ಕುಂದಾಪುರ: ಬಣ್ಣದ ಲೋಕವೆಂದರೆ ಹಾಗೇ. ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ಕಾರಣಕ್ಕೆ ಆಕರ್ಷಿಸಿಬಿಡುತ್ತದೆ. ಅದರ ಒಂದೊಂದು ಮಜಲನ್ನೂ ಒಬ್ಬೊಬ್ಬರು ಇಷ್ಟಪಟ್ಟು ಅದರಲ್ಲಿ ಧುಮುಕಿ ಬಿಡುತ್ತಾರೆ. ಆದರೆ ಏನನ್ನಾದರೂ ಸಾಧಿಸುವ ಗುರಿ, ನಿರಂತರ ಪರಿಶ್ರಮ, ಕ್ರಿಯಾಶೀಲತೆ ಇವೇ ಮುಂತಾದವುಗಳು ವ್ಯಕ್ತಿಯೊಬ್ಬರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂಬುದು ಸತ್ಯ. ಹಾಗೇ ಯಶಸ್ಸನ್ನು ಕಂಡವರು, ಕಾಣುತ್ತಿರುವವರ ಪಟ್ಟಿಯೇ ನಮ್ಮ ಮುಂದಿದೆ.
ಅಂದಹಾಗೆ ನಾವಿವತ್ತು ಹೇಳಹೊರಟಿರುವುದು ನಮ್ಮೂರಿನ ಒಬ್ಬ ಪ್ರತಿಭಾವಂತ ಬರಹಗಾರ ಕಮ್ ನಿರ್ದೇಶಕನ ಕುರಿತು. ಹೆಸರು ದೇವರಾಜ್ ಪೂಜಾರಿ. ಕುಂದಾಪುರ ತಾಲೂಕಿನ ಹೆಮ್ಮಾಡಿಯವರಾದ ದೇವರಾಜ್ ಇದೀಗ ಕಹಳೆ ಎನ್ನುವ ಹೊಸ ಸಿನೆಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಸಿನೆಮಾದಲ್ಲಿ ತನ್ನೂರ ಭಾಷೆ ಕುಂದಾಪ್ರ ಕನ್ನಡವನ್ನು ಸಮರ್ಪಕವಾಗಿ ಬಳಸಕೊಳ್ಳುವ ಇಂಗಿತ ವ್ಯಕ್ತಪಡಿಸಿರುವ ನಮ್ಮೂರ ಹುಡುಗ ತನ್ನ ನಿರ್ದೇಶನದ ಮೊದಲ ಸಿನೆಮಾವನ್ನು ವಿಭಿನ್ನವಾಗಿ ತೆರೆಯ ಮೇಲೆ ಮೂಡಿಸಲು ಪಣತೊಟ್ಟು ನಿಂತಿದ್ದಾರೆ.
ದೇವು ನಡೆದ ದಾರಿ

ಗುರಿಯನ್ನು ಸಾಧಿಸಲು ಛಲತೊಟ್ಟು ದೇವರಾಜ್
ಈಕಡೆ ಮನೆಯ ಪರಿಸ್ಥಿತಿ ಅಷ್ಟೊಂದು ಚನ್ನಾಗಿರಲಿಲ್ಲ. ಮಂಬೈ, ಬೆಂಗಳೂರಿನ ಆರಂಭದ ದಿನಗಳು ಅಂದುಕೊಂಡಂತೆ ಸುಗಮವಾಗಿರಲಿಲ್ಲ. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಹೊತ್ತಿಗೆ ಅವರ ತಂದೆ ತೀರಿಹೋಗಿದ್ದರು. ಒಬ್ಬನೇ ಮಗನಾದ್ದರಿಂದ ತಾಯಿಯ ಜೋತೆ ಇರಬೇಕಾದ ಅನಿವಾರ್ಯತೆ ಇದ್ದಾಗಲೂ ಚಿತ್ರ ಬುದುಕಿನ ನಿರಂತರ ತುಡಿತದಿಂದಾಗಿ ತಾಯಿಯ ಮನವೊಲಿಸಿ ಮತ್ತೆ ಬೆಂಗಳೂರಿನತ್ತ ಮುಖಮಾಡಿದ್ದರು. ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎಳೆಂಟು ವರ್ಷಗಳೇ ಕಳೆದು ಹೋಗಿವೆ.
ದೇವರಾಜ್ ಮೊದಲು ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅಜ್ಞಾನಿ ಸಿನೆಮಾ ಬಿಡುಗಡೆ ಆಗಲಿಲ್ಲ. ಆ ಬಳಿಕ ಹನಿ ಹನಿ, ಭಿಮಾ ತೀರದಲ್ಲಿ ಸೇರಿದಂತೆ ಹತ್ತಾರು ಸಿನೆಮಾಗಳಲ್ಲಿ ಸಹ ನಿರ್ದೇಶಕನಾಗಿ, ಸಿನೆಮಾ ಛಾಯಾಗ್ರಾಹಕರ ಸಹಾಯಕನಾಗಿ, ತಂತ್ರಜ್ಞನಾಗಿ ದುಡಿದು ಚಿತ್ರರಂಗದ ವಿವಿಧ ಮಜಲುಗಳನ್ನು ಅರಿತು ಇದೀಗ ತನ್ನದೇ ಚಿತ್ರಕಥೆಗೆ ಜೀವ ತುಂಬಲು ಹೊರಟಿದ್ದಾರೆ.
ಯುವಕರುಗಳ ತಂಡ, ಮೊದಲ ಸಿನೆಮಾ, ಡಿಫರೆಂಟ್ ಟ್ರೈಲರ್:
ದೇವರಾಜ ಮೊದಲ ಬಾರಿಗೆ ತನ್ನ ಕಥೆ-ಚಿತ್ರಕಥೆಯೊಂದಿಗೆ ಕಹಳೆ ಸಿನೆಮಾವನ್ನು ನಿರ್ದೇಶಿಸುತ್ತಿದ್ದು, ಉದ್ಯಮಿ ಮಂಜುನಾಥ ಮೊದಲ ಬಾರಿಗೆ ಸಿನೆಮಾದ ನಿರ್ಮಾಪಕರಾಗಿದ್ದಾರೆ. ಮೋಹನ್ ಎಲ್ ರಂಗಕಹಳೆ ಮೊದಲ ಬಾರಿಗೆ ಕಮರ್ಶಿಯಲ್ ಸಿನೆಮಾಕ್ಕೆ ಕ್ಯಾಮರಾ ಹಿಡಿಯುತ್ತಿದ್ದರೇ, ಅಭಿಮನ್ಯು ರಾಯ್ ಅವರ ಸಹೋದರ ಪ್ರಣವ್ ರಾಯ್ ಮೊದಲ ಬಾರಿಗೆ ಕನ್ನಡ ಸಿನೆಮಾಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉಳಿದಂತೆ ಸಿನೆಮಾದಲ್ಲಿ ನಾಯಕ, ನಾಯಕಿ ಸೇರಿದಂತೆ ಹೊಸಬರನ್ನೇ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದ್ದು ಕುಂದಾಪುರದವರಿಗೆ ಸಿನೆಮಾದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ದೇವರಾಜ ಜೋತೆಗೆ ಒಂದಿಷ್ಟು ಪರಿಣಿತರು ಸೇರಿ ಹಟ್ಟಿ ಬಳಗ ಎಂಬ ತಂಡ ಕಟ್ಟಿಕೊಂಡಿದ್ದಾರೆ. ಪರಿಕ್ಷಾತ್ಮಕ ಪ್ರಯೋಗ ಎಂಬಂತೆ ಮೊದಲು ಟ್ರೈಲರ್ ಬಿಡುಗಡೆಗೊಳಿಸಿದ್ದು ಅದು ಕೂಡ ಸ್ವಲ್ಪ ಭಿನ್ನವಾಗಿದೆ.
ಉಳಿದಂತೆ ಕುಂದಾಪುರದ ಪರಿಸರದಲ್ಲೇ ಚಿತ್ರೀಕರಣ ನಡೆಯಲಿದ್ದು ಇಲ್ಲಿನ ಕಾಡು ಮತ್ತು ಹಳ್ಳಿಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಮಳೆಯ ಎಫೆಕ್ಟ್ ಬೇಕಾಗಿರುವುದರಿಂದ ಮಳೆಗಾಲದಲ್ಲಿಯೇ ಸಿನೆಮಾದ ಚಿತ್ರೀಕರಣ ಆರಂಭವಾಗಲಿದೆ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಹೊಸದಾಗಿ ಎಚ್.ಡಿ. ಜೋತೆಗೆ ಪೋಟೋ ಟೆಕ್ನಾಲಜಿಯನ್ನು ಉಪಯೋಗಿಸಿಕೊಂಡು ಈ ಟ್ರೈಲರ್ ಸಿದ್ಧಪಡಿಸಿದ್ದು ವಿಭಿನ್ನವಾಗಿ ನಟರನ್ನು ಪರಿಚಯಿಸಲಾಗಿದೆ.
ಸಾಧು ಕೋಕಿಲ, ರಂಗಾಯಣ ರಘು, ತಾರಾ, ಆಶಿಶ್ ವಿದ್ಯಾರ್ಥಿ ಮಂತಾದವರು ಚಿತ್ರತಂಡದಲ್ಲಿರುತ್ತಾರೆ.
ಸಿನೆಮಾ ಕಥೆ:

ಈ ಇಬ್ಬರು ಸ್ನೇಹಿತರ ಬದುಕಿನ ಹೆಜ್ಜೆಗುರುತುಗಳನ್ನು ಹಿಂಬಾಲಿಸುವ ಕಥೆಯ ಮಧ್ಯೆ, ಪ್ರೇಮ ಕಥೆಯೊಂದು ಹಾದು ಹೋಗುತ್ತದೆ. ಊರಿಗೆ ವಿಲನ್ ಗಳಂತೆ ಆಗಿದ್ದ ಆ ಸ್ನೇಹಿತರು ಮಂದೆ ಹೀರೊ ಆಗ್ತಾರಾ, ವಿಲನ್ ಆಗಿ ಸಾಯ್ತಾರಾ? ಪ್ರೇಮಕಥೆಗೆ ಸುಖಾಂತ್ಯ ಸಿಗುತ್ತಾ ಇಲ್ವಾ ಇವೆಲ್ಲವನ್ನೂ ನೀವು ತೆರೆಯ ಮೇಲೆ ನೋಡಬೇಕು.
> ಅದೇ ಮರಸುತ್ತೊಂದು, ಲಾಂಗು ಮಚ್ಚು ಹಿಡಿದು ಗದ್ರೋದು ಇವೆಲ್ಲಕಿಂತ ಸ್ವಲ್ಪ ವಿಭಿನ್ನವಾಗಿ, ಆತ್ಯಾಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಸಿನೆಮಾ ಮಾಡುತ್ತಿದ್ದು, ಇದು ಸ್ವಲ್ಪ ಮಟ್ಟಿಗೆ ಹೊಸ ಟ್ರೆಂಡನ್ನು ಸೃಷ್ಟಿ ಮಾಡಲಿದೆ. ನಮ್ಮ ಈ ಪ್ರಯತ್ನ ಯಶಸ್ಸು ಕಾಣುತ್ತೊ ಇಲ್ವೊ ಗೊತ್ತಿಲ್ಲ. ಒಟ್ಟಿನಲ್ಲಿ ಒಳ್ಳೆ ಪ್ರಯತ್ನ ಪಟ್ಟಿದ್ದಾರೆ ಅಂತ ಅನ್ನಿಸಿಕೊಂಡರೂ ಸಾಕು. ಚಿತ್ರದಲ್ಲಿ ಕುಂದಾಪ್ರ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
-ದೇವರಾಜ್ ಪೂಜಾರಿ, ಕಹಳೆ ನಿರ್ದೇಶಕ