ವಿದ್ಯಾರ್ಥಿನಿ ರತ್ನ ಸಾವು: ವಾರ ಕಳೆದರೂ ದೊರೆಯದ ಸುಳಿವು

ವಿದ್ಯಾರ್ಥಿನಿ ಮೃತಪಟ್ಟು ವಾರ ಕಳೆಯಿತು.  ಸೊರಗಿದ ಮನೆಮಂದಿ. ವಿವಿಧೆಡೆ ವಿದ್ಯಾರ್ಥಿಗಳಿಂದ ಪ್ರತಿಭಟನೆ, ತ‌ನಿಖೆಗೆ ಆಗ್ರಹಿಸಿದ ಸಂಘಟನೆಗಳು. ಸೌಜನ್ಯ ಪ್ರಕರಣದ ರೀತಿಯಲ್ಲಿ ಕರಾವಳಿಗರನ್ನು ಬೆಚ್ಚಿಬಿಳಿಸಿದ ಪ್ರಕರಣ. 

ಬೈಂದೂರು: ಕಾಲೇಜು ಮುಗಿಸಿ ಮನೆಗೆ ತೆರಳುವಾಗ ನಾಪತ್ತೆಯಾಗಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ವಿದ್ಯಾರ್ಥಿನಿಯ ಪ್ರಕರಣ ಒಂದು ವಾರ ಕಳೆದರೂ ಭೇದಿಸಲಸಾಧ್ಯವಾಗಿದ್ದು ಒಂದೆಡೆ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದ್ದರೇ, ಇನ್ನೊಂದೆಡೆ ಮಗಳನ್ನು ಕಳೆದುಕೊಂಡ ದುಃಖದಲ್ಲಿರುವ ಅನಾರೋಗ್ಯ ಪೀಡಿತ ತಾಯಿ ಅನ್ನ ನೀರು ಬಿಟ್ಟು ಹಾಸಿಗೆ ಹಿಡಿದಿದ್ದು, ತಂದೆ  ಮೌನಕ್ಕೆ ಶರಣಾಗಿದ್ದಾರೆ. ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ದಿಕ್ಕು ತೋಚದಂತಾಗಿ ಕುಳಿತಿದ್ದಾನೆ. ಬಂಧುಮಿತ್ರರು ಮನೆಯವರನ್ನು ಸಂತೈಸುತ್ತಿದ್ದಾರೆ, ಇದು ಸಾವುಗೀಡಾದ ಬೈಂದೂರು ಕ್ಷೇತ್ರದ ಕುಗ್ರಾಮ ಆಲಂದೂರು ಕೋಣನಮಕ್ಕಿಯ ವಿದ್ಯಾರ್ಥಿನಿ ರತ್ನಾ ಕೊಠಾರಿಯ ಮನೆಯ ಸದ್ಯದ ಚಿತ್ರಣ.

     ಅತ್ಯಂತ ಸೌಮ್ಯ ಸ್ವಭಾವದ ಹುಡುಗಿಯಾಗಿದ್ದ ರತ್ನ ಶಿಕ್ಷಣ ಮುಂದುವರಿಸುವಬೇಕೆಂಬ ಉತ್ಕಟ ಹಂಬಲ ಹೊತ್ತವಳು. ಪ್ರತಿದಿನ 4 ಕಿಲೋಮೀಟರ್ ನಡೆದುಕೊಂಡೆ ಕಾಲೇಜಿಗೆ ಹೋಗಿ ಬರುತ್ತಿದ್ದಳು. ಆಲಂದೂರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಬಳಿಕ ಶಿರೂರಿನಲ್ಲಿ  ಪ್ರೌಢಶಾಲೆ ನಂತರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಆದರೆ ಕಂಗಳಲ್ಲಿ ನೂರಾರು ಆಸೆಗಳನ್ನು ತುಂಬಿಕೊಂಡಿದ್ದ ಕಡುಬಡ ಕುಟುಂಬದ ಈ ಹುಡುಗಿಯ ಬದುಕು ವಿಧಿಯಾಟಕ್ಕೆ ಬಲಿಯಾಯಿತು. ಲವಲವಿಕೆಯಿಂದಿದ್ದ ಮಗಳು ಮನೆಯ ಸಮೀಪವೇ ಶವವಾಗಿ ಪತ್ತೆಯಾದ ಘಟನೆಯನ್ನು ಕುಟುಂಬ ಇನ್ನೂ ಅರಗಿಸಿಕೊಳ್ಳುವ ಪರಿಸ್ಥಿತಿ ಇಲ್ಲ. 

ಕುಗ್ರಾಮ. ಬಡ ಕುಟುಂಬ, ಅಸ್ವಸ್ಥ ತಾಯಿ. 
     ಶಿರೂರು ತೂದಳ್ಳಿ ಮಾರ್ಗದಲ್ಲಿ  1ಕಿಲೋಮೀಟರ್ ಪ್ರಯಾಣಿಸಿ ಅಲ್ಲಿಂದ ಒಳದಾರಿಯಲ್ಲಿ 2ಕಿಲೋಮೀಟರ್ ಕಾಡು ಹಾದಿಯಲ್ಲಿ ಸಾಗಿದರೆ ಆಲಂದೂರು ಸಿಗುತ್ತದೆ. ಬೈಂದೂರು ಕ್ಷೇತ್ರದ ಕುಗ್ರಾಮಗಳಲ್ಲಿ ಒಂದಾದ ಆಲಂದೂರಿಗೆ ಸಂಚರಿಸಲು ಸರಿಯಾದ ರಸ್ತೆಯೂ ಇಲ್ಲ. ದುರ್ಗಮ ಕಾಡಿನ ಕಾಲುದಾರಿಯನ್ನು ಕ್ರಮಿಸಿ ಬಳಿಕ ಮರದ ಕಾಲುಸಂಕದ ಮೂಲಕ ನದಿಯನ್ನು ದಾಟಬೇಕಾದ ಪರಿಸ್ಥಿತಿ. ಇವರ ಮನೆಗೆ ಇತ್ತಿಚಿಗಷ್ಟೇ ವಿದ್ಯುತ್ ಬಂದಿದ್ದು, ಶೌಚಾಲಯವಾಗಲಿ, ಕುಡಿಯುವ ನೀರಿನ ಬಾವಿಯ ಸೌಕರ್ಯವಾಗಲಿ ಈವರೆಗೆ ಇಲ್ಲ. 
      ರತ್ನಾಳ ತಂದೆಯ ದುಡಿಮೆಯಿಂದಲೇ ಕುಟುಂಬದ ಬಂಡಿ ಸಾಗುತ್ತಿತ್ತು. ತಾಯಿ ಸಾಕು ಕೊಠಾರಿ ಅವರು ಕಳೆದ ಹಲವು ವರ್ಷಗಳಿಂದ ಗರ್ಭಕೋಶದಲ್ಲಿ ತೊಂದರೆ ಹೊಂದಿದ್ದು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈವರೆಗೆ ಹತ್ತಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಗುಣಮುಖರಾಗಿರಲಿಲ್ಲ. ಕಳೆದ ವಾರವಷ್ಟೇ ಕುಂದಾಪುರದ ಸರ್ಕಾರಿ ಆಸ್ಫತ್ರೆಯಲ್ಲಿ ಮೂಲವ್ಯಾಧಿ ಆಪರೇಷನ್‌ ಮಾಡಿದ್ದರು. ತಾಯಿ ಅಸೌಖ್ಯರಾಗಿದ್ದರಿಂದ ಪ್ರತಿದಿನ ರತ್ನಾಳೇ ಮನೆಯ ಕೆಲಸಗಳನ್ನು ಮಾಡಿ ಕಾಲೇಜಿಗೆ ಹೋಗುತ್ತಿದ್ದಳು. ಈಗ ಮಗಳೂ ಸಾವಿಗೀಡಾಗಿದ್ದರಿಂದ ಮನೆಯಲ್ಲಿ ಅಡುಗೆ ಮಾಡಲೂ ಯಾರೂ ಇಲ್ಲ ಎಂಬಂತಾಗಿದೆ.

ಸುಳಿವು ದೊರೆಯದೆ ಜಟಿಲವಾದ ಪ್ರಕರಣ
    ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದ ಬಗ್ಗೆಯಾಗಲಿ, ಕೊಲೆಯ ಬಗ್ಗೆಯಾಗಲಿ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಪತ್ತೆಯಾಗಿಲ್ಲ, ಶವದಲ್ಲಿ ಹುಳವಾಗಿರುವುದು ದೇಹದ ಮೇಲ್ಮೈ ಪರಿಕ್ಷೆಗೆ ತೊಡಕುಂಟುಮಾಡಿತ್ತು. ಈ ನಡುವೆ ಮೃತ ಶರೀರದಿಂದ ಕಿವಿಯೋಲೆ ಕಾಣೆಯಾಗಿದೆ ಎನ್ನಲಾಗಿದ್ದು ಸೋಮವಾರ ಶವ ದೊರೆತ ಪ್ರದೇಶದಲ್ಲೇ ಅವು ಪತ್ತೆಯಾಗಿದ್ದು ಇದು ಚಿನ್ನಾಭರಣಕ್ಕಾಗಿ ಮಾಡಿದ ಕೃತ್ಯವಲ್ಲ ಎಂಬುದು ದೃಢವಾಗಿದೆ. ಆದರೆ ಪ್ರಕರಣದ ಬಗೆಗೆ ಸ್ವಷ್ಟ ಸುಳಿವು ದೊರೆಯದ ಕಾರಣ ಯಾವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂಬುವಂತಾಗಿದೆ.

* ಕಳೆದುಕೊಂಡ ನಮ್ಮ ಮಗಳನ್ನು ವಾಪಸು ಕೊಡಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅವಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲಳಾಗಿರಲಿಲ್ಲ. ಯಾರೋ ಆಕೆಯನ್ನು ಹತೈಗೆದಿದ್ದಾರೆ. ಅಪರಾಧಿಗಳನ್ನು ಬಂಧಿಸಿ ನ್ಯಾಯ ದೊರಕಿಸಿಕೊಡಿ' -  ಶಂಕರ ಕೊಠಾರಿ, ರತ್ನಾಳ ತಂದೆ

ತ್ವರಿತ ತನಿಖೆಗೆ ಶಾಸಕ ಆಗ್ರಹ

  ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾತನಾಡಿದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಗ್ರಾಮೀಣ ಭಾಗದಲ್ಲಿ ನಡೆದ ಈ ಘಟನೆ ಅತ್ಯಂತ ಆಘಾತ ಉಂಟು ಮಾಡಿದೆ. ಬಾಲಕಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು ಈ ಬಗ್ಗೆ ಗೃಹಸಚಿವರೊಂದಿಗೆ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಮಾತನಾಡಿ ತನಿಖೆಯನ್ನು ತ್ವರಿತಗೊಳಿಸುವುಂತೆ ಆಗ್ರಹಿಸಿರುವುದಾಗಿ ತಿಳಿಸಿದ್ದರು.

ನಿಷ್ಪಕ್ಷಪಾತ ತನಿಕೆ ನಡೆಯಲಿದೆ: ಸಚಿವ ಸೊರಕೆ
     ಮೃತ ವಿದ್ಯಾರ್ಥಿನಿ ಮನೆಗೆ ಉಸ್ತುವಾರಿ ಸಚಿವ ವಿನಯ ಕುಮಾರ ಸೊರಕೆ ಬೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂಧರ್ಭದಲ್ಲಿ ಸ್ಥಳೀಯರು ಶೀಘ್ರ ತನಿಖೆ ಮಾಡುವಂತೆ ಸಚಿವರಿಗೆ ಮನವಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿ  ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಗೊಂದಲಗಳಿಗೆ ತೆರೆಬೀಳಲಿದೆ ಮತ್ತು ತನಿಖೆಗೂ ಸಹಕಾರಿಯಾಗಲಿದೆ ಎಂದರು. ಈ ಭಾಗದಲ್ಲಿ ರಾತ್ರಿ ಹೊತ್ತು ಪೊಲೀಸರು ಗಸ್ತು ತಿರುಗುವ ವ್ಯವಸ್ಥೆ ಮಾಡಲಾಗುವುದು ಮತ್ತು ಸತ್ಯಾಸತ್ಯತೆ ಹೊರಬಂದ ಬಳಿಕ ಕುಟುಂಬಕ್ಕೆ ಪರಿಹಾರದ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು. ಇದೇ ಸಂದರ್ಭ ಉಡುಪಿ ಜಿಲ್ಲಾ ಕೊಠಾರಿ ಸಂಘದ ವತಿಯಿಂದ ಮೃತಳ ಕುಟುಂಬಕ್ಕೆ 25 ಸಾವಿರ ರೂ. ಪರಿಹಾರ ನೀಡಲಾಯಿತು.  ಜಿಲ್ಲಾ ಪೋಲಿಸ್‌ ವರಿಷ್ಠಾಕಾರಿ ಬೋರಲಿಂಗಯ್ಯ, ತಾ.ಪಂ ಸದಸ್ಯ ರಾಜು ಪೂಜಾರಿ, ರಮೇಶ ಗಾಣಿಗ ಮೊದಲಾದವರು ಹಾಜರಿದ್ದರು.

ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಅಧಿಕಾರಿಗಳ ತಂಡ:
    ರತ್ನಾ ನಾಪತ್ತೆಯಾದಾಗಿನಿಂದ ಪ್ರಕರಣವನ್ನು ಬೆಂಬತ್ತಿ ಪೋಲಿಸ್ ಇಲಾಖೆಯ ಹಲವು ಅಧಿಕಾರಿಗಳು ಬೈಂದೂರಿನಲ್ಲಿಯೇ ಬೀಡುಬಿಟ್ಟಿದ್ದರು. ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬೋರಲಿಂಗಯ್ಯ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಕರಣವನ್ನು ಬೇಧಿಸಲು ಬ್ರಹ್ಮಾವರ, ಕುಂದಾಪುರ, ಹಾಗೂ ಬೈಂದೂರು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳು ರಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿವಿಧ ಹಂತದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದಿದ್ದರು. ಈವರೆಗಿನ ಪೊಲೀಸ್ ತನಿಖೆಯಲ್ಲಿ ವಿದ್ಯಾರ್ಥಿನಿಯ ಸಾವು ಅತ್ಯಾಚಾರದಿಂದ ನಡೆದಿಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ. ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ವಿಚಾರಣೆಗೊಳಪಡಿಸಿದ್ದು ತನಿಖೆ ಚುರುಕುಗೊಳಿಸಿದ್ದಾರೆ.  ಎಎಸ್‌ಪಿ ಡಾ| ಅಣ್ಣಾಮಲೈ, ಉಡುಪಿ ವೃತ್ತ ನಿರೀಕ್ಷಕ ಮಾರುತಿ ಜಿ. ನಾಯಕ್‌, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ ಬಿ. ನಾಯಕ್‌, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್‌, ಠಾಣಾಧಿಕಾರಿ ಸಂತೋಷ ಕಾಯ್ಕಿಣಿ, ಶ್ವಾನದಳ ಹಾಗೂ ಅಪರಾಧ ಪತ್ತೆದಳ ಮುಂತಾದವರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಖಂಡಿಸಿ ಕಾಲೇಜು ಮಷ್ಕರ, ಪ್ರತಿಭಟನೆ
     ಎಬಿವಿಪಿ ಕುಂದಾಪುರ ತಾಲೂಕು ಘಟಕದ,  ಕರೆಯ ಮೇರೆಗೆ ಸೋಮವಾರ ತಾಲೂಕಿನೆಲ್ಲಡೆ ನಡೆದ ವಿದ್ಯಾರ್ಥಿಗಳ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕುಂದಾಪುರ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆ ಉದ್ದೇಶಿಸಿ ವಿದ್ಯಾರ್ಥಿನಿ ಅಸ್ಮಿತಾ ಕಾಮತ್ ಮಾತನಾಡಿ, ಸಿರಿವಂತರ ಅಥವಾ ರಾಜಕಾರಣಿಗಳ ಮಕ್ಕಳಾಗಿದ್ದರೆ ಇಷ್ಟರಲ್ಲೇ ಅಪರಾಧಿಗಳು ಸೆಲ್‌ನಲ್ಲಿರುತ್ತಿದ್ದರು. ಜು.9ರಂದು ಕಾಣೆಯಾಗಿದ್ದ ವಿದ್ಯಾರ್ಥಿನಿ ರತ್ನಾ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಾಳೆ. ಬಲಾತ್ಕಾರ ಎಸಗಿ ಹತ್ಯೆಗೈದು ನಿರ್ಜನ ಪ್ರದೇಶದಲ್ಲಿ ಎಸೆದು ರಾಕ್ಷಸೀ ಪ್ರವತ್ತಿ ತೋರಲಾಗಿದೆ ಎಂಬ ಬಗ್ಗೆ ಹೆತ್ತವರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ತನಕ ಅಪರಾಧಿಗಳನ್ನು ಬಂಧಿಸಲಾಗಿಲ್ಲ. ಪ್ರಕರಣವನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತಿದೆ ಇದನ್ನು ಸಹಿಸಲಾಗದು ಎಂದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಪ್ರಮುಖ ಕಿರಣ್, ನಗರ ಘಟಕ ಅಧ್ಯಕ್ಷ ಚೇತನ್‌ಕುಮಾರ್, ತಾಲೂಕು ಪ್ರಮುಖರಾದ ಸಂಪತ್‌ಕುಮಾರ್, ಅರವಿಂದ್, ವಿನಯ್ ಪಾಲ್ಗೊಂಡಿದ್ದರು. ಬಳಿಕ ತಹಸೀಲ್ದಾರ ಗಾಯತ್ರಿ ಎನ್.ನಾಯಕ್ ಮತ್ತು ಸಹಾಯಕ ಕಮಿಷನರ್ ಯೋಗೇಶ್ವರ ಮೂಲಕ ರಾಜ್ಯ ಸರಕಾರಕ್ಕೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. 
ಎಸ್.ಎಫ್.ಐ, ಡಿವೈಎಫ್.ಐ ಖಂಡನೆ
ವಿದ್ಯಾರ್ಥಿನಿಯ ಸಾವು ಖಂಡಿಸಿ ಭಾರತ ವಿದ್ಯಾರ್ಥಿ ಫೇಡರೇಶನ್ ಕುಂದಾಪುರ ತಾಲೂಕು ಸಮಿತಿ ಕರೆ ನೀಡಿದ ಶಾಲಾ ಕಾಲೇಜು ಬಂದ್ ಕೂಡ ಯಶಸ್ವಿಯಾಗಿದ್ದು ವಿದ್ಯಾರ್ಥಿಗಳು ನಿಷ್ಪಕ್ಷಪಾತ ತನಿಕೆಗೆ ಆಗ್ರಹಿಸಿದ್ದಾರೆ. ಸಂಜೆ ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ಡಿ.ವೈ.ಎಫ್.ಐ ಸಂಘಟನೆ ಕೂಡ ಪ್ರತಿಭಟನೆ ನಡೆಸಿತು.



ಶಿರೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
   ರತ್ನಾ  ಕೊಠಾರಿ ಸಾವಿನ ಸತ್ಯಾಂಶ  ಶೀಘ್ರ  ಬಹಿರಂಗಗೊಳ್ಳಬೇಕಾಗಿ ಆದೇಶಿಸಿ ವಿದ್ಯಾರ್ಥಿಗಳು , ಸಾರ್ವಜನಿಕರು , ರಿಕ್ಷಾ ಚಾಲಕ ಮಾಲಕರು, ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಶಿರೂರು ಪಂಚಾಯತ್ ಎದುರುಗಡೆ ಪ್ರತಿಭಟನೆ ನಡೆಸಿ ಖಂಡನೆ ವ್ಯಕ್ತಪಡಿಸಿದರು.
      ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಗ್ರಾ.ಪಂ ಸದಸ್ಯ ದಿನೇಶ ಕುಮಾರ್, ದೀಪಕ್ ಕುಮಾರ ಶೆಟ್ಟಿ, ಮಂಜು ಪೂಜಾರಿ, ದಸ್ತಗೀರ್ ಸಾಹೇಬ್ ಮುಂತಾದವರು ಹಾಜರಿದ್ದರು. ವೃತ್ತ ನಿರೀಕ್ಷಕ ಸುದರ್ಸನ್ ಮನವಿ ಸ್ವೀಕರಿಸಿದರು.

ಜಿಲ್ಲಾ ಬಿಜೆಪಿ ಖಂಡನೆ
    ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ವಿದ್ಯಾರ್ಥಿನಿ ರತ್ನಾ ಕೊಠಾರಿಯ ನಿಗೂಢ ಸಾವಿನ ಪ್ರಕರಣದ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ಪೊಲೀಸ್‌ ಇಲಾಖೆ ಎಡವಿದೆ. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠರನ್ನು ಭೇಟಿ ಮಾಡಿ ತನಿಖೆ ಚುರುಕುಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
    ರತ್ನಾಳ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲವಾದರೂ ಇದೊಂದು ವ್ಯವಸ್ಥಿತವಾದ ಕೊಲೆ ಪ್ರಕರಣ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಪೊಲೀಸ್‌ ಇಲಾಖೆ ಬಗ್ಗೆ ನಮಗೆ ವಿಶ್ವಾಸವಿದೆ. ಆದರೆ ಈ ಪ್ರಕರಣದಲ್ಲಿ ಯಾರಧ್ದೋ ಒತ್ತಡಕ್ಕೆ ಪೊಲೀಸರು ಸಿಲುಕಿದ್ದಾರೋ ಎನ್ನುವ ಆತಂಕವೂ ಕಾಡುತ್ತಿದೆ ಆದರೆ ಈ ಪ್ರಕರಣಕ್ಕೆ ಎಷ್ಟೆ ಒತ್ತಡ ಬಂದರೂ ಕೂಡ ಹಳ್ಳ ಹಿಡಿಯಲು ಬಿಜೆಪಿ ಬಿಡುವುದಿಲ್ಲ. ನಮ್ಮ ಸಂಸದರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
       ಮೃತ ವಿದ್ಯಾರ್ಥಿನಿಯ ಮನೆಯಲ್ಲಿ ಬಡತನವಿದೆ. ತಾಯಿಗೆ ಇತ್ತೀಚೆಗಷ್ಟೇ ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆದಿದೆ. ಕುಟುಂಬದ ಸ್ಥಿತಿ ಶೋಚನೀಯವಾಗಿದ್ದು, ಬಿಜೆಪಿ ಆರ್ಥಿಕವಾಗಿ ನಿಧಿ ಸಂಗ್ರಹಿಸಿ ನೀಡುವ ಚಿಂತನೆ ನಡೆಸಿದೆ. ಸರಕಾರವೂ ಈ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ನೀಡಬೇಕು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ, ಕುಂದಾಪುರ ಬ್ಲಾಕ್‌ ಬಿಜೆಪಿ ಅಧ್ಯಕ್ಷ ರಾಜೇಶ ಕಾವೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುರಾಜ್‌, ಜಿಲ್ಲಾ ಕಾರ್ಯದರ್ಶಿ ಸಂಧ್ಯಾ, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸಾವು: ಸಂಸದೆ ಖಂಡನೆ

     ಯಡ್ತರೆ ಗ್ರಾಮದ ಕೋಣಮಕ್ಕಿಯ ನಿವಾಸಿ ವಿದ್ಯಾರ್ಥಿನಿ ರತ್ನಾ ಕೊಠಾರಿ ನಿಗೂಢ ಸಾವಿನ ಘಟನೆಯನ್ನು ಸಂಸದೆ ಶೋಭಾ ಕರಂದ್ಲಾಜೆ ಖಂಡಿಸಿದ್ದಾರೆ. ತನಿಖೆ ತೀವ್ರಗೊಳಿಸಿ ಆರೋಪಿಗಳನ್ನು ಅತೀ ಶೀಘ್ರ ಪತ್ತೆ ಹಚ್ಚಬೇಕು. ರಾಜ್ಯದಲ್ಲಿ ಮಹಿಳೆಯರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ನಾಡಿನ ಎಲ್ಲೆಲ್ಲೂ ಸಮಾಜ ವಿರೋಧಿ ಶಕ್ತಿಗಳೇ ವಿಜೃಂಭಿಸುತ್ತಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಈ ಎಲ್ಲಾ ಪರಿಸ್ಥಿತಿಗಳ ಬಗ್ಗೆ ತುರ್ತು ಗಮನ ಹರಿಸಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದೆ ರಾಜ್ಯದ ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com







ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com