ಕೃಷಿ ಸಾಧಕ ಪ್ರಗತಿಬಂಧು ನೂಜಾಡಿ ಮಂಜುನಾಥ್ ನಾಯ್ಕ್

ಯುವ ಕೃಷಿಕನ ಕೃಷಿ ಸಾಧನೆ ನೋಡಿ ಕಲಿತರು ನೂರಾರು ಕೃಷಿಕರು

  ನೂಜಾಡಿ ಕುಂದಾಪುರ ತಾಲೂಕಿನ ಅತೀ ಕುಗ್ರಾಮ ಪ್ರದೇಶ. ಇಂಥಹ ಕುಗ್ರಾಮ ಪ್ರದೇಶಕ್ಕೆ ಕೃಷಿ ಪ್ರಯೋಗಗಳೆಂದರೆ ಅನುಷ್ಠಾನಿಸುವುದು ದೊಡ್ಡ ಸಾಹಸವೇ. ಮೂಲಭೂತವಾಗಿ ಮಾಡಿಕೊಂಡು ಬಂದ ಕೃಷಿ ಪದ್ದತಿಯಲ್ಲಿಯೇ ಮುಂದುವರಿಯುತ್ತಿದ್ದ ಕೃಷಿಕರ ನಡುವೆ ಲಾಭದಾಯಕ ಕೃಷಿಯತ್ತ ಮುನ್ನುಗ್ಗಲು, ಸುಧಾರಿತ ಪ್ರಯೋಗಗಳತ್ತ ಮನ ಮಾಡಿದ ಯುವ ಕೃಷಿಕ ಮಂಜುನಾಥ ನಾಯ್ಕ್.
ನೂಜಾಡಿ ಭ್ರಮ್ಮೇರಿಯ ಈ ಯುವ ಕೃಷಿಕರಿಗೆ ಅನೂಚಾನವಾಗಿ ಬಂದ ಭೂಮಿ ಇತ್ತು. ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಇರುವ 3-4 ಎಕ್ರೆ ಭೂಮಿಯಲ್ಲಿ ಹೊಸ ಹೊಸ ಕೃಷಿ ಪ್ರಯೋಗಗಳನ್ನ ಮಾಡಲು ಮುಂದಾಗಿ, ಅದರಿಂದ ಯಶಸ್ಸನ್ನು ಪಡೆದ ಇವರ ಸಾಧನೆ ಇಂದು ತಾಲೂಕು ಜಿಲ್ಲಾ ಮಟ್ಟದಲ್ಲಿ ಗಮನ ಸಳೆಯುತ್ತಿದೆ.
ಕುಂದಾಪುರ ತಾಲೂಕಿಗೆ ಭತ್ತದ ಒಂದು ಕ್ರಾಂತಿಕಾರಕ ಪದ್ದತಿ ಶ್ರೀ ಪರಿಚಿತಗೊಂಡ ಸಂದರ್ಭವದು. ಈ ಪದ್ದತಿಯನ್ನು ತಮ್ಮ ಜಮೀನಿನಲ್ಲಿ ಪ್ರಯೋಗಿಸಿ ಎಂದು ಕೃಷಿ ಅಧಿಕಾರಿಗಳು ಸೂಚಿಸದರೆ ಯಾವ ಕೃಷಿಕನೂ ಪ್ರಯೋಗಪಶುವಾಗಲು ಇಚ್ಚಿಸುತ್ತಿರಲಿಲ್ಲ.  ಕೊನೆಗೂ ಬೆರಳೆಣಿಕೆಯ ಮಂದಿ ಶ್ರೀ ಎಂಬ ಎಳೆ ಸಸಿಗಳ ನಾಟಿಗೆ ಮುಂದೆ ಬಂದರು. ಅವರರಲ್ಲಿ ನೂಜಾಡಿಯೆಂಬ ಕುಗ್ರಾಮದ ಯುವ ಕೃಷಿಕ ಮಂಜುನಾಥ ನಾಯ್ಕರು ಓರ್ವರು. ಪ್ರಥಮ ಪ್ರಯೋಗ ಹೇಗೋ ಎನೋ ಎಂಬ ಆತಂಕ ಇವರಲ್ಲಿ ಇರಲಿಲ್ಲ. ಇವರಲ್ಲಿ ಕೃಷಿಯ ಬಗ್ಗೆ ಅಸೀಮವಾದ ನಂಬಿಕೆಯಿತ್ತು, ಆತ್ಮವಿಶ್ವಾಸವಿತ್ತು. ಕೃಷಿ ಎಂದೂ ಕೈಬಿಡಲ್ಲ ಎಂಬ ಧೈರ್ಯವಿತ್ತು ಹಾಗಾಗಿ ಯಾರೂ ಎನೂ ಹೇಳಿದರೂ ಕಿವಿಗೆ ಹಾಕಿಸಿಕೊಳ್ಳದೇ ಶ್ರೀಕಾರಕ್ಕೆ ಮುಂದಾದದರು. ಜೊತೆಗೆ ತಮ್ಮ ತಂಡದವರನ್ನು ಈ ಪದ್ದತಿಗೆ ಉತ್ತೇಜಿಸಿದ್ದರು. 
ಅಂತು ಪ್ರಾರಂಭಿಕ ಹಂತ ನಾಟಿ ಆಯಿತು. ಗದ್ದೆ ಬಟ್ಟ ಬಯಲಿನಂತಿತ್ತು. ಪರಿಸರದವರು  ಈ ಪದ್ದತಿಯಿಂದ ಸಾಗುವಳಿ ಹಾಳಾಯಿತು ಎನ್ನುತ್ತಿದ್ದರು. ಅದರೆ ಅದನ್ಯಾವುದನ್ನು ಕಿವಿಗೆ ಹಾಕಿಕೊಳ್ಳದ ಮಂಜುನಾಥ ನಂಬಿಕೆಯಿಟ್ಟರು. ತಿಂಗಳಾಯಿತು. ತೆಂಡೆಯೊಡೆಯಲು ಪ್ರಾರಂಭವಾಯಿತು. ಒಂದು ಎರಡಾಯಿತು. ಎರಡು ನಾಲಕ್ಕಾಯಿತು. ಎರಡು ತಿಂಗಳಾಗುವುದರಲ್ಲಿ ಗದ್ದೆಯಲ್ಲಿ ಕ್ರಾಂತಿಕಾರಕ ಬದಲಾವಣೆ. ಛೇಡಿಸಿದವರೇ ಬಂದು ಹುಬ್ಬೇರಿಸಿದರು. ಮಂಜು ನಾಯ್ಕರು ಒಳ್ಳೆಯ ಇಳುವರಿಯನ್ನು ಮಿತವ್ಯದಿಂದ ಪಡೆದರು. ಮತ್ತೆ ಮಂಜುನಾಥ ಶ್ರೀ ಬಿಡಲಿಲ್ಲ. ಅವರ ಕೃಷಿ ತಾಕುವಿನಲ್ಲಿ ಶ್ರೀಕಾರವಾಗಿ ಸಿರಿಯ ಸಂಪನ್ನತೆ  ಕಂಡುಕೊಂಡರು.  ಇಂದು ಇವರು ಓರ್ವ ಅನುಭವಿ ಶ್ರೀ ಬೇಸಾಯಗಾರ. ತಮ್ಮ ಭತ್ತದ ಗದ್ದೆಗೆಲ್ಲಾ ಶ್ರೀಕಾರವನ್ನೇ ಮಾಡಿದ್ದಾರೆ. ಮಾಮೂಲಿ ನಾಟಿ ಪದ್ದತಿಯನ್ನು ಸಂಪೂರ್ಣ ಕೈಬಿಟ್ಟು ಶ್ರೀಯಿಂದಲೇ ದುಪ್ಪಟ್ಟು ಇಳುವರಿಯನ್ನು ಪಡೆಯುತಿದ್ದಾರೆ. ಜೊತೆಗೆ ಇವರಿಂದ ಪ್ರೇರಿತರಾದ ಅದೇಷ್ಟೋ ಕೃಷಿಕರಿಂದ ಶ್ರೀಯ ಅನುಭವ ಪಡೆದುಕೊಂಡು, ಯಶಸ್ವಿಯಾಗಿದ್ದಾರೆ. ಇಂದು ಮಂಜುನಾಥ ನಾಯ್ಕರು ಯಶಸ್ವಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ಇವರ ಯಶಸಿನ ಗುಟ್ಟು ಇರುವುದು ಇವರ ಶ್ರದ್ದೆ ಹಾಗೂ ಕೃಷಿ ಪ್ರೇಮದಲ್ಲಿ. 
ಇವರು ಎಲ್ಲಾ ರೀತಿಯ ಕೃಷಿಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಭತ್ತದಿಂದ ತರಕಾರಿ ಸೊಪ್ಪುಗಳ ತನಕ, ತೋಟಗಾರಿಕೆ ಬೆಳೆಯಿಂದ ವಾಣಿಜ್ಯ ಬೆಳೆಗಳ ತನಕ. ತರಕಾರಿ ಬೆಳೆಯಲ್ಲಿ ಇವರು  ಎಲ್ಲ ಋತುಗಳಲ್ಲೂ ತರಕಾರಿ ಬೆಳೆಯುವ ಮೂಲಕ ಅಲ್ಪಾವಧಿ ಕೃಷಿಯ ಮೂಲಕ ಸ್ವಾವಂಲಬಿತನ ಹೇಗೆ ಎಂಬೂದನ್ನು ಸಾಧಿಸಿ ತೋರಿಸಿದ್ದಾರೆ. ಎಲಸಂಡೆ, ಬೆಂಡೆ, ಕುಂಬಳ, ಬದನೆ, ತೊಂಡೆ , ಸೌತೆ, ಹರಿವೆ ಹೀಗೆ ಇವರ ಕೃಷಿ ಕ್ಷೇತ್ರದಲ್ಲಿ ಇಲ್ಲದ ಬೆಳೆಗಳಿಲ್ಲ. ಕಳೆದ ಸಾಲಿನಲ್ಲಿ ಸೌತೆಗೆ ತುಂತುರು ನೀರಾವರಿ ವಿಧಾನ ಅನುಸರಿಸಿ, ಬಂಪರ್ ಇಳುವರಿ ಪಡೆದಿದ್ದಾರೆ. ಬದನೆಯಲ್ಲಿಯೂ ಬೆಸ್ಟ್ ಎನಿಸಿಕೊಂಡರೆ, ತೊಂಡೆಯಲ್ಲಿ ಮಂಗಳೂರಿನ ತನಕ ತೊಂಡೆ ಕಾಂಡ ಸರಬರಾಜು ಮಾಡುವ ಮೂಲಕ ಖ್ಯಾತಿ ವಿಸ್ತಿರಿಸಿಕೊಂಡಿದ್ದಾರೆ.
ತರಕಾರಿ ಸಸಿ ಮಡಿಗೆ ಈಗ ಟ್ರೈ ವಿಧಾನ ಅನುಸರಿಸುವ ಇವರು ಇದು ಒಳ್ಳೆಯ ಕ್ರಮ ಎನ್ನುತ್ತಾರೆ. ತೆಂಗು, ಅಡಿಕೆ, ಕಾಳುಮೆಣಸು, ಗೇರು, ಜೊತೆಗೆ ರಬ್ಬರ್ ಕೃಷಿಯನ್ನು ಮಾಡುತ್ತಿದ್ದಾರೆ. ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುತ್ತಿರುವ ಕೊಟ್ಟಿಗೆ ಗೊಬ್ಬರವನ್ನು ಯಥೇಚ್ಚವಾಗಿ ಬಳಸುವ ಮೂಲಕ ಕೃಷಿಯಲ್ಲಿ ಸ್ವಾವಲಂಬಿತನ ಕಂಡುಕೊಂಡಿದ್ದಾರೆ. ಇವರ ಕೃಷಿ ಕ್ಷೇತ್ರದ ವೀಕ್ಷಣೆಗೆ  ನಾಡಿನ ಹಲವಾರು ಕಡೆಗಳಿಂದ ಕೃಷಿ ಅಧ್ಯಯನಾರ್ಥಿಗಳು ಭೇಟಿ ನೀಡಿ ಅನುಭವ ಪಡೆದುಕೊಂಡಿದ್ದಾರೆ. ಕೃಷಿಯಲ್ಲಿ ಎನಾದರೂ ಹೊಸತನ್ನು ಮಾಡಬೇಕು ಎಂಬ ತುಡಿತ ಮಂಜು ನಾಯ್ಕರದ್ದು. ನಬಾರ್ಡ್‍ನ ಸಿಜಿಎಂ., ಎಜಿಎಂಗಳ ತಂಡ ಕೂಡಾ ಡಿಸೆಂಬರ್‍ನಲ್ಲಿ ಇವರ ಕೃಷಿ ತಾಕುವಿಗೆ ಭೇಟಿ ನೀಡಿದೆ. ಅಂಗೈಯಗಲದ ಕೃಷಿತಾಕುವನ್ನು ಇಂಚಿಂಚು ಬಿಡದೇ ಹಸನು ಮಾಡಿರುವ ಇವರು, ಕೃಷಿಯನ್ನು ಲಾಭದಾಯಕವಾಗಿ ಮಾಡಲು ಸಾಧ್ಯ ಎನ್ನುವುದನ್ನು ಯುವ ಕೃಷಿಕರಿಗೆ ಮನವರಿಕೆ ಮಾಡಿದ್ದಾರೆ.
      ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ತಾಲೂಕಿಗೆ ಅನುಷ್ಠಾನಗೊಂಡಾಗ ವಂಡ್ಸೆ ಕಾರ್ಯಕ್ಷೇತ್ರದ ನೂಜಾಡಿಯಲ್ಲಿ ಪ್ರಗತಿಬಂದು ತಂಡ ರಚಿಸಿದರು. ಐದು ಜನ ಸಮಾನಮನಸ್ಕರನ್ನು ಒಟ್ಟು ಮಾಡಿ ಪ್ರಗತಿಬಂಧು ತಂಡವನ್ನು ರಚಿಸಿಕೊಂಡು, ತಮ್ಮ ಕೃಷಿ ಭೂಮಿಯಲ್ಲಿ ಕೆಲಸ ಪ್ರಾರಂಭ ಮಾಡಿದರು. ತಾವು ಮಾತ್ರವಲ್ಲದೇ ತಮ್ಮ ಗುಂಪಿನವರ ಕೃಷಿ ಕ್ಷೇತ್ರದಲ್ಲಿಯೂ ಹೊಸ ಹೊಸ ಕೃಷಿಯನ್ನು ಮಾಡಲು ಪ್ರೇರಪಣೆ ನೀಡಿದ ಅವರು, ಕೂಲಿಕಾರ್ಮಿಕರ ಸಮಸ್ಯೆಯನ್ನು ಪ್ರಗತಿಬಂಧುವಿನಿಂದ ದೂರ ಮಾಡಿದರು. ಅಂದಿನ ಸೇವಾ ನಿರತೆ ಸುಜಾತ ಕೆ.ಆರ್., ಮೇಲ್ವಿಚಾರಕ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಹಲವಾರು ಕೃಷಿ ಪ್ರಯೋಗಳನ್ನು ಗದ್ದೆಯಲ್ಲಿ ಮಾಡಿದರು ಅದರಲ್ಲಿ ಪ್ರಮುಖವಾಗಿ ಶ್ರೀ ಪದ್ದತಿಯಲ್ಲಿ ಭತ್ತ ಬೇಸಾಯ. ಜಪಾನ್ ಮಾದರಿ ಕಾಂಪೋಸ್ಟ್ ತಯಾರಿ, ಚಾಪೆ ನೇಜಿ, ಮಾದರಿ ಅಡಿಕೆ ಕೃಷಿ, ಬಾಳೆ ಬೇಸಾಯ ಮಾತ್ರವಲ್ಲದೇ ತರಕಾರಿ ಕೃಷಿಯನ್ನು ಕೈಗೊಂಡು ಯಶಸ್ಸು ಪಡೆದರು.
ಕೃಷಿಯಲ್ಲಿ ಸ್ವತಃ ಅನುಭವ ಪಡೆಯುತ್ತ ಹೋದ ಅವರು ಬೇಸಿಗೆಯಲ್ಲಿ ತರಕಾರಿ ಕೃಷಿಯನ್ನು ತುಂತುರು ನೀರಾವರಿಯಲ್ಲಿ ಮಾಡುವ ಮೂಲಕ ಅಧಿಕ ಲಾಭದಾಯಕ ಮಟ್ಟ ತಲುಪಿದರು. ಸರ್ವ ಋತು ಸೌತೆ ಕೃಷಿ ಸಾಕಷ್ಟು ಜನಪ್ರಿಯವಾಯಿತು. ಅಲಸಂಡೆ, ತೊಂಡೆ, ಬದನೆ ಬೆಳೆಯಲ್ಲಿ ಕೂಡಾ ಗಮನಾರ್ಹ ಪ್ರಗತಿ ಕಂಡರು. ಹಸಿರು ಸೊಪ್ಪು ತಯಾರಿಕೆಯಲ್ಲಿ ಕೂಡಾ ಅವರದ್ದು ದೊಡ್ಡ ಸಾಧನೆ. ಹರಿವೆ ಸೊಪ್ಪು ಬೆಳೆಸಿದದಲ್ಲದೇ ದಾಖಲೆಯ 135 ಕೆ.ಜಿ. ಹರಿವೆ ಬೀಜ ಉತ್ಪಾದಿಸಿ, ಮಾರಾಟ ಮಾಡಿದ್ದಾರೆ. ಇವರು ಕೃಷಿಯ ಅನುಭವ ಪಡೆಯಲು ಸಾಕಷ್ಟು ಅಧ್ಯಯನ ಪ್ರವಾಸಗಳು, ಕೃಷಿ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅನುಭವ ಪಡೆದಿದ್ದಾರೆ. ವರ್ಷವಿಡೀ ತರಕಾರಿ ಕೃಷಿ ಮಾಡುವ ಇವರು ನಿರಂತರವಾಗಿ ಭೂಮಿಯಿಂದ ಆಧಾಯ ಪಡೆಯಲು ಸಾಧ್ಯವಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
  ಸಾವಯವ ಕೃಷಿಗೆ ಒತ್ತು ನೀಡುವ ಇವರು ಹಸಿರು ಗೊಬ್ಬರ,ಹಟ್ಟಿ ಗೊಬ್ಬರವನ್ನು ಯಥೇಚ್ಛವಾಗಿ ಬಳಕೆ ಮಾಡುತ್ತಾರೆ. ಹೈನುಗಾರರು ಆಗಿರುವ ಮಂಜುನಾಥ ನಾಯ್ಕ್ ಸಾವಯವ ಗೊಬ್ಬರದಿಂದ ಮಾತ್ರ ಉತ್ಕøಷ್ಟ ಬೆಳೆ ಪಡೆಯಲು ಸಾಧ್ಯ ಎನ್ನುತ್ತಾರೆ. ಇಡೀ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿರುವ ಇವರು, ತುಂತುರು ನೀರಾವರಿ, ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಡೀ ಕೃಷಿಭೂಮಿಗೆ ಇವರೇ ಪೈಪ್ ಲೈನ್ ಮಾಡಿದ್ದು, ಇವರದ್ದೇ ಮೆಥಡ್.
ಸುಧಾರಿತ ಬಾಳೆ ಕೃಷಿಯಲ್ಲಿಯೂ ಇವರದ್ದು ಎತ್ತಿದ ಕೈ. ಜಿ.9., ನೇಂದ್ರ ಅಲ್ಲದೇ ದೇಶಿಯವಾದ ಏಲಕ್ಕಿ ಬಾಳೆ, ಕದಳಿ, ಪುಟ್ಟಬಾಳೆಯನ್ನು ಬೆಳೆಯುತ್ತಾರೆ. ತೊಂಡೆಯನ್ನು ಕೂಡಾ ವ್ಯವಸ್ಥಿತವಾಗಿ ಮಾಡಿರುವ ಇವರು, ಬದನೆ ಕೃಷಿಯಲ್ಲಿ ಲಾಭ ಹೇಗೆ ಎನ್ನುವ ಕುರಿತು ಪ್ರಾಯೋಗಿಕವಾಗಿ ಕಂಡು ಕೊಂಡ ಯಶಸ್ಸನ್ನು ಹಂಚಿಕೊಳ್ಳುತ್ತಾರೆ. ಯಾವ ಸಮಯಕ್ಕೆ ಯಾವ ಕೃಷಿ ಮಾಡಬೇಕು ಎನ್ನುವುದನ್ನು ನೋಡಿಕೊಂಡು ತರಕಾರಿ ಕೃಷಿ ಮಾಡುವ ಇವರು, ಸಾವಯವ ಕೃಷಿಗೆ ಒತ್ತು ನೀಡುವುದರಿಂದ ರೋಗಭಾದೆ ಕಡಿಮೆ ಎನ್ನುತ್ತಾರೆ.
ತರಕಾರಿ ಕೃಷಿಯ ಜೊತೆಗೆ ಮರಗೆಣಸು, ವೀಳ್ಯ ಕೃಷಿಯನ್ನು ಮಾಡುವುದರ ಜೊತೆಯಲ್ಲಿ ಬೆಳೆಯಲ್ಲಿ ಪರಿವರ್ತನೆ ಮಾಡಿಕೊಳ್ಳುತ್ತಾರೆ. ಭತ್ತದ ಬೆಳೆಯಲ್ಲಿ ಶ್ರೀ ಪದ್ದತಿ ಪ್ರಾರಂಭಿಸಿದ ನಂತರ ಇವರು ಅದರಲ್ಲೇ ಮುಂದುವರಿದಿದ್ದಾರೆ. ಎಂ.ಓ.4ತಳಿಯನ್ನು ಇವರು ಬಳಸುತ್ತಿದ್ದು ಹಿಂಗಾರು ಹಂಗಾಮಿಗೆ ಐಶ್ಚರ್ಯ ತಳಿಯನ್ನು ಬಳಸುತಾರೆ. ಕೃಷಿಯಲ್ಲಿ ಸ್ವಾಯತ್ತತೆ ಪಡೆದುಕೊಂಡಿರುವ ಮಂಜುನಾಥ ನಾಯಕ್, ಟಿಲ್ಲರ್, ಭತ್ತ ಕಟಾವು ಯಂತ್ರ, ಪವರ್ ಸ್ಪ್ರೇಯರ್‍ಗಳನ್ನು ಖರೀದಿಸುವ ಮೂಲಕ ಯಾಂತ್ರೀಕ ಕೃಷಿಯನ್ನು ಆರಂಭಿಸಿದ್ದಾರೆ.
ಈ ಕೃಷಿಕನ ಸದ್ಧಿಲ್ಲದ ಕೃಷಿ ಸಾಧನೆಯನ್ನು ಸಂಬಂಧಪಟ್ಟ ಇಲಾಖೆ, ಸಂಘ ಸಂಸ್ಥೆಗಳು ಗುರುತಿಸುವ ಕೆಲಸ ಮಾಡಬೇಕಾಗಿದೆ. ಬೇಸಾಯ ಒಂದು ಕಲೆ. ಅದನ್ನು ಸಿದ್ಧಿಸಿಕೊಂಡಿರುವ ಇವರು ಕೃಷಿಯಲ್ಲಿ ಸದಾ ಕ್ರಿಯಾಶಾಲಿತ್ವವನ್ನು ಕಾಯ್ದುಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾರಂಭಿಕ ಸದಸ್ಯನಾಗಿ ಮೊದಲ ಒಕ್ಕೂಟದ ಕಾರ್ಯದರ್ಶಿಯಾಗಿ, ಪ್ರಸ್ತುತ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಧ,ಗ್ರಾ.ಯೋಜನೆ ಕುಂದಾಪುರಕ್ಕೆ ತಾಲೂಕಿಗೆ ವಿಸ್ತರಣೆ ಆಗಿ ಈಗ ಹತ್ತು ವರ್ಷ ಆಗುತ್ತಿದೆ. ಪ್ರಾರಂಭದ ದಿನಗಳಲ್ಲಿಯೇ ನೂಜಾಡಿ ಕಾರ್ಯಕ್ಷೇತ್ರದಲ್ಲಿ ಪ್ರಗತಿಬಂಧು ತಂಡವನ್ನು ರಚಿಸಿಕೊಂಡ ಮಂಜು ನಾಯ್ಕರು ಪ್ರಪ್ರಥಮ ಬಾರಿಗೆ ನೂಜಾಡಿಯಲ್ಲಿ ಜಪಾನ್ ಮಾದರಿ ಕಾಂಪೋಸ್ಟ್ ಗೊಬ್ಬರವನ್ನು ಪ್ರಾರಂಭಿಸಿದರು. ಅದು ಇವರ ಕೃಷಿ ಸಾಧನೆಯ ಮೊದಲ ಮೆಟ್ಟಿಲು. ನಂತರ ಹಲವಾರು ಮಾಹಿತಿ ಪ್ರಾತ್ಯಕ್ಷಿಕೆಗಳು ಇವರ ಆತಿಥೇಯದಲ್ಲಿ ನಡೆದಿವೆ. ಮುಂದೆ ಸರ್ವಋತು ಸೌತೆಯ ಮೂಲಕ ಸುದ್ಧಿಯಾದವರು ಇವರು. ಮತ್ತೆ ಮತ್ತೆ ಕೃಷಿಯಲ್ಲಿ ಬದಲಾವಣೆ, ಸುಧಾರಣೆಗಳ ಅಪೇಕ್ಷೆ ಮಾಡುತ್ತಾ, ಕೃಷಿಯಲ್ಲಿ ಯಂತ್ರೀಕರಣಕ್ಕೂ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.
ಇವರ ವಿಳಾಸ: ಮಂಜುನಾಥ ನಾಯ್ಕ್, ನೂಜಾಡಿ, ಭ್ರಮ್ಮೇರಿ. ನೂಜಾಡಿ ಅಂಚೆ. ಕುಂದಾಪುರ ತಾಲೂಕು.ಉಡುಪಿ ಜಿಲ್ಲೆ.    ದೂರವಾಣಿ9686797511

“ಹಿಂದೆ ಭತ್ತ ಬೇಸಾಯವನ್ನು ಸಾಂಪ್ರಾದಾಯಿಕ ಪದ್ದತಿಯಲ್ಲಿ ಮಾಡುತ್ತಿರುವಾಗ ವರ್ಷವಿಡೀ ಊಟಕ್ಕೂ ಸಾಕಾಗುತ್ತಿರಲಿಲ್ಲ. ಆಗ ಪೂರ್ತಿ ಗದ್ದೆ ಬೇಸಾಯ ಮಾಡುತ್ತಿದ್ದೇವು. ಆದರೂ ಊಟಕ್ಕೆ ಅಂಗಡಿಯಿಂದ ಅಕ್ಕಿ ತರಬೇಕಿತ್ತು. ಶ್ರೀ ಪದ್ದತಿ ಪ್ರಾರಂಭ ಮಾಡಿದ ನಂತರ ಊಟಕ್ಕೆ ಮಿಕ್ಕಿ ಅಕ್ಕಿ ಮಾರಾಟ ಮಾಡುತ್ತಿದ್ದೇವೆ. ಈಗ ಗದ್ದೆನೂ ಕಡಿಮೆ. ಸುಧಾರಿತ ಪದ್ದತಿಗಳು ಪ್ರಯೋಜನಕಾರಿ”-ಮಂಜುನಾಥ ನಾಯ್ಕ್ ನೂಜಾಡಿ.

“ನನಗೆ ಒಂದು ದಶಕದ ಹಿಂದೆ ಸಗಣಿ ಗೊಬ್ಬರದ ಮಹತ್ವ ಗೊತ್ತಾಯಿತು. ಅಂದಿನಿಂದ ಸುಧಾರಿತ ದನಗಳ ಸಗಣಿ ಗೊಬ್ಬರವನ್ನು ಖರೀದಿಸಿ ತಂದು ಗದ್ದೆಗೆ ಹಾಕಿದೆವು. ಉತ್ತಮ ಫಸಲು ಬಂತು. ಈಗ ಕೊಟ್ಟಿಗೆಯಲ್ಲಿ ಸಾಕಷ್ಟು ಹಸುಗಳಿವೆ. ಪ್ರಧಾನವಾಗಿ ಹಟ್ಟಿಗೊಬ್ಬರಕ್ಕೆ ಆಧ್ಯತೆ ನೀಡುತ್ತೇವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬಾ ಸಹಕಾರಿಯಾಗಿದೆ. ಹಡಿಲು ಭೂಮಿ ಅಭಿವೃದ್ದಿ ಪ್ರಗತಿಬಂಧು ಉತ್ತಮ ಕಾರ್ಯಕ್ರಮ” - ಮಂಜುನಾಥ್ ನಾಯಕ್

-ಚಿತ್ರ ಬರಹ: ನಾಗರಾಜ್ ವಂಡ್ಸೆ ಬಳಗೇರಿ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-576233





ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com