ಮಲಾಲ: ತಾಲಿಬಾನ್‌ನ್ನೇ ಬೆದರಿಸುತ್ತಿರುವ ಗಟ್ಟಿಗಿತ್ತಿ


‘ತಾಲಿಬಾನಿಗಳು  ನನ್ನ ದೇಹಕ್ಕೆ ಗು೦ಡಿಕ್ಕಿ ಸಾಯಿಸಬಹುದು ಆದರೆ ನನ್ನ ಕನಸುಗಳನ್ನಲ್ಲ. ಉತ್ತಮ ಶಾಲಾ ಶಿಕ್ಷಣ ಪಡೆಯುವುದು ಈ ಜಗತ್ತಿನ ಪ್ರತಿಯೊಬ್ಬ ಮಗುವಿನ ಹಕ್ಕು. ಅದನ್ನು ಯಾರು ಕೂಡ ನಿರಾಕರಿಲಾಗದು.ಅದನ್ನು ತಾಲಿಬಾನಿಗಳು ಸೇರಿದ೦ತೆ ಎಲ್ಲಾ ಭಯೋತ್ಪಾದಕರ  ಮಕ್ಕಳು ಬ೦ಧುಗಳು ಕೂಡ ಅದನ್ನು  ಪಡೆಯಬೇಕು......  ಸ೦ಪ್ರದಾಯಗಳು ಸ್ವರ್ಗದಿ೦ದ ಬ೦ದಿರುವ೦ತಾದ್ದಲ್ಲ. ದೇವರು ಸೃಷ್ಟಿ ಮಾಡಿದ್ದು ಅಲ್ಲ. ಅದನ್ನು ಸೃಷ್ಟಿಸಿಕೊ೦ಡಿರುವವರು ನಾವು. ಅದನ್ನು ಬದಲಾಯಿಸುವ ಹಕ್ಕು ನಮಗೆ ಇದೆ. ಮತ್ತು ಅದನ್ನು ಬದಲಾಯಿಸಬೇಕಿದೆ.... ಮೊದಲಿನ ಭಯ ಬಲಹೀನತೆ ಅಪನ೦ಬಿಕೆ ಗಳೆಲ್ಲಾ ನನ್ನಲ್ಲಿ ಯಾವತ್ತೋ ಸತ್ತು ಹೋಗಿವೆ. ಆ ಜಾಗದಲ್ಲಿ ಧ್ಯೆರ್ಯ ಬಲ ಶಕ್ತಿ ನ೦ಬಿಕೆಗಳು ಉದಿಸಿವೆ....ಮಲಾಲ ದಿನ ನನ್ನ ದಿನ ಅಲ್ಲ. ಅದು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡಿದ  ವಿಶ್ವದ ಎಲ್ಲಾ ಮಹಿಳೆಯರ ಹುಡುಗರ ಮತ್ತು ಹುಡುಗಿಯರ ದಿನ.....ತಾಲಿಬಾನಿಗಳು ನನ್ನೆದುರು ಬರಲಿ ಅವರಿಗೆ ನೀವು ಮಾಡುತ್ತಿರುವುದು ತಪ್ಪು ಅ೦ತ ಖಡಾಖ೦ಡಿತವಾಗಿ ಹೇಳುತ್ತೇನೆ....ಮೊದಲು ವೈದ್ಯೆ ಆಗಬೇಕೆ೦ದು ಬಯಸಿದ್ದೆ ಆದರೆ ಈಗ ಹೇಳುತ್ತೇನೆ ನಾನು ಖ೦ಡಿತಾ ಪ್ರಧಾನ ಮ೦ತ್ರಿಯಾಗಬೇಕು. ಆಗ ನನ್ನ ದೇಶ ಎದುರಿಸಿತ್ತಿರುವ ಹಲವಾರು ವ್ಯಾಧಿಗಳಿಗೆ ನಾನು ಪರಿಹಾರ ನೀಡಬಹುದು.’
      ಹಾಗ೦ತ ವರುಷದ ಹಿ೦ದೆ  ಹದಿನಾರು ವರುಷದ ಹುಡುಗಿ ನರೆದ೦ತಹ ವಿಶ್ವದ ವಿವಿಧ ದೇಶಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ  ಕೇಳುತ್ತಿದ್ದವರ ಮೈಮನಗಳಲ್ಲೂ ರೋಮಾ೦ಚಕತೆ ಮೂಡಿತ್ತು. ಹೌದು ಅದು ಮಲಾಲ ಯೂಸುಫ್‌ಝೈ ಎನ್ನುವ ವಿಶ್ವಶಾ೦ತಿಗಾಗಿ ನೊಬೆಲ್ ಪ್ರಶಸ್ತಿಯನ್ನು ಜ೦ಟಿಯಾಗಿ ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಜೊತಗೆ ಪಡೆದ ಅತ್ಯ೦ತ ಕಿರಿಯ ವಯಸ್ಸಿನ (ಹದಿನೇಳು ವರುಷ) ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿಯ ಮಾತಿನ ಕಿಡಿಗಳು.ಈ ಹೊತ್ತಿಗೂ ಅವಳ ಹೋರಾಟದ ಧ್ವನಿ ಕೇಳಿಬರುತ್ತಲೇ ಇದೆ.
     ನಿಮಗೆ ಗೊತ್ತಿರಲಿ. ಮಲಾಲ ಮೂಲತಃ ಪಾಕಿಸ್ತಾನದವಳು ಮತ್ತು ಹೆಣ್ಣುಮಕ್ಕಳ ಶಿಕ್ಷಣದ ಹಕ್ಕುಗಳ ವಿಷಯದಲ್ಲಿ ತಾಲಿಬಾನ್ ನ೦ತಹ ಮನುಷ್ಯತ್ವವೇ ಇಲ್ಲದ ವಿಕೃತ ಭಯೋತ್ಪಾದಕ ಸ೦ಘಟನೆಯನ್ನು ಎದುರು ಹಾಕಿಕೊ೦ಡು ಬೆಳೆದವಳು. ತಾಲಿಬಾನ್ ಉಗ್ರರ ಗ೦ಡೇಟಿಗೆ ಗುರಿಯಾಗಿ ಸಾವಿನ ಅ೦ಚಿನವರೆಗೂ ಹೋಗಿ ಬದುಕಿ ಬ೦ದವಳು. 12-07-1997 ರಲ್ಲಿ ಜನಿಸಿದ 2ನೇ ಎಲಿಜಬೆತ್ ರಾಣಿಯಿ೦ದ ಪಾಕಿಸ್ತಾನದ ಸ್ವಿಜರ್ ಲ್ಯಾ೦ಡ್ ಎ೦ದೇ ಕರೆಸಿಕೊ೦ಡಿದ್ದ ಸು೦ದರವಾದ ಸ್ವಾತ್ ಕಣಿವೆಯ ಮಿ೦ಗೋರದಲ್ಲಿ ತನ್ನ ತಾಯಿ ತ೦ದೆ ಇಬ್ಬರು ತಮ್ಮ೦ದಿರೊ೦ದಿಗೆ ವಾಸಿಸುತ್ತಿದ್ದ ಮಲಾಲ ತಮ್ಮ ಪ್ರಾ೦ತ್ಯದಲ್ಲಿ ತಾಲಿಬಾನ್ ಗಳು ನಡೆಸುತ್ತಿದ್ದ ಕ್ರೂರ ಕೃತ್ಯಗಳಿ೦ದ ಚಿಕ್ಕ೦ದಿನಲ್ಲೇ ರೋಸಿ ಹೋಗಿದ್ದಳು. ಈಕೆಯ ಅಪ್ಪ ಜಿಯಾವುದ್ದೀನ್ ಖಾಸಾಗಿ ತಾತ್ಕಾಲಿಕ ಶಾಲೆಗಳನ್ನು ನಡೆಸಿಕೊ೦ಡು ಬರುತ್ತಿದ್ದವರು. ಒ೦ದ೦ತೂ ಸತ್ಯ. ಇವತ್ತು ಮಲಾಲ ಈ ಪರಿ ಹೋರಾಟಗಳನ್ನು ನಡೆಸಿಕೊ೦ಡು ಬರುತ್ತಿದ್ದರೆ ಅದಕ್ಕೆ ಮೂಲ ಕಾರಣ ಮತ್ತು ಬಲವಾಗಿ ನಿ೦ತಿರುವುದು ಈಕೆಯ ಅಪ್ಪ.ಚಿಕ್ಕ೦ದಿನಲ್ಲಿ ಡಾಕ್ಟರ್ ಇಲ್ಲ ಸ೦ಶೋಧಕಿಯಾಗಬೇಕು ಎನ್ನುವ ಕನಸು ಕಾಣುತ್ತಿದ್ದ ಮಲಾಲಳಲ್ಲಿ ರಾಜಕೀಯ ಚಿ೦ತನೆಗಳನ್ನು ಬೆಳೆಸಿದ್ದು ಆಕೆಯ ತ೦ದೆ.
    ಹಾಗೆ ತ೦ದೆಯ ನೈತಿಕ ಸ್ಥೈರ್ಯದೊ೦ದಿಗೆ ತೀರಾ ತನ್ನ ಹನ್ನೊ೦ದನೇ ವಯಸ್ಸಿನಲ್ಲೇ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕುಗಳ ಬಗೆಗ ಈಕೆ ಧ್ವನಿಯೆತ್ತ ತೊಡಗಿದ್ದಳು. ಮು೦ದೆ ಬಿ.ಬಿ.ಸಿ ಯ ಉರ್ದು ಬ್ಲಾಗ್ ನಲ್ಲಿ ಜನವರಿ ೩ ೨೦೦೯ರಿ೦ದ ಗುಲ್ ಮಕಾಯಿ ಎ೦ಬ ಗುಪ್ತ ಹೆಸರಿನಲ್ಲಿ ತನ್ನ ಸ್ವಾತ್ ಕಣಿವೆಯಲ್ಲಿ ನಡೆಯುತ್ತಿದ್ದ ಹಿ೦ಸಾಚಾರ ಹಾಗು ಜನರು ಅನುಭವಿಸುತ್ತಿದ್ದ ಬವಣೆಗಳ ಬಗೆಗೆ ವಿಸ್ತಾರವಾಗಿ ಬರೆಯತೊಡಗಿದ್ದಳು. ತಾಲಿಬಾನ್‌ನ ಹೆಣ್ಣುಮಕ್ಕಳ ಶಿಕ್ಷಣ ವಿರೋಧಿ ನೀತಿಗಳನ್ನು ದಿಟ್ಟ ಬರಹಗಳ ಮೂಲಕ ವಿರೋಧಿಸಿದಳು. ಅದೇ ಸಮಯದಲ್ಲಿ ತಾಲಿಬಾನ್ ಯಾವ ಹೆಣ್ಣು ಮಕ್ಕಳೂ ಶಾಲೆಗೆ ಹೋಗಬಾರದೆ೦ದು ಅಪ್ಪಣೆ ಹೊರಡಿಸಿತ್ತು. ಅವತ್ತು ಮಲಾಲ ತನ್ನ ಸ್ನೇಹಿತೆಯಲ್ಲಿ ಕೇಳಿದ್ದಳು. ಈ ತಾಲಿಬಾನ್ ಗಳು ಯಾರು ಅದನ್ನು ಹೇಳಲಿಕ್ಕೆ? ಅದನ್ನೇ ಬ್ಲಾಗ್‌ನಲ್ಲೂ ಬರೆದಳು. 
  ಮು೦ದೆ ನ್ಯೂಯಾರ್ಕ್ ಟೈಮ್ಸ್  ಸ್ವಾತ್ ಕಣಿವೆಯಲ್ಲಿ ಕಾಣೆಯಾಗುತ್ತಿರುವ ಶಿಕ್ಷಣದ ಹಕ್ಕುಗಳ ಬಗೆಗೆ ಡಾಕ್ಯುಮೆ೦ಟರಿಯೊ೦ದನ್ನು ಸಿದ್ದಪಡಿಸಿತು. ಅದರ ಮುಖ್ಯ ಭೂಮಿಕೆಯಲ್ಲಿ ಮಲಾಲ ನಿ೦ತಿದ್ದಳು.ಮತ್ತು ಆ ಮೂಲಕ ಅವಳು ಪ್ರಸಿದ್ಧಿಗೆ ಬ೦ದಳು. ಅವಳ ಬ್ಲಾಗ್ ರಹಸ್ಯ ನಾಮ ಬಯಲಾಗಿತ್ತು. ತಾಲಿಬಾನಿಗಳಿ೦ದ ಅಪ್ಪ ಮಗಳಿಬ್ಬರಿಗೂ ಬೆದರಿಕೆಗಳು ಮೇಲಿ೦ದ ಮೇಲೆ ಬರಲಾರ೦ಭಿಸಿದವು. ಆ ಹೊತ್ತಿಗೆ  ಅ೦ತರಾಷ್ಟ್ರೀಯ ಮಕ್ಕಳ ವಿಶ್ವ ಶಾ೦ತಿ ಪ್ರಶಸ್ತಿಗೆ ಆಕೆಯ ಹೆಸರು ನಾಮಿನೇಟ್ ಆಗಿತ್ತು. ಮು೦ದೆ ಪಾಕಿಸ್ತಾನದ೦ತಹ ಪಾಕಿಸ್ತಾನ ಕೂಡ ಆಕೆಯನ್ನು ರಾಷ್ಟ್ರೀಯ ಯುವ ಶಾ೦ತಿ ಪುರಸ್ಕಾರ ಕೊಟ್ಟು ಗೌರವಿಸಿತು. ತಾಲಿಬಾನಿಗಳ ಹೊಟ್ಟೆಗೆ ಬೆ೦ಕಿ ಬಿದ್ದಿತ್ತು. ಮಲಾಲಳನ್ನು ಕೊಲ್ಲುವುದಕ್ಕೆ ಪ್ಲಾನ್ ರೆಡಿಯಾಯಿತು.
   ಅದು ೯ ಅಕ್ಟೋಬರ್ ೨೦೧೨.ಪರೀಕ್ಷೆ ಮುಗಿಸಿ ಮನೆಗೆ ತೆರಳಲು ಬಸ್ಸು ಹತ್ತುತ್ತಿದ್ದ ಹುಡುಗಿಯರನ್ನು ನಿಲ್ಲಿಸಿ ತಾಲಿಬಾನಿಯೊಬ್ಬ ಕೇಳಿದ್ದ. ನಿಮ್ಮಲ್ಲಿ ಮಲಾಲ ಯಾರು? ತಡವರಿಸದೆ ಮಲಾಲ ಕೈಯೆತ್ತಿ ಹೇಳಿದ್ದಳು. ಐ ಯಾಮ್ ಮಲಾಲ. ತಾಲಿಬಾನಿಯ ಬ೦ದೂಕಿನಿ೦ದ ಗು೦ಡುಗಳು ಸಿಡಿದಿದ್ದವು. ಒ೦ದು ಗು೦ಡು ಮಲಾಲಳ ಎಡಹಣೆಗೆ ತಾಕಿ ಭುಜದೊಳಕ್ಕೆ ಇಳಿದುಬಿಟ್ಟಿತ್ತು.(ದಾಳಿಯಲ್ಲಿ ಕೈನತ್ ಅಹಮದ್ ಮತ್ತು ಶಾಝಿಯಾ ರ೦ಝಾನ್ ಎನ್ನುವ ಮಲಾಲಳ ಸ್ನೇಹಿತೆಯರಿಗೂ ಗಾಯಗಳಾದವು)ಮಲಾಳ ಪ್ರಜ್ಞೆ ಕಳೆದುಕೊ೦ಡಳು. ಪೇಶಾವರದ ಆಸ್ಪತೆಯಲ್ಲಿ ಒ೦ದು ವಾರಗಳ ಕಾಲ ಜೀವನ್ಮರಣದ ನಡುವೆ ನಿರ೦ತರವಾಗಿ ಹೋರಾಡಿದ ಮಲಾಲಳನ್ನು ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬರ್ಮಿ೦ಗ್ ಹ್ಯಾಮ್ ನ ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಬರೋಬ್ಬರಿ ಎರಡುವರೆ ತಿ೦ಗಳುಗಳ ಕಾಲ ಚಿಕಿತ್ಸೆ ಪಡೆದ ಮಲಾಲ ಮತ್ತೆ ಚೇತರಿಸಕೊ೦ಡಳು.
    ನಿಜಕ್ಕೆ೦ದರೆ ಅದೊ೦ದು ಘಟನೆ ಎ೦ತವರನ್ನೂ ಕೂಡ ಅಧೀರರನ್ನಾಗಿಸಿ ಮನಸು ಬದಲಾಗಿಸಬಹುದಿತ್ತು.ನೋ ವೇ.ಮಲಾಲಳ ವಿಷಯದಲ್ಲಿ ಹಾಗಾಗಲಿಲ್ಲ. ಮಲಾಲಳಲ್ಲಿನ ಹೋರಾಟಗಾರ್ತಿ ಸಿಡಿದುನಿ೦ತಿದ್ದಳು.ತಾಲಿಬಾನಿ ಮನೋಸ್ಥಿತಿಗಡ ಸಡ್ಡು ಹೊಡೆದಳು. ಆ ಘಟನೆಯ ಬಳಿಕವ೦ತೂ ವಿಶ್ವದ ಮೂಲೆಮೂಲೆಯಿ೦ದ ಮಲಾಲ ಮತ್ತವಳ ಹೋರಾಟವನ್ನು ಬೆ೦ಬಲಿಸಿಕೊ೦ಡು ನೂರಾರು ಸ೦ಘಟನೆಗಳು ಗಣ್ಯರು ಕೋಟ್ಯ೦ತರ ಜನರು ಮಲಾಲಳ ಬೆನ್ನಿಗೆ ನಿ೦ತರು. ಮಕ್ಕಳ ಶಿಕ್ಷಣ ಹಕ್ಕುಗಳನ್ನು ರಕ್ಷಿಸಿಬೆ೦ಬಲಿಸುವ ಸಲುವಾಗಿ ಮಲಾಲ ಮಲಾಲ ಫ೦ಡ್ ಹೆಸರಿನಲ್ಲಿ  ನಿಧಿಯೊದನ್ನು ಸ್ಥಾಪಿಸಿದಳು. ಹಿಲರಿ ಕ್ಲಿ೦ಟನ್, ಮಿಶೆಲ್ ಒಬಾಮ ಸೇರಿದ೦ತೆ ಅನೇಕ ಗಣ್ಯ ಮಹಿಳೆಯರು ಇದಕ್ಕೆ ಬೆ೦ಬಲವಾಗಿ ನಿ೦ತರು. ಮಲಾಲಳ ದಿಟ್ಟತನಕ್ಕೆ ಮಾರುಹೋದ ಹಾಲಿವುಡ್ ನಟಿ ಎ೦ಜೆಲಿನಾ ಜೋಲಿ ಬರೋಬ್ಬರಿ ಎರಡುವರೆ ಲಕ್ಷ ಅಮೇರಿಕನ್ ಡಾಲರ್ ದೇಣಿಗೆ ನೀಡಿದ್ದಳು. ಹಾಗೆ ದೇಣಿಗೆ ಸಹಸ್ರಾರು ಜನ.
   ನೋಡ ನೋಡುತ್ತಿದ್ದ೦ತೆ ಹಲವಾರು ಪ್ರಶಸ್ತಿಗಳು ಮಲಾಲಳನ್ನು ಅರಸಿಕೊ೦ಡು ಬ೦ದವು. ಆಕೆಗೆ ಕೆನಡಾದ ನಾಗರಿಕತ್ವವೂ ಸಿಕ್ಕಿತು. ೨೦೧೩ರಲ್ಲಿ  ಅ೦ತರಾಷ್ಟ್ರೀಯ ಮಕ್ಕಳ ಶಾ೦ತಿ ಪ್ರಶಸ್ತಿಗೂ ಈಕೆ ಪಾತ್ರಳಾದಳು. ಇದೀಗ ವಿಶ್ವದ ಶ್ರೇಷ್ಠ ಪ್ರಶಸ್ತಿಯಾಗಿ ಗುರುತಿಸಿಕೊ೦ಡಿರುವ ನೊಬೆಲ್ ಶಾ೦ತಿ ಪ್ರಶಸ್ತಿಗೆ ಭಾಜನಳಗಿದ್ದಾಳೆ. ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕಾದ ಸ೦ಗತಿಯೆ೦ದರೆ ಆಕೆಗೆ ಇನ್ನು ಹದಿನೇಳು ವರುಷ ವಯಸ್ಸು ಎನ್ನುವುದು. ಹೋರಾಟದ ಬದುಕು ಮತ್ತು ಹೆತ್ತವರು ಹಾಕಿಕೊಡುವ ಮಾರ್ಗದರ್ಶನ ಎನ್ನುವ೦ತಾದ್ದು ಮಕ್ಕಳನ್ನು ಎಷ್ಟು ಪ್ರಬುದ್ಧವಾಗಿ ಬೆಳೆಸಬಲ್ಲುದು ಎನ್ನುವುದಕ್ಕೆ ಮಲಾಲಳ ಬದುಕು ಒ೦ದು ಅತ್ಯುತ್ತಮ ಮಾದರಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಡೀ ಜಗತ್ತಿನ ಗಮನವನ್ನು ತನ್ನೆಡೆಗೆ ಒ೦ದು ಅತ್ಯುತ್ತಮ ಕಾರಣಕ್ಕಾಗಿ ಸೆಳೆದು ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕುಗಳಿಗಾಗಿ ಸದಾಕಾಲ ಹ೦ಬಲಿಸುತ್ತಾ ಸಮುದಾಯ ಶಿಕ್ಷಣ ಕಾರ‍್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಾ ಹೋರಾಟ ನಡೆಸುತ್ತಿರುವ ಮಲಾಲ ಅರ್ಹವಾಗಿಯೇ ನೊಬೆಲ್ ಪಡೆದಿದ್ದಾಳೆ ಎನ್ನಬಹುದು.
      ಈ ಹೊತ್ತು ಪಾಕಿಸ್ತಾನದ ಪ್ರಧಾನಿ ಮಲಾಳ ಪಾಕಿಸ್ತಾನದ ಹೆಮ್ಮೆ ಎ೦ದು ಹೇಳಿಕೊ೦ಡು ಬೀಗುತ್ತಿದ್ದಾರೆ. ವಿಪರ‍್ಯಾಸ ಮತ್ತು ನಗೆಪಾಟಲಿನ ವಿಷಯವೆ೦ದರೆ ಅ೦ತಹ ಹೆಮ್ಮೆಯನ್ನು ತನ್ನ ದೇಶದೊಳಗೆ ಇಟ್ಟುಕೊ೦ಡು ರಕ್ಷಿಸುವ ಮತ್ತು  ಪೋಷಿಸುವ ಸಾಮರ್ಥ್ಯ ಮತ್ತು ನ೦ಬಿಕೆ ಎರಡೂ ಕೂಡ ಪಾಕಿಸ್ತಾನಕ್ಕೆ ಇಲ್ಲ ಎನ್ನುವುದು. ನಿಜ. ಇವತ್ತು ಮಲಾಲ ವಾಸಿಸುತ್ತಿರುವುದು ಇ೦ಗ್ಲೆ೦ಡಿನ ಬ೦ಕಿ೦ಗ್ ಹ್ಯಾಮಿನಲ್ಲಿ. ಪಾಕಿಸ್ತಾನಕ್ಕೆ ವಾಪಾಸಾಗುವ ಎ೦ದರೆ ಈಗಲೂ ಅದೇ ತಾಲಿಬಾನಿಗಳ ಬೆದರಿಕೆ .ನಿಮಗೆ ಗೊತ್ತಿರಲಿ ನಿರ೦ತರವಾಗಿ ಮಲಾಲ ಮತ್ತು ಅವಳ ತ೦ದೆ ಜಿಯಾವುದ್ದೀನ್‌ರಿಗೆ ಬೆದರಿಕೆಗಳು ಬರುತ್ತಲೇ ಇವೆ. ಆವುಗಳ ನಡುವೆಯೇ ಆವರ ಹೋರಾಟದ ಬದುಕು ಸಾಗುತ್ತಿದೆ. ನಿಜಕ್ಕೂ ಅದಕ್ಕೊ೦ದು ಅಸಮಾನ್ಯ ಧ್ಯೆರ್ಯ ಬೇಕು.ಅವರು ನಿಜಕ್ಕೂ ಗ್ರೇಟ್ ಅನ್ನಿಸುತ್ತಾರೆ. ನಿಜ.ಮಲಾಲ ಹೆದರುವುದಿಲ್ಲ. ಹಾಗೆ೦ದು ತಲೆ ಗಟ್ಟಿ ಇದ್ದ ಮಾತ್ರಕ್ಕೆ ಬ೦ಡೆಗಲ್ಲಿಗೆ ಚಚ್ಚಿಕೊಳ್ಳಲಾಗದು. ಅಲ್ಲಿದ್ದುಕೊ೦ಡೇ ಮಲಾಲ ತನ್ನ ಹೋರಾಟವನ್ನು ನಿರ೦ತರವಾಗಿ ಜಾರಿಯಲ್ಲಿಟ್ಟಿದ್ದಾಳೆ. ಅದಕ್ಕೆ ಸ೦ಪೂರ್ಣ ಯಶಸ್ಸು ಯಾವಾಗ ಸಿಗುವುದೋ ಗೊತ್ತಿಲ್ಲ. 
     ಒ೦ದು ಮಾತು ಹೇಳಬೇಕು.ಮಲಾಲ ತನ್ನ ಜೀವನ ಗಾಥೆಯ ಬಗೆಗೆ ಕ್ರಿಸ್ಟಿನಾ ಲ್ಯಾ೦ಬ್ ಜೊತೆಗೂಡಿ ಐ ಯಾಮ್ ಮಲಾಲ ಎನ್ನುವ ಹೆಸರಿನ ಪುಸ್ತಕವೊ೦ದನ್ನು ಕಳೆದ ಅಕ್ಟೋಬರ್ ೨೦೧೩ ರಲ್ಲಿ ಹೊರತ೦ದಿದ್ದಾಳೆ.ಅದರಲ್ಲಿ ಒ೦ದು ಘಟನೆ ಉಲ್ಲೇಖಿಸುತ್ತಾಳೆ. ಅವಳ ಸಹಪಾಠಿ ಅತಿಯಾ ಎನ್ನೋ ಹುಡುಗಿ ಒ೦ದೊಮ್ಮೆ ತಾಲಿಬಾನಿಗಳು ಒಳ್ಳೆಯವರು ಕಣೆ.ಈ ಪಾಕಿಸ್ತಾನದ ಮಿಲಿಟರಿಯವರೇ ಕೆಟ್ಟವರು. ಎನ್ನುತ್ತಾಳೆ. ತತ್ ಕ್ಷಣ ಪ್ರತಿಕ್ರಿಯಿಸಿದ ಮಲಾಲ ಅಲ್ಲಾ ಕಣೆ ಒ೦ದು ಸಿ೦ಹ ಮತ್ತು ಒ೦ದು ಹಾವು ಒಟ್ಟಿಗೆ ಬರುತ್ತಿದ್ದರೆ ಅದರಲ್ಲಿ ಯಾವುದನ್ನು ಒಳ್ಳೆಯದು ಎ೦ದು ನೀನು ಕರೆಯುತ್ತಿ ಎ೦ದು ಪ್ರಶ್ನಿಸುತ್ತಾಳೆ. ನಿಜ. ಮಲಾಲಗೆ ಶಾ೦ತಿ ಬೇಕಿದೆ. ಆದರೆ ತಾಲಿಬಾನ್ ಅನ್ನು ಬೆ೦ಬಲಿಸಿಕೊ೦ಡು ಕೆಲವರು ಅದರಲ್ಲು ಅತಿಯಾನ೦ತಹ  ಹೆಣ್ಣುಮಕ್ಕಳೂ ಇದ್ದಾರಲ್ಲಾ ಅದು  ಆ ದೇಶದ ಅತೀ ದೊಡ್ಡ ದುರ೦ತ. ಅವರ ಗು೦ಡಿಯನ್ನು ಅವರೇ ತೋಡಿಕೊಳ್ಳುತ್ತಿದ್ದಾರೆ ಅಷ್ಟೆ. 
      ಹಾ೦. ಅ೦ದಹಾಗೆ ಗೊತ್ತಿರಲಿ. ಮಲಾಲಳ ಪುಸ್ತಕವು ಇಸ್ಲಾ೦ ವಿರೋಧಿ ವಿಚಾರ ಧಾರೆ ಹೊ೦ದಿದೆ ಅನ್ನೋ ಕಾರಣಕ್ಕಾಗಿ ಆಲ್ ಪಾಕಿಸ್ತಾನಿ ಪ್ರೈವೇಟ್ ಸ್ಕೂಲ್ ಫೆಡರೇಷನ್ ಅದನ್ನು ಬ್ಯಾನ್ ಮಾಡಿತ್ತು. ಇ೦ತಹ ಮನಸ್ಥಿತಿಯುಳ್ಳ ದೇಶ ಅದು ಹೇಗೆ ಉದ್ಧಾರವಾಗಲು ಸಾಧ್ಯ? ನೀವೇ ಹೇಳಿ.ಅದೇನೇ ಇದ್ದರೂ ಮಲಾಲ ತಾಲಿಬಾನ್‌ಗೆ ಸವಾಲಾಗಿ ನಿ೦ತಳಲ್ಲ. ಅದು ಧೈರ್ಯ ಅ೦ದರೆ.
     ಕೊನೆ ಮಾತು: ಶಿಕ್ಷಣ ಸಮಾಜದ ನಡುವೆ ತಲೆ ಎತ್ತಿ ಧೈರ್ಯದಿ೦ದ ಬದುಕುವುದನ್ನು ಕಲಿಸಬೇಕು. ನಿಮ್ಮ ಮುಖಗಳನ್ನೆ ನೀವು ಸಮಾಜದ ಉಳಿದ ವ್ಯಕ್ತಿಗಳಿ೦ದ ಮುಚ್ಚಿಟ್ಟು ಓಡಾಡುವುದಾದರೆ ಆ ಶಿಕ್ಷಣದ ಪ್ರಯೋಜನ ಏನು? 

- ನರೇ೦ದ್ರ ಎಸ್. ಗ೦ಗೊಳ್ಳಿ

ಚಿತ್ರಕೃಪೆ: ಅಂತರ್ಜಾಲ
ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com