ವಸಂತ ಭಾರ್ಗವಿ ಖ್ಯಾತಿಯ ಯಕ್ಷ ಕವಿ ರಮೇಶ್ಮಂಜು ಕುಂಭಾಸಿ

     ‘ಶಿರಿಯಾರ ಮಂಜು ನಾಯ್ಕ’  ಯಕ್ಷ ಪ್ರೇಮಿಗಳ ಮನೋಪಟಲದಿಂದ ಮರೆಯಾಗದ ನೆನಪು. ಪರಶುರಾಮನ ವೇಷದಲ್ಲಿಯೇ ರಂಗದಲ್ಲಿ ಅ.31 -1982ರಲ್ಲಿ ನಿರ್ಯಾಣ ಆದಂತಹ ಕಲಾಚೇತನ. ಯಕ್ಷರಂಗಕ್ಕೊಂದು ಭವ್ಯ ತಳಗಟ್ಟನ್ನು ಹಾಕಿಕೊಟ್ಟ ಮಂಜುನಾಯ್ಕರ ನಂತರ ಅವರ ಕುಡಿ ಯಕ್ಷರಂಗಕ್ಕೆ ಸಾಹಿತ್ಯ ಸೇವೆ ನೀಡುತ್ತಾ ಬರುತ್ತಿದೆ. ಹೌದು. ತಂದೆಯ ಯಕ್ಷರಂಗದ ವೇಷಗಳಿಂದ ಸ್ಪೂರ್ತಿಗೊಂಡು ರಂಗಕ್ಕೆ ತನ್ನದೇಯಾದ ಸೇವೆ ನೀಡಲು ಹೊರಟಿದ್ದು ಅವರ ಸುಪುತ್ರ ರಮೇಶ್ಮಂಜು ಕುಂಭಾಶಿ.
ವಸಂತ ಭಾರ್ಗವಿಯನ್ನು ಯಾರು ತಾನೇ ಮರೆತಾರು. ಗಟ್ಟಿ ಕಥೆಯ ಸುಂದರ ಕಥಾನಕ.  ಗ್ರೀಕ್ ಕಥೆಯೊಂದರ ಸ್ಪೂರ್ತಿಯಿಂದ ರಚಿತವಾದ ವಸಂತ ಭಾರ್ಗವಿ ರಂಗಸ್ಥಳದಲ್ಲಿ ಒಂದು ಸಂಚಲನ ಮೂಡಿಸಿತ್ತು. ಪೆರ್ಡೂರು ಮೇಳದ ಆವತ್ತಿನ ಗಲ್ಲಾ ಪೆಟ್ಟಿಗೆ ತುಂಬಿಸಿ ಶತಕ ಬಾರಿಸಿದ ಕಲಾಕೃತಿ. ಇಂಥಹ ಹಲವಾರು ಪ್ರಸಂಗಗಳನ್ನು ನೀಡಿದ ರಮೇಶ್ಮಂಜು ಇವತ್ತು ಪ್ರಬುದ್ದ ಯಕ್ಷಕವಿ. ಸುಮಾರು 12 ಪ್ರಸಂಗಳನ್ನು ರಚಿಸಿರುವ ಇವರು ಎಲ್ಲಾ ಪ್ರಸಂಗಗಳನ್ನು ಪ್ರಸಿದ್ದ ಮೇಳಗಳಿಗೆ ನೀಡಿ, ಪ್ರಜ್ಞಾವಂತ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಲಿಗ್ರಾಮ ಮೇಳದಿಂದ ಪ್ರಾರಂಭವಾದ ಇವರ ಯಕ್ಷಗಾಥೆ ಮತ್ತೆ ಈ ಬಾರಿ ‘ಅರುಂಧತಿ’ಯನ್ನು ಸಾಲಿಗ್ರಾಮ ಮೇಳಕ್ಕೆ ನೀಡುವ ಮೂಲಕ ಗಮನ ಸಳೆದಿದ್ದಾರೆ.
‘ಬಾಲ್ಯದಲ್ಲಿ ಯಕ್ಷಗಾದ ಬಗ್ಗೆ ಅಗಾಧ ಆಸಕ್ತಿ ಇರಲಿಲ್ಲ. ಆಸುಪಾಸಿನಲ್ಲಿ ನಡೆಯುತ್ತಿದ್ದ ತಂದೆಯವರ ಕಾರ್ಯಕ್ರಮಕ್ಕೆ ಹೋಗಿ ಬರುತ್ತಿದ್ದೆ. ನನಗಷ್ಟಾಗಿ ಅದು ಅರ್ಥವಾಗುತ್ತಿರಲಿಲ್ಲ. ಮನೆಯಲ್ಲಿ ಇದ್ದಾಗ ಇಡೀ ದಿನ ತಂದೆ ಓದುತ್ತಿದ್ದ ಪುಸ್ತಕಗಳನ್ನು ಕೂತುಹಲದಿಂದ ನೋಡುತ್ತಿದ್ದೆ. ಅವರ ಪುಸ್ತಕಗಳನ್ನು ಕದ್ದು ಓದಲು ಪ್ರಾರಂಭಿಸಿದೆ. ಕಾಳಿಂಗ ನಾವಡರ ಯುಗ ಶ್ರೇಷ್ಠ ಭಾಗವತರ ಪದ್ಯಗಳಿಗೂ ಆ ಪುಸ್ತಕಗಳ ಪುಸ್ತಕಗಳ ಪದ್ಯಗಳಿಗೂ  ಸಂಬಂಧ ಅರ್ಥವಾಗುತ್ತಿದ್ದಂತೆ ನಾನೇ ಪ್ರಸಂಗ ಬರೆಯಬೇಕೆಂದುಕೊಂಡೆ. ಕಥೆಯೊಂದನ್ನು ಬರೆದು ತಂದೆಯವರ ಕೈಗಿತ್ತಾಗ, ತಂದೆಯವರು, ‘ನೀನು ವಿದ್ಯಾಬ್ಯಾಸ ಮುಂದುವರಿಸುವನೋ, ಮೇಳಕ್ಕೆ ಬರುವವನೋ? ಪ್ರಶ್ನೆ ಇಟ್ಟರು. ಅವರ ಪ್ರಶ್ನೆಯಲ್ಲಿ ತಾರ್ಕಿಕ ಅರ್ಥವಿತ್ತು’ ಎಂದು ಬಾಲ್ಯ ನೆನಪಿಸಕೊಳ್ಳುವ ರಮೇಶ್ಮಂಜು ಅವರನ್ನು ಯಕ್ಷಮಾತೆ ದೂರ ಮಾಡಲಿಲ್ಲ. ಯಕ್ಷಗಾನ ಅವರನ್ನು ಕೈ ಬೀಸಿ ಕರೆಯಿತು. ಹೆಜ್ಜೆ ಕಲಿತು ಗೆಜ್ಜೆಕಟ್ಟಿ ಕುಂಭಾಶಿ ವಿನಾಯಕ ದೇವಸ್ಥಾನದಲ್ಲಿ ಕುಣಿದೇ ಬಿಟ್ಟರು.
ಭಾಗವತ ಐರೋಡಿ ರಾಮಗಾಣಿಗರ ಶಿಷ್ಯನಾಗಿ ತಾಳಹಿಡಿದರು.ಹೆಜ್ಜೆಗಾರಿಕೆಯನ್ನು ಕರತಮಲಕ ಮಾಡಿಕೊಂಡ ಇವರು, ಗುರುವಿನ ಜೊತೆಯಲ್ಲಿ ಸಂಗೀತಗಾರರಾಗಿ ಕುಂಭಾಶಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಹಾಡಿದರು. ಅಂದೇ ಕೃಷ್ಣ ವೇಷವನ್ನು ಮಾಡಿ ಪ್ರೇಕ್ಷಕರ ಮೋಡಿ ಮಾಡಿದರು. ಹೀಗೆ ಹವ್ಯಾಸಿ ಕಲಾವಿದರಾಗಿ ಹಲವಾರು ಪಾತ್ರಗಳನ್ನು ಮಾಡಿದರು. ಭೀಷ್ಮ, ಅರ್ಜುನ, ಬ್ರಹ್ಮ, ಭದ್ರಸೇೀನ, ಹೀಗೆ ತನಗೆ ಬಂದ ಪಾತ್ರಗಳಿಗೆ ಜೀವ ನೀಡಿದರು. ಪಾತ್ರಗಳನ್ನು ಸಚೇತನವಾಗಿಸಿದರು. ಶ್ರೀದೇವಿ ಬನಶಂಕರಿಯ ‘ಸುಧೀರ’, ಅಮಾತ್ಯ ನಂದಿನಿ ‘ಆಮರ’ ಹೀಗೆ ನೂತನ ಪ್ರಸಂಗಳಲ್ಲಿಯೂ ಮಿಂಚಿದರು. ನಿರ್ದೇಶನದಲ್ಲಿಯೂ ಸೈ ಎನಿಸಿಕೊಂಡರು.
ಕುಂದಾಪುರದ ಭಂಡಾರ್ಕಾಸ್ ಕಾಲೇಜಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದ ಇವರಲ್ಲಿನ ಯಕ್ಷಸಾಹಿತ್ಯ ಒಂದು ದಿನ ಸ್ಪೋಟಗೊಂಡೇ ಬಿಟ್ಟಿತ್ತು. ಅದುವೇ ‘ಸುಗುಣೆ ಶಾಂಭವಿ’ಯ ಮೂಲಕ. ಸಾಲಿಗ್ರಾಮ ಮೇಳಕ್ಕೆ ಇವರ ಮೊದಲ ಪ್ರಸಂಗ ವೇದಿಕೆ ಏರಿತು. ಹೇರಂಜಾಲು ಗೋಪಾಲ ಗಾಣಿಗರ ಸಹಕಾರದಿಂದ, ಕಿಶನ್ ಹೆಗ್ಡೆಯವರ ಸಹಕಾರದಿಂದ ಡೇರೆ ಮೇಳದಲ್ಲಿಯೇ ಇವರ ಪ್ರಥಮ ಪ್ರಸಂಗ ಬೆಳಕು ಕಂಡಿತು.
ಇವರಿಗೆ ಹೆಸರು, ಖ್ಯಾತಿ ತಂದುಕೊಟ್ಟಿದ್ದು ವಸಂತ ಭಾರ್ಗವಿ. ಪೆರ್ಡೂರು ಮೇಳದಲ್ಲಿ ಈ ಪ್ರಸಂಗ ಶತದಿನೋತ್ಸವವನ್ನು ಆಚರಿಸಿಕೊಂಡಿತ್ತು. ಮೇಳದ ಯಜಮಾನರಾದ ವೈ.ಕರುಣಾಕರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಈ ಆಖ್ಯಾನ ವಿಶೇಷ ಪ್ರಚಾರವನ್ನು ತಂದುಕೊಟ್ಟಿತ್ತು. ಸ್ಟಾರ್‍ವ್ಯಾಲ್ಯೂ ಪ್ರಸಂಗಕರ್ತರನ್ನಾಗಿ ರೂಪಿಸಿದ್ದು ಇದೇ ವಸತಂತ ಭಾರ್ಗವಿ. ನಂತರದ ದಿನಗಳಲ್ಲಿ ರಮೇಶ್ಮಂಜು ಅವರ ಮೌಲ್ಯಯುತ ಕಲಾಕುಸುಮಗಳು ರಂಗಕ್ಕೆ ಬಂದವು. ನಾದ ನೈದಿಲೆ ಸಾಕಷ್ಟು ಪ್ರದರ್ಶನಗಳನ್ನು ಕಂಡರೆ. ಸ್ವರ್ಣ ಮಂದಾರ, ವಸಂತ ವರ್ಷಿಣಿ, ಮಧು ಮಯೂರಿ, ರಮ್ಯ ರಂಗಿಣಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿಯಲ್ಪಟ್ಟಿವೆ. ಚಿತ್ತಚಂಚಲೆ ಉತ್ತಮ ಕಥಾವಸ್ತು, ಸರಾಗ ನಿರೂಪಣಾ ಶೈಲಿ ಹೊಂದಿದ್ದರೂ ಹೆಚ್ಚು ಪ್ರದರ್ಶನ ಕಾಣದ ಬಗ್ಗೆ ರಮೇಶ್ಮಂಜು ಅವರಲ್ಲಿ ಸಣ್ಣ ಬೇಸರವಿದೆ.  1990ರಲ್ಲಿ  ಸುಗುಣೆ ಶಾಂಭವಿ ರಂಗ ಭಾಗ್ಯ ಕಂಡಿದ್ದು, ಮತ್ತೆ ಸುದೀರ್ಘ ಅವಧಿಯ ನಂತರ ಈ ಭಾರಿ ಅರುಂದತಿಯನ್ನು ಸಾಲಿಗ್ರಾಮ ಮೇಳಕ್ಕೆ ನೀಡಿದ್ದಾರೆ.
ಕಂದಾವರ ಪದ್ಯರಚನಾ ಶೈಲಿಯನ್ನು ಇಷ್ಟ ಪಡುವ ರಮೇಶ್ಮಂಜು ಪ್ರಸಂಗಕರ್ತ ದಿ.ಡಾ.ವೈ.ಚಂದ್ರಶೇಖರ ಶೆಟ್ಟಿಯವರ ಪ್ರೋತ್ಸಾಹವನ್ನು  ಸದಾ ಸ್ಮರಿಸಿಕೊಳ್ಳುತ್ತಾರೆ. ಯಕ್ಷಗಾನದ ಬಗ್ಗೆ ಚಿಕಿತ್ಸಕ ದೃಷ್ಟಿಕೊನ, ದೂರಗಾಮಿ ಚಿಂತನೆಯನ್ನು ಹೊಂದಿರುವ ಇವರು, ಯಕ್ಷ ಸಂವಿಧಾನದಲ್ಲಿಯೇ ಪ್ರಸಂಗ ರಚನೆ ಮಾಡುತ್ತಾರೆ. ನವರಸಗಳಿಗೂ  ರಂಗದಲ್ಲಿ ಅವಕಾಶ ಕಲ್ಪಿಸುವಂಥಹÀ ಪಾತ್ರ ಔಚಿತ್ಯತೆ ಇವರ ಕೃತಿಗಳಲ್ಲಿ ಕಾಣಬಹುದು. ಸರಳವಾದ ಛಂದೋಬದ್ಧ ಪದ್ಯ ಶೈಲಿ, ಸಾಂಪ್ರಾದಾಯಿಕ ರಾಗಗಳಿಗೆ ಹೆಚ್ಚು ಒತ್ತುಕೊಡುವ ವಿಶೇಷತೆ, ಪದ್ಯಗಳಲ್ಲಿ ಸುಲಲಿತತೆ, ಸರಳ ಮಾತ್ರೆಗಳ ಬಳಕೆ, ಪಲ್ಲವಿ ಪುನರುಚ್ಛಾರಕ್ಕೆ ನೇರ್ಪುಗೊಳಿಸಿದಂತಿರುತ್ತದೆ. ಗಟ್ಟಿಕತೆಗೆ ಪೂರಕವಾಗಿ ನವಿರು ಹಾಸ್ಯದಿಂದಲೇ ಇವರ ಕೃತಿಗಳು ಇಷ್ಟವಾಗುತ್ತವೆ.
ಕುಂಭಾಶಿಯಲ್ಲಿ ಶಿರಿಯಾರ ಮಂಜು ನಾಯಕ್-ಲಕ್ಷ್ಮೀ ದಂಪತಿಗಳ ಪುತ್ರರಾಗಿ ಜನಿಸಿದ ರಮೇಶ್ಮಂಜು  ಸರಳ ಸಜ್ಜನಿಕೆಯ, ನಿರಾಡಂಬರ ವ್ಯಕ್ತಿತ್ವದ ಸ್ನೇಹಜೀವಿ. ಪತಿಯ ಕಲಾಸಿರಿಯನ್ನು ಪ್ರೋತ್ಸಾಹಿಸುವ ಸಹಧರ್ಮಿಣಿ ಸುಧಾ, ದಾಂಪತ್ಯ ಗೀತೆಗೆ ಅರ್ಥತಂದ ಉಭಯ ಪುತ್ರಿಯರಾದ ಮಧುರಾ, ಸಿಂಧೂರ. ಸಂತೃಪ್ತಿಯ ಕುಟುಂಬ ಇವರದ್ದು.  ತಂದೆ ಶಿರಿಯಾರ ಮಂಜು ನಾಯ್ಕರ ಸಂಸ್ಮರಣ ಗ್ರಂಥ ‘ಶಿರಿಯಾರದ ಸಿರಿ’ಯ ಕೃತಿಕಾರ್ಯ ನಿರ್ವಹಣೆಯನ್ನು ನಿಭಾಯಿಸಿರುವ ಇವರ ಇವರ ಪ್ರತಿಭಾ ಸಿರಿಗೆ ಹಲವು ಸನ್ಮಾನ ಗೌರವಗಳು ಸಂದಿವೆ. ಮೊಗವೀರ ಸಂಘ ಬೆಂಗಳೂರು, ಕುಂಭಾಶಿಯ ಸಮಸ್ತ ನಾಗರಿಕರು, ಬಸವರಾಜ್ ಶೆಟ್ಟಿಗಾರ್ ಅಭಿಮಾನಿ ಬಳಗ ಬಳ್ಕೂರು, ಮುಂಬಾಯಿಯ ಬಂಟ್ಸ್ ಅಸೋಸಿಯೇ¸ನ್ ಪೆರ್ಡೂರು ಮೇಳದ ರಜತ ಸಂಭ್ರಮ ಸಮಿತಿ, ಹೀಗೆ ಹಲವು ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. ಹಲವಾರು ಬಾರಿ ಇವರ ಪ್ರಸಂಗ ಪ್ರದರ್ಶನ ಸಂದರ್ಭ ಕಾರ್ಯಕ್ರಮ ವ್ಯವಸ್ಥಾಪಕರು ಸನ್ಮಾನಿಸಿದ್ದಾರೆ. ಶಿರಿಯಾರದ ಸಿರಿಯಂತೆ ಯಕ್ಷ ಸೇವೆ ಮಾಡುತ್ತಿರುವ ರಮೇಶ್ಮಂಜುರವರ ಲೇಖನಿಯಿಂದ ಇನ್ನೂ ಅಸಂಖ್ಯ ಕೃತಿರತ್ನಗಳು ಹೊರಬರಲಿ.
ಸುಗುಣೆ ಶಾಂಭವಿ, ನಾದ ನೈದಿಲೆ, ವಸಂತ ಭಾರ್ಗವಿ, ರಮ್ಯ ರಂಗಿಣಿ, ಸ್ವರ್ಣ ಮಂದಾರ, ಚಿತ್ತ ಚಂಚಲೆ, ಮಧು ಮಯೂರಿ, ರಂಗ ಪುತ್ಥಳಿ, ಇವು ರಮೇಶ್ಮಂಜು ಅವರ ಜನಪ್ರಿಯ ಪ್ರಸಂಗಗಳು. ‘ಅರುಂಧತಿ’ ಹೆಣ್ಣೋಬ್ಬಳ ಚಂಚಲ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಕೃತಿ.  ಸದ್ಯ ಪದ್ಮ ರೇಖಾ ಎನ್ನುವ ಪ್ರಸಂಗವೊಂದರÀ ರಚನೆಯಲ್ಲಿ ತೊಡಗಿದ್ದಾರೆ.

ಲೇಖನ-ನಾಗರಾಜ ಬಳಗೇರಿ,
ಪತ್ರಕರ್ತರು


ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com
Kundapra.com Yakshaga our culture, Yakshaga Story Writer Ramesh Manja Kumbashi. Kumbashi, Anegudde Vinayaka Temple, Kundapra dot com, www.kundapra.com