ಹೋರಾಟದಿಂದಲೇ ದಕ್ಕಿಸಿಕೊಂಡ ತಂಗುದಾಣ. ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣ

ಬೈಂದೂರು: ಕೊಂಕಣ ರೈಲ್ವೇ ಆರಂಭಗೊಂಡಾಗ ಕೇವಲ ಒಂದು ಲೋಕಲ್ ರೈಲು ನಿಲುಗಡೆಗಷ್ಟೇ ಅವಕಾಶವಿದ್ದ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ಇಂದು ಹಲವಾರು ಏಕ್ಸಪ್ರೆಸ್ ರೈಲುಗಳು ನಿಲುಗಡೆಯನ್ನು ಕಂಡುಕೊಂಡಿದೆ. ನಿಲುಗಡೆ ನಿಲ್ದಾಣ ಎನಿಸಿಕೊಂಡಿದ್ದ ರೈಲ್ವೇ ನಿಲ್ದಾಣವು ಇಂದು ಸಾಕಷ್ಟು ಪ್ರಗತಿ ಸಾಧಿಸಿದೆ. ಇಲ್ಲಿನ ಜನತೆಯ ಹೋರಾಟದ ಮೂಲಕವೇ ಹತ್ತಾರು ಮಹತ್ತರವಾದ ಸೌಲಭ್ಯಗಳನ್ನು ಪಡೆದುಕೊಂಡ ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣವು ಕೊಂಕಣ ರೈಲ್ವೇ ವ್ಯಾಪ್ತಿಯಲ್ಲಿ ಬರುವ ನಿಲ್ದಾಣಗಳಲ್ಲಿಯೇ ಕೊನೆಯ ದರ್ಜೆ ನಿಲ್ದಾಣವಾಗಿದ್ದರೂ, ದೇಶದ ಪ್ರಥಮ ದರ್ಜೆ ನಿಲ್ದಾಣಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಏಕೈಕ ರೈಲ್ವೇ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

 
ನಿಲ್ದಾಣದಲ್ಲಿ ಸದ್ಯ 24 ಗಂಟೆ ವಿದ್ಯುತ್, ಶುದ್ಧ ಕುಡಿಯುವ ನೀರು, ಪ್ರಯಾಣಿಕರಿಗೆ ವಿಶ್ರಾಂತಿ ಆಸನಗಳು, ಮಹಿಳೆಯರಿಗಾಗಿ ವಿಶ್ರಾಂತಿ ಗೃಹ, ಪ್ರತ್ಯೇಕವಾದ ಶೌಚಾಲಯ ಇದೆ. ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ ಕೂಡ ಇದ್ದು ಹದಿಮೂರು ಎಕ್ಸ್‍ಪ್ರೆಕ್ಸ್ ಮತ್ತು ನಾಲ್ಕು ಪ್ಯಾಸೆಂಜರ್ ರೈಲುಗಳಿಗೆ ನಿಲುಗಡೆಯಿದೆ. ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ವಿಶೇಷ ರೈಲು ಸೌಲಭ್ಯ ಇರುತ್ತದೆ. ರಾಜಸ್ಥಾನದ ಬಿಕೆನಾರ್, ನಾಗರಕೊಯಿಲ್, ಗುಜರಾತಿನ ಓಕಾ ಕ್ಕೆ ಹೋಗುವ ರೈಲುಗಳಿಗೂ ಸಹ ಇಲ್ಲಿ ನಿಲುಗಡೆಯಿದೆ.
   ಪ್ರತಿದಿನ ಸರಾಸರಿ 1500 ಪ್ರಯಾಣಿಕರು ಈ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದು, ವರ್ಷಕ್ಕೆ ಆರ್ಡಿನರಿ ಮತ್ತು ನಾನ್‍ರಿಸರ್ವೇಷನ್ ಟಿಕೇಟ್‍ನಿಂದ ವಾರ್ಷಿಕ ಎರಡು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಬೈಂದೂರು ಕ್ಷೇತ್ರದ ಹೆಚ್ಚಿನವರು ಬೆಂಗಳೂರು, ಗೋವಾ, ಮುಂಬಯಿ, ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ವಿವಿಧ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಇದೆಲ್ಲವನ್ನು ಮನಗಂಡ ಕೊಂಕಣ ರೈಲ್ವೆ ನಿಗಮ ಬೈಂದೂರು ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿ ಮಡಗಾಂವ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 16 ಕೋಟಿ ರೂ. ಯೋಜನೆ ರೂಪಿಸಿತ್ತು. ಮೊದಲ ಹಂತವಾಗಿ ಸ್ಟೇಶನ್ ಮಾಸ್ಟರ್ ಕೊಠಡಿ, ಪುರುಷ, ಮಹಿಳೆಯರ ವಿಶ್ರಾಂತಿ ಕೊಠಡಿ, ವಿಐಪಿ ವಿಶ್ರಾಂತಿ ಕೊಠಡಿ, ಟಿಕೇಟ್ ಕೌಂಟರ್ ಒಳಗೊಂಡ ಕಟ್ಟಡ ನಿರ್ಮಾಣ ಕಾಮಗಾರಿ ಮುಗಿದಿದೆ. ಇದೇ ಕಟ್ಟಡದ ಮೇಲ್ಮಹಡಿಯಲ್ಲಿ ಡಾರ್ಮೆಟರಿ, ಡಬ್ಬಲ್ ಟ್ರ್ಯಾಕ್, ಸಿಗ್ನಲ್, ಮೇಲ್ಸೆತುವೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಿಶೇಷವೆಂದರೆ ರೈಲ್ವೇ ನಿಗಮ ದೇಶದಲ್ಲೇ ಪ್ರಥಮ ಭಾರಿಗೆ ಈ ನಿಲುಗಡೆ ನಿಲ್ದಾಣದಲ್ಲಿ ರೈಲ್ವೇ ಹೋಟೆಲ್ ಎಂಬ ನೂತನ ಮಾದರಿಯ ಪ್ರಯಾಣಿಕ ವಸತಿಗೃಹ ನಿರ್ಮಾಣಕ್ಕೆ ಮಂಜೂರು ನೀಡಿದೆ.
     ರಾಷ್ಟೀಯ ಹೆದ್ದಾರಿಗೆ ಹತ್ತಿರವೇ ಇರುವ ರೈಲ್ವೇ ನಿಲ್ದಾಣ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೂ ಹತ್ತಿರ ಇರುವುದರಿಂದ ಇಲ್ಲಿಗೆ ಬರುವ ಪ್ರಯಾಣಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ನಿಲ್ದಾಣವಾಗಬೇಕೆಂಬುದನ್ನು ಅರಿತು ಕಳೆದ ಮೂರು ವರ್ಷಗಳಿಂದ ಬೈಂದೂರು ಮೂಕಾಂಬಿಕಾ ರೈಲು ಯಾತ್ರಿ ಸಂಘ ಸತತವಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಒಂದು ಸಾಮಾನ್ಯ ನಿಲುಗಡೆ ನಿಲ್ದಾಣ ಈ ಮಟ್ಟಕ್ಕೆ ಏರುವಲ್ಲಿ ಮೂಕಾಂಬಿಕಾ ರೈಲು ಯಾತ್ರಿ ಸಂಘದ ಹೋರಾಟ, ನಿರಂತರವಾದ ಪ್ರಯತ್ನ ಗಮನೀಯವಾದುದು ಎಂಬುದನ್ನು ಮರೆಯುವಂತಿಲ್ಲ.


ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com