
ಗಾಂಧಿ ಜಯಂತಿ ಬಂತೆಂದರೆ ನಮ್ಮ ರಾಜಕಾರಣಿಗಳು ಆಡುವ ನಾಟಕ ನೋಡಿ ಅಸಹ್ಯವಾಗುತ್ತದೆ! ಹಲವೊಮ್ಮೆ ಸಿಟ್ಟು ಉಕ್ಕಿಬರುತ್ತದೆ! ಪ್ರತಿ ದಿನ, ಪ್ರತಿ ಗಳಿಗೆ ಗಾಂಧೀ ತತ್ತ್ವದ ವಿರುದ್ಧ ಸಾಗುವ ಈ ರಾಜಕಾರಣಿಗಳು ಗಾಂಧಿ ಜಯಂತಿಯ ದಿನ ಅಪ್ಪಟ ಖಾದಿ ದಿರುಸು ಧರಿಸಿ, ಗಾಂಧಿಟೋಪಿ ತಲೆಗಿಟ್ಟುಕೊಂಡು, ಗಾಂಧೀಜಿ ಫೋಟೋಕ್ಕೆ ಹಾರ ಏರಿಸಿ, ಕ್ಯಾಮೆರಾಗಳ ಮುಂದೆ ಪೋಸು ಕೊಡುತ್ತಾರೆ! ಪರಮ ದುಷ್ಟರೂ ಕಡು ಭ್ರಷ್ಟರೂ ಆದ ಇವರು ಆ ದಿನ ಗಾಂಧೀಜಿಯ ಹೆಸರೆತ್ತಿಕೊಂಡು ನಮಗೆಲ್ಲ ಸತ್ಯ, ಅಹಿಂಸೆ, ಅಸ್ತೇಯ ಗುಣಗಳನ್ನು ಬೋಧಿಸುತ್ತಾರೆ! ತಮಗೇನೂ ಗೊತ್ತಿಲ್ಲದಿದ್ದರೂ ಮಹಾಪಂಡಿತರಂತೆ ಗಾಂಧೀಜಿಯ ಬಗ್ಗೆ ಬೂಸಾ ಬಿಡುತ್ತಾರೆ!
ಗಾಂಧೀಜಿ ಇಂದು ಈ ರಾಜಕಾರಣಿಗಳ ’ಕೈ’ಯಲ್ಲಿ ಜನರನ್ನು ಮರುಳು ಮಾಡುವ ಸಾಧನವಾಗಿದ್ದಾರೆ! ವ್ಯಾಪಾರಿಗಳಿಗೆ ಜಾಹಿರಾತಿನ ವಸ್ತುವಾಗಿದ್ದಾರೆ! ವಿದ್ಯಾರ್ಥಿ ಮತ್ತು ನೌಕರ ಸಮುದಾಯಕ್ಕೆ ವಾರ್ಷಿಕ ರಜಾದಿನದ ಹೇತುವಾಗಿದ್ದಾರೆ! ಗಾಂಧೀಜಿಯ ಬಗ್ಗೆ ಹೆಚ್ಚಿನ ಅರಿವಿಲ್ಲದ ಮತ್ತು ತಿಳಿದುಕೊಳ್ಳುವ ಅಪೇಕ್ಷೆಯೂ ಇಲ್ಲದ ಇಂದಿನ ’ಮಾಡರ್ನ್’ ಯುವ ಪೀಳಿಗೆಗೆ ಗಾಂಧೀಜಿ ಹಾಸ್ಯದ ವಸ್ತುವಾಗಿದ್ದಾರೆ! ಎಂ.ಜಿ.ರೋಡ್ ಆಗಿ ಅವರ ಬಾಯಲ್ಲಿ ಚಾಲ್ತಿಯಲ್ಲಿದ್ದಾರೆ!
ಯುಗಪುರುಷ ಗಾಂಧೀಜಿ ಗತಿಸಿ ಆರೇ ದಶಕಗಳಲ್ಲಿ ಎಂಥ ದುರಂತ! ಗಾಂಧೀಜಿಯ ಅವತಾರ ಕೇವಲ ಸ್ವಾತಂತ್ರ್ಯ ಚಳವಳಿಯ ಮಟ್ಟಿಗಷ್ಟೇ ಪರಿಗಣನಾರ್ಹ ಎಂದು ನಾವು ಭಾವಿಸಿರುವುದರಿಂದಲ್ಲವೆ ಈ ದುರಂತ? ಸ್ವಾತಂತ್ರ್ಯ ಚಳವಳಿಯ ಸಾಧನೆಯನ್ನೂ ಮೀರಿದ ಆದರ್ಶ ಪುರುಷನೊಬ್ಬ ಗಾಂಧೀಜಿಯಲ್ಲಿದ್ದನೆಂಬುದನ್ನು ಮತ್ತು ಆ ಆದರ್ಶ ಇಂದಿಗೂ-ಎಂದೆಂದಿಗೂ ಅನುಸರಣೀಯವೆಂಬುದನ್ನು ನಾವೇಕೆ ಅರಿಯುತ್ತಿಲ್ಲ?
ಗಾಂಧಿ ಜಯಂತಿಯ ದಿನವಾದ ಇಂದು ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.
-ಎಚ್. ಆನಂದರಾಮ ಶಾಸ್ತ್ರೀ
ನಿಮ್ಮ ಅಭಿಪ್ರಾಯ ಬರೆಯಿರಿ
ಕುಂದಾಪ್ರ ಡಾಟ್ ಕಾಂ- editor@kundapra.com