸಂಘ 'ಕರಾವಳಿ ಮುತ್ತು' ಬಿರುದು ನೀಡಿ ಗೌರವಿಸಿದೆ. ದೇಶದ ವಿವಿಧೆಡೆ ಇರುವ ಕನ್ನಡ ಸಂಘ ಸಂಸ್ಥೆಗಳು, ರಾಜ್ಯದ ನೂರಾರು ಕನ್ನಡ ಮತ್ತು ಕೊಂಕಣಿ ಸಂಘ ಸಂಸ್ಥೆಗಳಲ್ಲದೇ, ದುಬೈ, ಕುವೈಟ್ ಕನ್ನಡ ಸಂಘಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.

ಎಲ್ಲೆಲ್ಲೂ ಮೂರು ಮುತ್ತುಗಳದ್ದೇ ಮಾತು
    1994ರಲ್ಲಿ ತೀನ್ ರತ್ನ್ ಹೆಸರಿನಲ್ಲಿ ಕೊಂಕಣಿಯಲ್ಲಿ ತೆರೆಕಂಡ ನಾಟಕ ಕನ್ನಡಕ್ಕೆ ಅನುವಾದಗೊಂಡು ಇಂದಿಗೂ ಯಶಸ್ವೀಯಾಗಿ ಪ್ರದರ್ಶನಗೊಳ್ಳುತ್ತಿದೆ. ದಿ. ಕುಳ್ಳಪ್ಪು ರಚಿಸಿ ನಿರ್ದೇಶಿಸಿದ ನಾಟಕವನ್ನು ಮಗ ಸತೀಶ್ ಪೈ ಹೊಸರೂಪ ನೀಡಿ ಪ್ರದರ್ಶಿಸುತ್ತಿದ್ದಾರೆ. 'ಮೂರು ಮುತ್ತು 20 ವರ್ಷಗಳ ಬಳಿಕವೂ ಯಶಸ್ವೀ ಪ್ರದರ್ಶನವನ್ನು ಕಾಣುತ್ತಿದ್ದು ರೂಪಕಲಾ ತಂಡದ ಜನಪ್ರಿಯ ನಾಟಕವಾಗಿದೆ. ಇಂದಿಗೂ ಜನರು ರೂಪಕಲಾ ತಂಡದ ಕಲಾವಿದರನ್ನು ಮೂರು ಮುತ್ತು ಹೆಸರಿನಿಂದಲೇ ಗುರುತಿಸುತ್ತಾರೆ. ರೂಪಕಲಾ ತಂಡ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ನಾಟಕ ಪ್ರದರ್ಶನ ನೀಡಿರುವುದಲ್ಲದೇ ದೇಶ ವಿದೇಶಗಳಲ್ಲಿಯೂ ಪ್ರದರ್ಶನ ನೀಡಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದೆ.

ಮೊದಲ ಬಾರಿಗೆ ಕಂಪ್ಯೂಟರ್ ಸಂಗೀತ:
    ರಂಗಭೂಮಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಪ್ಯೂಟರ್ ಸಂಗೀತವನ್ನು ಪರಿಚಯಿಸಿದ ಕೀರ್ತಿ ರೂಪಕಲಾ ತಂಡದ್ದು. ನಿರ್ದೇಶಕ ಸತೀಶ್ ಪೈ ಅವರ ಹೊಸ ಪ್ರಯೋಗ ರಂಗಭೂಮಿಯ ವಿಶಿಷ್ಟ ಪ್ರಯೋಗವೆನಿಸಿದೆ.

ಸತೀಶ ಪೈ ಅವರ ಸಂಪರ್ಕ: 9448770433
-ಸುನಿಲ್ ಬೈಂದೂರು

ತಾಯಿ ಕೆ. ಜಯಂತಿ ಪೈ, ಮಡದಿ ಶ್ರೇಯಾ ಪೈ, ಮಗ ಕಲಾಪೂರ್ಣ  ಹಾಗೂ ಸಹೋದರ ಸಂತೋಷ ಪೈ ಅವರೊಂದಿಗೆ ಸತೀಶ ಪೈ
ಡಾ ಬಿ. ಆರ್. ಶೆಟ್ಟಿ, ಆಸ್ಕರ್ ಫೆರ್ನಾಂಡಿಸ್ ಅವರಿಂದ ದುಬೈ ಕನ್ನಡ ಸಂಘದ ಗೌರವ ಸ್ವೀಕಾರಿಸುತ್ತಿರುವ ಸತೀಶ ಪೈ
ದಿ. ಡಾ ವಿ ಎಸ್ ಆಚಾರ್ಯ ಅವರಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕಾರ
                ಸಂತೋಷ್ ಪೈ,            ಅಶೋಕ್ ಶಾನುಭೋಗ್,           ಸತೀಶ ಪೈ
ಮೂರು ಮುತ್ತು ನಾಟಕದ ಕೆಲವು ದೃಷ್ಯಾವಳಿಗಳುನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com