ಕುಂದಾಪುರ ತಾಲೂಕು 14ನೇ ಕನ್ನಡ ಸಾಹಿತ್ಯ ಸಮ್ಮೇಳನ; ಸಮ್ಮೇಳನಾಧ್ಯಕ್ಷರಾಗಿ ಡಾ. ಕನರಾಡಿ ವಾದಿರಾಜ ಭಟ್

   ಪರ್ವತ ಶ್ರೇಣಿಗಳಿಂದ ಸುತ್ತುವರಿದ, ದಟ್ಟವಾದ ಅರಣ್ಯದಿಂದ ಸಂಪದ್ಭರಿತವಾದ ದೃಷ್ಟಿ ಬೀರಿದಲ್ಲೆಲ್ಲ ಹಸಿರಿನಿಂದ ಕಂಗೊಳಿಸುವ, ಶಾಂತವಾಗಿ ಹರಿಯುವ ಸೌಪರ್ಣಿಕ ನದಿಯ ತಟದಲ್ಲಿ, ನೋಡುಗರ ಕಣ್ಮನ ಸೆಳೆಯುವಂತಹ ಪವಿತ್ರ ಸ್ಥಾನ ಶ್ರೀ ಮೂಕಾಂಬಿಕೆಯ ನೆಲೆಸಿರುವ ದಿವ್ಯ ಸಾನಿಧ್ಯ ಕೊಲ್ಲೂರಿನಲ್ಲಿ 14ನೇ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿದೆ. ಕೊಲ್ಲೂರಿನ ಶ್ರೀ ಮೂಕಾಂಬಿಕಾ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವದ ಸಂಭ್ರಮದಲ್ಲಿರುವ ವರ್ಷದಲ್ಲಿ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನವೆಂಬರ್ 29 ಹಾಗೂ 30ರಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ, ವಿದ್ವಾಂಸ ಡಾ. ಕನರಾಡಿ ವಾದಿರಾಜ ಭಟ್ ಆಯ್ಕೆಯಾಗಿರುವುದು ಅಧ್ಯಕ್ಷ ಸ್ಥಾನಕ್ಕೇ ಒಂದು ಕಳೆ ಬಂದಂತಾಗಿದೆ. 
     ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾರಾಯಣ ಖಾರ್ವಿ, ಸಮ್ಮೇಳನದ ಸ್ವಾಗತಿ ಸಮಿತಿಯ ಅಧ್ಯಕ್ಷರಾದ ಕೃಷ್ಣಪ್ರಸಾದ ಅಡ್ಯಂತ್ತಾಯ ಅವರ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದೆ.


ಸಮ್ಮೇಳನಾಧ್ಯಕ್ಷ ಡಾ| ಕನರಾಡಿ ವಾದಿರಾಜ ಭಟ್ಟರ ಪರಿಚಯ
   ಮುಖದಲ್ಲಿ ಮೆಲುನಗೆಯ ಹೊತ್ತು, ಶುಭ್ರ ಉಡುಗೆಯ ತೊಟ್ಟು ತನ್ನ ಸರಳ ನಡೆ ನುಡಿ ಹಾಗೂ ಸಜ್ಜನಿಕೆಯಿಂದಲೇ ಒಬ್ಬ ಆದರ್ಶ ಶಿಕ್ಷಕನಾಗಿ, ಧಾರ್ಮಿಕ, ನೈತಿಕ ಪ್ರಜ್ಞೆಯುಳ್ಳ ನಾಗರೀಕನಾಗಿ, ಉತ್ತಮ ಸಾಹಿತಿಯಾಗಿ, ಆಧ್ಯಾತ್ಮ ಚಿಂತಕರಾಗಿ ಚಿರಪರಿಚಿತರು ಡಾ ಕನರಾಡಿ ವಾದಿರಾಜ ಭಟ್ಟ.
 ಉಡುಪಿಯ ಕನರಾಡಿಯಲ್ಲಿ 1951 ಜುಲೈ 2ರಂದು ಕೆ. ಲಕ್ಷ್ಮೀನಾರಾಯಣ ಮತ್ತು ಕಮಲಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ವಾದಿರಾಜ ಭಟ್ಟರು ಕನರಾಡಿಭವ, ಕವಾಭ ಮುಂತಾದ ಕಾವ್ಯನಾಮಗಳಿಂದ ಕೃತಿ ರಚನೆಯಲ್ಲಿ ತೊಡಗಿ ಏರಿದ ಎತ್ತರ ಅನನ್ಯವಾದುದು.

ಶೈಕ್ಷಣಿಕ ಕ್ಷೇತ್ರ
   ಪುರ್ಣಪ್ರಜ್ಞಾ ಕಾಲೇಜಿನಲ್ಲಿ ಬಿ.ಎ ವ್ಯಾಸಂಗವನ್ನೂ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಎ ಹಾಗೂ ಪಿ.ಎಚ್.ಡಿ.(2008) ವ್ಯಾಸಂಗವನ್ನು ಪಡೆದು 1973ರಲ್ಲಿ ಕೊಡಗಿನ ಶ್ರೀಮತಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. ಮುಂದೆ  1974ರಿಂದ ಬಸ್ರೂರಿನ ಶ್ರೀಶಾರದಾ ಕಾಲೇಜಿನಲ್ಲಿ ವೃತ್ತಿ ಜೀವನವನ್ನು ಮುಂದುವರಿಸಿದರು.
     ಮಂಗಳೂರು ವಿ.ವಿ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ, ಕನ್ನಡ ಅಧ್ಯಯನ ಮಂಡಳಿಯ ಸದಸ್ಯರಾಗಿ, ಮಂಗಳೂರು ವಿವಿ ಕನ್ನಡ ಪುಸ್ತಕ ಸಮಿತಿಯ ಸದಸ್ಯರಾಗಿ, ಕನ್ನಡ ಮತ್ತು ತುಳು ಸಾಹಿತ್ಯ, ಸಂಸ್ಕೃತಿ, ಜನಪದ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿಕೊಂಡು, ನೂರಾರು ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಕನ್ನಡ ನಿಘಂಟು ಯೋಜನೆಯ ಕ್ಷೇತ್ರ ತಜ್ಞರಾಗಿ ಸೇವೆಗೈದ ಹಿರಿಮೆ ಅವರದು.
ಸಾಮಾಜಿಕ-ಸಾಂಸ್ಕೃತಿಕ
   ಬಸ್ರೂರು ಸಂಸ್ಕೃತಿ ಸೇವಾ ವಿಕಾಸ ವಿಧಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಅಬುಪರ್ವತ ರಾಜಯೋಗ ಶಿಕ್ಷಣ ಸಂಸ್ಥೆ, ಕರ್ನಾಟಕ ಜಾನಪದ ಪರಿಷತ್ ಉಡುಪಿ ಘಟಕ ಮುಂತಾದ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಪದವಿಗಳನ್ನು ಅಲಂಕರಿಸಿದ್ದಾರೆ.
    ಕುಂದಾಪುರ ತಾಲೂಕಿನ ಬಗೆಗೆ ಕುಂದಾಪುರ ತಾಲೂಕು ದರ್ಶನ, ಮಕ್ಕಳ ಜಾನಪದ, ಕುಂದಾಪುರದ ಸಾಹಿತ್ಯ ಚರಿತ್ರ, ಕುಂದಗನ್ನಡ ಭಾಷಾ ವೈಜ್ಞಾನಿಕ ಅಧ್ಯಯನ, ಕನ್ನಡ ಜಾನಪದ ನಿಘಂಟು ಕೋಶ ಹೀಗೆ ಹಲವು ಅಧ್ಯಯನಗಳನ್ನು ಕೈಗೊಂಡು ಸಾಕಷ್ಟು ದುಡಿದಿದ್ದಾರೆ.
   
  ವಾದಿರಾಜ ಭಟ್ಟರು ಈವರೆಗೆ ಹದಿನೇಳು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದು, ಸುಮಾರು ಹನ್ನೊಂದು ಕೃತಿಗಳಿಗೆ ಸಂಪಾದಿಸಿದ್ದಾರೆ. ಸಂಸೇವಿನಿ ಮೂಲಕ ಸಂಚಾಲಕರಾಗಿ ಅವರೂ ಸೇರಿದಂತೆ ವಿವಿಧ ಲೇಖಕರ ಹತ್ತುಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
  ಆಕಾಶವಾಣಿಯಲ್ಲಿ ಐವತ್ತಕ್ಕೂ ಹೆಚ್ಚು ಬಾರಿ ಭಾಷಣ, ಚಿಂತನ, ನಾಟಕ, ವಿಚಾರಗೋಷ್ಠಿ,  ದೂರದರ್ಶನದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹತ್ತಾರು ಸಂಶೋಧನಾ ಲೇಖನಗಳನ್ನು ಬರೆದಿರುವ ಕನರಾಡಿಯವರು ಕಲಾವಿದರಿಗೆ ಮಾಶಾಸನ, ಬಡವಿದ್ಯಾರ್ಥಿಗಳಿಗೆ ನೆರವು ಹೀಗೆ ತಮ್ಮ ಸೇವೆಯನ್ನು ಮುಂದುವರಿಸುತ್ತಿದ್ದಾರೆ.
   ಪ್ರಶಸ್ತಿ, ಪ್ರಚಾರದ ಹಿಂದ ಬೀಳದ ಕನರಾಡಿಯವರಿಗೆ 1982ರಲ್ಲಿ ಯುವ ಜೇಸೀ ಪ್ರಶಸ್ತಿ, 2006ರಲ್ಲಿ ಭಾರತ ಭೂಷಣ ಪ್ರಶಸ್ತಿ, 2010ರಲ್ಲಿ ಕಾರಂತ ಸದ್ಭಾವನಾ ಪ್ರಶಸ್ತಿ ಹಾಗೂ ಜಾನಪದ ಲೋಕ ವಿಶೇಷ ಪುರಸ್ಕಾರ ಮತ್ತು  ಹತ್ತು ಹಲವು ಸನ್ಮಾನ ಅಭಿನಂದನೆಗಳು ದೊರೆತಿವೆ.

  ಸುಮಾರು ನಲವತ್ತು ವರ್ಷಗಳಿಂದ ಕುಂದಾಪುರ ಪರಿಸರದಲ್ಲಿ ಕನ್ನಡ ಅಧ್ಯಾಪನ, ಭಾಷೆ, ಸಾಹಿತ್ಯ, ಜಾನಪದ, ಕ್ಷೇತ್ರಕಾರ್ಯ, ಗ್ರಂಥರಚನೆ, ಸಂಪಾದನೆ, ಪುಸ್ತಕ ಪ್ರಕಟಣೆ, ಕಲಾವಿದರಿಗೆ ಬಡವಿದ್ಯಾರ್ಥಿಗಳಿಗೆ ನೆರವು ಹೀಗೆ ಸಾಗಿ ಬರುವ ಕನರಾಡಿ ವಾದಿರಾಜ ಭಟ್ಟರು ಈಗಲೂ ಕನ್ನಡ ಜಾನಪದ ನಿಘಂಟು ಯೋಜನೆಯ ಕ್ಷೇತ್ರ ತಜ್ಞರಾಗಿ ನಶಿಸುತ್ತಿರುವ ಕನ್ನಡ ಪದಗಳ ನಿಘಂಟು ಯೋಜನೆಯಲ್ಲಿ ತೊಡಗಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಕುಂದಾಪುರ ಕನ್ನಡ ಪದಗಳನ್ನು ಹುಡುಕಿ ಅವುಗಳಿಗೆ ಗ್ರಂಥರೂಪ ನೀಡುವಲ್ಲಿ ನೆರವಾಗಿದ್ದಾರೆ. ಈ ಬಾರಿಯ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳಾನಾಧ್ಯಕ್ಷರಾಗಿ ಅವರು ಆಯ್ಕೆಯಾದುದು ಅವರ ಕನ್ನಡ ಕಾಯಕಕ್ಕೆ ದೊರೆತ  ಗೌರವವೇ ಸರಿ.


14th-Kundapura-taluk-Kannada-sahitya-sammelana held at Kolluru on 29 & 30th of November