ವಿಶ್ವ ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ ಉಪ್ಪಿನಕುದ್ರು ಗೊಂಬೆಗಳು

 ಕುಂದಾಪುರ: ಗೊಂಬೆಯಾಟದ  ತವರೂರು ಕುಂದಾಪುರದ ಸಿಂಹಳ ದ್ವೀಪ “ಉಪ್ಪಿನಕುದ್ರು.” ಉಪ್ಪಿನಕುದ್ರು ಅಂದಾಗಲೇ ತಟ್ಟನೆ ಹೊಳೆಯುವುದು, ಮೈ ನವಿರೇಳುವ  ವೈವಿಧ್ಯಮಯ ಗೊಂಬೆಗಳು ಅದರಲ್ಲೂ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಇಲ್ಲಿನ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ, ಯಾವುದೇ ಸದ್ದು ಗದ್ದಲವಿಲ್ಲದೆ ಈ ತಂಡ ಕಳೆದ 350 ವರ್ಷಗಳಿಂದಲೂ ತನ್ನ ನಿರಂತರ ಕಾಯಕದಿಂದ ಕರಾವಳಿಯ ಜಾನಪದ ಕ್ಷೇತ್ರವನ್ನು ಶ್ರೀಮಂತವಾಗಿರಿಸುತ್ತಾ ಬಂದಿದ್ದು ಇಂದು 6 ನೇ ತಲಾಂತರದ ರೂವಾರಿಯಾಗಿ ಈ ಕಲಾ ತಂಡವನ್ನು ಪೂಜಿಸಿಕೊಂಡು ಬಂದವರು ಉಪ್ಪಿನಕುದ್ರು ಭಾಸ್ಕರ್ ಕೊಗ್ಗ ಕಾಮತ್. ಕೈಗೆ ದೊರೆತ ಬ್ಯಾಂಕ್ ಉದ್ಯೋಗವನ್ನು ತೊರೆದು ಕಲೆಗಾಗಿ ಪೂರ್ಣ ಬದುಕನ್ನು ಸಮರ್ಪಿಸಿಕೊಂಡು ಬಂದ ವಿರಳ ಜಾನಪದ ಕಲಾವಿದರೆನ್ನಬಹುದು. 
        ವಿದೇಶ ಪ್ರವಾಸದ ಮಾತು ಬಂದಾಗಲೆಲ್ಲಾ ಉಪ್ಪಿನಕುದ್ರು ಗೊಂಬೆಯಾಟ ತಂಡದ ನೆನಪು ಆಗಿಯೇ ಆಗುವುದು ಸಹಜ. ಈ ನಿಟ್ಟಿನಲ್ಲಿ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ ಪ್ರಪಂಚದಾದ್ಯಂತ ತನ್ನ ನಿರಂತರ ವಿದೇಶ ಪ್ರವಾಸಗಳಿಂದ ಅನೇಕ ರಾಷ್ಟ್ರಗಳಲ್ಲಿ ತನ್ನದೇ ಆದ ಅಭಿಮಾನಿ ಬಳಗ ಪಡೆದಿರುವುದಂತೂ  ಸತ್ಯ. ಪ್ರಪಂಚದ ಹತ್ತು-ಹಲವು ದೇಶಗಳಲ್ಲಿ  ಕುಣಿದು  ಕುಪ್ಪಳಿಸಿದ ಉಪ್ಪಿನಕುದ್ರು  ಗೊಂಬೆಗಳು ಇತ್ತೀಚೆಗೆ ಮೂರು ರಾಷ್ಟ್ರಗಳಲ್ಲಿ ಜಾನಪದ ಕಂಪನ್ನು ಗೊಂಬೆಗಳ ಮೂಲಕ ಪಸರಿಸಿ ಎಲ್ಲರ ಮೆಚ್ಚುಗೆ ಪಾತ್ರವಾದದಂತೂ ಸುಳ್ಳಲ್ಲಾ.
      ಇತ್ತೀಚಿನ ದಿನಗಳಲ್ಲಿ ಭಾಸ್ಕರ್ ಕೊಗ್ಗ ಕಾಮತ್ ರ ನೇತೃತ್ವದಲ್ಲಿ ಮೂರನೇ ಬಾರಿಗೆ ಜಪಾನಿನ “ಲಿಡಾ ಫೆಸ್ಟಿವಲ್ “ ಗೆ ತೆರಳಿದ್ದು  ಸ್ಮರಣೀಯವೆನ್ನಬಹುದು. ಈ ವಿದೇಶ ಪ್ರವಾಸದ ವಿಶೇಷವೆಂದರೆ ಭಾಸ್ಕರ್ ಕೊಗ್ಗ ಕಾಮತರು ತಂಡ ಹೊರಡುವ ಹತ್ತು ದಿನಗಳ ಮೊದಲೇ  ಮೂರು ಕಲಾವಿದರೊಂದಿಗೆ ಜಪಾನಿಗೆ ತೆರಳಿ ಅಲ್ಲಿ ನಡೆವ ಏಶ್ಯನ್ ಗೊಂಬೆಯಾಟ ಕಾರ್ಯಾಗಾರದಲ್ಲಿ ಪಾಲ್ಗೊಂಡು ಯಕ್ಷಗಾನ ಗೊಂಬೆಯಾಟದ ಪ್ರಾತ್ಯಕ್ಷಿಕೆ ನೀಡಿ ರಂಜಿಸಿದ್ದು ಶ್ಲಾಘನೀಯ. ಈಗಾಗಲೇ ಶ್ರೀಯುತರು ಕಳೆದೆರಡು   ವರ್ಷಗಳಲ್ಲೂ ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿದ್ದರು. ಹಾಗೇ ತಂಡದೊಂದಿಗೆ ಸೇರಿ ಲಿಡಾ ಉತ್ಸವದಲ್ಲಿ ಅತ್ಯಂತ ಯಶಸ್ವಿಯಾಗಿ ಅಸಂಖ್ಯಾತ  ಜಪಾನಿ ಪ್ರೇಕ್ಷಕರ ಮುಂದೆ ಯಕ್ಷಗಾನ ಗೊಂಬೆಯಾಟ ಪ್ರದರ್ಶನ ನೀಡಿ ರಂಜಿಸಿರುವುದು ಒಂದು ಐತಿಹಾಸಿಕ ದಾಖಲೆಯೆನ್ನಬಹುದು. ಇಲ್ಲಿ ಐದಾರು ಕಾರ್ಯಕ್ರಮಗಳನ್ನು ನಿರಂತರ ನೀಡಿ ಭಾರತದ ಜಾನಪದ ಸೊಗಡನ್ನು ಗೊಂಬೆಗಳ ಮೂಲಕ ಎತ್ತಿ ಹಿಡಿದಿರುವುದು ಸ್ತುತ್ಯಾರ್ಹ.
        ನಂತರ ಗೊಂಬೆಯಾಟ ತಂಡ ಪ್ರಯಾಣಿಸಿದ್ದು ರಷ್ಯಾ ದೇಶಕ್ಕೆ. ಇದು ಈ ತಂಡದ ಪ್ರಪ್ರಥಮ ಪ್ರವಾಸವಾಗಿತ್ತು. ಇಲ್ಲಿ ಈ ಗೊಂಬೆಯಾಟ ತಂಡ ಮಾಸ್ಕೋ ಹಾಗೂ ಇನ್ನಿತರ ನಗರಗಳಲ್ಲಿ “ಚೂಡಾಮಣಿ-ಲಂಕಾದಹನ” ಪ್ರಸಂಗ ಯಶಸ್ವಿಯಾಗಿ ನೀಡಿತು.  ಈ ವೈವಿಧ್ಯಮಯ ಗೊಂಬೆಗಳು, ವಿಶೇಷ ರೀತಿಯ ಯಕ್ಷಗಾನ ವಾದ್ಯ ಪರಿಕರಗಳು, ಕುಣಿಸುವ ರೀತಿಗೆ ರಷ್ಯಾದ ಪ್ರೇಕ್ಷಕರು ಕರತಾಡನ ಮೂಲಕ ಮೆಚ್ಚುಗೆ ಸೂಚಿಸಿ ಬೆಂಬಲಿಸಿದ್ದು ಯಾವತ್ತೂ ಕೂಡ ಜಾನಪದ ಕಲಾವಿದರು ನೆನಪಿನಲ್ಲಿಟ್ಟುಕೊಳ್ಳುವಂತಹದ್ದು. ರಷ್ಯಾದಲ್ಲಿ ಈ ಹಿಂದೆ ನಡೆದ ಅಗ್ನಿ ಆಕಸ್ಮಿಕಗಳ ಕಹಿ ನೆನಪು  ಗೊಂಬೆಯಾಟ ಪ್ರದರ್ಶನದಲ್ಲಿ ಬೆಂಕಿ ಉಪಯೋಗ ಅಸಾಧ್ಯವಾದದ್ದು ಒಂದು ಕೊರಗೆನ್ನಬಹುದು.
         ನಂತರ ಗೊಂಬೆಯಾಟ ತಂಡದ   ಪ್ರಯಾಣ ರಷ್ಯಾದಿಂದ ಬೆಲ್ಜಿಯಂನ ಬ್ರೂಸೆಲ್ಸ್ ಗೆ. ಅಲ್ಲಿ “ಯುರೋಪಾಲಿಯಾ ಉತ್ಸವದ ಪ್ರಯುಕ್ತ “ಭಾಸ್ಕರ್ ಕಾಮತ್ ರ ಕಾರ್ಯಕ್ರಮ ಬೆಲ್ಜಿಯಂ ನ ರಾಜಧಾನಿ ಬ್ರೂಸೆಲ್ಸ್ ನ ಬಹು ದೊಡ್ಡ ರಂಗಮಂದಿರದಲ್ಲಿ ಏರ್ಪಾಡಾಗಿತ್ತು. ಇಲ್ಲಿ ಕಾಮತರ ಗೊಂಬೆಗಳ ಆಳೆತ್ತರದ ಕಟೌಟ್ ಗಳು ಕಲಾವಿದರ ,ನೋಡುಗರ ಮೈ ಮನವನ್ನು ನವಿರೇಳಿಸಿ ರೋಮಾಂಚನ ನೀಡುವುದರೊಂದಿಗೆ ಅದ್ಭುತ ಪ್ರಚಾರ ಮಾಡಿದ್ದರು. ಅಲ್ಲಿ ಚೂಡಾಮಣಿ -ಲಂಕಾದಹನ ಪ್ರಸಂಗವನ್ನು ಸಂಪ್ರದಾಯದಂತೆ ಬೆಂಕಿ ಉಪಯೋಗದೊಂದಿಗೆ ಪ್ರದರ್ಶಿಸಿದ್ದರು.
        ಕೊನೆಯಲ್ಲಿ  ಕಾಮತರು ನೀಡಿದ ಗೊಂಬೆಯಾಟ ಪ್ರಾತ್ಯಕ್ಷಿಕೆ ಹೆಚ್ಚಿನವರ ಗಮನ ಸೆಳೆದು ಒಳ್ಳೆಯ ಪ್ರತಿಕ್ರಿಯೆ  ಸಿಗುವಂತೆ ಮಾಡಿತು. ಅನೇಕರು ಈ ಕಲೆಯ ಮಹತ್ವ ಹಾಗೂ ಗೊಂಬೆಗಳ ವಿಶೇಷತೆಗೆ ಮಾರು ಹೋದರು.  ಕೆಲವರು ಕಲಿಯುವ ಹಂಬಲ ತೋಡಿಕೊಂಡರು. ಇದರಲ್ಲಿಯ ನೃತ್ಯ ಗೊಂಬೆಗಳ ಸಂಯೋಜನೆ ಕಂಡು ಹೌಹಾರಿದರು. ಅಲ್ಲಿ ಇವರ ಪ್ರದರ್ಶನಕ್ಕೆ ಬೆಲ್ಜಿಯಂನ ಹೆಸರಾಂತ ಗೊಂಬೆಯಾಟ ಕಲಾವಿದರು ಬಂದಿರುವುದು ವಿಶೇಷತೆಯೆನ್ನಬಹುದು. ಹಾಗೇ ಕಾಮತರು ಬೆಲ್ಜಿಯಂ ನ ಸಣ್ಣ ಮಕ್ಕಳಿಗೆ ಯಕ್ಷಗಾನ ಕುಣಿತ ಹಾಗೂ ಗೊಂಬೆಯಾಟದ ಕಾರ್ಯಾಗಾರ ನೀಡಿ ಅವರ ಹೃನ್ಮನ ಸೆಳೆದರು.   ಕಾಮತರ ತಂಡದ ರಷ್ಯಾ ಹಾಗೂ ಬೆಲ್ಜಿಯಂ ಪ್ರವಾಸವನ್ನು ದೆಹಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಸಂಸ್ಥೆಯವರು ಪ್ರಾಯೋಜಿಸಿದರೆ ಜಪಾನ್ ಪ್ರವಾಸವನ್ನು ಅಲ್ಲಿಯ ಮೋಡರ್ನ್ ಪಪೆಟ್ ಥಿಯೇಟರ್ ನವರು ಆಯೋಜಿಸಿದ್ದರು. 
         ಸದ್ಯ ಭಾಸ್ಕರ್ ಕೊಗ್ಗ ಕಾಮತರು ತಮ್ಮ ಭವಿಷ್ಯತ್ತಿನ ಬಹು ದೊಡ್ಡ ಯೋಜನೆ ಬೆಂಗಳೂರಿನ ಡಾ. ಪಿ. ದಯಾನಂದ ಪೈ ಯವರ ಪ್ರಾಯೋಜಕತ್ವ ದಲ್ಲಿ ಗೊಂಬೆಯಾಟ ಅಕಾಡೆಮಿ ಕಟ್ಟಡ ಉಪ್ಪಿನಕುದ್ರಿನಲ್ಲಿ ಸಾಕಾರಗೊಳ್ಳುತ್ತಿದೆ. ಇದಕ್ಕೆ ಇನ್ಫೋಸಿಸ್ ನ ಡಾ. ಸುಧಾಮೂರ್ತಿಯವರ ಬೆಂಬಲವೂ ಸಿಕ್ಕಿದೆ. ಇದು ಆದಷ್ಟು ಬೇಗ ಪೂರ್ಣಗೊಂಡರೆ ಇನ್ನಷ್ಟು ದೇಶದ ಜನರು ಭಾರತಕ್ಕೆ ಬಂದು ಈ ಕಲೆಯ ಸೊಬಗನ್ನು, ವಿಶೇಷತೆಯನ್ನು ಅಭ್ಯಸಿಸಲು ಸಾಧ್ಯವಿದೆ. ಅದಕ್ಕಾಗಿ ನಾವು ನೀವು ಒಟ್ಟಾಗಿ ಸೇರಿ ಈ ಯೋಜನೆ ಸಾಕಾರಗೊಳಿಸುವ ಅಗತ್ಯತೆ  ಹಿಂದಿಗಿಂತ ಇಂದು ಹೆಚ್ಚಿದೆ ಅಂದರೆ ಖಂಡಿತಾ ಅತಿಶಯೋಕ್ತಿಯಾಗಲಾರದು.








ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com
Uppinakudru Yakshagana Puppets-Visited 3 Countries. Uppinakudru Bhaskar kogga Kamath. Puppets, Yakshagana Puppets, Kundapra.com. (Leading Web Portal of Kundapura Taluk, Linking the World) Kundapra.com for your city infor, news and many more updates