ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳ ನಡುವೆ ಸೆಣಸಾಟ

ಕುಂದಾಪುರ: ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಚುನಾವಣೆಯಲ್ಲಿ ಚುನಾವಣಾ ಕಣ ರಂಗೇರಿದ್ದು ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.  ಸಂಸದ ಜಯಪ್ರಕಾಶ್ ಹೆಗ್ಡೆ ತನ್ನ ಜನಸಂಪರ್ಕ ಮಾದರಿ ಹಾಗೂ ಸಾಧನೆಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಓಲೈಸಿದ್ದರೇ, ಮಾಜಿ ಸಚಿವೆ, ಬಿಜೆಪಿಯ ಏಕೈಕ ಮಹಿಳಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮೋದಿ ಅಲೆ ಹಾಗೂ ತನ್ನ ರಾಜಕೀಯ ಅಸ್ತ್ರಗಳನ್ನು ಉಪಯೋಗಿಸಿ ಮತದಾರರ ಗಮನ ಸೇಳೆಯಲೆತ್ನಿಸಿದ್ದಾರೆ. ಜೆಡಿಎಸ್ ನಿಂದ ಸ್ವರ್ಥಿಸುತ್ತಿರುವ ಧನಂಜಯ್ ಕುಮಾರ ಗೆಲ್ಲಲು ಹಲವು ಕಸರತ್ತು ನಡೆಸಿದ್ದಾರೆ.

 ಮಲೆನಾಡು, ಬಯಲುಸೀಮೆ ಮತ್ತು ಕರಾವಳಿ ಪ್ರದೇಶಗಳನ್ನೊಳಗೊಂಡ ಲೋಕಸಭಾ ಕ್ಷೇತ್ರ ಉಡುಪಿ-ಚಿಕ್ಕಮಗಳೂರು. ಮೊದಲಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಕುತೂಹಲದ ಕ್ಷೇತ್ರವಾಗಿದೆ. ಒಂದೆಡೆ ಸೆಕೆ, ಮತ್ತೊಂದೆಡೆ ತಂಪಿನ ಭೂಬಾಗ, ಸಂಸ್ಕೃತಿಗಳು ಭಿನ್ನ, ಉಡುಪಿ ಜಿಲ್ಲೆ ತೆಂಗು ಬೆಳೆಗೆ ಹೆಸರಾದರೆ, ಚಿಕ್ಕಮಂಗಳೂರು ಜಿಲ್ಲೆ ಕಾಫಿ, ಅಡಿಕೆ ಬೆಳೆಗೆ ಹೆಸರಾಗಿದೆ. ಈ ಕ್ಷೇತ್ರದ ಮಹಿಮೆ ಅಪಾರ. ಎಂತೆಂಥವರನ್ನೋ ಗೆಲ್ಲಿಸಿದೆ; ಎಂತೆಂಥವರನ್ನೋ ಸೋಲಿಸಿದೆ. 

ಶೋಭಾ ಗೆಲುವಿನ ಸಾಧ್ಯತೆ? ಇದರ ಹೊರತಾಗಿ, ವೈಯಕ್ತಿಕವಾಗಿ ಶೋಭಾ ಹೆಗ್ಗಳಿಕೆ ಏನು? ಅಂತ ನೋಡಿದಾಗ ಶೋಭಾ ಇದೇ ಕರಾವಳಿಯ ಕೂಸು. ಜತೆಗೆ, ಆರೆಸ್ಸೆಸ್ ಕೂಸು ಸಹ. ಬಿಜೆಪಿ ಮತ್ತು ಆರೆಸ್ಸೆಸ್ ಅತ್ಯಂತ ಸಕ್ರಿಯವಾಗಿರುವ ಕ್ಷೇತ್ರದಲ್ಲಿ ಸಂಘ ಪರಿವಾರದಲ್ಲಿ ಆರಂಭದ ದಿನಗಳಿಂದಲೂ ಚೆನ್ನಾಗಿ ಗುರುತಿಸಿಕೊಂಡವರು. ಜಾತಿ ಸಮೀಕರಣದಲ್ಲೂ ಇವರದು ಮೇಲುಗೈ. ಜತೆಗೆ ಯಡಿಯೂರಪ್ಪನವರ ಶ್ರೀರಾಮರಕ್ಷೆ ಇದೆ. ಇದಕ್ಕೆಲ್ಲ ಪುಟವಿಟ್ಟಂತೆ ಮೋದಿ ಅಲೆಯೂ ಬಲವಾಗಿ ಬೀಸುತ್ತಿದೆ. ಇದೆಲ್ಲದರ ಜೋತೆಗೆ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಬೆಂಬಲಿಗರು ಬಿಜೆಪಿ ಅಭ್ಯರ್ಥಿಯ ಪರ ನಿಂತಿರುವುದು ಶೋಭಾಗೆ ಬಲಬಂದಂತಾಗಿದೆ.

ಹೆಗ್ಡೆ ಗೆಲುವು?: ಸುಮಾರು 37 ವರ್ಷಗಳ ರಾಜಕೀಯ ಅನುಭವ ಹೊಂದಿರುವ ಹೆಗ್ಡೆ ಸದಾ ಜನಸಂಪರ್ಕದಲ್ಲಿರು ರಾಜಕಾರಣಿಯಾಗಿ ಗುರುತಿಸಿಕೊಂಡಿರು ಜಯಪ್ರಕಾಶ್ ಹೆಗ್ಡೆಯವರು ಉಪಚುನಾವಣೆಯ ಬಳಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳೇ ಅವರಿಗೆ ವರವಾಗದೇ ಇರದು.  ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ 2009ರಲ್ಲಿ ಡಿವಿ ಸದಾನಂದ ಗೌಡರು ನಿರಾಯಾಸವಾಗಿ ಗೆದ್ದುಬಂದಿದ್ದರು. ಆದರೆ ತಮ್ಮ ಗೆಲುವಿಗೆ ಕಾರಣವಾಗಿದ್ದವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ತಾವೇ ಮುಖ್ಯಮಂತ್ರಿಯಾದರು. ತತ್ಫಲವಾಗಿ ಉಪಚುನಾವಣೆ ನಡೆದಾಗ ಕಾಂಗ್ರೆಸ್ಸಿನ ಸಜ್ಜನ ಜಯಪ್ರಕಾಶ್ ಹೆಗ್ಡೆ ಅವರಿಗೆ ಬೆಳ್ಳಿತಟ್ಟೆಯಲ್ಲಿ ಕ್ಷೇತ್ರವನ್ನು ಕಾಣಿಕೆಯಾಗಿ ನೀಡುವಂತ ಪರಿಸ್ಥಿತಿಯನ್ನು ಬಿಜೆಪಿ ತಂದುಕೊಂಡಿತು. 2012ರಲ್ಲಿ ಕೆ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯ ವಿ ಸುನೀಲ್ ಕುಮಾರ್ ವಿರುದ್ಧ ಹೆಚ್ಚು ಪ್ರಯಾಸ ಪಡದೇ ಗೆದ್ದರು.

ಮಹಿಳೆಯರ ಪ್ರಬಲ್ಯ: ಉಡುಪಿ ಮತ್ತು ಚಿಕ್ಕಮಗಳೂರು ಪ್ರತ್ಯೇಕ ಕ್ಷೇತ್ರಗಳಲ್ಲಿ ಪ್ರಬುದ್ಧ ಮತದಾರರು ಇದುವರೆಗೂ ನಾಲ್ಕು ಬಾರಿ ಮಹಿಳೆಯರನ್ನು ಆರಿಸಿ, ಕಳುಹಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ 1978ರಲ್ಲಿ ಸಂಸದರಾಗಿದ್ದ ಡಿಬಿ ಚಂದ್ರೇಗೌಡರು ರಾಜೀನಾಮೆ ನೀಡಿ, ಇಂದಿರಾಗಾಂಧಿ ಸ್ಪರ್ಧೆಗೆ ಅವಕಾಶ ನೀಡಿ, ಅವರ ರಾಜಕೀಯ ಪುನರ್ಜನ್ಮಕ್ಕೆ ತ್ಯಾಗ ಮಾಡಿದ್ದರು. ಅದಾದನಂತರ, 1984ರಲ್ಲಿ ಕಂಗ್ರೆಸ್ಸಿನ ಡಿಕೆ ತಾರಾದೇವಿ ಸಿಪಿಐನ ಬಿಕೆ ಸುಂದರೇಶ್ ವಿರುದ್ಧ ಗೆಲುವು ಸಾಧಿಸಿದ್ದರು. ಮತ್ತೆ, 1991ರಲ್ಲಿ ತಾರಾದೇವಿ, ಬಿಜೆಪಿಯ ಡಿಸಿ ಶ್ರೀಕಂಠಪ್ಪ ಅವರನ್ನು ಸೋಲಿಸಿದ್ದರು. ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಿಂದ 4 ಬಾರಿ ಮಹಿಳೆಯರು 2004ರಲ್ಲಿ ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮನೋರಮಾ ಮಧ್ವರಾಜ್ ಕಾಂಗ್ರೆಸ್ಸಿನ ವಿನಯಕುಮಾರ್ ಸೊರಕೆಯನ್ನು ಮಣಿಸಿದ್ದರು. ಒಟ್ಟಿನಲ್ಲಿಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಿಂದ ನಾಲ್ಕು ಬಾರಿ ಮಹಿಳೆಯರು ಗೆದ್ದಿದ್ದಾರೆ. ಮಾತ್ರವಲ್ಲ ರಾಜ್ಯದಲ್ಲೇ ಹೆಚ್ಚು ಮಹಿಳಾ ಮತದಾರರಿರುವ ಕ್ಷೇತ್ರ ಇದಾಗಿದೆ

ಒಟ್ಟಿನಲ್ಲಿ ಈ ಬಾರಿಯೂ ಜಯಪ್ರಕಾಶ್ ಹೆಗ್ಡೆ ಅವರು ಅದೇ ಗೆಲುವನ್ನು ಸಾಧಿಸುತ್ತಾರಾ? ಅಥವಾ ಮೋದಿ ಅಲೆ ಮೋಡಿ ಮಾಡುತ್ತಾ? ಮತದಾರರು ನೀಡುವ ತೀರ್ಪು ಹೇಗಿರುತ್ತೆ ಕಾದು ನೋಡಬೇಕಾಗಿದೆ.