ಅಮ್ಮಾ ಎಂದರೇ ಏನೋ ಹರುಷವೂ...

ಮೇ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಕರುಣಾಮುಯಿ ತಾಯಿ ಹಾಗೂ ತಾಯಂದಿರ ದಿನದ ಕುರಿತಾಗಿ ಯುವ ಬರಹಗಾರ ಸಂದೇಶ ಶೆಟ್ಟಿ ಆರ್ಡಿ  ಬರೆದ ಲೇಖನ ಮತ್ತೆ ಓದುಗರಿಗಾಗಿ...
*****************
ಅಜ್ಞಾನದ ಅಂಧಕಾರವನ್ನು ತೊಲಗಿಸಿ-ಸುಜ್ಞಾನದ ಬೆಳಕು ಹರಿಸಲು ಅಮ್ಮ ಎನ್ನುವ ಎರಡಕ್ಷರ ಸಾಕು..
(ಮಾತೃತ್ವದ ಬಲಿಷ್ಟ ಸಂಕೋಲೆಗಳಿಂದ ಬಂದಿಸದೆ, ಹೆಚ್ಚುತ್ತಿರುವ ಬುದ್ಧಿವಿಹೀನ ಮಕ್ಕಳ ತಪ್ಪುಗಳನ್ನು ಎಷ್ಟು ದಿನದವರೆಗೆ ಮಡಿಲಿನಲ್ಲಿಟ್ಟುಕೊಳ್ಳುವಿ ಅಮ್ಮಾ...)
     
    ವಿಶ್ವಮಟ್ಟದಲ್ಲಿ ವಿವಿಧ ಸಂದರ್ಭಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ನೆನಪು ಮಾಡಲು ವರ್ಷದಲ್ಲೊಂದು ದಿನ ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಇಂತಹವುಗಳಲ್ಲಿ ಮಾತೆಯರ ದಿನವೂ ಒಂದಾಗಿದೆ. ಅಮ್ಮ ಎನ್ನುವ ಎರಡಕ್ಷರವೇ ಪವಿತ್ರ ಭಾವನೆಯನ್ನು ಸೃಷ್ಟಿಸುವುದಲ್ಲದೇ ಪೂಜ್ಯತೆಯನ್ನು ಉಂಟು ಮಾಡುತ್ತದೆ. ಇದು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅಜ್ಞಾನದ ಅಂಧಕಾರವನ್ನು ತೊಲಗಿಸಿ, ಸುಜ್ಞಾನದ ಬೆಳಕನ್ನು ಹರಿಸಲು ತಾಯಿ ಎನ್ನುವ ಎರಡಕ್ಷರದ ಮಹಾಮಂತ್ರವೇ ಸಾಕು ಎಂದು ಬಲ್ಲವರು ಹೇಳಿದ್ದಾರೆ. ನವ ಮಾಸ ಪರ್ಯಂತ ತನ್ನ ಉದರದಲ್ಲಿ ಹೊತ್ತು, ಲೋಕದ ಬೆಳಕನ್ನು ಕಾಣುವಂತೆ ಮಾಡಿದ ತಾಯಿಯ ಪ್ರೀತಿ, ವಾತ್ಸಲ್ಯ, ಒಲುಮೆ ಮನುಕುಲದ ಉನ್ನತಿಯ ಚಿಲುಮೆಯಾಗಿರುವುದಷ್ಟೇ ಅಲ್ಲದೆ ಅಸಂಖ್ಯಾತ ಕವಿಗಳ, ಕಲಾವಿದರ, ಮಹಾನ್ ವ್ಯಕ್ತಿಗಳ ಜೀವನದ ಉತ್ಸಾಹದ ಚಿಲುಮೆಯೂ ಆಗಿದೆ. ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ದೇಶವನ್ನು ಹಾಗೂ ಭಾಷೆಯನ್ನು ತಾಯಿಯೊಂದಿಗೆ ಗುರುತಿಸಿಕೊಳ್ಳುತ್ತಾರೆ. ಭಾರತದ ವೈಶಿಷ್ಟ್ಯವೂ ಕೂಡ ಇದೆ ಆಗಿದೆ. ನದಿ, ಬೆಟ್ಟ, ಪರ್ವತ, ನಿಸರ್ಗವನ್ನೂ ಮಾತೆಯೆಂದೇ ಆರಾಧಿಸಲಾಗುತ್ತದೆ. ಕಠೋರ ವ್ಯಕ್ತಿತ್ವದ ವ್ಯಕ್ತಿಯೂ ಕೂಡ ನೋವಾದಾಗ ಅಮ್ಮಾ ಎಂದು ಉದ್ಗರಿಸುತ್ತಾನೆ. ತಾಯಿಯ ಮಹಿಮೆಯೇ ಅಂತದ್ದು, ಮನುಕುಲದ ಅಭ್ಯುದಯಕ್ಕೆ, ವಿಕಾಸಕ್ಕೆ ಕಾರಣೀಕರ್ತಳಾದ ಅಮ್ಮನ ನೆನಪು ಮಾಡಲು ಈ ದಿನವನ್ನು ಆಚರಿಸಲಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ ತಾಯಿಯ ದಿನವನ್ನು ಆಚರಿಸಿದರೆ ಸಾಕೆ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳಬಹುದು. ಖಂಡಿತಾ ಒಂದು ದಿನ ಮಾತ್ರವಲ್ಲ. ಹುಟ್ಟಿಸಿದ ತಾಯಿಯ ನೆನಪು ಕ್ಷಣ-ಕ್ಷಣವೂ ಮನದಲ್ಲಿ ಅನುರಣನೀಯವಾಗಿರಬೇಕು. ಆದರೆ ಕಾರ್ಮಿಕ ದಿನ, ಮಕ್ಕಳ ದಿನ, ಮಹಿಳಾ ದಿನಗಳನ್ನು ಆಚರಿಸುವಂತೆ ತಾಯಂದಿರ ದಿನದ ಆಚರಣೆಗೂ ಒಂದು ಐತಿಹ್ಯವಿದೆ. 
     ತಾಯಂದಿರ ದಿನದ ವೈಶಿಷ್ಟ್ಯವೇ ಅಂತಹದು. ವಿಶ್ವದ ೪೬ ರಾಷ್ಟ್ರಗಳಲ್ಲಿ ವಿಶೇಷವಾಗಿ ಈ ದಿನವನ್ನು ಆಚರಿಸಲಾಯಿತಾದರೂ, ಒಂದೇ ದಿನದಂದು ಆಚರಿಸುವುದಿಲ್ಲ. ಆಸ್ಟ್ರೇಲಿಯ, ಬಾಂಗ್ಲಾ, ಬೆಲ್ಜಿಯಂ, ಟರ್ಕಿ, ಕೆನಡ, ಅಮೆರಿಕ, ನ್ಯೂಜಿಲೆಂಡ್, ಕ್ಯೂಬಾ, ಡೆನ್ಮಾರ್ಕ್, ಇಟಲಿ, ಜರ್ಮನಿ, ಜಪಾನ್ ಮತ್ತು ಭಾರತದಲ್ಲಿ ಮೇ ತಿಂಗಳ ಎರಡನೆ ಭಾನುವಾರ ಆಚರಿಸಲಾಗುತ್ತದೆ. ಆಫ್ಘಾನಿಸ್ತಾನ, ವಿಯಟ್ನಾಮ್, ಅಲ್ಜೀರಿಯಾದಲ್ಲಿ ಮಾಚ್ ೮ ರಂದು, ಹಂಗೇರಿ, ಸ್ಪೇನ್, ದಕ್ಷಿಣ ಕೊರಿಯಾದಲ್ಲಿ ಮೇ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. 

ಚಾರಿತ್ರಿಕ ಹಿನ್ನೆಲೆ: 
       ೧೮೭೭ರ ಮೇ ೧೧ರ ಭಾನುವಾರದಂದು ಅಮೆರಿಕದ ಮೆಥೋಡಿಸ್ಟ್ ಎಪಿಸ್ಕೋಪಲ್ ಚರ್ಚಿನ ಪಾದ್ರಿಗಳು ತಮ್ಮ ಮಗ ಮಾಡಿದ ತಪ್ಪಿಗೆ ನೊಂದು ಪ್ರಾರ್ಥನೆಯ ಸಮಯದಲ್ಲೇ ಧರ್ಮಪೀಠ ತ್ಯಜಿಸಿ ಹೊರನಡೆದಾಗ ಅಲ್ಲಿಯೇ ಇದ್ದ ಜೂಲಿಯಟ್ ಬ್ಲಾಕ್ಲಿ ಎನ್ನುವ ಮಹಿಳೆ ಪೀಠಾರೋಹಣ ಮಾಡಿ, ಉಳಿದ ಆಚರಣೆಗಳನ್ನು ಪೂರ್ಣಗೊಳಿಸಿರುವುದು ಮಾತ್ರವಲ್ಲದೇ ಅಲ್ಲಿ ನೆರೆದಿದ್ದ ಎಲ್ಲಾ ತಾಯಂದಿರನ್ನೂ ತನ್ನೊಡನೆ ಸೇರಲು ಪ್ರೋತ್ಸಾಹಿಸುತ್ತಾಳೆ. ತಮ್ಮ ತಾಯಿಯ ಈ ಕ್ರಮ ನೋಡಿ ಸಂತೃಪ್ತರಾದ ಆಕೆಯ ಇಬ್ಬರು ಮಕ್ಕಳು ಪ್ರತಿ ವರ್ಷವೂ ತಾಯಿಯ ಹುಟ್ಟುಹಬ್ಬದಂದು ತಮ್ಮ ಸ್ವಂತ ಸ್ಥಳಕ್ಕೆ ಹೋಗಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿ ಬರುವ ಸಂಪ್ರದಾಯ ಪ್ರಾರಂಭಿಸುತ್ತಾರೆ. ಈ ರೀತಿಯಾಗಿ ಪ್ರತಿ ಮೇ ತಿಂಗಳ ಎರಡನೆ ಭಾನುವಾರದಂದು ತಾಯಂದಿರಿಗೆ ಶ್ರದ್ಧಾಂಜಲಿ ಅರ್ಪಿಸುವಂತೆ ಊರಿನ ಹಿರಿಯರಿಗೆ, ಅಧಿಕಾರಿಗಳಿಗೆ, ವ್ಯಾಪಾರಿಗಳಿಗೆ ಉತ್ತೇಜನ ನೀಡುತ್ತಾರೆ. ೧೯ನೇ ಶತಮಾನದ ಉಪಾಂತ್ಯದಲ್ಲಿ ಈ ಪರಂಪರೆ ಅಮೇರಿಕದ ಅನೇಕ ನಗರಗಳಿಗೆ ಹರಡುವುದರೊಂದಿಗೆ ಮೆಥೋಡಿಸ್ಟ್ ಎಪಿಸ್ಕೋಪಲ್ ಚರ್ಚ್ ಸಹ ಈ ಸಂಪ್ರದಾಯ ಆಚರಿಸಲು ಪ್ರಾರಂಬಿಸುತ್ತದೆ. 
         ಅಮೇರಿಕದ ಅಂತರ್ಯುದ್ಧದ ಸಂದರ್ಭದಲ್ಲಿ ಜನತೆಗೆ ಶಾಂತಿ ಮಾರ್ಗ ಬೋಧಿಸುವ ನಿಟ್ಟಿನಲ್ಲಿ ಅನ್ ಮೇರಿ ರೀವ್ಸ್ ತಾಯಂದಿರ ಸ್ನೇಹದಿನ ಆಚರಿಸುವ ಸಂಪ್ರದಾಯವನ್ನು ಆರಂಭಿಸುತ್ತಾರೆ. ಇದೇ ಪರಂಪರೆ ಮುಂದುವರಿಸಿದ ಆಕೆಯ ಪುತ್ರಿ ಅನ್ನಾ ಜಾರ್ವಿಸ್ ಈ ಆಚರಣೆಯನ್ನು ಪ್ರತಿ ವರ್ಷವೂ ಮುಂದುವರಿಸುತ್ತಾರೆ. ೧೯೦೭ ರಲ್ಲಿ ಜಾರ್ವಿಸ್ ತನ್ನ ತಾಯಿಯ ಎರಡನೆಯ ಪುಣ್ಯ ತಿಥಿ ಆಚರಿಸುವ ವೇಳೆ ಗ್ರಾಫ್ಟನ್ ಚರ್ಚಿನ ಪಾದ್ರಿಗಳನ್ನೂ ಅದರಲ್ಲಿ ಪಾಲ್ಗೊಳ್ಳಲು ಒತ್ತಾಯಿಸುತ್ತಾಳೆ. ತದನಂತರ ತನ್ನ ಸಂಘಟನೆಯ ಮೂಲಕ ಜಾರ್ವಿಸ್ ಸಮಾಜದ ಎಲ್ಲ ಗಣ್ಯ ವ್ಯಕ್ತಿ, ಸಂಘಟನೆಗಳಿಗೂ ಪತ್ರ ಬರೆಯುವ ಮೂಲಕ ತಾಯಂದಿರ ದಿನವನ್ನು ಪ್ರತಿವರ್ಷ ಆಚರಿಸುವಂತೆ ಪ್ರೇರೇಪಿಸುತ್ತಾಳೆ. ಜಾರ್ವಿಸ್‌ಳ ಈ ಪ್ರಯತ್ನದಿಂದ ೧೯೧೧ರ ವೇಳೆಗೆ ಅಮೆರಿಕದ ಎಲ್ಲ ಪ್ರಾಂತ್ಯಗಳಲ್ಲಿಯೂ ಕೂಡ ತಾಯಂದಿರ ದಿನದ ಆಚರಣೆಯ ಸಂಪ್ರದಾಯ ಬೇರೂರುತ್ತದೆ. ಇತನ್ಮಧ್ಯೆ ಜ್ಯೂಲಿಯಾ ವಾರ್ಡ್ ಹೋವ್ ಎಂಬ ಲೇಖಕಿ ಬೋಸ್ಟನ್ ನಗರದಲ್ಲಿ ತಾಯಂದಿರ ದಿನವನ್ನು ಶಾಂತಿಗಾಗಿ ಆಚರಿಸುವುದರ ಮೂಲಕ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ೧೯೧೪ರಲ್ಲಿ ವುಡ್ರೋ ವಿಲ್ಸನ್ ಸರ್ಕಾರ ಈ ದಿನದಂದು ರಾಷ್ಟ್ರೀಯ ರಜಾ ದಿನವೆಂದು ಘೋಷಿಸುತ್ತದೆ. ೨೦ ನೆಯ ಶತಮಾನದ ಮಹಿಳಾ ಚಳುವಳಿಗಳ ಪೈಕಿ ಅನ್ನಾ ಜಾರ್ವಿಸ್ ನಡೆಸಿದ ಹೋರಾಟಗಳು ನಿರ್ಲಕ್ಷ್ಯಕ್ಕೊಳಗಾದರೂ, ಆಕೆ ೧೯೦೮ ರ ಮೇ ೧೦ರಂದು ತನ್ನ ತಾಯಿ ಮೇರಿ ರೀವ್ಸ್ ಅವರ ನೆನಪಿನ ಸ್ಮಾರಕ ನಿರ್ಮಿಸಿದ್ದರು. 

ಯಾರೀಕೆ ಮೇರಿ ರೀವ್ಸ್?
        ಅನ್ ಮೇರಿ ರೀವ್ಸ್ ೧೮೪೩ ರಲ್ಲಿ ಮೆಥೋಡಿಸ್ಟ್ ಮಂತ್ರಿಯಾಗಿದ್ದ ತನ್ನ ತಂದೆ ಜೋಸಯ್ಯ ರಿವ್ಸ್‌ರೊಡನೆ ವರ್ಜಿನಿಯಾಗೆ ಬಂದು ನೆಲೆಸಿದಾಗ ಆಕೆಗೆ ಹನ್ನೆರಡರ ಪ್ರಾಯ. ೧೮೫೦ರಲ್ಲಿ ಗ್ರಾನ್‌ವಿಲೆ ಜಾರ್ವಿಸ್‌ರನ್ನು ವಿವಾಹವಾದ ಮೇರಿಗೆ ಹನ್ನೊಂದು ಮಕ್ಕಳಾದರೂ, ದುರದೃಷ್ಟದಿಂದ ಬದುಕುಳಿದದ್ದು ಕೇವಲ ನಾಲ್ವರು. ಅನ್ ಮೇರಿ ವಾಸಿಸುತ್ತಿದ್ದ ವೆಬ್‌ಸ್ಟರ್ ಪ್ರದೇಶದಲ್ಲಿ ನೈರ್ಮಲ್ಯದ ಅಭಾವದಿಂದ ರೋಗರುಜಿನಗಳು ಕಾಡುತ್ತಿದ್ದು, ಆಕೆಯ ಮಕ್ಕಳೂ ಬಲಿಯಾಗಿದ್ದರು. ಆದರೂ ಧೃತಿಗೆಡದೆ ಮಕ್ಕಳನ್ನು ಸಾಕಿದ ಮೇರಿ ಜನರಲ್ಲಿ ಶುಚಿತ್ವದ ಬಗ್ಗೆ ಅರಿವು ಮೂಡಿಸಲು ಸೋದರ ಜೇಮ್ಸ್ ಎಡ್ವರ್ಡ್ ರೀವ್ಸ್‌ನ ಸಹಾಯ ಪಡೆಯುತ್ತಿದ್ದಳು. ವೃತ್ತಿಯಲ್ಲಿ ವೈದ್ಯರಾಗಿದ್ದ ಜೇಮ್ಸ್ ಮೇರಿ ಸ್ಥಾಪಿಸಿದ್ದ ಮಹಿಳಾ ಕ್ಲಬ್‌ಗಳಿಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡುತ್ತಿದ್ದರು. ಕ್ಷಯರೋಗದಿಂದ ಬಳಲುತ್ತಿದ್ದ ತಾಯಂದಿರ ಆರೈಕೆಗಾಗಿ ಮಹಿಳಾ ಕ್ಲಬ್‌ನ ಸದಸ್ಯರು ಮನೆಗಳಿಗೆ ಭೇಟಿ ನೀಡುತ್ತಿದ್ದರು. ಈ ಎಲ್ಲಾ ಸೇವೆಗಳ ಹಿಂದೆ ಅನ್ ಮೇರಿಯ ಉದಾತ್ತ ಸೇವಾ ಮನೋಭಾವ ಪ್ರೇರಕ ಶಕ್ತಿಯಾಗಿತ್ತು.
       ಅಮೇರಿಕದ ಅಂತರಿಕ ಯುದ್ಧ ಉಚ್ಚ್ರಾಯ ಸ್ಥಿತಿ ತಲುಪಿದ್ದ ಹಂತದಲ್ಲಿ, ೧೮೬೧ ರಲ್ಲಿ, ವೆಬ್‌ಸ್ಟರ್ ಮತ್ತು ಟೇಲರ್ ಗ್ರಾಮಗಳು ಬಹುತೇಕ ಸೇನಾ ನೆಲೆಗಳಾಗಿದ್ದವು. ಯುದ್ಧ ನಿರತರಾಗಿದ್ದ ಎರಡೂ ಬಣಗಳು ಈ ಪ್ರದೇಶದಲ್ಲಿ ಬೀಡು ಬಿಟ್ಟಿದ್ದವು. ಇದರಿಂದ ತನ್ನ ಕ್ಲಬ್‌ಗಳಿಗೆ ಸಮಸ್ಯೆಯಾಗಬಹುದೆಂದು ಭಾವಿಸಿದ ಮೇರಿ ಕೂಡಲೇ ತುರ್ತು ಸಭೆ ಕರೆದು ಎಂತಹ ವಿಷಮ ಪರಿಸ್ಥಿತಿ ಎದುರಾದರೂ ಕ್ಲಬ್ ಸದಸ್ಯರು ಪರಸ್ಪರ ಸ್ನೇಹ ಮರೆಯದೆ, ಯುದ್ಧ ನಡೆಯುವ ಸಂದರ್ಭವಾಗಲಿ, ಮುಗಿದ ತದನಂತರ ಚರ್ಚುಗಳ ವಿಭಜನೆಯಾಗದಂತೆ ಎಚ್ಚರ ವಹಿಸಬೇಕು ಎನ್ನುವ ವಾಗ್ದಾನವನ್ನು ಎಲ್ಲರಿಂದಲೂ ಪಡೆದುಕೊಂಡ ದಿಟ್ಟ ಮಹಿಳೆ. ಯುದ್ಧದ ಸಮಯದಲ್ಲಿ ಸೈನಿಕರು ಟೈಫಾಯ್ಡ್ ಮತ್ತು ದಡಾರ ರೋಗಗಳಿಗೆ ತುತ್ತಾದಾಗ ಸೇನಾ ಪಡೆಗಳು ಮೇರಿಯ ಕ್ಲಬ್‌ನ ಸಹಾಯ ಯಾಚಿಸಿದರು. ಸಹಾಯಹಸ್ತ ಚಾಚಿದ ಮೇರಿ ಯಾವುದೇ ಕಾರಣಕ್ಕೂ ಸೈನಿಕರು ಕ್ಲಬ್‌ನ ಸದಸ್ಯರನ್ನು ಅವಮಾನಿಸುವುದಾಗಲೀ, ಅನ್ಯ ಸಮುದಾಯಗಳ ವಿರುದ್ಧ ತಾರತಮ್ಯ ತೋರುವುದಾಗಲಿ ಮಾಡಕೂಡದೆಂದು ಷರತ್ತು ವಿಧಿಸಿದ್ದಳು. ಈ ಷರತ್ತಿಗೆ ಸೇನಾಪಡೆ ಒಪ್ಪಿದ ನಂತರವೇ ಸಹಾಯ ಒದಗಿಸಲಾಗಿ, ಕ್ಲಬ್ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.
         ಅಂತರ್ಯುದ್ಧ ಮುಗಿದ ನಂತರ ಫ್ರುಂಟಿ ಟೌನ್‌ನ ಕೋರ್ಟ್ ಹೌಸ್‌ನಲ್ಲಿ ತಾಯಂದಿರ ದಿನ ಆಚರಿಸುವ ಮೂಲಕ ಮೇರಿ ಎರಡೂ ಸೈನ್ಯಗಳ ಸೈನಿಕರನ್ನು ಮತ್ತು ಕುಟುಂಬದವರನ್ನೂ ಒಂದುಗೂಡಿಸಿ, ಮನರಂಜನಾ ಕಾರ್ಯಕ್ರಮ ಏರ್ಪಡಿಸಿದ್ದರು. ಯುದ್ಧದ ಸಂದರ್ಭದಲ್ಲಿ ವಿರೋಧಿ ಬಣದ ಸೈನಿಕರು ನೀಲಿ ಮತ್ತು ಬೂದು ಬಣ್ಣದ ಉಡುಗೆ ಧರಿಸಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಮೇರಿ ಬೂದು ಬಣ್ಣದ ಉಡುಗೆ ಧರಿಸಿದ್ದರೆ, ಮತ್ತೊರ್ವ ಮಹಿಳೆ ನೀಲಿ ವಸ್ತ್ರ ಧರಿಸಿ, ಸಾಂಕೇತಿಕ ಐಕ್ಯತೆಯನ್ನು ಪ್ರದರ್ಶಿಸಿದ್ದರು. ಭಿನ್ನ ವಸ್ತ್ರಗಳನ್ನು ಧರಿಸಿದ ಇಬ್ಬರು ಮಹಿಳೆಯರು ಪರಸ್ಪರ ಆಲಂಗಿಸಿ, ಹಸ್ತಲಾಘವ ನೀಡುವುದರ ಮೂಲಕ ಮನುಜ ಸಂಬಂಧ ಬೆಸೆಯುವ ಸಂದೇಶವನ್ನೂ ಮೇರಿ ನೀಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರೂ ಇದೇ ರೀತಿ ಪರಸ್ಪರ ಆಲಂಗಿಸಿಕೊಂಡು ಐಕ್ಯತೆಯನ್ನು ಪ್ರದರ್ಶಿಸಿದ್ದರು. ಅಲ್ಲಿ ನೆರೆದಿದ್ದ ಎರಡೂ ಪಂಗಡಗಳ ಜನ ತಮಗೇ ಅರಿವಿಲ್ಲದಂತೆ ಯುದ್ಧ ಪರಂಪರೆಯನ್ನು ಮರೆತು, ತುಂಬಿದ ಕಂಗಳಿಂದ ಪರಸ್ಪರ ಆಲಂಗಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು.
      ಈ ರೀತಿಯಾಗಿ ತಾಯಂದಿರ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದೇ ಅಲ್ಲದೆ ತನ್ಮೂಲಕ ವಿಶ್ವ ಭ್ರಾತೃತ್ವ, ಮಾನವತೆಯನ್ನು ಜಗತ್ತಿಗೆ ಸಾರುವ ಮಹತ್ತರ ಕಾರ್ಯ ಕೈಗೊಂಡ ಅನ್ ಮೇರಿ ರೀವ್ಸ್ ತನ್ನ ೭೨ ನೇ ವಯಸ್ಸಿನಲ್ಲಿ ೧೯೦೫ರಲ್ಲಿ ಇಹಲೋಕ ತ್ಯಜಿಸಿದ್ದರು. ಈ ಮಹಾನ್ ಚೇತನದ ನೆನಪಿನಲ್ಲೇ ಆಕೆಯ ಪುತ್ರಿ ಅನ್ನಾ ಜಾರ್ವಿಸ್ ಪ್ರತಿವರ್ಷವೂ ತಾಯಂದಿರ ದಿನವನ್ನು ಆಚರಿಸುವ ಸಂಪ್ರದಾಯ ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೆ ತಾಯಂದಿರ ದಿನವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವ ನಿಟ್ಟಿನಲ್ಲೂ ಸಾಕಷ್ಟು ಶ್ರಮ ವಹಿಸಿದ್ದರು. ಇಂದಿಗೂ ಫಿಲಾಡೆಲ್ಫಿಯಾದಲ್ಲಿರುವ ಅನ್ ಮೇರಿ ರೀವ್ಸ್ ಅವರ ಸಮಾಧಿಗೆ ತಾಯಂದಿರ ದಿನದಂದು ತಂಡೋಪತಂಡವಾಗಿ ತೆರಳಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ.

ತಾಯಂದಿರ ದಿನದ ಸಾರ್ಥಕತೆ: 
      ಪುರಾತತ್ವ ಮಹತ್ತರ ಅಂಶಗಳಿಂದ ವಿಶ್ವಕ್ಕೆ ಮಾದರಿಯಾಗಿದ್ದ ಭಾರತದಲ್ಲಿಂದು ಆಧುನಿಕತೆಯ ಸೋಗಿನಲ್ಲಿ ಉದ್ಭವಿಸಿರುವ ಅನೇಕ ಸಮಸ್ಯೆಗಳಿಂದ ತಲೆತಗ್ಗಿಸುವಂತಾಗಿರುವುದು ಸತ್ಯ. ಇವುಗಳ ಪೈಕಿ ವೃದ್ಧಾಪ್ಯದಲ್ಲಿನ ಸಮಸ್ಯೆಯೂ ಒಂದಾಗಿದೆ. ಒಂದೆಡೆ ನಾಗರಿಕ ಸಮಾಜ ಹೆಚ್ಚು ಸುಶಿಕ್ಷಿತವಾಗುತ್ತಿರುವಂತೆಲ್ಲಾ ಹೆತ್ತವರನ್ನು ನಿರ್ಲಕ್ಷಿಸುವ ಪ್ರವೃತ್ತಿಯೂ ಹೆಚ್ಚಾಗುತ್ತಿರುವುದು ವಿಷಾದನೀಯ. ದೇಶದಲ್ಲಿಂದು ಅನಾಥಾಶ್ರಮಗಳಿಗಿಂತ ಹೆಚ್ಚು ವೃದ್ಧಾಶ್ರಮಗಳಿವೆ. ಡಾಲರ್‌ಗಳ ಬೆನ್ನಟ್ಟಿ ವಿದೇಶದಲ್ಲಿ ನೆಲೆಸುವ ಪುತ್ರ ರತ್ನರು ತಮ್ಮ ವೃದ್ಧ ಪೋಷಕರನ್ನು ವೃದ್ಧಾಶ್ರಮಕ್ಕೆ ವಹಿಸುವ ಪರಂಪರೆ ಒಂದೆಡೆಯಾದರೆ, ಮತ್ತೊಂದೆಡೆ ಇಲ್ಲಿಯೇ ನೆಲೆಸಿದ್ದರೂ ಕೌಟುಂಬಿಕ ಸಾಮರಸ್ಯ ನಿರ್ವಹಿಸಲಾಗದೆ ಹೆತ್ತವರನ್ನು ನಿರ್ಲಕ್ಷಿಸುವ ಪರಂಪರೆ ಸದ್ದಿಲ್ಲದೆ ಬೆಳೆಯುತ್ತಿದೆ. ಮಧ್ಯಮ ವರ್ಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಈ ಪ್ರವೃತ್ತಿಗೆ ಹಲವಾರು ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಕಾರಣಗಳಿವೆ. ಜಾಗತೀಕರಣದ ಪರಿಣಾಮವಾಗಿ ಯುವ ಜನಾಂಗದಲ್ಲಿ ಕಂಡುಬರುತ್ತಿರುವ ಧನದಾಹಿ ಮನೋಭಾವ, ಐಷಾರಾಮಿ ಜೀವನದ ಕನಸು, ಪೀಳಿಗೆಯ ಅಂತರದ ನೆಪದಲ್ಲಿ ಹಿರಿಯರ ಮನೋಭಾವ ಗ್ರಹಿಸಲಾಗದ ಯುವಕರ ಅಹಮಿಕೆ, ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಲು ಬೇಕಾದ ತಾಳ್ಮೆಯ ಕೊರತೆ ಇವೆಲ್ಲವೂ ಕೂಡ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ.
        ಹೆತ್ತವರಿಗೆ ವೃದ್ಧಾಪ್ಯದಲ್ಲಿ ಒಂದು ನೆಮ್ಮದಿಯ ತಾಣದೊಂದಿಗೆ ಆರೋಗ್ಯಕರ ಸನ್ನಿವೇಶ ಒದಗಿಸುವುದು ಮಕ್ಕಳ ಕರ್ತವ್ಯ ಎನ್ನುವ ಭಾವನೆ ಕ್ಷೀಣಿಸುತ್ತಿದ್ದು, ಕೌಟುಂಬಿಕ ಸಂಬಂಧಗಳು ವ್ಯಾವಹಾರಿಕತೆಯ ಸೋಗಿನಲ್ಲಿ ಬಿಂಬಿತವಾಗುತ್ತಿದೆ. ಹಣಬಲವಿದ್ದು, ತಂದೆ ತಾಯಿಯನ್ನು ದೂರದ ಬಡಾವಣೆಗಳ ಐಷಾರಾಮಿ ಅಪಾರ್ಟುಮೆಂಟುಗಳಲ್ಲಿ ಪ್ರತ್ಯೇಕವಾಗಿರಿಸುವುದೂ ಒಂದು ಪ್ರತಿಷ್ಠೆಯ ಸಂಕೇತವಾಗಿದೆ. ನಮ್ಮ ತಂದೆ ತಾಯಿಗೇನೂ ತೊಂದರೆ ಇಲ್ಲ, ಆಗಾಗ್ಗೆ ಹೋಗಿ ನೋಡಿಬರುತ್ತೇವೆ, ಅವರಿಗೆ ಬೇಕಾದ್ದನ್ನೆಲ್ಲಾ ಒದಗಿಸುತ್ತೇವೆ ಎಂದು ಹೇಳುವುದೂ ಒಂದು ಗೌರವದ ಸಂಕೇತವೆನ್ನುವ ಹುಚ್ಚು ತಿಳುವಳಿಕೆ ಹೆಚ್ಚುತ್ತಿದೆ. ಇದಕ್ಕಿಂತಲೂ ಭಿನ್ನವಾದುದು ಮಕ್ಕಳು ಕೆಲವು ಸಂದರ್ಭಗಳಲ್ಲಿ ಹೆತ್ತವರನ್ನು ಅತ್ಯುತ್ತಮ ಸೌಲಭ್ಯಗಳಿರುವ ವೃದ್ಧಾಶ್ರಮದಲ್ಲಿ ಸೇರಿಸಿರುವುದನ್ನು ಮಕ್ಕಳು ಹೆಮ್ಮೆಯಿಂದ ಹೇಳಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಎಷ್ಟೇ ಸೌಲಭ್ಯಗಳಿಂದ ಕೂಡಿದ್ದು,ಚಿನ್ನದ ಸುಪ್ಪತ್ತಿಗೆಯಲ್ಲಿ ಕೂರಿಸಿ, ಹವಾ ನಿಯಂತ್ರಿತ ಕೊಠಡಿಗಳಿದ್ದರೂ, ಹೆತ್ತವರಿಗೆ ಅತ್ಯಮೂಲ್ಯವಾಗಿ ಬೇಕಾಗಿರುವ ಪ್ರೀತಿ-ವಾತ್ಸಲ್ಯ. ವೃದ್ಧಾಪ್ಯದಲ್ಲಿ ಅಗತ್ಯವಾದ ಸಾಂತ್ವನ, ಮಕ್ಕಳ ಪ್ರೀತಿ ವಾತ್ಸಲ್ಯ, ಕೌಟುಂಬಿಕ ಪರಿಸರ, ಮೊಮ್ಮಕ್ಕಳ ಒಡನಾಟ ಇವೆಲ್ಲದರಿಂದಲೂ ವಂಚಿತರಾಗುವ ಹಿರಿಯರ ಬೇಗುದಿ ಇಂದಿನ ಯುವ ಪೀಳಿಗೆಗೆ ಅರಿವಾಗುತ್ತಿಲ್ಲ.
       ಭಾರತೀಯ ಸಂಸ್ಕೃತಿಯ ಕುರಿತು ಪುಂಖಾನುಪುಂಖವಾಗಿ ಉಪನ್ಯಾಸ ನೀಡುವ ಸಾಂಸ್ಕೃತಿಕ ರಾಯಭಾರಿಗಳ ದೃಷ್ಟಿಯಲ್ಲಿ ಮಾತೆ ಪರಮ ಪೂಜನೀಯಳು. ನದಿ, ಬೆಟ್ಟ, ಪರ್ವತ, ಅರಣ್ಯ, ಭೂಮಿ ಎಲ್ಲವೂ ಮಾತೃ ಸಮಾನವೆಂದೇ ಪರಿಗಣಿಸಲಾಗುತ್ತದೆ. ಸಮಸ್ತ ಹಿಂದೂಗಳಿಗೆ ಗಂಗೆ, ಕನ್ನಡಿಗರಿಗೆ ಕಾವೇರಿ, ಭಾರತೀಯರಿಗೆ ಭಾರತ ಮಾತೆ, ಕರ್ನಾಟಕದ ಜನತೆಗೆ ಭುವನೇಶ್ವರಿ, ಎಲ್ಲವೂ ಪೂಜ್ಯವೇ. ಆದರೆ ಈ ಮಾತೃ ಸ್ವರೂಪ ನೈಸರ್ಗಿಕ ಸಂಪತ್ತಿಗೆ ನಾಗರಿಕ ಸಮಾಜ ಸಲ್ಲಿಸುತ್ತಿರುವ ಸೇವೆಯಾದರೂ ಎಂತಹುದು? ಭಾವನೆಗಳ ನೆಲೆಗಟ್ಟಿನಲ್ಲಿ ಈ ಪೂಜ್ಯ ಭಾವನೆ ವಿನಾಶಕಾರಿ ಸ್ವರೂಪ ತಾಳುವುದನ್ನೂ, ಮಾತೃ ಭಕ್ತಿ ಪರಾಕಾಷ್ಠೆ ತಲುಪಿದಾಗ ಭ್ರಾತೃಘಾತುಕ ಲಕ್ಷಣಗಳು ಹೊರ ಹೊಮ್ಮುವುದನ್ನೂ ಇತಿಹಾಸದಲ್ಲಿ ನೋಡಿದ್ದೇವೆ. ಮತ್ತೊಂದೆಡೆ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯುವುದರ ಮೂಲಕ ನದಿಗಳನ್ನು ಕಲುಷಿತಗೊಳಿಸುವ ಮೂಲಕ, ಅರಣ್ಯಗಳನ್ನು ನಾಶಮಾಡುವ ಮೂಲಕ, ಅನ್ನ ನೀಡುವ ಭೂತಾಯಿಯನ್ನು ಉದ್ಯಮಿಗಳಿಗೆ ಒಪ್ಪಿಸಿ, ಅನ್ನದಾತರನ್ನು ಕಡೆಗಣಿಸುವ ಮೂಲಕ ನಮ್ಮ ಮಾತೃ ಭಕ್ತಿಯನ್ನು ಪ್ರದರ್ಶಿಸುತ್ತಿದ್ದೇವೆ. ಮತೀಯ ಭಾವನೆಗಳನ್ನು ಕೆರಳಿಸಿ, ಜಾತಿ ವೈಷಮ್ಯವನ್ನು ಹೆಚ್ಚಿಸಿ, ಧರ್ಮ ಸಂರಕ್ಷಣೆಯ ಹೆಸರಿನಲ್ಲಿ, ಭಾರತ ಮಾತೆಯ ಮಕ್ಕಳ ನಿತ್ಯ ಸಂಹಾರವಾಗುತ್ತಿದ್ದರೂ ದಿವ್ಯಮೌನ ವಹಿಸಿದ್ದೇವೆ.
         ತಾಯಂದಿರ ದಿನಾಚರಣೆ ಎಂದರೆ ಹೆತ್ತ ತಾಯಂದಿರನ್ನು ನೆನೆಯುವುದಷ್ಟೇ ಅಲ್ಲ, ಮನುಕುಲವನ್ನು ಪೊರೆವ ಮಾತೃ ಸಮಾನ ಪರಿಸರವನ್ನು ರಕ್ಷಿಸುವುದೂ ನಮ್ಮ ಕರ್ತವ್ಯವೆಂದು ನಾಗರಿಕ ಸಮಾಜ ಭಾವಿಸಬೇಕಿದೆ. ಆಧುನಿಕ ಜಗತ್ತಿನಲ್ಲಿ ಕೌಟುಂಬಿಕ ಮೌಲ್ಯಗಳು ನಶಿಸಿಹೋಗುತ್ತಿರುವ ಸಂದರ್ಭದಲ್ಲಿ ಯುವ ಪೀಳಿಗೆಗೆ ಒಂದು ಆದರ್ಶಪ್ರಾಯ ಮಾರ್ಗದರ್ಶನ ಇಲ್ಲದಿರುವುದು ಸ್ಪಷ್ಟ. ಸಂಸ್ಕೃತಿ, ಕಲೆ, ರಾಜಕೀಯ, ಶಿಕ್ಷಣ, ಸಾಹಿತ್ಯ, ಆಧ್ಯಾತ್ಮ ಎಲ್ಲ ಕ್ಷೇತ್ರಗಳಲ್ಲೂ ಸಂವೇದನೆ ಮಾಯವಾಗುತ್ತಿದ್ದು ವಾಣಿಜ್ಯೀಕರಣ ತಲೆದೋರುತ್ತಿದೆ. ಕೌಟುಂಬಿಕ ಕ್ಷೇತ್ರವೂ ಇದರ ಪ್ರಭಾವದಿಂದ ಹೊರತಾಗಿಲ್ಲ. ಆಸ್ತಿ-ಹಣದ ವ್ಯಾಮೋಹದಿಂದ ಹೆತ್ತವರನ್ನು ಹಾಗೂ ಬಂಧುಗಳನ್ನೇ ಕೊಲೆಮಾಡುವ ದುರ್ದರ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಒಂದು ಆದರ್ಶಪ್ರಾಯ ತಳಹದಿ ಒದಗಿಸುವಲ್ಲಿ ನಮ್ಮ ಆಧುನಿಕ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆ ಎನ್ನುವುದು ಸತ್ಯ. ಪಠ್ಯ ಪುಸ್ತಕಗಳಲ್ಲಿ ಲಭ್ಯವಿರುವ ಪಾಠಗಳನ್ನು ಮೀರಿ ಮಕ್ಕಳಿಗೆ ನೀತಿ ಮಾರ್ಗ ತೋರಿಸುವ ಶಿಕ್ಷಕ ಪರಂಪರೆ ಬಹುತೇಕ ನಶಿಸಿಹೋಗಿದ್ದು, ವಿದ್ಯಾರ್ಜನೆ ಎನ್ನುವುದು ದುಡಿಮೆಗೆ, ಧನಾರ್ಜನೆಗೆ ಸೋಪಾನ ಎಂದೇ ಪರಿಗಣಿಸಲಾಗುತ್ತಿದೆ.
       ಮಧ್ಯಮ ವರ್ಗ ಮತ್ತು ಗ್ರಾಮೀಣ ಭಾಗದಿಂದ ನಗರಗಳಿಗೆ ವಲಸೆ ಬಂದು ನಗರೀಕರಣಕ್ಕೊಳಗಾದ ಜನಸಮುದಾಯದಲ್ಲಿ ಉದ್ಭವಿಸಿರುವ ಅಭದ್ರತೆ ಹೋಗಲಾಡಿಸುವಲ್ಲಿ ಸರ್ಕಾರಗಳು ವಿಫಲವಾಗಿರುವುದರಿಂದ, ಯುವಪೀಳಿಗೆ ಸುಖದ ಬೆನ್ನಟ್ಟಿ ಹೋಗುವುದು ಸ್ವಾಭಾವಿಕ. ಯುವಪೀಳಿಗೆಗೆ ನೈತಿಕ ಮಟ್ಟದಲ್ಲಿ ಒಂದು ಉತ್ತಮ ಸಾಮಾಜಿಕ-ಸಾಂಸ್ಕೃತಿಕ ವೇದಿಕೆ ಒದಗಿಸುವಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿಗಳಿಗೆ ಅಂಕಗಳಿಕೆಯೇ ಕಣ್ಣ ಮುಂದಿರುವ ಧ್ಯೇಯವಾದರೆ, ಶಿಕ್ಷಕರಿಗೆ ಹಣಗಳಿಕೆ ಧ್ಯೇಯವಾಗಿದೆ. ಮತ್ತೊಂದೆಡೆ ಹೆತ್ತವರಿಗೆ ಮಕ್ಕಳು ಐದಂಕಿಯ ಸಂಬಳ ಗಳಿಸುವುದೇ ಧ್ಯೇಯ. ಈ ಧನಗಾಹಿ ಸಂಸ್ಕೃತಿಯ ಪರಿಣಾಮಕ್ಕೆ ಬಲಿಯಾಗುತ್ತಿರುವವರಲ್ಲಿ ಹೆತ್ತವರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಯುವ ಪೀಳಿಗೆಯ ಆಶಯಗಳನ್ನು ಗ್ರಹಿಸುವಲ್ಲಿ ಮತ್ತು ಪೀಳಿಗೆಯ ಅಂತರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೆತ್ತವರ ವೈಫಲ್ಯವನ್ನೂ ಇಲ್ಲಿ ನಿರ್ಲಕ್ಷಿಸುವಂತಿಲ್ಲ. ಹಾಗಾಗಿ ಪ್ರಸಕ್ತ ಸನ್ನಿವೇಶಕ್ಕೆ, ಹೆತ್ತವರನ್ನು ನಿರ್ಲಕ್ಷಿಸುವ ಪರಂಪರೆಯ ಉಗಮಕ್ಕೆ ನಾಗರಿಕ ಸಮಾಜವೂ ಸೇರಿದಂತೆ, ಇಡೀ ವ್ಯವಸ್ಥೆ ಕಾರಣವಾಗಿದೆ.
        ಸಂಸ್ಕೃತಿಯ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಸಂಘಟನೆಗಳು, ಮನುಕುಲದ ಶ್ರೇಷ್ಟ ಪರಂಪರೆಯಾದ ಮಾತೃ ಪ್ರೇಮಕ್ಕೆ ದಕ್ಕೆ ಬಂದಿರುವುದನ್ನು ಗಮನಿಸಿಲ್ಲ. ಮಾತೃ ದೇವೋಭವ ಎಂಬ ಶ್ಲೋಕಗಳು ಮನಸ್ಸಿಗೆ ಆಹ್ಲಾದ ಉಂಟುಮಾಡಬಲ್ಲದೇ ಹೊರತು, ವಾಸ್ತವ ಸನ್ನಿವೇಶಗಳನ್ನು ಬದಲಿಸುವುದಿಲ್ಲ. ಹೆತ್ತವರಿಗೆ ದೈವೀಕ ಸ್ವರೂಪ ನೀಡಿ, ದೇಹವಿಲ್ಲದ ಆತ್ಮಗಳಿಗೆ ತರ್ಪಣ ನೀಡುವ ಸಂಸ್ಕೃತಿಗಿಂತಲೂ, ಜೀವಾತ್ಮವನ್ನು ಹೊತ್ತ ದೇಹಗಳಿಗೆ ಸಾಂತ್ವನ ನೀಡುವ ಸಂಸ್ಕೃತಿಯನ್ನು ಬೆಳೆಸುವುದು ಇಂದಿನ ಅಗತ್ಯತೆಯಾಗಿದೆ. ಅಗೋಚರ, ಅತೀತ ಕಲ್ಪನೆಗಳಿಗೆಲ್ಲಾ ಮಾತೃ ಸ್ವರೂಪವನ್ನು ನೀಡಿ ಪೂಜಿಸುವ ಸಮಾಜದಲ್ಲಿ ಹೆತ್ತ ತಾಯಿಯನ್ನೇ ನಿರ್ಲಕ್ಷಿಸುವ ಪರಂಪರೆ ಸದ್ದಿಲ್ಲದೆ ಬೆಳೆಯುತ್ತಿರುವುದು ಸತ್ಯ. ತಾಯಂದಿರ ದಿನದಂದು ನಾಗರಿಕ ಸಮಾಜದಲ್ಲಿ ಹೊಸ ಪ್ರಜ್ಞೆ ಮೂಡಿದಾಗಲೇ ಈ ದಿನದ ಸಾರ್ಥಕ್ಯವನ್ನು ಪಡೆದುಕೊಳ್ಳಲು ಸಾಧ್ಯ. 
ಏನಂತಿರಾ.....