ವ್ಯಕ್ತಿಗಿಂತ ಸಮಾಜದ ಹಿತ ಬಯಸುವ ಸಾಹಿತ್ಯ ಸೃಷ್ಠಿ ಅಗತ್ಯ: ಯು.ಸಿ. ಹೊಳ್ಳ

ಬೈಂದೂರು: ಉಡುಪಿ ಜಿಲ್ಲೆಯ ಧಾರ್ಮಿಕ, ಸಾಹಿತ್ಯಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವ್ಯಕ್ತಿ ಉಪ್ಪುಂದ ಚಂದ್ರಶೇಖರ ಹೊಳ್ಳ. ಹುಟ್ಟು ಹೋರಾಟಗಾರರಾಗಿ ತನ್ನ ಕ್ರೀಯಾಶೀಲ ವ್ಯಕ್ತಿತ್ವ ಹಾಗೂ ನಗುಮೊಗದಿಂದ ಹತ್ತಿರವಾಗುವ, ಯಾವುದನ್ನೂ ಸಂಪೂರ್ಣವಾಗಿ ಇಲ್ಲ ಎನ್ನದೇ ಎಲ್ಲವನ್ನೂ, ಎಲ್ಲರನ್ನೂ ಒಳಗೊಂಡು ಸಮನ್ವಯ ಸಾಧಿಸುವ ಸಮಗ್ರ ವ್ಯಕ್ತಿತ್ವ ಹೊಳ್ಳರದು. 
     ಸಾಂಸ್ಕೃತಿಕ ಸಂಘಟಕರಾಗಿ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, 74ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ, ಹತ್ತಾರು ಸಂಘ ಸಂಸ್ಥೆಗಳ ಸ್ಥಾಪನೆಗೆ ಕಾರಣೀಕರ್ತರಾಗಿ ಅದರ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಹೊಳ್ಳರು, ಸಾಹಿತಿಯಾಗಿ ಉದಯರವಿ, ವಡ್ಡರ್ಸೆ ರಘುರಾಮ ಶೆಟ್ಟಿ ಕೊನೆಯ ದಿನಗಳು, ಉಪ್ಪುಂದ ಹೊಳ್ಳರ ಕುಟುಂಬದ ಪರಿಚಯ, ಕುಂದನಾಡು, ಸುಮೇರುವಿನ ಸನ್ನಿಧಿಯಲ್ಲಿ, ಹೀಗೊಂದು ದಾರಿ ಸೇರಿದಂತೆ ಹತ್ತಾರು ಸಾಹಿತ್ಯ ಕೃತಿಗಳನ್ನು ರಚಿಸಿ, ಕುಂದ ಅಧ್ಯಯನ ಕೇಂದ್ರದ ಮೂಲಕ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಪತ್ನಿ ವರಮಹಾಲಕ್ಷ್ಮಿ ಹೊಳ್ಳ ಅವರೊಂದಿಗೆ ಯು. ಸಿ. ಹೊಳ್ಳ
     ಧಾರ್ಮಿಕ ನೇತಾರರಾಗಿ ಅನೇಕ ಗ್ರಾಮೀಣ ಪ್ರದೇಶದ ದೇವಾಲಯಗಳ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸಿರುವುದಲ್ಲದೇ, ಸಾಮಾಜಿಕ ಪ್ರಗತಿಯ ಹರಿಕಾರರಾಗಿ ಸೂರ್ಯನಾರಾಯಣ ಗ್ರಂಥಾಲಯ, ಹೊಳ್ಳರ ಚಾರಿಟೇಬಲ್ ಟ್ರಸ್ಟ್ (ರಿ.), ಉಪ್ಪುಂದ ಶಂಕರ ಕಲಾಮಂದಿರ, ಸಮೃದ್ದ ಸಭಾ ಭವನ, ಶಂಕರ ಆರ್ಟ್ ಗ್ಯಾಲರಿ, ಉಪ್ಪುಂದ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಸೇರಿದಂತೆ ಕಾವೇರಿ ವಸ್ತ್ರ ವಿನ್ಯಾಸ ತರಬೇತಿ, ಸಂಗೀತ, ಕ್ರೀಡೆಗೆ ಸಂಬಂಧಿಸಿದ ಹಲವಾಗಿ ತರಬೇತಿಗಳನ್ನು ಆಯೋಜಿಸಿ  ಜನಸಾಮಾನ್ಯರಿಗೆ ನೆರವಾಗಿದ್ದಾರೆ.
    ನಿವೃತ್ತ ದೂರವಾಣಿ ಇಲಾಖೆಯ ಉದ್ಯೋಗಿಯಾಗಿರುವ ಹೊಳ್ಳರು ಪತ್ನಿ ವರಮಹಾಲಕ್ಷ್ಮಿ ಹೊಳ್ಳ ಅವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದರೂ ಬೈಂದೂರು ಪರಿಸರದ ಜನಮಾನಸದಲ್ಲಿ ಒಂದಿಲ್ಲೊಂದು ಕಾರ್ಯದ ಮೂಲಕ ಅಚ್ಚಳಿಯದೇ ಉಳಿದಿದ್ದಾರೆ.


ಯು. ಚಂದ್ರಶೇಖರ ಹೊಳ್ಳ ಅವರೊಂದಿಗೆ ನಡೆಸಿದ ಸಂದರ್ಶನ

* ಒಬ್ಬ ಸಾಹಿತಿಯಾಗಿ ಕನ್ನಡ ನಾಡಿನ ಬಗೆಗೆ ನಿಮ್ಮ ಅಭಿಪ್ರಾಯವೇನು?
     ಸಮಗ್ರ ಭಾರತದಲ್ಲಿ ಕನ್ನಡ ನಾಡಿಗೆ ಒಂದು ಸಾಂಸ್ಕೃತಿಕವಾದ ಹಿನ್ನೆಲೆ ಇದೆ. ದ್ರಾವಿಡರಂತೆ ಕನ್ನಡಿಗರು ಜಗಳಗಂಟರಲ್ಲ. ಕರ್ನಾಟಕದವರು ಒಳ್ಳೆಯದನ್ನು, ಒಳ್ಳೆಯವರನ್ನು ಬೆಂಬಲಿಸುವ ಜನ. ಅದೇ ನಮ್ಮ ಸಂಸ್ಕೃತಿ. ಇದೇ ಪರಿಪಾಠ ಮೊದಲಿನಿಂದಲೂ ಬಂದದ್ದು. ಸೌಹಾರ್ದತೆ ಎನ್ನುವುದು ಕನ್ನಡಿಗರ ಹೃದಯಗಳಲ್ಲಿ ಆದರ್ಶವೆಂಬಂತೆ ಬೆಳೆದುಬಂದಿದೆ. ಅದು ಕೋಮು ಸೌಹಾರ್ದ ಇರಬಹುದು, ವ್ಯಾಪಾರ ಸೌಹಾರ್ದವೇ ಇರಬಹುದು. ಯಾರು ಬೇಕಾದರೂ ಇಲ್ಲಿ ಬಂದು ಬದುಕು ಕಟ್ಟಿಕೊಳ್ಳುವಷ್ಟು ಉದಾರತೆಯನ್ನು ಕನ್ನಡಿಗರು ತೋರಿದ್ದಾರೆ. 

* ಆಧುನಿಕರಣದ ನಡುವೆ ಯುವಜನರಿಗೆ ಸಾಹಿತ್ಯದ ಒಲವನ್ನು ಮೂಡಿಸಲು ಏನು ಮಾಡಬಹುದು?
      ಒಳ್ಳೊಳ್ಳೆ ಸಾಹಿತ್ಯ ಸೃಷ್ಠಿಯಾಗಬೇಕು. ಈಗಿನ ಸಾಹಿತ್ಯ ಜನರ ಭೌದಿಕ, ನೈತಿಕ ಮಟ್ಟವನ್ನು ಹೆಚ್ಚಿಸುತ್ತಿಲ್ಲ. ಸಾಹಿತಿಗಳು ಅಂತಸತ್ವವನ್ನೇ ಕಳೆದುಕೊಂಡಿದ್ದಾರೆ. ಸಾಹಿತ್ಯದಲ್ಲಿ ಧ್ವನಿ ಪ್ರಾಧಾನ್ಯ ಮತ್ತು ರಸ ಪ್ರಾಧಾನ್ಯ ಎಂಬ ಎರಡು ವಿಧಗಳಿದ್ದು ಅದು ಇಂದಿನ ಸಾಹಿತ್ಯ ಸೃಷ್ಠಿಯಲ್ಲಿ ಕಾಣಸಿಗುತ್ತಲ್ಲ. ಯುವಜನರನ್ನು ಹಳಿಯುವ ಬದಲು ಹೊಸ ಸಾಹಿತ್ಯವನ್ನು ಸೃಷ್ಠಿಸಬೇಕು. ಯುವ ಸಾಹಿತಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ. ವ್ಯಕ್ತಿ ಹಿತಕ್ಕಿಂತ ಸಾಮಾಜಿಕ ಹಿತವನ್ನು ಬಯಸುವ ಸಾಹಿತಿಗಳನ್ನು ನಾವು ಸೃಷ್ಠಿಸಬೇಕಾಗಿದೆ. ಯುವಕರುಗಳಿಗೆ ಮೂವತ್ತು ವರ್ಷಗಳ ತನಕ ಆಸೆ ಆಕಾಂಕ್ಷೆಗಳಿಗಿಂತ ಆದರ್ಶಗಳೇ ಹೆಚ್ಚಾಗಿರುತ್ತದೆ. ಅವರಲ್ಲಿನ ಆದರ್ಶಗಳನ್ನು ಗಟ್ಟಿಮಾಡುವ ಕೆಲಸವನ್ನು ನಾವು ಮಾಡಬೇಕಾಗಿದೆ. 

* ಪರಭಾಷಾ ಪ್ರಭಾವದಿಂದ ಕನ್ನಡ ಭಾಷೆ ನಶಿಸುತ್ತದೆ ಎಂಬುದನ್ನು ನೀವು ಒಪ್ಪುತ್ತಿರಾ?
   ಕನ್ನಡ ಎಂದಿಗೂ ಅಳಿಯುವುದಿಲ್ಲ. ಪರಭಾಷಾ ಪ್ರಭಾವ ಎನ್ನುವುದು ಒಂದು ಅಭಿವೃದ್ಧಿಯ ಸಂಕೇತ. ಇಲ್ಲಿ ಮಡಿವಂತಿಕೆಯನ್ನು ತೋರಿಸಬಾರದು. ಹೆಚ್ಚಿನ ಜನರನ್ನು ತಲುಪುವಾಗ ಆ ಭಾಷೆಯ ಮಡಿವಂತಿಗೆಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳಬೇಕಾಗುತ್ತದೆ. ಸಾಹಿತ್ಯದಲ್ಲಿ ಬೇರೆ ಬೇರೆ ಪ್ರಕಾರಗಳಿದ್ದು ಶಾಸ್ತ್ರ ಸಾಹಿತ್ಯದಲ್ಲಿ ಯಾವಾಗಲೂ ಶುದ್ಧವಾದ ಕನ್ನಡ ಭಾಷೆಯನ್ನೇ ಬಳಸಿಕೊಳ್ಳಬೇಕು. ಅದೇ ವ್ಯಾವಹಾರಿಕಾ ಭಾಷೆಯಾದಾಗ ಎಲ್ಲಾ ಭಾಷೆಗಳನ್ನು ಒಳಗೊಳ್ಳವ ಸ್ವೀಕೃತ ಮನೋಭಾವವನ್ನು ನಾವು ಬೇಳೆಸಿಕೊಳ್ಳಬೇಕಾಗಿದೆ. ಬರೀ ಅಚ್ಚಕನ್ನಡದಲ್ಲಿ ಮಾತನಾಡುವುದರಿಂದ ಅದು ಯಾರಿಗೂ ಅರ್ಥವಾಗುವುದಿಲ್ಲ. ಕೊಡು ಕೊಳ್ಳುಗೆ ಇಲ್ಲದೇ ಭಾಷಾ ಅಭಿವೃದ್ಧಿ ಸಾಧ್ಯವಿಲ್ಲ. 

*ಸಾಹಿತ್ಯದಲ್ಲಿ ನೈತಿಕತೆ ಕಡಿಮೆಯಾಗುತ್ತಿದೆಯಾ?
    ಸಾಹಿತ್ಯದಲ್ಲಿ ಗ್ರಹಿಕೆಯ ಮಟ್ಟವೆಂಬುದಿದೆ. ನಮ್ಮ ಪರಂಪರಾಗತವಾಗಿ ಬಂದ ಸಾಹಿತ್ಯ ಎಲ್ಲರಿಗೂ ಉತ್ತಮವಾದದ್ದನ್ನು ಬಯಸುವಂತದ್ದು. ಅದೇ ವ್ಯವಹಾರಿಕವಾಗಿ ಬಂದಾಗ ವ್ಯಕ್ತಿಯ ಅಭಿವ್ಯಕ್ತಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಅದು ಅವರವರ ಅಭಿವ್ಯಕ್ತಿ ಸ್ವಾತಂತ್ರ್ಯ.  ಅತ್ಯೂತ್ಸಾಹ  ಹಾಗೂ ಕ್ರೌರ್ಯವನ್ನು ಪ್ರತಿಪಾದಿಸದೇ ಇರುವ ಅಭಿಪ್ರಾಯವನ್ನು ಸ್ವಷ್ಟವಾಗಿ ವ್ಯಕ್ತಪಡಿಸುವ ಸಾಹಿತ್ಯ ಸೃಷ್ಠಿಯಾಗಿಬೇಕು. ನಾವು ಹೇಳಿದ್ದೇ ಸತ್ಯವೆಂಬುದನ್ನು ಒಪ್ಪಿಕೊಳ್ಳಲಾಗದು. 

* ಕುಂದಾಪ್ರ ಕನ್ನಡದ ಬಗೆಗೆ ನಿಮ್ಮ ಅಭಿಪ್ರಾಯವೇನು?
    ಆತ್ಮೀಯತೆಯನ್ನು  ವ್ಯಕ್ತಪಡಿಸಲು, ಸಂಬಂಧಗಳನ್ನು ವೃದ್ಧಿಸಲು ಕುಂದಾಪ್ರ ಕನ್ನಡ ಪರಿಣಾಮಕಾರಿಯಾದುದು. ಅದರ ಧ್ವನಿ ಒಂದು ಸ್ನೇಹವನ್ನು, ಬಂಧುತ್ವವನ್ನು ಕೊಡುತ್ತದೆ. ಪ್ರಾದೇಶಿಕ ಭಾಷೆ ನಮಗೊಂದು ಐಡೆಂಟಿಟಿಯನ್ನು ಕೊಡುತ್ತದೆ.

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com

Interview with Uppunda Chandrashekar Holla.