ಕೋಡಿ - ಆನಗಳ್ಳಿ ಸೇತುವೆ: ತಪ್ಪು ಮಾಹಿತಿ. ಸಂಸದರಿಗೆ ಶಾಸಕ ಹಾಲಾಡಿ ಸವಾಲು

ಕುಂದಾಪುರ: ಕೋಡಿ-ಕುಂದಾಪುರ ಸಂಪರ್ಕ ಸೇತುವೆ, ಆನಗಳ್ಳಿ ಸೇತುವೆ ತನ್ನ ಪ್ರಯತ್ನದಿಂದ ಆಗಿದೆ ಎಂದು ಮಾಧ್ಯಮದ ಮುಖಾಂತರ, ಫ್ಲೆಕ್ಸ್, ಬ್ಯಾನರ್ ಮೂಲಕ ಪ್ರಚುರಪಡಿಸಿಕೊಳ್ಳುತ್ತಿರುವ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ದಾಖಲೆ ಇದ್ದರೆ ತೋರಿಸಲಿ. ಜನರಿಗೆ ತಪ್ಪು ಮಾಹಿತಿ ನೀಡಬಾರದು. ಸಂಸದರ ಪ್ರಯತ್ನದಿಂದ ಕಾಮಗಾರಿ ಮಂಜೂರಾಗಿದೆ ಅನ್ನುವುದಿದ್ದರೆ ಸಾರ್ವಜನಿಕ ಚರ್ಚೆಗೆ ತಾನು ಸಿದ್ಧ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸವಾಲು ಹಾಕಿದ್ದಾರೆ. ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೇತುವೆ ಮಂಜೂರಾತಿಗಾಗಿ ತಾವು ನಡೆಸಿದ ಪ್ರಯತ್ನದ ಬಗ್ಗೆ ದಾಖಲೆ ಬಹಿರಂಗಪಡಿಸಿ ಮಾತನಾಡಿದರು. 

ಪ್ರಥಮ ಬಾರಿಗೆ ಶಾಸಕನಾಗಿ ಆಯ್ಕೆಯಾದ ಸಂದರ್ಭ ಕೋಡಿ-ಕುಂದಾಪುರ ಸಂಪರ್ಕ ಸೇತುವೆ ಮಂಜೂರಾತಿಗಾಗಿ ಪ್ರಯತ್ನ ನಡೆಸಿದ್ದೆ. ಯೋಜನೆ ನಬಾರ್ಡ್‌ಗೆ ಸೇರ್ಪಡೆಗೊಂಡಿತ್ತು. ಕೋಡಿ ಪುರಸಭೆ ವ್ಯಾಪ್ತಿಗೆ ಬಂದಿದ್ದರಿಂದ ನಬಾರ್ಡ್ ಪ್ರಸ್ತಾವನೆ ಕೈ ಚೆಲ್ಲಿತು. ಬಳಿಕ 2006ರಲ್ಲಿ ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭ ಕೋಡಿ ರಸ್ತೆಯನ್ನು ಎಂಡಿಆರ್‌ಗೆ ಸೇರ್ಪಡೆಗೊಳಿಸಿ ಸೇತುವೆ ಮಂಜೂರು ಮಾಡಿಸಿಕೊಂಡೆ. ಗ್ಯಾಮನ್ ಇಂಡಿಯಾ ಕಂಪನಿ ಕಾಮಗಾರಿ ಆರಂಭಿಸಿತ್ತು. ಇದೇ ಸಂದರ್ಭ ದಿಲ್ಲಿಯಲ್ಲಿ ಕಂಪನಿಯ ಮೆಟ್ರೋ ಸೇತುವೆ ಕುಸಿದು ಬಿದ್ದುದರಿಂದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಯಿತು. ಕಂಪನಿ ಕಾಮಗಾರಿ ನಿಲ್ಲಿಸಿತು. ಬಳಿಕ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೋಡಿ ಸೇತುವೆಗೆ ಪುನರಪಿ ಮಂಜೂತು ಒದಗಿಸಿಕೊಟ್ಟೆ. ಪ್ರಸ್ತುತ 5.8 ಕೋಟಿ ರೂ. ವೆಚ್ಚದಲ್ಲಿ ಕೆಆರ್‌ಡಿಸಿಎಲ್ ಕಾಮಗಾರಿ ಆರಂಭಿಸಿದೆ. 

ಅದೇ ರೀತಿ ಆನಗಳ್ಳಿ ಸೇತುವೆ ಮಂಜೂರಾತಿಗಾಗಿ ಸಾಕಷ್ಟು ಹೋರಾಟ ನಡೆಸಿದ ಬಳಿಕ ಇದೀಗ ಕೆಆರ್‌ಡಿಸಿಎಲ್‌ನಿಂದ 5.67 ಕೋಟಿ ರೂ. ವೆಚ್ಚದಲ್ಲಿ ಮಂಜೂರಾತಿ ದೊರೆತಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ವಿವರಿಸಿದರು. 

ಮಾಜಿ ಸಚಿವ ಕೃಷ್ಣ ಪಾಲೇಮಾರ್ ಮತ್ತು ಆನಂದ ಆಸ್ನೋಟಿಕರ್ ಮೀನುಗಾರಿಕೆ ಸಚಿವರಾಗಿದ್ದ ಸಂದರ್ಭ ಅವರ ಮೇಲೆ ಒತ್ತಡ ಹೇರಿ ಹಂಗಾರಕಟ್ಟೆ, ಕೋಡಿಕನ್ಯಾಣ, ಕೋಡಿಯಲ್ಲಿ ಜೆಟ್ಟಿ ಮಂಜೂರು ಮಾಡಿಸುವಲ್ಲಿ ಶಕ್ತನಾಗಿದ್ದೆ. ವಿಷಯ ಹೀಗಿರುತ್ತಾ ಸಂಸದರ ಭಾವಚಿತ್ರ ಹೊಂದಿರುವ ಬ್ಯಾನರ್, ಫ್ಲೆಕ್ಸ್‌ಗಳಲ್ಲಿ ಈ ಎಲ್ಲ ಯೋಜನೆ ತಾನು ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಕಾಮಗಾರಿಗಳು ಅವರು ಸಂಸದರಾಗಿ ಆಯ್ಕೆಯಾಗುವ ಮೊದಲೇ ಮಂಜೂರುಗೊಂಡಿದ್ದವು.

ಜನರಿಗೆ ತಪ್ಪು ಮಾಹಿತಿ ನೀಡುವುದು ಪ್ರಜಾಸತ್ತಾತ್ಮಕ ನಡವಳಿಕೆಯಲ್ಲ. ಕನ್ನಂಬಾಡಿ ಕಟ್ಟೆ ಕಟ್ಟಿದ್ದು ಇಂಥವರೇ ಎಂದಿರುವಾಗ ನಾನು ಕಟ್ಟಿದ್ದು ಎಂದರೆ ಅದು ಹಾಸ್ಯಾಸ್ಪದ. ಸಂಸದರು ಈ ಎಲ್ಲ ಕಾಮಗಾರಿ ಮಂಜೂರಾತಿಗೆ ಶ್ರಮಿಸಿದ ಬಗ್ಗೆ ದಾಖಲೆಗಳಿದ್ದರೆ ಸಾರ್ವಜನಿಕವಾಗಿ ಅದನ್ನು ತೋರಿಸಲಿ. ಅದನ್ನು ಬಿಟ್ಟು ವೋಟ್‌ಬ್ಯಾಂಕ್ ರಾಜಕಾರಣಕ್ಕೆ ಅಡ್ಡ ದಾರಿ ಹಿಡಿಯುವುದು ಸರಿಯಲ್ಲ ಎಂದರು. 

ತಟಸ್ಥ ನಿಲುವು: ಲೋಕಸಭೆ ಚುನಾವಣೆ ಸಂದರ್ಭ ನಿಮ್ಮ ನಿಲುವೇನು ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾನು ಪಕ್ಷೇತರ ಶಾಸಕ. ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೃಪೆ: ವಿಜಯ ಕರ್ನಾಟಕ 

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com