ಸಂದರ್ಶನ: ನಮ್ಮ ಜೀವನದ ಶಿಲ್ಪಿಗಳು ನಾವೇ ಯಾಕಾಗಬಾರದು: ಡಾ. ಸುಬ್ರಮಣ್ಯ ಭಟ್

ಯುವಜನತೆ ಕಲೆ, ಸಾಹಿತ್ಯ, ಸಂಗೀತ ಹೀಗೆ ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕೆಂಬುದು ನನ್ನ ಇಂಗಿತ.  ಆದರ್ಶ ವ್ಯಕ್ತಿಯಾಗಿ ಬೆಳೆಯಲು ಯವ್ವನದಲ್ಲಿಯೇ ಒಂದು ಅಡಿಪಾಯವನ್ನು ಹಾಕಿಕೊಳ್ಳಬೇಕು. ಇನ್ಯಾರೋ ಬಂದು ನಮ್ಮ ಜೀವನವನ್ನು ರೂಪಿಸುತ್ತಾರೆ ಎಂದು ಹಂಬಲಿಸುವ ಬದಲಿಗೆ ನಮ್ಮ ಜೀವನದ ಶಿಲ್ಪಿಗಳು ನಾವೇ ಯಾಕಾಗಬಾರದು.
         ಕುಂದಾಪ್ರ ಡಾಟ್ ಕಾಂ ಕೆಲ ದಿನಗಳ ಹಿಂದೆ ನಡೆಸಿದ ಸಂದರ್ಶನದಲ್ಲಿ ಹೀಗೆ ಅರಳು ಹುರಿದಂತೆ ಮಾತನಾಡಿದವರು ಯುವ ಸಾಹಿತಿ, ಸಂಪಾದಕ ಡಾ. ಸುಬ್ರಮಣ್ಯ ಭಟ್ 
      ವೃತ್ತಿಯಲ್ಲಿ ವೈದ್ಯರಾಗಿ ಸಾಹಿತ್ಯವನ್ನು ತನ್ನ ಪ್ರವೃತ್ತಿಯನ್ನಾಗಿಸಿಕೊಂಡಿರುವ ಡಾ. ಸುಬ್ರಮಣ್ಯ ಭಟ್ ತನ್ನ ಪಿಯುಸಿ ದಿನಗಳಿಂದಲೇ ಸಾಹಿತ್ಯದೆಡೆದೆ ಅಪಾರ ಒಲವನ್ನು ಮೂಡಿಸಿಕೊಂಡವರು. ಬಿಎಸ್ಸಿ ಪದವಿಯ ಬಳಿಕ ಬಿಎಎಂಎಸ್ ವೈದ್ಯಕೀಯ ಪದವಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ರ್ಯಾಂಕನೊಂದಿಗೆ ಮುಗಿಸಿರುವ ಇವರು, ಸದ್ಯ ವ್ಯಾಲ್ಯೂ ಎಜುಕೇಶನ್ ಆ್ಯಂಡ್ ಸ್ಪಿರಿಚ್ವಾಲಿಟಿ ಎಂಬ ವಿಷಯದ ಕುರಿತಾಗಿ ಪಿಜಿ ಡಿಪ್ಲೋಮೊ ಹಾಗೂ ಇಂಗ್ಲಿಷ್ ಎಂ.ಎ. ಮಾಡುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಹಲವಾರು ಕವಿಗೋಷ್ಠಿಗಳಲ್ಲಿ ಭಾಗಿಯಾಗಿ ಬಹುಮಾನಗಳನ್ನು ಗಳಿಸಿರುವುದಲ್ಲದೇ, ಇತ್ತಿಚಿಗೆ ಮದ್ದಣ ಕಾವ್ಯ ಪ್ರಶಸ್ತಿಗಾಗಿ ಸುಮಾರು 70 ರಾಜ್ಯಮಟ್ಟದ ಕವಿಗಳು ಭಾಗವಹಿಸಿದ್ದ ಸ್ವರ್ಧೆಯಲ್ಲಿ ಇವರ 'ಮೌನ ತಳೆದ ಶಿಲೆಯು ನಾನು' ಕವನ ಸಂಕಲನ ಉತ್ತಮವಾದ ಎಂಟು ಕವನ ಸಂಕಲನಗಳ ಪೈಕಿ ಒಂದಾಗಿ ಮೂಡಿಬಂದಿತ್ತು.
     ಕಸಪಾ ಬೈಂದೂರು ಹೋಬಳಿ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಆರಟಿಐ ಕಾರ್ಯಕರ್ತರ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ, ಸಂವೇದನಾ ಟ್ರಸ್ಟ್ ನಾಯ್ಕನಕಟ್ಟೆಯ ಸ್ಥಾಪಕಾಧ್ಯಕ್ಷರಾಗಿ, ನಾಗರೀಕ ವೇದಿಕೆಯ ಸಂಘಟನಾ ಕಾರ್ಯದರ್ಶಿಯಾಗಿ, ಯಕ್ಷ ಚೇತನ ಬೈಂದೂರು ಇದರ ಕಾರ್ಯದರ್ಶಿದರ್ಶಿಯಾಗಿ ಜನಮಾನಸದಲ್ಲಿ ಪರಿಚಿತರಾಗಿರುವ ಡಾ. ಭಟ್, 'ಕಾಡುತಿಹುದಿ ರಂಗ ತರಂಗ', 'ಆತ್ಮಹತ್ಯೆ; ಒಂದು ಕ್ಷಣ ಯೋಚಿಸಿ ಮುಂತಾದ ಪುಸ್ತಕಗಳನ್ನು ಬರೆದಿರುವುದಲ್ಲದೇ ಜನಸ್ಪಂದನ ವಾರಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರೊಂದಿಗೆ ನಡೆಸಿದ ಸಂದರ್ಶನ ಪೂರ್ಣಪಾಠ ಇಲ್ಲಿದೆ.

* ಕನ್ನಡ ನಾಡು ನುಡಿ ಸಾಹಿತ್ಯ ಇವುಗಳ ಕುರಿತಾಗಿ ನಿಮ್ಮ ಒಟ್ಟಾರೆ ಅಭಿಪ್ರಾಯವೇನು?
 1900 ರ ಇಚೆಗೆ ನವೋದಯ, ನವ್ಯ, ದಲಿತ, ಪ್ರಗತಿಪರ, ಬಂಡಾಯ ಹುಟ್ಟಿಕೊಂಡು ಜೋತೆಗೆ ಬೆಳೆಯದೆ ಒಂದು ಮತ್ತೊಂದನ್ನು ಮೆಟ್ಟಿ ನಿಲ್ಲುವ ಪರಿಸ್ಥಿತಿ ಉದ್ಭವವಾಯಿತು. ನವೋದಯದಿಂದ ನವ್ಯಕ್ಕೆ ಬರುವಾಗ ಸಾಹಿತ್ಯ ಸಂಗೀತದ ಸ್ವಾದ ಕಳೆದುಕೊಂಡು ವಾಸ್ತವತೆಯ ಅಂಚಿಗೆ ಬಂದು ತಲುಪಿತು. ದಲಿತ, ಬಂಡಾಯ ಸಾಹಿತ್ಯಗಳಲ್ಲಿಯೂ ನಗ್ನ ಸತ್ಯಗಳನ್ನು ಬಿಂಬಿಸುವ ಪ್ರವೃತ್ತಿ ಮುಂದುವರಿಯಿತು. ವಾಸ್ತವವನ್ನು ಹೇಳುವುದರ ಜೊತೆಗೆ ಸಮಾಜದ ಸಾಮರಸ್ಯ ಒಡೆಯಲು ಕಾರಣವಾಯಿತು. ಸಮಾಜ ಸಂಕುಚಿತಗೊಳ್ಳಲು ಕಾರಣವಾಯಿತು. 
ಇಂದು ಯುವ ಲೇಖಕರು ಯಾವ ದೃಷ್ಟಿಕೋನವಿಟ್ಟುಕೊಂಡು ಬರೆಯಬೇಕು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಜಾತಿ, ಧರ್ಮಗಳ ನೆಲೆಯಲ್ಲಿ ಸಾಹಿತ್ಯ ಒಡೆಯುತ್ತಿದೆ. ಜಾತಿ ಜಾತಿಗೆ ಸಾಹಿತ್ಯದ ಮುಖಂಡ ಹುಟ್ಟಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಕ್ರೀಯಾಶಿಲತೆಯನ್ನು ಕಳೆದುಕೊಳ್ಳುತ್ತಿದೆ. ಸಾಹಿತಿಯಾಗಬೇಕೆಂದು ಬರೆಯುವ ವರ್ಗ ಹುಟ್ಟುತ್ತಿದೆಯೇ ಹೊರತು ಬರೆಯುವುದರಿಂದ ಸಾಹಿತಿಯಾಗುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದೆನಿಸುತ್ತದೆ.

* ಯುವಜನರಲ್ಲಿ ಸಾಹಿತ್ಯದ ಒಲವನ್ನು ಮೂಡಿಸಲು ಏನು ಮಾಡಬಹುದು?
ಪ್ರಶಂಸೆಗಾಗಿ ಸಾಹಿತ್ಯ ಬರೆಯದೇ ತಮ್ಮ ಅನಿಸಿಕೆ, ಅನುಭವದ ಆಧಾರದ ಮೇಲೆ ಬರೆದರೆ ಸಾಕು. ಬರೆಯುವುದರಲ್ಲಿ ಸ್ವತಂತ್ರತೆ ಹಾಗೂ ಹೊಸ ದೃಷ್ಟಿಕೋನದಿಂದ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.
ಪೀತ ಪತ್ರಿಕೋದ್ಯಮ ಸಾಹಿತ್ಯವನ್ನು ಅಳಿವಿಗೆ ಪರೋಕ್ಷವಾಗಿ ಸಹಕಾರಿಯಾಗುತ್ತಿದೆ. ಹೆಚ್ಚಿನ ಪೀತ ಪತ್ರಿಕೆಗಳು ಯುವ ಜನರ ಕೈಯಲ್ಲಿದ್ದರೂ ಅದು ಹೆದರಿಸಿ, ಬೆದರಿಸುವ ಮಾರ್ಗವನ್ನು ಹಿಡಿದದ್ದು ಕನ್ನಡ ಸಾಹಿತ್ಯಕ್ಕಾದ ದೊಡ್ಡ ಹಿನ್ನೆಡೆ. ಅವಕಾಶಗಳಿಗಾಗಿ ಕಾಯದೇ ಇರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಗುಣ ಯವಜನರದ್ದಾಗಬೇಕಿದೆ.

*ಪರಭಾಷಾ ಪ್ರಭಾವದಿಂದ ಕನ್ನಡ ನುಡಿ ಮತ್ತು ಸಾಹಿತ್ಯಕ್ಕೆ ಹಿನ್ನೆಡೆಯಾಗುತ್ತದೆ ಎಂಬುದನ್ನು ನೀವು ಒಪ್ಪುತ್ತಿರಾ?
ಬೇರೆ ಭಾಷಾ ಪ್ರಭಾವ ಸಾಮಾನ್ಯನ ಮೇಲಾಗುತ್ತದೆಯೇ ಹೊರತು, ಕವಿ ಹೃದಯಿಗಳಿಗಲ್ಲ. ಕನ್ನಡ ಹಲವಾರು ಗಣ್ಯ ಸಾಹಿತಿಗಳು ಪರಭಾಷೆಯನ್ನು ಪಾಂಡಿತ್ಯವನ್ನು ಹೊಂದಿದವರಾದರೂ ಅದರ ಪರಿಣಾಮ ಕನ್ನಡ ಸಾಹಿತ್ಯದ ಮೇಲಾಗಲಿಲ್ಲ. ಬದಲಾಗಿ ಬೇರೆ ಭಾಷೆಗಳಲ್ಲಿನ ಕೃತಿಗಳು ಕನ್ನಡಕ್ಕೆ ಅನುವಾದಗೊಳ್ಳಲು ಸಹಕಾರಿಯಾಯಿತು. ವಾಸ್ತವವಾಗಿ ಬೇರೆ ಭಾಷೆಯ ಪ್ರಭಾವ ನಮ್ಮ ಸಾಹಿತ್ಯವನ್ನು ಬೆಳೆಸುತ್ತದೆ. ಆದರೆ ಮತ್ತೊಂಡೆದೆ ಮೂಲ ಕನ್ನಡದ ಎಷ್ಟೋ ಶಬ್ಧಗಳನ್ನು ನಾವು ಕಳೆದುಕೊಂಡಿದ್ದೇವೆ ಎಂಬುದನ್ನು ಮರೆಯುವಂತಿಲ್ಲ. 

*ಸಾಹಿತ್ಯದಲ್ಲಿ ನೈತಿಕತೆ ಕಡಿಮೆಯಾಗುತ್ತಿದೆಯೇ?
ನಮ್ಮ ಜನ ನೈತಿಕತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಎಲ್ಲವೂ ಆಡಂಬರದ ಬದುಕಾಗಿದೆ. ನೈತಿಕತೆಯನ್ನು ಹುಡುಕುವ ಮನೋಭಾವವೇ ದೂರವಾಗಿ ಒಳ್ಳೆಯದನ್ನು ಒಳ್ಳೆಯದು, ಕೆಟ್ಟದ್ದನ್ನು ಕೆಟ್ಟದ್ದು ಎಂದು ಹೇಳುವ ಗುಣವನ್ನೇ ನಾವು ಕಳೆದು ಕೊಂಡಿದ್ದೇವೆ. 

*ಭಾಷೆಯ ಉಳಿವು ಅಳಿವು ಎಲ್ಲದಕ್ಕೂ ರಾಜಕೀಯ ಲೇಪ ಬಳಿಯಲಾಗುತ್ತಿದೆ ಎಂಬ ಮಾತನ್ನು ನೀವು ಒಪ್ಪುವಿರಾ?
ಆಡಳಿತದ ಸರಳಿಕರಣಕ್ಕೋಸ್ಕರ ಭಾಷಾ ಪ್ರಾಂತಗಳನ್ನು ಮಾಡಿಕೊಂಡಿದ್ದೇ ಹೊರತು ಬೇರಾವ ಉದ್ದೇಶದಿಂದಲ್ಲ. ಇದನ್ನೇ ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ. ಸಂಕುಚಿತ ಮನೋಭಾವ ಮತ್ತು ರಾಜಕೀಯ ಪ್ರೇರಿತ ಹೋರಾಟ ದೇಶದ ಐಕ್ಯತೆಗೆ ಧಕ್ಕೆ ಉಂಟುಮಾಡಿದೆ.

*ಕುಂದಾಪ್ರ ಕನ್ನಡದ ಕುರಿತಾಗಿ...
ಯಾವುದೇ ಪ್ರಭಾವಗಳಿಗೆ ಒಳಗಾಗದೇ ಜನರ ಬಾಯಿಂದ ಜನಜನಿತವಾದ ಅಚ್ಚಗನ್ನಡದ ಭಾಷೆ ಕುಂದಾಪ್ರ ಕನ್ನಡ. ಇದರ ಪರಿಶುದ್ಧತೆ ಬೇರೆ ಭಾಗಗಳಲ್ಲಿರುವ ಕನ್ನಡಕ್ಕಿಂತ ಹೆಚ್ಚಿದೆ. ಆದರೆ ನಮ್ಮ ಜನರಿಗೆ ಕುಂದಾಪ್ರ ಕನ್ನಡದಲ್ಲಿ ಮಾತನಾಡಲು ಹಿಂಜರಿಕೆ. ಪರಿಣಾಮವಾಗಿ ಅದು ಹೆಚ್ಚು ಗ್ರಾಂಥಿಕ ರೂಪವನ್ನು ಪಡೆಯುತ್ತಿಲ್ಲ. ಆದರೆ ನಮ್ಮ ಯಕ್ಷಗಾನ ಈ ಕನ್ನಡದ ಉಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು.


ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com