ಮೂರು ದಶಕಗಳು ಕಳೆದರೂ ಅಭಿವೃದ್ಧಿ ಕಾಣದ ರಸ್ತೆ

 ಇದು ಬಂಟ್ವಾಡಿ-ನಾಡಾ ಪಡುಕೋಣೆ-ಹರ್ಕೂರು ರಸ್ತೆಯ ದುರವಸ್ಥೆ !
ನಾಡಾ-ಹರ್ಕೂರು ರಸ್ತೆ ದುರವಸ್ಥೆ
ಬೈಂದೂರು ವಿಧಾನಸಭಾ ವ್ಯಾಪ್ತಿಯ ಹಿಂದುಳಿದ ಹಾಗೂ ಹಲವು ಗ್ರಾಮೀಣ ಪ್ರದೇಶಗಳನ್ನು ಜೋಡಿಸುವ ಬಂಟ್ವಾಡಿ, ನಾಡಾ, ಪಡುಕೋಣೆ, ಹರ್ಕೂರು ಜಿಲ್ಲಾ ಪಂಚಾಯತ್ ಮುಖ್ಯರಸ್ತೆ ನಾಮಾವಶೇಷಗೊಂಡಿದ್ದು, ಮೂರು ದಶಕಗಳು ಸರಿದರೂ ಸಮಗ್ರ ಅಭಿವೃದ್ಧಿಯ ಭಾಗ್ಯ ಇನ್ನೂ ಕೂಡಿಬಂದಿಲ್ಲ. ಕ್ಷೇತ್ರದ ಬಹುತೇಕ ಗ್ರಾಮೀಣ ರಸ್ತೆಗಳು ಅಭಿವೃದ್ಧಿಯತ್ತ ಸಾಗಿದ್ದರೆ ಬಂಟ್ವಾಡಿ-ನಾಡಾ, ಪಡುಕೋಣೆ-ಹರ್ಕೂರು ರಸ್ತೆಯ ಸ್ಥಿತಿ ಮಾತ್ರ ದಿನೇದಿನೇ ಅಧೋಗತಿಯತ್ತ ಸಾಗಿದೆ. ಈ ರಸ್ತೆಯಲ್ಲಿ ಜನಸಂಚಾರ ದುಸ್ತರವಾಗಿದ್ದು, ರಸ್ತೆ ಅಭಿವೃದ್ಧಿಯಾಗಬೇಕೆಂಬ ಜನಾಗ್ರಹ ಮುಗಿಲುಮುಟ್ಟಿದೆ.
   ಗುಜ್ಜಾಡಿ-ಆಲೂರು ಪಿಡಬ್ಲ್ಯುಡಿ ರಸ್ತೆಯಿಂದ ಬಂಟ್ವಾಡಿ ಸೇನಾಪುರ ಮೂಲಕ ನಾಡಾಕ್ಕೆ ಸಂಪರ್ಕ ಕಲ್ಪಿಸುವ ೩.೫ ಕಿ. ಮೀ. ರಸ್ತೆ, ನಾಡಾದಿಂದ ಪಡುಕೋಣೆಗೆ ಸಂಪರ್ಕ ಕಲ್ಪಿಸುವ ೨.೫ ಕಿ. ಮೀ. ರಸ್ತೆ, ನಾಡಾದಿಂದ ಗುಡ್ಡೆಹೋಟೆಲ್, ಹೆಮ್ಮುಂಜೆ, ಹರ್ಕೂರು ಮಾರ್ಗವಾಗಿ ಆಲೂರಿಗೆ ಸಂಪರ್ಕ ಕಲ್ಪಿಸುವ ಮೂಲಕ ಪುನಃ ಆಲೂರು-ಗುಜ್ಜಾಡಿ ಪಿಡಬ್ಲ್ಯುಡಿ ರಸ್ತೆಗೆ ಸಂಪರ್ಕಗೊಳ್ಳುವ ೬ ಕಿ. ಮೀ. ಜಿ. ಪಂ. ರಸ್ತೆ ಮಾರ್ಗವು ಈ ಭಾಗದ ಹತ್ತಾರು ಹಳ್ಳಿಗಳ ಜನಸಾಮಾನ್ಯರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೃಷಿಕರು, ಕಾರ್ಮಿಕರಿಗೆ ಸಂಪರ್ಕದ ಜೀವನಾಡಿಯೂ ದೈನಂದಿನ ಜೀವನದ ಒಡನಾಡಿಯೂ ಆಗಿದೆ. ಆದರೆ ಈ ರಸ್ತೆಮಾರ್ಗ ಕಳೆದ ಮೂರು ದಶಕಗಳಿಂದ ಮರುಡಾಮರೀಕರಣ ಸಹಿತ ಸಮಗ್ರ ಅಭಿವೃದ್ಧಿಯನ್ನೇ ಕಂಡಿಲ್ಲ ಎಂದರೆ ಅಚ್ಚರಿಯಾದೀತು.
ನಾಮಾವಶೇಷಗೊಂಡ ನಾಡಾ-ಪಡುಕೋಣೆ ರಸ್ತೆ
ಮೇಲ್ದರ್ಜೆಗೇರದ ರಸ್ತೆ: ತಾಲೂಕಿನ ದೊಡ್ಡ ಗ್ರಾಮ ಪಂಚಾಯತ್ ಎನಿಸಿಕೊಂಡ, ಬಹುತೇಕ ಹಿಂದುಳಿದ ಹಳ್ಳಿ ಪ್ರದೇಶಗಳನ್ನು ಹೊಂದಿರುವ ಹಾಗೂ ರಾಜಕೀಯವಾಗಿಯೂ ಸಾಕಷ್ಟು ಮಹತ್ವವನ್ನು ಪಡೆದ ನಾಡಾ, ಪಡುಕೋಣೆ, ಬಡಾಕೆರೆ, ಹರ್ಕೂರು ಮೊದಲಾದ ಗ್ರಾಮಗಳನ್ನು ಮುಖ್ಯರಸ್ತೆಗೆ ಬೆಸೆಯುವ ಇಲ್ಲಿನ ಗ್ರಾಮೀಣ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಸಮಗ್ರ ಅಭಿವೃದ್ಧಿಗೆ ಶ್ರೀಕಾರ ಹಾಕುವ ಮಾತುಗಳು ಹಲವು ಸಮಯದಿಂದ ಕೇಳಿಬರುತ್ತಿದ್ದರೂ ಇನ್ನೂ ಕಾರ್ಯಗತವಾಗಿಲ್ಲ. ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಭಾರೀ ಮೊತ್ತದ ಅನುದಾನವನ್ನು ಬೇಡುವ ಈ ರಸ್ತೆಗಳನ್ನು ಲೋಕೋಪಯೋಗಿ ರಸ್ತೆಯಾಗಿ ಮೇಲ್ದರ್ಜೆಗೇರಿಸಿದಲ್ಲಿ ಮಾತ್ರ ವ್ಯವಸ್ಥಿತವಾಗಿ ಅಭಿವೃದ್ಧಿ ಸಾಧ್ಯ ಎನ್ನುವುದು ಸಾರ್ವಜನಿಕ ಅಭಿಪ್ರಾಯ. ಶಾಲಾ-ಕಾಲೇಜು, ಆಸ್ಪತ್ರೆ, ನಾಡಾ ಐಟಿಐ, ಇತಿಹಾಸ ಪ್ರಸಿದ್ಧ ಗುಡ್ಡಮ್ಮಾಡಿ, ಬಡಾಕೆರೆ ಮತ್ತು ಪಡುಕೋಣೆ ದೇವಸ್ಥಾನಗಳು, ಪಡುಕೋಣೆ ಚರ್ಚ್, ಸೇನಾಪುರ ರೈಲು ನಿಲ್ದಾಣ, ರಾಷ್ಟ್ರೀಕೃತ ಬ್ಯಾಂಕ್, ಸಂತೆ ಮಾರುಕಟ್ಟೆ ಮೊದಲಾದುವುಗಳು ಈ ಭಾಗದಲ್ಲಿದ್ದು, ರಸ್ತೆ ದುಃಸ್ಥಿತಿಯಿಂದ ಜನರಿಗೆ ನಾಗರಿಕ ಸೌಲಭ್ಯಗಳನ್ನು ಸುಸೂತ್ರವಾಗಿ ಪಡೆದುಕೊಳ್ಳಲು ಭಾರೀ ಅನನುಕೂಲವಾಗಿದೆ. ನಿಯಮಿತವಾಗಿ ಸಂಚರಿಸುವ ಪ್ರಯಾಣಿಕರ ಬಸ್ಸುಗಳು, ಶಾಲಾ ಬಸ್ಸುಗಳು, ಬೆಂಗಳೂರು-ಮುಂಬೈ ಸಂಚಾರೀ ಬಸ್ಸುಗಳು ಸೇರಿದಂತೆ ನಾನಾ ವಾಹನಗಳು ಓಡಾಡುವ ಇಲ್ಲಿನ ರಸ್ತೆಮಾರ್ಗದಿಂದ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪ್ರಯೋಜನವಿದೆ. ಆದರೆ ರಸ್ತೆಗಳ ಸ್ಥಿತಿಗತಿಯಿಂದ ಜನಜೀವನದ ನೆಮ್ಮದಿ ಮಾಯವಾಗಿದೆ.
 ಜನಪ್ರತಿನಿದಿಗಳೇ ಎಚ್ಚೆತ್ತುಕೊಳ್ಳಿ: ಕ್ಷೇತ್ರದ ಅಲ್ಲಲ್ಲಿ ಸಾಕಷ್ಟು ಅನುಕೂಲ ಹೊಂದಿರುವ, ಪೇಟೆ ಪರಿಸರದ ಅನೇಕ ರಸ್ತೆಗಳ ಅಭಿವೃದ್ಧಿಗಾಗಿ ಕೋಟಿಗಟ್ಟಲೆ ಅನುದಾನ ಮಂಜೂರುಗೊಳಿಸಿ ಅಷ್ಟರಲ್ಲೇ ಕ್ಷೇತ್ರ ಸಂಪೂರ್ಣವಾಗಿ ಅಭಿವೃದ್ಧಿಯಾಗಿದೆ ಎಂದು ಹಗಲುಗನಸು ಕಾಣುತ್ತಾ ಬೊಗಳೆ ಬಿಡುವವರ ಸಂಖ್ಯೆ ಹೆಚ್ಚಿದೆ. ಆದರೆ ಬಂಟ್ವಾಡಿ-ನಾಡಾ ಪಡುಕೋಣೆ-ಹರ್ಕೂರಿನ ಹಿಂದುಳಿದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮಾತ್ರ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಗಿವೆ. ಆದ್ದರಿಂದ ಇಲ್ಲಿನ ರಸ್ತೆಗಳ ಪ್ರಗತಿಗೆ ಶೀಘ್ರದಲ್ಲಿ ಕಾರ್ಯೋನ್ಮುಖರಾಗುವ ಮೂಲಕ ಕ್ಷೇತ್ರದ ಜನಪ್ರತಿನಿದಿಗಳು ತಮ್ಮ ನೈಜ ಜವಾಬ್ದಾರಿಯನ್ನು ಪ್ರದರ್ಶಿಸಬೇಕು. ಕೇವಲ ಭಾಷಣಕ್ಕಷ್ಟೇ ಸೀಮಿತವಾಗದೇ ಈ ರಸ್ತೆಗಳ ಸಮಗ್ರ ಅಭಿವೃದ್ಧಿಯ ದಶಕಗಳ ಕನಸು ನನಸಾಗಿಸುವ ನಿಟ್ಟಿನಲ್ಲಿ ತಮ್ಮ ಜನಪರ ಕಾಳಜಿಯನ್ನು ಕಾರ್ಯಸಾಧನೆಯ ಮೂಲಕ ಅವರು ತೋರಿಸಿಕೊಡಬೇಕು ಎಂದು ಬಂಟ್ವಾಡಿ-ನಾಡಾ ಪಡುಕೋಣೆ-ಹರ್ಕೂರು ರಸ್ತೆ ಬಳಕೆದಾರರು ಒತ್ತಾಯಿಸಿದ್ದಾರೆ.
   
   ತ್ಯಾಪೆ ಹಾಕೂದೇ ಆಯ್ತ್..... 
   ಹರ್ಕೂರು ಮೂರುಕೈಯಿಂದ ಪಡುಕೋಣೆ ತನಕ ೧೯೫೫ರಲ್ಲಿ ಜನರಿಂದಲೇ ರಸ್ತೆ ನಿರ್ಮಾಣಗೊಂಡಿದೆ. ಆಗ ದಿನಕ್ಕೆ ೧ ರೂ. ಕೂಲಿ ಪಡೆದು ಕೆಲಸ ಮಾಡಿದ್ದೇವೆ. ೧೯೮೨ರಲ್ಲಿ ಈ ರಸ್ತೆ ಡಾಮರು ಕಂಡಿತು. ಆದರೆ ಇಂದಿಗೂ ಮರುಡಾಮರೀಕರಣ ಆಗಲಿಲ್ಲ. ನಾಲ್ಕೈದು ಸಲ ಪ್ಯಾಚ್‌ವರ್ಕ್ ಮಾತ್ರ ಆಗಿದೆ. ಸಂಪೂರ್ಣವಾಗಿ ಅಭಿವೃದ್ಧಿ ಆಗಿಲ್ಲ. ಬಿ. ಅರುಣಕುಮಾರ್ ಶೆಟ್ಟಿ ಅವರು ಸೇನಾಪುರ ಮಂಡಲ ಪ್ರಧಾನರಾಗಿದ್ದಾಗ ಬಂಟ್ವಾಡಿಯಿಂದ ನಾಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮಾಡಿಸಿದರು. ಈ ರಸ್ತೆ ಡಾಮರೀಕರಣಗೊಂಡಿದ್ದು, ವ್ಯವಸ್ಥಿತವಾಗಿ ಒಮ್ಮೆಯೂ ಮರುಡಾಮರೀಕರಣ ಕಂಡಿಲ್ಲ. ಮಳೆಯಿರಲಿ, ಬಿಸಿಲಿರಲಿ ಪ್ರತಿವರ್ಷವೂ ಇಲ್ಲಿನ ರಸ್ತೆಗಳು ಹೊಂಡಗುಂಡಿಗಳಿಂದಲೇ ನಲುಗುತ್ತವೆ. ರಸ್ತೆಗೆ ಸೂಕ್ತ ಚರಂಡಿ, ಮೋರಿಗಳ ನಿರ್ಮಾಣ, ರಸ್ತೆ ವಿಸ್ತರಣೆಯ ಮಾತು ಬಹುದೂರವೇ ಉಳಿದಿದೆ. ನಾಡಾದ ಕನಸುಗಾರ ರಾಜಕಾರಣಿ ದಿ. ಅಲೋನ್ಸ್ ಲೋಬೋ ಅವರ ಮುತುವರ್ಜಿ ಹಾಗೂ ಗ್ರಾ. ಪಂ., ಜಿ. ಪಂ. ಮತ್ತು ಶಾಸಕರ ನಿದಿಯಿಂದ ಆಗೀಗ ಸಿಕ್ಕ ಅಲ್ಪಾನುದಾನದಲ್ಲೇ ಅಷ್ಟಿಷ್ಟು ತೇಪೆ ಕಾರ್ಯಕ್ಕೇ ಇಲ್ಲಿನ ರಸ್ತೆಮಾರ್ಗಗಳು ತೃಪ್ತಿಪಟ್ಟುಕೊಂಡಿವೆ... -ಗೋವಿಂದ ಪೂಜಾರಿ, ಹಿರಿಯ ನಾಗರಿಕರು, ಪಡುಕೋಣೆ. 

ಚಿತ್ರ ಲೇಖನ: ಚಂದ್ರ ಕೆ. ಹೆಮ್ಮಾಡಿ


ನಾಡಾ-ಹರ್ಕೂರು ರಸ್ತೆ ದುರವಸ್ಥೆ
ನಾಮಾವಶೇಷಗೊಂಡ ನಾಡಾ-ಪಡುಕೋಣೆ ರಸ್ತೆ
ದುಃಸ್ಥಿತಿಯಲ್ಲಿ ಬಂಟ್ವಾಡಿ-ಸೇನಾಪುರ ರಸ್ತೆ 
ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com