ಪತ್ರಕರ್ತ ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು: ಎಂ. ವಿ. ಕಾಮತ್



ಉಡುಪಿ: ಇಂದು ಮಾಧ್ಯಮದ ಮೇಲೆ ಎಲ್ಲೆಡೆ ದಾಳಿಯಾಗುತ್ತಿದೆ ಕಾರಣ ಅದು ದಾರಿ ತಪ್ಪುತ್ತಿದೆ. ಖಾಸಾಗಿ ಸಮಸ್ಯೆಗಳು ವೃತ್ತಿಗೆ ಧಕ್ಕೆ ಉಂಟುಮಾಡಬಾರದು. ಪತ್ರಕರ್ತ ತಾನೊಬ್ಬ ಸಮಾಜ ಸೇವಕ ಎಂಬುದನ್ನು ಮರೆಯಬಾರದು. ವರದಿ ಮಾಡಬೇಕೇ, ಬೇಡ್ವೆ ಎಂಬ ಗೊಂದಲಗಳು ಮೂಡಿದಾಗ ಅಂತರಾತ್ಮ ನುಡಿದಂತೆ ನಡೆಯಬೇಕು. ನಡೆನುಡಿಯಲ್ಲಿ ಪ್ರಾಮಾಣಿಕತೆ ತುಂಬಿ, ಕೆಲಸವನ್ನು ನಿಷ್ಠೆಯಿಂದ ಮಾಡಿ ಎಂದು ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ ಎಂ.ವಿ. ಕಾಮತ್ ಹೇಳಿದರು.
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಜ್ಯ ಮಾದ್ಯಮ ಅಕಾಡೆಮಿ, ಜಿಲ್ಲಾ ವಾರ್ತಾ ಇಲಾಖೆ ಹಾಗೂ ಜಿಲ್ಲಾ ಕಾರ‌್ಯನಿರತ ಪತ್ರಕರ್ತರ ಸಹಕಾರದಲ್ಲಿ ಎರಡು ದಿನಗಳ ಕಾಲ ನಡೆದ 'ಆಧುನಿಕ ಮಾಧ್ಯಮ ಇಂದಿನ ನೋಟ-ಮುಂದಿನ ಸವಾಲು' ಎಂಬ ವಿಚಾರ ಸಂಕಿರಣ ಹಾಗೂ ಕಾರ‌್ಯಾಗಾರದ ಸಮಾರೋಪದಲ್ಲಿ ಫ್ರಧಾನ ಭಾಷಣ ಮಾಡುತ್ತಾ ತಮ್ಮ ಬದುಕಿನ ವೃತ್ತಿ ಬದುಕಿನ ಅನುಭವಗಳನ್ನು ಹಂಚಿಕೊಂಡರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ. ಎ. ಪೊನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಪತ್ರಕರ್ತ ಡಾ.ಪದ್ಮರಾಜ ದಂಡಾವತಿ ಅವರು ಮಾತನಾಡಿ ಜಾಗತೀಕರಣ, ಉದಾರೀಕರಣ ನೀತಿಗಳು ಬಂದ ಮೇಲೆ ಪತ್ರಿಕೆಗಳನ್ನು ಜಾಹೀರಾತುಗಳು ನಿಯಂತ್ರಿಸತೊಡಗಿವೆ. ಇದರಿಂದಾಗಿ ಪ್ರಸಾರಣ ಸಂಖ್ಯೆಯನ್ನು ಹೆಚ್ಚಿಸುವ ಅನಿವಾರ್ಯತೆ ಹುಟ್ಟಿಕೊಂಡು ಪತ್ರಿಕೆಗಳು ಸ್ಪರ್ಧೆಗೆ ಇಳಿದು ಬಿಟ್ಟಿವೆ. ಸುದ್ದಿ , ಪಾವಿತ್ರ್ಯತೆಯನ್ನು ಕಳೆದುಕೊಂಡು ಬಿಟ್ಟಿದೆ. ಇದು ಪತ್ರಿಕೋದ್ಯಮಕ್ಕೆ ಶುಭಸಂಗತಿಯಲ್ಲ ಎಂದರು.

ಹಿರಿಯ ವಿಮರ್ಶಕ ಎ. ಈಶ್ವರಯ್ಯ ಅವರು ಮಾತನಾಡಿ, ಡಾರ್ವಿನ್‌ನ ವಿಕಾಸವಾದ ಇಂದು ಕಾರ್ಪೊರೇಟ್ ವಲಯಕ್ಕೂ ಅನ್ವಯಿಸುತ್ತಿದೆ. ಕೌಶಲ ಯಾಂತ್ರೀಕರಣಗೊಂಡರೆ ಪತ್ರಕರ್ತನಿಗೆ ಪ್ರಯೋಜನವಾಗದು. ಚಿಂತಿಸುವ ಶಕ್ತಿ, ಜಾಗೃತ ವಿವೇಕ ಪತ್ರಕರ್ತನಿಗೆ ಅಗತ್ಯ ಎಂದರು.

ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ಅವರು ಮಾತನಾಡಿ, ಸುದ್ದಿಯನ್ನು ಅಳೆದು ತೂಗಿ ಪ್ರಕಟಿಸುವ ಜವಾಬ್ದಾರಿ ಪತ್ರಿಕೆಗಳ ಮೇಲಿದೆ. ವರದಿಗಾರರು ಘಟನೆಗಳ ಬಗ್ಗೆ ಪ್ರತ್ಯಕ್ಷ, ಪ್ರಮಾಣೀಕರಿಸಿದ ಮಾಹಿತಿಯನ್ನು ಒದಗಿಸಬೇಕು. ಇಂದು 24*7 ಸುದ್ದಿ ನೀಡುವುದು ಮಾಧ್ಯಮಕ್ಕೆ ದೊಡ್ಡ ಸವಾಲಾಗಿದೆ. ಅಲ್ಲದೆ ಪೇಯ್ಡ್ ನ್ಯೂಸ್ ಹಾವಳಿ ಪತ್ರಿಕಾರಂಗವನ್ನು ಕಾಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ವಹಿಸಿದ್ದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ, ಎಂಜಿಎಂ ಕಾಲೇಜಿನ ಪ್ರಿನ್ಸಿಪಾಲ್ ಕುಸುಮಾ ಕಾಮತ್ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲು ಕಾರ್ಯಕ್ರಮ ನಿರೂಪಿಸಿ ಅಕಾಡೆಮಿ ಕಾರ್ಯದರ್ಶಿ ಎಸ್.ಶಂಕರಪ್ಪ ಸ್ವಾಗತಿಸಿದರು. ಅಕಾಡೆಮಿ ಸಂಚಾಲಕಿ ಡಾ.ಯು.ಬಿ.ರಾಜಲಕ್ಷ್ಮೀ ವಂದಿಸಿದರು. 

ಪೋಟೋಗಳು:
* ಶೇಖರ ಅಜೆಕಾರು, ಹಿರಿಯ ಪತ್ರಕರ್ತರು
* ಸುದರ್ಶನ ಶೆಟ್ಟಿ ಬೆಳ್ಮಾರ











ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com