ಕಸ ಹಾಕಿದರೆ ದಂಡ! ಫಲಕವೇ ದಂಡ!!

ಕುಂದಾಪುರ:  ಮಾಡಬೇಡ ಎಂದರೆ ಅದನ್ನೇ ಮಾಡುವುದು. ಹೇಳಿದ ಮಾತು ಕೇಳದೆ ಇರುವುದು ಇದೆಲ್ಲಾ ಹಠ ಹಿಡಿವ ಚಿಕ್ಕ ಮಕ್ಕಳ ಸ್ವಭಾವ. ಆ ನೆಲೆಯಲ್ಲಿ ಅವರನ್ನು ಕ್ಷಮಿಸಬಹುದು. ಆದರೆ ದೊಡ್ಡವರೇ ಹಾಗೇ ಮಾಡಿದರೆ? ವಿಷಯ ಏನು ಅಂದ್ರಾ? ಸಾರ್ವಜನಿಕರಿಗೆ ಸೂಚನೆ: ಈ ಸ್ಥಳದಲ್ಲಿ ಕಸ ಎಸೆಯುವುದನ್ನು ನಿಷೇಧಿಸಲಾಗಿದೆ. ಕಸ ಹಾಕಿದವರಿಗೆ ದ0ಡ ವಿಧಿಸಲಾಗುವುದು ಹಾಗ0ತ ಕು0ದಾಪುರ ಪುರಸಭೆ ಎಲ್ಲರಿಗೂ ಕಾಣುವಂತೆ ದೊಡ್ಡದಾಗಿ ಬ್ಯಾನರೊಂದನ್ನು ಅಲ್ಲಿನ ಮರದಲ್ಲಿ ಕಟ್ಟಿದೆ. ಅದರ ಕೆಳಗಡೆಯೇ ಕಸಕಡ್ಡಿಗಳು ಮಾತ್ರವಲ್ಲ ತ್ಯಾಜ್ಯಗಳ ರಾಶಿಯನ್ನೇ ದಿನೇ ದಿನೇ ತಂದು ಸುರಿದು ಆ ಪ್ರದೇಶವನ್ನು ಗಬ್ಬೆಬ್ಬಿಸುವಲ್ಲಿ ಒಂದಿಷ್ಟು ಜನರು ತಮ್ಮ ಕಾಣಿಕೆ ನೀಡುತ್ತಿದ್ದಾರೆ. ಈ ದೃಶ್ಯ ಕಂಡು ಬಂದಿದ್ದು ಕುಂದಾಪುರದ ಮುಖ್ಯರಸ್ತೆಯಿಂದ ವ್ಯಾಸರಾಯಮಠಕ್ಕೆ ಹೋಗುವ ರಸ್ತೆಯಲ್ಲಿನ ಮೊದಲ ಬಲಭಾಗದ ರಸ್ತೆಯಲ್ಲಿ. ಇದೀಗ ಒಂದೆರಡು ಮಳೆ ಬಿದ್ದ ಬಳಿಕವಂತೂ ರಸ್ತೆಯ ಬದಿಯಲ್ಲಿನ ಈ ತ್ಯಾಜ್ಯಗಳ ರಾಶಿ ಕೆಟ್ಟ ವಾಸನೆ ಬೀರಲಾರಂಭಿಸಿದೆ. ಕೆಲವೊಂದಷ್ಟು ಜನರಿಗೆ ಮೂತ್ರಿಸಲು ಅದೇ ಖಾಯಂ ಜಾಗವಂತೆ. ಹಾಗಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಇದೇನು ಊರ ಹೊರಗಿನ ಜಾಗವಲ್ಲ. ಎಲ್.ಐ.ಸಿಯ ಕೇಂದ್ರ ಕಛೇರಿ, ಕುಂದಾಪುರದ ಮಹಿಳಾ ಪೋಲಿಸ್ ಠಾಣೆ ಎಲ್ಲವೂ ಈ ರಸ್ತೆಗೆ ಉಸಿರಿನ ಸಮೀಪದಲ್ಲಿಯೇ ಇವೆ. ಇದಾವುದನ್ನು ಗಣನೆಗೆ ತೆಗೆದುಕೊಳ್ಳದೇ ಒಂದಷ್ಟು ಜನ ಈ ಪ್ರದೇಶವನ್ನು ಗೊಬ್ಬರದ ಗುಂಡಿಯ0ತೆ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇವರಿಗೆ ಬೋರ್ಡು ಕಾಣಿಸಲ್ಲ. ದಂಡದ ಹೆದರಿಕೆಯೂ ಇಲ್ಲ. ಇನ್‍ಫ್ಯಾಕ್ಟ್ ಇಲ್ಲಿ ಬೋರ್ಡು ಹಾಕಿದ್ದೇ ದಂಡ ಅನ್ನುವಂತಾಗಿಬಿಟ್ಟಿದೆ. ಕಸ ಹಾಕಿದವರಿಗೆ ದಂಡ ವಿಧಿಸಲಿಕ್ಕೆ ಆ ಭಂಡತನಗೈದವರನ್ನು ಇಪ್ಪತ್ನಾಲ್ಕು ಗ0ಟೆ ಕಾಯುತ್ತಾ ಕುಳಿತುಕೊಳ್ಳಲು ಖಂಡಿತಾ ಸಾಧ್ಯವಿಲ್ಲ. ಅದು ಅವರಿಗೂ ಗೊತ್ತು. ಆದರೆ ಒ0ದು ನಾಗರಿಕ ಪ್ರಜ್ಞೆ?
    ನಿಜ. ಈ ವಿಷಯದಲ್ಲಿ ಆಡಳಿತವನ್ನು ದೂರಿ ಪ್ರಯೋಜನವಿಲ್ಲ. ಮರದಲ್ಲಿ ತೂಗುತ್ತಿರುವ ಬ್ಯಾನರು ಒಂದು ಮಟ್ಟದ ಕಾಳಜಿಯನ್ನು ಅವರಿಂದ ತೋರುತ್ತಿದೆ. ಆದರೆ ಅದೇ ಕಾರಣವನ್ನು ಮು0ದಿಟ್ಟುಕೊ0ಡು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುದು ಅನ್ನುವುದು ಸತ್ಯವಿರಬಹುದು. ಒಂದಂತೂ ಸತ್ಯ. ಆಡಳಿತದ ಮನವಿಗೆ ಪೂರಕವಾಗಿ ಸೂಕ್ತವಾಗಿ ಸ್ಪಂದಿಸಬೇಕಾದ್ದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಆದರೆ ಇಲ್ಲಿನ ಕೆಲವೊಂದಷ್ಟು ಜನರು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದು ವಿಷಾದಕರ. ಪ್ರಾಯಶ: ಇದು ಕೇವಲ ಈ ಭಾಗದ ಅಥವಾ ಈ ಊರಿನ ಸಮಸ್ಯೆ ಅಲ್ಲ. ಪ್ರತೀ ಊರಿನಲ್ಲೂ ಹೀಗೊಂದು ಸಮಸ್ಯೆ ಕಾಣಿಸುತ್ತದೆ. ಆಡಳಿತದ ಜೊತೆಗೆ ನಮ್ಮ ಸಹಕಾರವೂ ಸೇರಿದಾಗ ಮಾತ್ರ ಊರಿಗೊಂದು ಚೆಂದ ಬಂದೀತು. ಇನ್ನಾದರೂ ಕಸ ಎಸೆಯುವ ಮೊದಲು ನೂರು ಬಾರಿ ಎಲ್ಲರೂ ಯೋಚಿಸೋಣ.
ವರದಿ: ನರೇಂದ್ರ ಎಸ್. ಗಂಗೊಳ್ಳಿ


ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com