ಸಂದರ್ಶನ: ಜೀವನ ಪ್ರೀತಿಯ ಸೃಜನಾತ್ಮಕ ಸಾಹಿತಿ ಜಯಂತ ಕಾಯ್ಕಿಣಿಜಾತಿ, ಧರ್ಮ, ಲಿಂಗ ಭೇದ ಮರೆತು ಮನುಷ್ಯರಾಗುವುದೇ ನಿಜವಾದ ಆಧುನಿಕತೆ: ಕಾಯ್ಕಿಣಿ

ಕನ್ನಡದ ಸೃಜನಾತ್ಮಕ ಸಾಹಿತಿಗಳ ಪೈಕಿ ಅಗ್ರಗಣ್ಯರೆನಿಸಿಕೊಂಡವರು ಜಯಂತ ಕಾಯ್ಕಿಣಿ. ತಮ್ಮ ಕಥೆ, ಕವನ, ಬರಹಗಳ ಮೂಲಕ ಜನಪ್ರಿಯರಾದ ಅವರು ವಾಗ್ಮಿಯಾಗಿಯೂ ಕನ್ನಡಿಗರ ಮನಗೆದ್ದವರು. ಟಿವಿ ಪರದೆಯ ಮುಂದೆ ನಿಂತು ಉತ್ತಮ ನಿರೂಪಕರೆನಿಸಿಕೊಂದ್ದ ಕಾಯ್ಕಿಣಿ ಕನ್ನಡ ಸಿನಿಮಾ ಹಾಡುಗಳಿಗೆ ಹೊಸ ನುಡಿಗಟ್ಟುಗಳನ್ನು, ಕನ್ನಡ ಪ್ರೇಮಿಗಳಿಗೆ ಹೊಸ ಹಾಡುಗಳನ್ನು ಕೊಟ್ಟ ಹೆಗ್ಗಳಿಕೆ ಹೊಂದಿದ್ದಾರೆ, ಬದುಕಿನ ಚಿಕ್ಕ ಘಟನೆಯೇ ಇರಲಿ ಅದನ್ನು ಚಂದದ ಚೌಕಟ್ಟಿನೊಳಗೆ ಚಿತ್ರಿಸುವ ಅವರ ಜೀವನ ಪ್ರೀತಿಯ ಮಾತು ಮತ್ತು ಕೃತಿಗಳು ಇತರರಿಗಿಂತ ಭಿನ್ನವಾಗಿ ನಿಲ್ಲುತ್ತದೆ. 
    ಇತ್ತಿಚಿಗೆ ಕುಂದಾಪ್ರ ಡಾಟ್ ಕಾಂ ಗೆ ಕಾಯ್ಕಿಣಿಯವರು ಮಾತಿಗೆ ಸಿಕ್ಕರು. ಅವರ ಸಂದರ್ಶನದ ಸಂಕ್ಷಿಪ್ತ ವಿವರ ಇಲ್ಲಿದೆ.

ಕುಂದಾಪ್ರ ಡಾಟ್ ಕಾಂ: ತಮ್ಮ ಮಾತು ಮತ್ತು ಕೃತಿಗಳಲ್ಲಿ ಮುಂಬೈ ನಗರಿಯ ಜೊತೆಗೆ ಯುವಜನತೆಯನ್ನು ಕೇಂದ್ರಿಕರಿಸಿ ಮಾತನಾಡುತ್ತಿರಿ. ಆಧುನಿಕತೆಯ ಮರುಳಾಗಿರುವ ಯುವಜನರಿಂದ ನೀವೆನನ್ನು ಕಂಡುಕೊಳ್ಳಬಯಸುತ್ತಿರಿ?
ಕಾಯ್ಕಿಣಿ:  ಆಧುನಿಕತೆ ಎಂದರೆ ಅತ್ಯಾಧುನಿಕ ಮೊಬೈಲ್ ಕೊಳ್ಳುವುದೊ, ಅತ್ಯಾಧುನಿಕ ಉಡುಗೆ ತೊಡುವುದೋ, ಹೊಸ ಸಿನೆಮಾಗಳನ್ನು ನೋಡುವುದೋ ಇಷ್ಟೇ ಅಲ್ಲ. ಆಧುನಿಕತೆ ಎಂದರೆ ಜಾತಿ, ಧರ್ಮ, ಮತಪಂಥಗಳಿಂದ ಮುಕ್ತವಾದ ಸಮಾನತೆಯನ್ನು ಸಾಧಿಸುವುದಾಗಿದೆ. ಸಮಾಜದಲ್ಲಿ ಜಾತಿ, ಧರ್ಮ, ಲಿಂಗ ಭೇದ ಮರೆತು ಮನುಷ್ಯರೆಲ್ಲರೂ ಒಂದೇ ಎನ್ನುವ ನಿಲುವು ತಾಳುವುದು ಬಹಳ ಮುಖ್ಯ. ಇಂದಿನ ಜನತೆ ವೇಷಭೂಷಣಗಳಲ್ಲಷ್ಟೇ ಆಧುನಿಕರಾಗುತ್ತಿದ್ದಾರೆ. ಆದರೆ ಅವರ ಮನಸ್ಸಿನಲ್ಲಿ ಜಾತಿ, ಮೌಢ್ಯ, ಮೂಢನಂಬಿಕೆಗಳೇ ತುಂಬಿಕೊಳ್ಳುತ್ತಿವೆ. ಯುವಜನರು ಇವೆಲ್ಲವುಗಳಿಂದ ಮುಕ್ತವಾಗಿರಬೇಕು ಎಂಬುದು ನನ್ನ ಆಶಯ. ಅವರು ಯಾವುದೋ ಮೂಢನಂಬಿಕೆಗೆ ಮರಳಾಗುವ, ರಾಜಕೀಯ ಪಕ್ಷದ ಮುಖವಾಣಿಯಾಗುವ ಬದಲು ಮನುಷ್ಯ ಪಕ್ಷಪಾತಿಯಾಗಿ ಬದುಕಬೇಕಿದೆ.

ಸಾಹಿತಿ ಜಯಂತ ಕಾಯ್ಕಿಣಿಯೊಂದಿಗೆ ಸಂಪಾದಕ ಸುನಿಲ್ ಬೈಂದೂರು
ಕುಂದಾಪ್ರ ಡಾಟ್ ಕಾಂ:  ಮನುಷ್ಯನಲ್ಲಿ ವಸ್ತು ಪ್ರೀತಿ ಜಾಸ್ತಿಯಾಗುತ್ತಿದೆ ಎಂದೆನಿಸುತ್ತಿದೆಯೇ?
ಕಾಯ್ಕಿಣಿ:  ಬದುಕನ್ನು ಪ್ರೀತಿಸಿದರೆ ಸಹಜವಾಗಿ ಎಲ್ಲವೂ ಸಿಗುತ್ತದೆ. ಪ್ರೀತಿ ಕೊಟ್ಟವರಿಗೆ ಮಾತ್ರ ಪ್ರೀತಿ ಸಿಗುತ್ತದೆ ಎಂಬುದನ್ನು ಅರಿತರೆ ವಸ್ತು ಪ್ರೀತಿ ಕಡಿಮೆಯಾದಿತು. 

ಕುಂದಾಪ್ರ ಡಾಟ್ ಕಾಂ: ಯಶಸ್ವೀ ಹಾಡುಗಳಿಗೆ ಸಾಹಿತ್ಯ ಬರೆದು ಇಂದಿನ ಯುವಜನತೆ ಕನ್ನಡ ಹಾಡುಗಳನ್ನು ಗುನುಗುನಿಸುವಂತೆ ತಾವು ಒಂದು ಹೊಸ ಅಲೆ ಪ್ರಾರಂಭ ಮಾಡಿದಿರಿ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?
ಕಾಯ್ಕಿಣಿ:  ಬಹಳ ಖುಷಿಯಿದೆ. ಹೊಸ ತಲೆಮಾರಿನ, ಅದರಲ್ಲೂ ಆಂಗ್ಲ ಮಾಧ್ಯಮದಲ್ಲಿ ಓದಿದ ಮಕ್ಕಳು ಕನ್ನಡ ಹಾಡುಗಳನ್ನು ಮೆಚ್ಚಿದ್ದು ಒಂದು ರೀತಿಯ ಖುಷಿ . ಇಂಥ ಕ್ರಾಂತಿಯನ್ನು ತೋರಿಕೆಗಾಗಿ ಉದ್ದುದ್ದ ಭಾಷಣಗಳನ್ನು ಬಿಗಿದು ಕನ್ನಡ ಪ್ರೇಮ ತೋರುವವರಿಂದ ತರಲಾಗುವುದಿಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಾನು 'ಅಕ್ಕ' ಸಮ್ಮೇಳನಕ್ಕೆಂದು ಅಮೇರಿಕ, ಇಂಗ್ಲೆಂಡ್ ಗಳಿಗೆ ಹೋದಾಗ, ಕಾರುಗಳಲ್ಲಿ ಮುಂಗಾರುಮಳೆಯ ಹಾಡುಗಳನ್ನು ಕೇಳುತ್ತಿದ್ದರು . ಹೀಗೆ ಮಾಡುವಂತಾಗಿದ್ದು  ಸಹ ಒಂದು ರೀತಿಯ ಕನ್ನಡದ ಸೇವೆಯೇ.

ಕುಂದಾಪ್ರ ಡಾಟ್ ಕಾಂ:  ಮಾಧ್ಯಮ ಕ್ಷೇತ್ರದಲ್ಲಿ ಕೆಲವೊಂದಿಷ್ಟು ಕಾಲ ನೀವು ತೊಡಗಿಸಿಕೊಂಡವರು. ಟಿ.ಆರ್.ಪಿ ಹಾಗೂ ಮಾಧ್ಯಮ ಮಂದಿಯ ಬದುಕು ಇವೆರಡನ್ನು ಹೇಗೆ ಸರಿದೂಗಿಸಿಕೊಳ್ಳಬಹುದು?
ಕಾಯ್ಕಿಣಿ: ಮಾಧ್ಯಮ ಸತ್ಯದ ಪಕ್ಷಪಾತಿಯಾಗಿರಬೇಕು. ಸಮಾನತೆಯನ್ನು ನಂಬಿಕೊಂಡಿರಬೇಕು. ದುಡ್ಡಿಗಾಗಿ ಯಾವುದೇ ಪಕ್ಷವನ್ನು ಬೆಂಬಲಿಸೋದು, ಯಾವುದೋ ಕಾರ್ಯಕ್ರಮವನ್ನು ಪ್ರಸರಿಸೋದು. ಇಂತವುಗಳನ್ನು ಮಾಡಬಾರದು. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಪ್ರಜೆಯ ಧ್ವನಿಯಾಗಬೇಕು. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಆತ್ಮಸಾಕ್ಷಿಯನ್ನು ಜೀವಂತವಾಗಿರಿಸಿಕೊಳ್ಳಬೇಕು. ಇದಕ್ಕೆ ಸಾಹಿತ್ಯ ಕಾರಣವಾಗುತ್ತದೆ. ಸಮಯದ ನೆಪ ಹೇಳಿ ಸಾಹಿತ್ಯ ಓದಿನಿಂದ ದೂರ ಉಳಿಯುವುದು ಕೂಡ ದೃಶ್ಯ ಮಾಧ್ಯಮಗಳಲ್ಲಿ ಸೃಷ್ಟಿಯಾಗುವ ಅವಾಂತರಗಳಿಗೆ ಪ್ರಮುಖ ಕಾರಣ.

ಕುಂದಾಪ್ರ ಡಾಟ್ ಕಾಂ: ಕುಂದಾಪುರದ ಬಗೆಗೆ ನಿಮಗೇನು ಗೊತ್ತು?
ಕಾಯ್ಕಿಣಿ:  ಕುಂದಾಪುರ ನಮಗೆ ಮೊದಲಿಂದಲೂ ಬಹಳ ಆಪ್ತ. ನನ್ನ ಬಾಲ್ಯದ ಗೆಳೆಯನೊಬ್ಬ ಕುಂದಾಪುರ ಸಮೀಪದ ಅಜ್ಜಿ ಮನೆಗೆ ಹೋಗಿ ಬಂದಾಗಲೆಲ್ಲಾ ಕುಂದಾಪ್ರ ಕನ್ನಡದಲ್ಲಿ ಮಾತನಾಡುತ್ತಿದ್ದ. ಇದು ಕುಂದಾಪುರವನ್ನು ಸ್ವಲ್ಪ ಮಟ್ಟಿಗೆ ಪರಿಚಯಿಸಿತ್ತು. ಆ ಬಳಿಕ ಕಾರಂತರು, ಅಡಿಗರು, ಎ.ಎಸ್.ಎನ್. ಹೆಬ್ಬಾರ್, ಯು.ಎಸ್. ಶೆಣೈ, ಮೂರುಮುತ್ತು ಖ್ಯಾತಿಯ ಸತೀಶ್ ಪೈ, ಅಶೋಕ ಶ್ಯಾನುಭೋಗ್ ಮುಂತಾದವರಿಂದಾಗಿ ಕುಂದಾಪುರವನ್ನು ಮತ್ತಷ್ಟು ತಿಳಿದುಕೊಳ್ಳಲು ಸಾಧ್ಯವಾಯಿತು. ನದಿ, ಸೇತುವೆ, ಸಮುದ್ರ ಇವೆಲ್ಲವುಗಳ ನಡುವಿನ ನಗರ ತುಂಬಾ ಆಪ್ತವಾದ ಭಾವನೆಯನ್ನು ನೀಡಿದೆ.

-ಸುನಿಲ್ ಬೈಂದೂರುಕಾಯ್ಕಿಣಿ ಕಥನ:
     ಕನ್ನಡದ ಸೃಜನಾತ್ಮಕ ಸಾಹಿತಿಗಳ ಪೈಕಿ ಅಗ್ರಗಣ್ಯರೆನಿಸಿಕೊಂಡವರು ಜಯಂತ ಕಾಯ್ಕಿಣಿ. ತಮ್ಮ ಕಥೆ, ಕವನ, ಬರಹಗಳ ಮೂಲಕ ಜನಪ್ರಿಯರಾದ ಅವರು ಉತ್ತಮ ವಾಗ್ಮಿಯೂ ಹೌದು. ಟಿವಿ ಪರದೆಯ ಮುಂದೆ ನಿಂತು ಉತ್ತಮ ನಿರೂಪಕರೆನಿಸಿಕೊಂಡಿದ್ದರು ಕಾಯ್ಕಿಣಿ ಕನ್ನಡ ಸಿನಿಮಾ ಹಾಡುಗಳಿಗೆ ಹೊಸ ನುಡಿಗಟ್ಟುಗಳನ್ನು, ಕನ್ನಡ ಪ್ರೇಮಿಗಳಿಗೆ ಹೊಸ ಹಾಡುಗಳನ್ನು ಕೊಟ್ಟ ಹೆಗ್ಗಳಿಕೆ ಹೊಂದಿದ್ದಾರೆ, ಬದುಕಿನ ಚಿಕ್ಕ ಘಟನೆಯೇ ಇರಲಿ ಅದನ್ನು ಚಂದದ ಚೌಕಟ್ಟಿನೊಳಗೆ ಚಿತ್ರಿಸುವ ಅವರ ಜೀವನ ಪ್ರೀತಿಯ ಮಾತು ಮತ್ತು ಕೃತಿಗಳು ಇತರರಿಗಿಂತ ಭಿನ್ನವಾಗಿ ನಿಲ್ಲುತ್ತದೆ. 

     ಜಯಂತ ಕಾಯ್ಕಿಣಿಯವರ ತಂದೆ ಗೌರೀಶ ಕಾಯ್ಕಿಣಿ ಶ್ರೇಷ್ಠ ವಿದ್ವಾಂಸರೂ ಅಪ್ರತಿಮ ವಿಚಾರವಾದಿಗಳು ಆಗಿದ್ದರು ಮತ್ತು ತಾಯಿ ಶಾಂತಾದೇವಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸುಸಂಸ್ಕೃತ ಕುಟುಂಬದಲ್ಲಿ ಹಾಗೂ ಸಾಹಿತ್ಯಕ ವಲಯದಲ್ಲಿ ಬೆಳೆದ ಕಾಯ್ಕಿಣಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ‘ಬಯೋಕೆಮಿಸ್ಟ್ರಿ’ಯಲ್ಲಿ ಎಂ. ಎಸ್ ಸಿ. ಪದವಿ ಪಡೆದು, ಅನಂತರ  ಮುಂಬಯಿಗೆ ತೆರಳಿ, ಅಲ್ಲಿ ಪ್ರಸಿದ್ಧ ಕಂಪನಿಗಳಲ್ಲಿ ಸುಮಾರು 23 ವರ್ಷಗಳ ಕಾಲ ಕೆಲಸಮಾಡಿದರು. ಅಲ್ಲಿ ಸಹೋದ್ಯೋಗಿ ಸ್ಮಿತಾ ಎಂಬುವವರನ್ನು ಮದುವೆಯಾದರು. 

    ವಿದ್ಯಾರ್ಥಿಯಾಗಿದ್ದಾಗಲೇ ಕಥೆ-ಕವನಗಳ ರಚನೆಯನ್ನು ಪ್ರಾರಂಭಿಸಿದ್ದ ಜಯಂತ್, ಮುಂಬಯಿಯಲ್ಲಿದ್ದ  ಯಶವಂತ ಚಿತ್ತಾಲ,  ವ್ಯಾಸರಾಯ ಬಲ್ಲಾಳ, ಮುಂತಾದ ಹಿರಿಯ ಲೇಖಕರ ಒಡನಾಟದಿಂದಾಗಿ ಬಹು ಬೇಗ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧರಾದರು. ಇವರ ಹೆಚ್ಚಿನ ಕಥೆ-ಕವನ-ಪ್ರಬಂಧಗಳಲ್ಲಿ ಕಂಡುಬರುವುದು ಮುಂಬಯಿ ಎಂಬ ದೈತ್ಯ ನಗರ ಹಾಗೂ ಅಲ್ಲಿನ ಸಾಮಾನ್ಯ ಜನರ ಬದುಕಿನ ಹೋರಾಟ. ಮುಂದೆ ಕಾಯ್ಕಿಣಿ ತಮ್ಮ ಮುಂಬಯಿಯ ಬದುಕನ್ನು ತೊರೆದು ಬೆಂಗಳೂರಿಗೆ ಬಂದರು. ಪ್ರಾರಂಭದಲ್ಲಿ ಭಾವನಾ ಎಂಬ ವಿಶಿಷ್ಟ ಮಾಸಪತ್ರಿಕೆಯ ಸಂಪಾದಕರಾಗಿ ಎರಡು ವರ್ಷಗಳ ಕಾಲ ದುಡಿದು, ಅನಂತರ, ಕಥೆ-ಕವನಗಳ ರಚನೆಯೊಡನೆ ಚಿತ್ರ-ಕಥೆಗಳನ್ನು ಸಿದ್ಧಪಡಿಸುವುದು, ಚಿತ್ರಗೀತೆಗಳ ರಚನೆ, ಕಿರು ತೆರೆಯಲ್ಲಿ (ಇ-ಟಿವಿ) ‘ನಮಸ್ಕಾರ’ ಎಂಬ ಹೆಸರಿನ ವಿಶಿಷ್ಟ ಸಂದರ್ಶನ ಮಾಲಿಕೆಯ ನಿರ್ಮಾಣ, ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ (ಜ಼ಿ-ಟಿವಿ) ತೀರ್ಪುಗಾರರಾಗಿ ಕಾರ್ಯನಿರ್ವಹಣೆ, ಇತ್ಯಾದಿ ವೈವಿಧ್ಯಪೂರ್ಣ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
    ಜಯಂತರ ಕಥೆಗಳು ಇತರ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಅಮೃತಾ ಹಾಗೂ ವಂತಿ ಪ್ರಸಂಗ ನಾಟಕಗಳು ರಂಗದ ಮೇಲೆ ಅನೇಕ ಯಶಸ್ವಿ ಪ್ರದರ್ಶನಗಳನ್ನು ಕಂಡಿವೆ. ಇವರ ಕೃತಿಗಳಿಗೆ ನಾಲ್ಕು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ (1975, 1982, 1989, 1996) ಸೇರಿದಂತೆ, ದಿನಕರ ದೇಸಾಯಿ ಪ್ರಶಸ್ತಿ, ಶ್ರೀಧರ ಪ್ರಶಸ್ತಿ, ಕಥಾ ನ್ಯಾಶನಲ್ ಅವಾರ್ಡ್, ‘ಕುಸುಮಾಗ್ರಜ ಪ್ರಶಸ್ತಿ’ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಹೀಗೆ  ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ. 

ಹಾಗೆಯೇ, ವರ್ಷದ ಅತ್ಯುತ್ತಮ ಚಲನಚಿತ್ರ ಸಂಭಾಷಣೆ ಹಾಗೂ ಗೀತೆಗಳಿಗೆ ಕರ್ನಾಟಕ ಸರಕಾರ ನೀಡುವ ಪ್ರಶಸ್ತಿಗಳನ್ನು ಎರಡು ಬಾರಿ, ಮತ್ತು ಫ಼ಿಲ್ಮ್‌ಫ಼ೇರ್ ಪ್ರಶಸ್ತಿಯನ್ನು ಮೂರು ಬಾರಿ ಇವರಿಗೆ ಲಭಿಸಿದೆ. 

ಕವಿಯಾಗಿ ಕನ್ನಡ ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದ ಜಯಂತರ ಮೊದಲ ಕವನ ಸಂಕಲನ  19ನೆಯ ವಯಸ್ಸಿನಲ್ಲಿಯೇ ಪ್ರಕಟವಾಯಿತು. ಈವರೆಗೆ ಜಯಂತ್  5 ಕವನ ಸಂಕಲನಗಳು, 7 ಕಥಾ ಸಂಕಲನಗಳು, 3 ನಾಟಕಗಳು, 2 ಪ್ರಬಂಧ ಸಂಕಲನಗಳು, ನೂರಾರು ಚಿತ್ರಗೀತೆಗಳನ್ನು ಬರೆದು ಕಣ್ಮಣಿ ಎನಿಸಿಕೊಂಡಿದ್ದಾರೆ.

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com