ಡಾ.ರಾಘವ ನಂಬಿಯಾರ್ ಅವರಿಗೆ ಪತ್ರಿಕಾ ದಿನದ ಗೌರವ

ಉಡುಪಿ: ವಿಶ್ರಾಂತ ಪತ್ರಕರ್ತ, ಯಕ್ಷಗಾನ ಸಂಶೋಧಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ರಾಘವ ನಂಬಿಯಾರ್ ಅವರಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆಯ ಉಡುಪಿ ಜಿಲ್ಲಾ ಘಟಕ ನೀಡುವ 2014ನೇ ಸಾಲಿನ ಪತ್ರಿಕಾ ದಿನಾಚರಣೆಯ ಗೌರವ ನೀಡಲಾಗುತ್ತಿದೆ ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.
    ಪತ್ರಿಕಾ ದಿನದ ಮುನ್ನಾ ದಿನ ನಂಬಿಯಾರ್ ಅವರ ನಿವಾಸ ಉಡುಪಿ ಕುಂಜಿಬೆಟ್ಟು ಪಂಚಮೂಲದಲ್ಲಿ ಈ ಗೌರವವನ್ನು ನೀಡಲಾಗುತ್ತಿದೆ. ಹಿರಿಯ ಪತ್ರಕರ್ತ ನಾದವೈಭವಂ ವಾಸುದೇವ ಭಟ್ ಅವರು ಪ್ರಶಸ್ತಿ ಪ್ರದಾನಿಸಲಿರುವರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಿರಣ್ ಮಂಜನಬೈಲು, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ, ತ್ರಿಷಾ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಾಶ ಪಡಿಯಾರ್, ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಬೈಂದೂರು ಮತ್ತು ಪತ್ರಕರ್ತ ಮಿತ್ರರು ಭಾಗವಹಿಸಲಿರುವರು.
    ಕಳೆದ ಆರು ವರ್ಷಗಳಲ್ಲಿ ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ. ಚಂದ್ರಯ್ಯ, ಉಮೇಶ ರಾವ್ ಎಕ್ಕಾರು, ಕು.ಗೋ, ಎ.ಎಸ್ ಎನ್ ಹೆಬ್ಬಾರ್, ಎಂ.ವಿ. ಕಾಮತ್ ಅವರನ್ನು ಅವರವರ ನಿವಾಸದಲ್ಲಿ ವಿಶಿಷ್ಟವಾಗಿ ಗೌರವಿಸಲಾಗಿತ್ತು.

ನಂಬಿಯಾರರ ಪರಿಚಯ:
     ಮಣಿಪಾಲದ ಉದಯವಾಣಿ ಪತ್ರಿಕೆಯಲ್ಲಿ 30 ವರ್ಷಗಳ ಕಾಲ ಉಪಸಂಪಾದಕರಾಗಿ, ಅದೇ ಪತ್ರಿಕೆಯ ಮುಂಬಯಿ ವಿಭಾಗದಲ್ಲಿ ಕೊನೆಯ ಅವಧಿಯ ಅರ್ಧ ವರ್ಷ ಸೇವೆ ಸಲ್ಲಿಸಿದ ಅವರು ಯಕ್ಷಗಾನದ ಕುರಿತು ಅಭ್ಯಸಿಸಿ ರಚಿಸಿದ " ಕರಾವಳಿ ಯಕ್ಷಗಾನದ ಹಿಮ್ಮೇಳ: ಒಂದು ಸಮಗ್ರ ಅಧ್ಯಯನ" ಮಹಾಪ್ರಬಂಧಕ್ಕೆ ಮಂಗಳೂರು ವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.
    ಪತ್ರಕರ್ತನಾಗಿ ಪತ್ರಿಕಾ ಭಾಷೆಗೆ ಹೊಸ ದೇಖಿ ನೀಡಿದ ಕೆಲಸ, ಕ್ರಿಡಾ ಭಾಷೆಗೆ ಹೊಸತನ, ಕಲಾವಿದರ ಪರಿಚಯ, ಕಲಾಪ್ರದರ್ಶನಗಳ ವಿಮರ್ಶೆ, ಸಾಹಿತ್ಯ ವಿಮರ್ಶೆ, ರಂಗ ಮೀಮಾಂಸೆ ಇತ್ಯಾದಿ ಸೃಜನ ಶೀಲ ಬರೆಹಗಳಿಂದ ಪ್ರಸಿದ್ಧಿ ಪಡೆದಿದ್ದಾರೆ. ರಾನಂ ಅವರ ಕಾವ್ಯ ನಾಮ.
     ಮದ್ದಳೆಯ ಮಾಯಾಲೋಕ, ವಿಲೋಕನ, ತಿಳಿನೋಟ, ದೀವಟಿಕೆ, ಚಿನ್ನದ ತಾಳ, ಹಿಮ್ಮೇಳ, ಮುಂದಲೆ, ಯಾಜಿ ಭಾಗವತರು, ಯಕ್ಷ ಚೇತನ, ಜೀವೇಮ ಶರದಃ ಶತಮ್, ಹಾಡು ಆಡು ಕಾವ್ಯ, ಆಶು ವೈಖರಿ, ದ್ರಾವಿಡ ನಾಡು ನುಡಿ, ರಂಗಸ್ಥಳದ ಬೆಳಕು ಕೋಳ್ಯೂರು ರಾಮಚಂದ್ರರಾವ್ ಇವುಗಳು ಬರೆದ ಪುಸ್ತಕಗಳಾದರೆ ಅವರ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
     ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com