ದೆಹಲಿ: 31ನೇ ರಾಷ್ಟ್ರೀಯ ಕನ್ನಡ ಸಮ್ಮೇಳನಕ್ಕೆ ಚಾಲನೆ

ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಿಗಲಿ: ಡಾ. ಮೀನಾ ಚಂದಾವರ್‍ಕರ್

ದೆಹಲಿ, ಡಾ. ಲಲಿತಾ ರಾವ್ ವೇದಿಕೆ:  ಕಲೆ, ಸಂಸ್ಕಂತಿ ಪರಂಪರೆ ನೈಸರ್ಗಿಕ ವೈವಿಧ್ಯತೆಯನ್ನು ಹೊಂದಿರುವ ಕರ್ನಾಟಕ ಹಾಗೂ ಕನ್ನಡ ಭಾಷೆಗೆ ಕೇಂದ್ರ ಸರಕಾರ ಇತರ ಭಾಷೆಗಳಂತೆ ಅಗ್ರಗಣ್ಯ ಸ್ಥಾನ ದೊರಕಿಸಿಕೊಡಬೇಕಾಗಿದ್ದು ಸಂಘಟನಾ ಶಕ್ತಿಯ ಮೂಲಕ ಮಾತ್ರ ಕನ್ನಡಿಗರಿಗೆ ದೊರೆಯಬೇಕಾದ ಈ ಸ್ಥಾನಮಾನಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಬಿಜಾಪುರದ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಯದ ಕುಲಪತಿ ಡಾ. ಮೀನಾ ಚಂದಾವರ್‍ಕರ್ ಅಭಿಪ್ರಾಯಪಟ್ಟರು. 
          ಅವರು ದೆಹಲಿ ಕನ್ನಡಿಗ ಪತ್ರಿಕೆ  ಇಲ್ಲಿನ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ 31ನೇ ರಾಷ್ಟ್ರೀಯ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಭಾಷೆಗೆ 2000 ವರ್ಷಗಳ ಇತಿಹಾಸವಿದ್ದು, ನಮ್ಮ ಸಾಹಿತಿಗಳು ಶತ ಶತಮಾನಗಳಿಂದ ಕನ್ನಡ ಸಾಹಿತ್ಯವನ್ನು ಗಟ್ಟಿಗೊಳಿಸಿದ್ದಾರೆ. ನಮ್ಮಲ್ಲಿರುವ ಶಕ್ತಿಯ ಸಮಯೋಚಿತ ಬಳಕೆ ಸಾಹಿತ್ಯದಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.  ದೇಶದಲ್ಲಿ 70 ಪ್ರತಿಶತ ಯುವಕರಿದ್ದರೂ ಅವರು ಸಾಹಿತ್ಯದ ಕಾರ್ಯಕ್ರಮಗಳಿಂದ ದೂರವೇ ಉಳಿಯುವುದು ಬೇಸರದ ವಿಷಯವಾಗಿದ್ದು ಈ ಪರಿಸ್ಥಿತಿ ಬದಲಾಗಬೇಕಿದೆ ಎಂದರು.
        ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ, ಕೃಪಿ ವಿಜ್ಞಾನಿ ಡಾ. ಎಸ್. ಅಯ್ಯಪ್ಪನ್ ಮಾತನಾಡಿ ಕೆಲವು ವರ್ಷಗಳ ಹಿಂದೆ ದಿಲ್ಲಿಗೆ ಬಂದಾಗ ಇದ್ದ ಅಪರಿಚಿತತೆ ಇಂದು ದೂರವಾಗಿ ಸಂಘಟನೆಯ ಮೂಲಕ ಒಬ್ಬರನ್ನೊಬ್ಬರು ಸಂಧಿಸುವ ಅವಕಾಶ ದೊರೆತಿದೆ. ಹೊರನಾಡ ಕನ್ನಡಿಗ ಎಂಬ ಹೆಸರನ್ನು ಹೊತ್ತರೂ ಕೂಡ ಬೆಂಗಳೂರಿನ ತಿರುಗಾಡಿದ ನೆನಪುಗಳು ಇಂದಿಗೂ ಹಸಿಯಾಗಿದೆ. ಇಂದಿಗೂ ಕನ್ನಡದ ಪತ್ರಿಕೆ, ಸಾಪ್ತಾಹಿಕಗಳನ್ನು ಓದದಿದ್ದರೆ ಮನಸ್ಸು ಚಡಪಡಿಸುತ್ತೆ ಎಂದ ಅವರು ದಿಲ್ಲಿಯಲ್ಲಿಯೂ ಇಂದು ಕೃಷಿ ಭವನ ಹಾಗೂ ವಿದ್ಯಾರ್ಥಿ ಭವನವಾದರೆ ಕೃಷಿಕರಿಗೆ ಮತ್ತು ಕೃಷಿ ವಿಜ್ಞಾನದಲ್ಲಿ ಆಸಕ್ತಿ ತೋರಿ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾದಿತು. ಈ ಕುರಿತು ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
   
   ಸಮ್ಮೇಳನದಲ್ಲಿ ಟಿ. ಎ. ಪೈ ಸ್ಮಾರಕ ಶ್ರೇಷ್ಠ ಬ್ಯಾಂಕರ್ ಪ್ರಶಸ್ತಿಯನ್ನು ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಪಿ. ಜಯವಂತ ಭಟ್ ಅವರಿಗೆ, ಶ್ರೇಷ್ಠ ಸಾಮಾಜಿಕ ಸೇವಾ ಕಾರ್ಯಕರ್ತ ಪ್ರಶಸ್ತಿಯನ್ನು ಜಿ.ಕೆ.ವಿ.ಕೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಕೆ. ನಾರಾಯಣ ಗೌಡ ಅವರಿಗೆ, ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿಯನ್ನು ಕಾಠ್ಮಾಂಡು ಪಶುಪತಿ ದೇವಸ್ಥಾನದ ಮಾಜಿ ಮುಖ್ಯ ಅರ್ಚಕ ರಾವಲ್ ಅನಂತ ಪದ್ಮನಾಭ ಸೋಮಯಾಜಿ ಅವರಿಗೆ, ಶ್ರೇಷ್ಠ ದಿಲ್ಲಿ ಕನ್ನಡಿಗ ಪ್ರಶಸ್ತಿಯನ್ನು ದಿಲ್ಲಿ ಕಾಫೀ ಬೋರ್ಡನ ವಿಶೇಷಾಧಿಕಾರಿ ಡಾ. ವಿ. ಆರ್. ವಿ. ಆರ್ ಗುಡ್ಡೇಗೌಡ ಅವರಿಗೆ, ಹೊರನಾಡ ಕನ್ನಡತಿ ಪ್ರಶಸ್ತಿಯನ್ನು ವಾಷಿಂಗ್ಟನ್ ನಲ್ಲಿ ನೆಲೆಸಿರುವ ಡಾ. ಆರತಿ ಕೃಷ್ಣ ಅವರಿಗೆ, ಶ್ರೇಷ್ಠ ನೃತ್ಯಗುರು ಪ್ರಶಸ್ತಿಯನ್ನು ಪದ್ಮಾ ಸಂಪತ್ ಅವರಿಗೆ, ಶ್ರೇಷ್ಠ ಕನ್ನಡ ಸಂಘ ಪ್ರಶಸ್ತಿಯನ್ನು ದಿಲ್ಲಿ ಕನ್ನಡ ಮಹಿಳಾ ಸಂಘಕ್ಕೆ ಪ್ರದಾನ ಮಾಡಲಾಯಿತು.
      ಇದೇ ಸಂದರ್ಭದಲ್ಲಿ ಡಾ. ಎಚ್. ಎಸ್. ಪ್ರಭಾಕರ್, ಕೆ. ಟಿ. ಗಣೇಶ್, ದೀವಿತ್ ಭಟ್, ಮಂಜುನಾಥ ನಾಯಕ್, ಸುಜಾತ ನಾಯಕ ಮೊದಲಾದವರನ್ನು ಸನ್ಮಾನಿಸಲಾಯಿತು.
       ಕಾರ್ಯಕ್ರಮದಲ್ಲಿ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಆರ್. ಗೋವಿಂದ, ಕನ್ನಡ ಸಾಹಿತ್ಯ ಪರಿಷತ್ ಪರಿಷತ್ ನ ಕಾರ್ಯಕರ್ಶಿ ಸಂಗಮೇಶ ಬಾದವಾಡಗಿ, ದಿಲ್ಲಿ ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ. ಮಹೇಶ ಜೋಷಿ, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಆರ್. ಆರ್. ಹಂಚಿನಾಳ, ಅಮರಬಾಪು ಪತ್ರಿಕೆಯ ಸಂಪಾದಕ ಜೀರಿಗೆ ಲೋಕೇಶ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಮಾರಿ ಧ್ರುವಿ ಭಟ್ ಹಾಗೂ ಭಾಮಾ ಭಟ್ ಅವರ ಹಾಡಿನ ಮೂಲಕ ಕಾರ್ಯಕ್ರಮ ಶುಭಾರಂಭಗೊಂಡಿತು.
         ಕೆಮ್ತೂರು ಡೊಡ್ಡಣ್ಣ ಶೆಟ್ಟರ ಸಮಗ್ರ ಕಾವ್ಯ ಪುಸ್ತಕವನ್ನು ಸಮ್ಮೇಳನಾಧ್ಯಕ್ಷ ಡಾ. ಅಯ್ಯಪ್ಪನ್, ದೆಹಲಿ ಕನ್ನಡಿಗ ವಿಶೇಷ ಸಂಚಿಕೆಯನ್ನು ಡಾ. ಮಹೇಶ್ ಜೋಷಿ ಬಿಡುಗಡೆಗೊಳಿಸಿದರು. 
ಸಮ್ಮೇಳನ ಉದ್ಘಾಟಿಸಿದ ಡಾ. ಮೀನಾ ಚಂದಾವರ್‍ಕರ್ ಹಾಗೂ ಸಮ್ಮೇಳನಾಧ್ಯಕ್ಷ ಡಾ. ಎಸ್. ಅಯ್ಯಪ್ಪನ್ ಅವರನ್ನು ಸನ್ಮಾನಿಸಲಾಯಿತು.
          ಸಮ್ಮೇಳನದ ರೂವಾರಿ ಬಾ. ಸಾಮಗ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಸುನಿಲ್ ಬೈಂದೂರು,  ಪೋಟೋಗಳು: ಶೇಖರ ಅಜೆಕಾರು

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com