'ಕೊಲ್ಲೂರು ಡೈರಿ' ಪುಸ್ತಕದ ಮಾಹಿತಿ ಪತ್ರ ಬಿಡುಗಡೆ

ಕೊಲ್ಲೂರು: ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಕೊಲ್ಲೂರಿನ ಕುರಿತಾಗಿ ಮಾಹಿತಿ ಸಂಪರ್ಕಗಳನ್ನೊಳಗೊಂಡ ಪುಸ್ತಕ ಹೊರತರುತ್ತಿರುವುದು ಸಂತಸದ ಸಂಗತಿಯಾಗಿದ್ದು, ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳು ಹಾಗೂ ಕೊಲ್ಲೂರಿನ ಜನತೆಗೆ ಈ ಪುಸ್ತಕ ಉತ್ತಮ ಕೈಪಿಡಿಯಾಗಿ ಮೂಡಿಬರಲಿ ಎಂದು ಕೊಲ್ಲೂರು ಶ್ರೀ ಮೂಕಾಬಿಂಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಹಾರೈಸಿದರು.
      ಅವರು ಕೊಲ್ಲೂರಿನ ಮಾಹಿತಿ, ಸಂಪರ್ಕ ಹಾಗೂ ಮಾರ್ಗದರ್ಶನವನ್ನೊಳಗೊಂಡು ಪ್ರಕಟಗೊಳ್ಳಲಿರುವ ’ಕೊಲ್ಲೂರು ಡೈರಿ’ ಪುಸ್ತಕದ ಮಾಹಿತಿ ಪತ್ರವನ್ನು ಕೊಲ್ಲೂರು ದೇವಳದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
    ಧಾರ್ಮಿಕ ನಂಬಿಕೆಗಳೊಂದಿಗೆ ತಳಕು ಹಾಕಿಕೊಂಡಿರುವ ಕೆಲವು ಮೂಡನಂಬಿಕೆಗಳು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದ್ದು ಇಂತಹ ಅನೇಕ ವಿಚಾರಗಳ ಬಗೆಗೆ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಕೊಲ್ಲೂರಿನ ಐತಿಹಾಸಿಕ ಹಿನ್ನೆಲೆ ಹಾಗೂ ವರ್ತಮಾನದ ನೈಜ ಚಿತ್ರಣವನ್ನು ತೆರೆದಿಡುವ ಕೆಲಸ ಈ ಪುಸ್ತಕದ ಮೂಲಕ ಆಗಲಿ ಎಂದು ಆಶಿಸಿದರು.
ಬಿಡುಗಡೆಯ ಸಂದರ್ಭ ಕೊಲ್ಲೂರು ಡೈರಿಯ ಸಂಪಾದಕದ್ವಯರಾದ ಶೇಖರ ಅಜೆಕಾರು ಹಾಗೂ ಸುನಿಲ್ ಹೆಚ್. ಜಿ. ಬೈಂದೂರು, ಹಿರಿಯ ಕವಿ ಮುದ್ರಾಡಿ ರಮೇಶ ಶೆಟ್ಟಿ, ಸೌಮ್ಯಶ್ರೀ ಎಸ್. ಅಜೆಕಾರು ಜೊತೆಗಿದ್ದರು.