ಎಲ್ಲರಂತಲ್ಲ ನಮ್ಮ ಉದಯ ಗಾಂವಕಾರ ಮೇಷ್ಟ್ರು...

ಕುಂದಾಪುರ: ಎಲ್ಲಾ ಕ್ಷೇತ್ರಗಳಲ್ಲಿಯೂ ಅಮೂಲಾಗ್ರ ಬದಲಾವಣೆಗಳಾದಂತೆ ಶಿಕ್ಷಣ ಕ್ಷೇತ್ರವೂ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಗುರುವಿನ ಕಾರ್ಯವೈಖರಿಯೂ ಬದಲಾಗಬೇಕು ಎನ್ನುವುದು ನಿಜ. ಗುರು ಎನಿಸಿಕೊಂಡವರು ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವುದಷ್ಟೇ ಅಲ್ಲ. ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮತೆ, ಅವರ ಅಗತ್ಯತೆಗಳನ್ನು ಅರಿತು ಕಲಿಸುವ ಕ್ರೀಯಾಶೀಲತೆ ಅವರಲ್ಲಿರಬೇಕು. ಆಗ ಮಾತ್ರ ಶಾಲೆಗಳತ್ತ ಮಕ್ಕಳು ಮುಖ ಮಾಡುತ್ತಾರೆ, ಪೋಷಕರು ಕೂಡ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಮನಸ್ಸು ಮಾಡುತ್ತಾರೆ. 
    ಮಕ್ಕಳ ಕುರಿತಾಗಿ ವಿಶೇಷ ಕಾಳಜಿ ಇರುವ ಶಿಕ್ಷಕರೊಬ್ಬರು ನಮ್ಮ ನಡುವಲ್ಲಿದ್ದಾರೆ. ಅವರು ಮಕ್ಕಳ ಚಟುವಟಿಕೆಗಳ ಕುರಿತಾಗಿ, ಅವರಿಗೆ ನೀಡಬೇಕಾದ ಶಿಕ್ಷಣದ ಕುರಿತಾಗಿ ವೈಜ್ಞಾನಿಕವಾಗಿ ಮಾತನಾಡಬಲ್ಲವರು. ಕುಂದಾಪುರ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿರುವ ಉದಯ ಗಾಂವಕಾರ್ ಅವರ ಮಕ್ಕಳ ಕುರಿತಾದ ಪ್ರೀತಿಯನ್ನು ಅವರ ಮಾತಿನಲ್ಲಿಯೇ ಕೇಳಬೇಕು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಶಿಕ್ಷಕನಾಗಿದ್ದುಕೊಂಡು ಮಕ್ಕಳೊಂದಿಗೆ ಬೆರೆಯಬೇಕು ಎಂಬ ಇಂಗಿತದಲ್ಲಿಯೇ ಅವರ ಕಾಳಜಿ ಅರ್ಥವಾಗುತ್ತದೆ. ಶಿಕ್ಷಕರಾಗಿ, ಚಿತ್ರ ಕಲಾವಿದರಾಗಿ, ಬರಹಗಾರರಾಗಿ ಸೃಜನಾತ್ಮಕ ಬದುಕು ಸಾಗಿಸುತ್ತಿರುವ ಅವರನ್ನು ಕುಂದಾಪ್ರ ಡಾಟ್ ಕಾಂ ಇತ್ತಿಚಿಗೆ ಅವರನ್ನು ಸಂದರ್ಶಿಸಿತು. 

      ತನ್ನ ವೃತ್ತಿ ಜೀವನವನ್ನು ಕುಂದಾಪುರ ತಾಲೂಕಿನಲ್ಲಿಯೇ ಆರಂಭಿಸಿದ ಉದಯ ಗಾಂವಕಾರ್ ಸದ್ಯ ಕುಂದಾಪುರದವರೇ ಆಗಿ ಹೋಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕುಮಟಾದ ಪಡುವಣಿ ಇವರ ಹುಟ್ಟೂರು. ತನ್ನ ಹೈಸ್ಕೂಲು ವರೆಗಿನ ಶಿಕ್ಷಣವನ್ನು ಮಿರ್ಜಾನದಲ್ಲಿ ಮುಗಿಸಿ, ಪದವಿ ವರೆಗಿನ ವಿದ್ಯಾಭ್ಯಾಸವನ್ನು ಕುಮಟಾದಲ್ಲಿ ಪಡೆದ ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂಇಡ್ ಮುಗಿಸಿದ್ದಾರೆ.
  1996  ಕುಂದಾಪುರದ ತಾಲೂಕಿನ ಆರ್ಡಿಯಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿ ಇವರು ಕುಂದಾಪುರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ತರಬೇತುದಾರಾಗಿ ಒಂದೂವರೆ ವರ್ಷಗಳ ಕಾಲ ದುಡಿದು ಮುಂದೆ ವಡೆರಹೋಬಳಿ ಶಾಲೆಯಲ್ಲಿ ಹತ್ತು ವರ್ಷಗಳ ಕಾಲ ಶಿಕ್ಷಕನಾಗಿ ಸದ್ಯ ಕುಂದಾಪುರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 


ಕುಂದಾಪ್ರ ಡಾಟ್ ಕಾಂ(*): ನಾವು ಗಮನಿಸಿದಂತೆ ಮಕ್ಕಳ ಕುರಿತಾಗಿ ನಿಮ್ಮ ಕಾಳಜಿ ವಿಶೇಷವಾದುದು. ಇದು ಹೇಗೆ ಸಾಧ್ಯ?
ಉದಯ ಗಾಂವಕಾರ್: ಸಾಮಾನ್ಯವಾಗಿ ಎಲ್ಲಾ ಶಿಕ್ಷಕರಿಗೂ ತಮ್ಮ ವಿದ್ಯಾರ್ಥಿಗಳ ಬಗೆಗೆ ಪ್ರೀತಿ ಇರುತ್ತೆ. ಆದರೆ ಅದನ್ನು ಪ್ರಕಟಿಸುವ ರೀತಿ ಸ್ವಲ್ಪ ಭಿನ್ನವಾಗಿರುತ್ತೆ ಅನ್ನೋದು ನನ್ನ ಅಭಿಪ್ರಾಯ. ಶಿಕ್ಷಕನಾಗಿದ್ದರಿಂದ ಸಹಜವಾಗಿ ಮಕ್ಕಳ ಕುರಿತಾಗಿ ಆಸಕ್ತಿ ಮೂಡಿತ್ತು.

* ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಅಂತಹದರಲ್ಲಿ ಮಕ್ಕಳನ್ನು ಅರ್ಥಮಾಡಿಕೊಂಡು ಶಿಕ್ಷಣಕ್ಕೆ ಒಗ್ಗಿಕೊಳ್ಳುವಂತೆ ಮಾಡುವುದು ಹೇಗೆ?
ಉದಯ ಗಾಂವಕಾರ್: ಪ್ರತಿ ಶಿಕ್ಷಕನಲ್ಲಿಯೂ ಒಂದು ತಾಯಿ ಹೃದಯವಿರಬೇಕು. ಮಕ್ಕಳು ಯಾವಾಗಲೂ ನಾವು ನಿರೀಕ್ಷಿಸಿದಂತೆ ಪ್ರತಿಕ್ರಿಯಿಸುವುದಿಲ್ಲ ಮತ್ತು ಎಲ್ಲರ ಮನಸ್ಥಿತಿಯೂ ಒಂದೇ ತೆರನಾಗಿರುವುದಿಲ್ಲ. ಅವರನ್ನು ಜಾಣರು ದಡ್ಡರು ಎಂದು ಭೇದ ಮಾಡಿ ನೋಡದೇ ಎಲ್ಲವರು ಸಮನಾಗಿ ನೋಡುವುದು ಮುಖ್ಯ. ಕಲಿಕೆಯಲ್ಲಿ ಹಿಂದೆ ಬೀಳುವವರಿಗೆ ಹೆಚ್ಚು ಮಹತ್ವ ನೀಡಬೇಕು. ಶಾಲೆಗೆ ಬಂದು ಪಾಠ ಮಾಡಿ ಹೊದರೆ ನಮ್ಮ ವೃತ್ತಿಯನ್ನು ನಿರ್ವಹಿಸಿದಂತಾಗುವುದಷ್ಟೇ. ಶಾಲೆಗೆ ಬಾರದ ಮಕ್ಕಳನ್ನು ಶಾಲೆಗೆ ಕರೆತರುವ, ಆ ವಿದ್ಯಾರ್ಥಿಯ ಪೋಷಕರನ್ನು ಓಲೈಸುವ ಕೆಲಸವನ್ನು ಮಾಡಿದರೆ ಅದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ.

*ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಕಾಣಲು ಕಾರಣ ಏನಿರಬಹುದು? ಶಿಕ್ಷಕರುಗಳು ತಮ್ಮ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸೋಲುತ್ತಿದ್ದಾರೆಯೇ?
ಉದಯ ಗಾಂವಕಾರ್:  ಇದನ್ನು ಶಿಕ್ಷಕರದ್ದೇ ಸಮಸ್ಯೆ ಎಂದು ಹೇಳಲಾಗದು. ಇದೊಂದು ಕಾಲಘಟ್ಟವಷ್ಟೇ. ಮತ್ತೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಬಹುದು. ಆದರೆ ಇಲ್ಲಿರುವ ಸಮಸ್ಯೆಗಳಿಗೆ ಒಬ್ಬರನ್ನು ಗುರಿ ಮಾಡುವುದು ಸರಿಯಲ್ಲ. ಸರಕಾರಿ ಶಾಲೆಗಳಲ್ಲಿ ಸೌಕರ್ಯ, ಗುಟಮಟ್ಟದ ಶಿಕ್ಷಣ ಮುಂತಾದ ಹತ್ತಾರು ಸಮಸ್ಯೆಗಳಿವೆ. ಪಾಲಕರು ತಮ್ಮ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲೇ ಕಲಿತರೆ ಮಾತ್ರ ಉತ್ತಮವೆಂದು ತಿಳಿದಿರುವುದು ಕೂಡ ಮಕ್ಕಳ ಕೊರತೆಗೆ ಕಾರಣವೇ. ಪರಿಣಾಮವಾಗಿ ಕಳಪೆ ಗುಣಮಟ್ಟದ ಶಿಕ್ಷಣ ನೀಡುವ ಕೆಲವು ಆಂಗ್ಲ ಮಾಧ್ಯಮ ಶಾಲೆಗಳಿಗೂ ಮಕ್ಕಳನ್ನು ಸೇರಿಸುತ್ತಿದ್ದಾರೆ. 

*ಬೇಸಿಗೆ ಶಿಬಿರ ಮುಂತಾದ ಪಠ್ಯೇತರ ಚಟುವಟಿಕೆಗಳು ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು?
ಉದಯ ಗಾಂವಕಾರ್: ವೈಯಕ್ತಿಕವಾಗಿ ಇಂತಹ ಶಿಬಿರಗಳ ಬಗೆಗೆ ಆಸಕ್ತಿ ಇಲ್ಲ. ಮಕ್ಕಳು ರಜೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರದಿದ್ದಾಗಲೇ ಹೆಚ್ಚು ಖುಶಿಯಿಂದಿರುತ್ತಾರೆ. ಶಾಲೆಗಳಿಗೆ ರಜೆ ನೀಡುವುದು ಶಿಬಿರ, ಮೇಳಗಳನ್ನು ಆಯೋಜಿಸುವುದಕ್ಕಲ್ಲ ಬದಲಾಗಿ ಮಕ್ಕಳನ್ನು ಮಕ್ಕಳ ಹಾಗೇಯೇ ಇರುವಂತೆ, ತಮ್ಮ ಬಾಲ್ಯದ ಸಂತೋಷವನ್ನು ಅನುಭವಂತೆ ಮಾಡಲು. ಅವರು ಹಿರಿಯರ ಮಾರ್ಗದರ್ಶನವಿಲ್ಲದೇ ಕಳೆಯುವು ಸಮಯದಲ್ಲಿ ನಿಜವಾಗಿಯೂ ಸಂತೋಷವಾಗಿರಬಲ್ಲರು. ಆದರೆ ಇತ್ತಿಚಿಗೆ ಮಕ್ಕಳಿಗಾಗಿ ಶಿಬಿರಗಳನ್ನು ಆಯೋಜಿಸುವ ಸಂಸ್ಕೃತಿ ಹೆಚ್ಚಿರುವುದರಿಂದ ಮಕ್ಕಳ ಶಿಬಿರಗಳು ಹೇಗಿರಬೇಕೆಂಬ ಒಂದು ಮಾದರಿಯನ್ನು ನೀಡಲು ನಾವು ಶಿಬಿರಗಳನ್ನು ಆಯೋಜಿಸುತ್ತೇವೆ.

*ಸಮುದಾಯ ಕುಂದಾಪುರದ ಅಧ್ಯಕ್ಷರಾಗಿದ್ದಿರಿ, ನಿಮ್ಮ ಅವಧಿಯಲ್ಲಿ ಸಂಘಟನೆಯಲ್ಲಿ ಏನೆಲ್ಲಾ ಬದಲಾವಣೆಗಳನ್ನು ಕಂಡುಕೊಳ್ಳಬೇಕೆಂದಿದ್ದಿರಿ?
ಉದಯ ಗಾಂವಕಾರ್:  ಸಮುದಾಯ ಕಳೆದ 30 ವರ್ಷಗಳಿಂದ ಬೆಳೆದು ಬಂದಿದೆ. ನಾನು ಅದರಲ್ಲಿ ತೀರ ಇತ್ತಿಚಿನವ. ಸಮುದಾಯ ಜನರ ನಡುವಿನಿಂದ ಬಂದು ಜನರತ್ತ ಹೋಗುತ್ತಿದೆ ಎಂದು ನಾವು ಹೇಳಿಕೊಂಡು ಬಂದಿರುವುದಾದರೂ ಅದು ಕೆಲವು ಪೂರ್ವಾಗ್ರಹಗಳಿಂದ ಸೀಮಿತ ವರ್ಗವನ್ನು ಮಾತ್ರ ತಲುಪಿತ್ತಿದೆ ಎಂದೆನಿಸುತ್ತಿದೆ. ಜನರು ಮತ್ತು ಸಂಸ್ಥೆಯ ನಡುವಿನ ಈ ಕಂದಕವನನ್ನು ತೊಡೆದು ಹಾಕುವುದು ನನ್ನ ಗುರಿ. ಸಾಂಸ್ಕೃತಿಕ ಸಂಘಟನೆಯಾದ ಸಮುದಾಯ ಜನರಿಗೆ ಹತ್ತಿರವಾದ ಕಲಾ ಪ್ರಕಾರಗಳನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚು ಜನರನ್ನು ತಲುಪಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ. ಆ ದಿಸೆಯಲ್ಲಿಯೇ ನಾವುಗಳು ಕೆಲಸ ಮಾಡುತ್ತೇವೆ.

*ಸಮುದಾಯದ ಕಾಳಜಿಯಲ್ಲಿ ಯಂತ್ರವಿರೋಧಿ ಕೆಲಸಕ್ಕೆ ಹೆಚ್ಚು ಮಹತ್ವವಿದೆ. ಆಧುನಿಕ ಯುಗದಲ್ಲಿ ಈ ವ್ಯಾಖ್ಯಾನವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿರಿ?
ಉದಯ ಗಾಂವಕಾರ್: ಯಂತ್ರ ವಿರೋಧಿ ಎಂದರೆ ಯಂತ್ರಗಳನ್ನು ಧಿಕ್ಕರಿಸುವುದಲ್ಲ. ಬದಲಾಗಿ ಭಾರತದಲ್ಲಿ ಹೆಚ್ಚಿರುವ ಮಾನವ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುವುದು ಎಂಬುದಾಗಿದೆ.  ಹೊಲಸನ್ನು ತೆಗೆಯಲು ಯಂತ್ರಗಳನ್ನು ಬಳಸದೇ ಮನುಷ್ಯರನ್ನು ಬಳಸಿಕೊಳ್ಳುವುದು ನಡಿಯುತ್ತಿರುತ್ತದೆ. ಈ ಸ್ಥಿತಿ ಬದಲಾಗಿ ಯಂತ್ರಗಳನ್ನು ಅಗತ್ಯವಿರುವಲ್ಲಿ ಸರಿಯಾಗಿ ಬಳಸಿಕೊಳ್ಳಬೇಕು. ಮಾನವ ಶಕ್ತಿಗೆ ಹೆಚ್ಚು ಮಹತ್ವ ದೊರೆಯಬೇಕು ಎಂಬುದು ನಮ್ಮ ಕಾಳಜಿ.

*ಕುಂದಾಪುರದಂತಹ ನಗರ ಯಾವ ರೀತಿಯಲ್ಲಿ ಅಭಿವೃದ್ಧಿಯನ್ನು ಕಾಣಬೇಕಿದೆ ಎಂದೆನಿಸುತ್ತೆ?
ಉದಯ ಗಾಂವಕಾರ್: ಅಭಿವೃದ್ಧಿಯ ವ್ಯಾಖ್ಯಾನವೇ ಬದಲಾಗಬೇಕು. ಕಟ್ಟಡ, ರಸ್ತೆ, ವಿಮಾನ ನಿಲ್ದಾಣ ನಿರ್ಮಾಣವಾಗುವುದೆಲ್ಲಾ ಅಭಿವೃದ್ಧಿ ಎಂದೆನಿಸುವುದಿಲ್ಲ. ಒಂದು ಪಟ್ಟಣ ಹೆಚ್ಚು ಬೆಳೆದಿದೆ ಎಂದರೆ ಅದರ ಪಕ್ಕದಲ್ಲೇ ಹೆಚ್ಚು ಸ್ಲಂ ಇರುತ್ತವೆ. ಆಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚುರುವುದು, ನಾಗರೀಕ ವರ್ತನೆ ಕಡಿಮೆ ಇರುವುದು ಸಾಮಾನ್ಯವಾಗಿರುತ್ತದೆ. ಆಭಿವೃದ್ಧಿ ಎಂದರೆ ಒಳ್ಳೆಯ ಮನಸ್ಸುಗಳನ್ನು ಹುಟ್ಟುಹಾಕುವುದು, ಮಾನವ ಸಂಪನ್ಮೂಲಗಳಲ್ಲಿ ಉತ್ತಮ ಬದಲಾವಣೆ ಕಾಣುವುದು ಎಂಬುದು ನನ್ನ ಭಾವನೆ.

ಗಾಂಧಿ ಜಯಂತಿಯ ಅಂಗವಾಗಿ ಕುಂದಾಪುರದ ಗಾಂಧಿ ಪಾರ್ಕ ನಲ್ಲಿ  ಉದಯ್ ಗಾಂವಕಾರ್ ರಚಿಸಿದ ಕಾಗದದ ರೇಖಾಚಿತ್ರ

ಶಾಲೆಯ ಗೋಡೆಯಲ್ಲಿ ಅರಳುತ್ತಿರವ ಕಲಾ ಚಿತ್ತಾರ

ನಿಮ್ಮ ಅಭಿಪ್ರಾಯ ಬರೆಯಿರಿ