
ಐತಿಹ್ಯ:
ಸುಮಾರು 800 ವರ್ಷ ಹಿಂದೆ ಆಹಾರ ಮೇಯಲು ಬಂದ ಕಪಿಲ ಎನ್ನುವ ದನ ಪ್ರತಿದಿನ ಬಂದು ಈ ಹುತ್ತಕ್ಕೆ ಹಾಲುಣಿಸುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಆಶ್ಚರ್ಯಗೊಂಡು ಜ್ಯೋತಿಷ್ಯರ ಬಳಿ ವಿಚಾರಿಸಿದಾಗ ಆ ಹುತ್ತವು ನಂದಿಕೇಶ್ವರನ ಆವಾಸ ಸ್ಥಾನವಾಗಿದ್ದು, ಉಪ್ಪುಂದ ದುರ್ಗಾಪರಮೇಶ್ವರಿ ಅಣತಿಯಂತೆ ಇಲ್ಲಿನ ಗ್ರಾಮದ ರಕ್ಷಣೆಗಾಗಿ ನಂದಿಕೇಶ್ವರ ನೆಲೆ ನಿಂತಿದ್ದಾನೆ ಎಂದು ಅರಿತರು.
ಗೋವುಗಳ ರಕ್ಷಣೆ ನಂದಿಕೇಶ್ವರನ ಹೊಣೆ: ಇಲ್ಲಿನ ನಂದಿಕೇಶ್ವರನು ಜಾನುವಾರು ಹಾಗೂ ಪ್ರಾಣಿ ಪಕ್ಷಿಗಳ ಮೇಲೆ ವಿಶೇಷ ಕರುಣೆ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ಭಕ್ತರ ಜಾನುವಾರುಗಳು ಕಾಣೆಯಾದರೆ ಅಥವಾ ಅದಕ್ಕೆ ತೊಂದರೆ ತೊಡಕಾದರೆ ಈ ನಂದಿಕೇಶ್ವರನ ಸನ್ನಿಧಿಗೆ ಬಂದು ಒಂದು ಬಾಳೆಹಣ್ಣು ಕೊನೆ ನೀಡುತ್ತೇನೆ ಎಂದು ಹರಕೆ ಹೊತ್ತು ಪೂಜೆ ಸಲ್ಲಿಸಿದರೆ, ಮರುದಿನ ಕಾಣೆಯಾದ ಜಾನುವಾರು ಮನೆಯ ಕೊಟ್ಟಿಗೆಯಲ್ಲಿರುತ್ತದೆ ಎಂಬ ಪ್ರತೀತಿ ಇಂದಿಗೂ ಈ ಭಾಗದ ಜನರಲ್ಲಿದೆ.
ನಂದಿಕೇಶ್ವರ ದೇವಾಲಯ ಪ್ರಾಕೃತಿಕ ದೇಗುಲ. ದೇವರು 3 ಬೃಹತ್ ಹೆಬ್ಬೆಲಸು ಮರದ ನೆರಳಿನಲ್ಲಿ ನೆಲೆಸಿದ್ದು, ಇದು ಯಾವುದೇ ಕಟ್ಟಡವನ್ನು ಬಯಸುವುದಿಲ್ಲ. ಒಂದು ವೇಳೆ ಇಲ್ಲಿ ದೇವಾಲಯ ನಿರ್ಮಿಸಬೇಕಾದರೆ ರಾತ್ರಿ ಬೆಳಗಾಗುವುದರೊಳಗೆ ಇಲ್ಲಿನ 3 ಹೆಬ್ಬೆಲಸಿನ ಮರವನ್ನು ಕಡಿದು ಕಟ್ಟಡ ನಿರ್ಮಿಸಬೇಕು ಎಂಬ ಪ್ರತೀತಿಯಿದ್ದು, ಇದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮಾಡು ಒಲ್ಲದ ದೇವರು ಎಂಬ ಖ್ಯಾತಿ ಪಡೆದುಕೊಂಡಿದೆ. ಪ್ರತಿದಿನ ನೂರಾರು ಭಕ್ತರು ಬಂದು ಪೂಜಾ ಕೈಕಂರ್ಯವನ್ನು ನಡೆಸಿಕೊಂಡು ಹೋಗುತ್ತಾರೆ. ಇಲ್ಲಿ ಕೇವಲ ಬೈಂದೂರು ವ್ಯಾಪ್ತಿಯ ಭಕ್ತರು ಮಾತ್ರವಲ್ಲ, ಉತ್ತರ ಕನ್ನಡ, ಬೆಂಗಳೂರು, ಮುಂಬಯಿ ಸೇರಿದಂತೆ ದೂರದ ನೂರಾರು ಭಕ್ತರು ಬಂದು ಇಲ್ಲಿ ತಾವೇ ಸ್ವತ: ಪೂಜೆ ಮಾಡಿಕೊಂಡು ಹೋಗುತ್ತಾರೆ.
ದೈವಸ್ಥಾನದಲ್ಲಿನ ದೇವರ ಮೂರ್ತಿಗಳನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಆಡಳಿತ ಮಂಡಳಿ, ನಂಬಿದ ಭಕ್ತರು, ಗ್ರಾಮಸ್ಥರ ನೆರವಿನಿಂದ ಜೀರ್ಣೋದ್ಧಾರಗೊಳಿಸಬೇಕೆಂಬ ಉದ್ದೇಶದಿಂದ ಏ. 15ರಿಂದ 26ರ ರವರೆಗೆ ಪ್ರತಿಷ್ಠಾ ಮಹೋತ್ಸವ ಹಾಗೂ ನಾನಾ ಧಾರ್ಮಿಕ ವಿಧಿವಿಧಾನ ಮತ್ತು ಸತತ 7 ದಿನಗಳ ಅಖಂಡ ಭಜನಾ ಕಾರ್ಯಕ್ರಮ ನಡೆಯಲಿದೆ.