ಕುಂದಾಪುರದಲ್ಲಿ ಕನ್ನಡ ಮಾಸಾಚರಣೆ 'ಡಿಂಡಿಮ'

ಕುಂದಾಪುರ: ಕನ್ನಡ ವೇದಿಕೆಯ ವಿನೂತನ ಪರಿಕಲ್ಪನೆಯಂತೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾದ ಕನ್ನಡ ಮಾಸಾಚರಣೆ 'ಡಿಂಡಿಮ' ಕಾರ್ಯಕ್ರಮಕ್ಕೆ ಇಲ್ಲಿನ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ  ಚಾಲನೆ ನೀಡಲಾಯಿತು.
 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ  ಹಿರಿಯ ಸಾಹಿತಿ ಡಾ. ಜಯಪ್ರಕಾಶ್ ಮಾವಿನಕುಳಿ ಕನ್ನಡನಾಡಿನಲ್ಲಿ ಅಚ್ಚ ಕನ್ನಡದ ಸೊಗಡಿರುವುದು ಕುಂದಾಪುರದಲ್ಲಿ ಮಾತ್ರ. ಭಾಷಾ ಸೊಗಡನ್ನು ಕುಂದಾಪುರಿಗರು ತಮ್ಮ ಸೃಜನಶೀಲತೆಯಿಂದ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
 ಕನ್ನಡ ನಾಡು ಏಕೀಕರಣಗೊಳ್ಳುವಲ್ಲಿ ಅಂದಿನ ನಾಯಕರುಗಳ ಶ್ರಮವನ್ನು ಸ್ಮರಿಸಿದ ಡಾ. ಮಾವಿನಕುಳಿ ಕನ್ನಡದ ಇಂದಿನ ಸವಾಲುಗಳನ್ನು ತೆರೆದಿಟ್ಟರು.  ಯುವ ಸಮುದಾಯ ಆಧುನಿಕತೆಯ ಭರಾಟೆಯಲ್ಲಿ ಕನ್ನಡತನವನ್ನು ಕಳೆದುಕೊಳ್ಳುತ್ತಿದ್ದಾರೆಯೇ ಎಂಬ ಅಳಕು ಇದೆ ಎಂದರು. 
     ಸಾಹಿತಿ ಪ್ರೊ. ಭುವನೇಶ್ವರಿ ಹೆಗಡೆ ಮಾತನಾಡಿ ಕನ್ನಡ ಎಂಬುದು ಕೇವಲ ಭಾಷೆಯಾಗಿ ಮಾತ್ರ ಉಳಿದಿಲ್ಲ. ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಕೂಡ ಕನ್ನಡದ ಉಳಿವಿಗೆ ನೀಡಬಹುದಾದ ದೊಡ್ಡ ಕೊಡುಗೆ ಎಂದರು, 
ಸಮಾರಂಭದಲ್ಲಿ ಹಿರಿಯ ಕೆ.ಕೆ.ಕಾಳಾವರ್‌ಕರ್, ಕುಂದಾಪುರ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಸುಬ್ರಹ್ಮಣ್ಯ ಜೋಷಿ, ಉಪಸ್ಥಿತರಿದ್ದರು. 

ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಸಂತೋಷ ಕುಂದೇಶ್ವರ ಅವರಿಗೆ ಕನ್ನಡ ನುಡಿ ಗೌರವ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಕನ್ನಡ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದರು.

ಕನ್ನಡ ಡಿಂಡಿಮ ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಕುಂದಾಪುರ ಛಾಯಾಗ್ರಾಹಕರ ಸಂಘದ ಸಹಯೋಗದೊಂದಿಗೆ ಕನ್ನಡ ವೇದಿಕೆ ಆಶ್ರಯದಲ್ಲಿ ಬೃಹತ್ ಬೈಕ್ ರ‌್ಯಾಲಿ ನಡೆಯಿತು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಬೈಕ್ ರ‌್ಯಾಲಿಗೆ ಚಾಲನೆ ನೀಡಿದರು. ಬಳಿಕ ಸಂತೋಷ್ ಕುಂದೇಶ್ವರ ಅವರ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಉದ್ಯಮಿ ಕೆ.ಆರ್.ನಾಯ್ಕ್, ರೋಟರಿ ಸಹಾಯಕ ಗವರ್ನರ್ ಗಣೇಶ್ ಶೆಟ್ಟಿ ಮೊಳಹಳ್ಳಿ, ಸಾಯಿ ಸೆಂಟರ್ ಮಾಲಿಕ ಶ್ರೀನಿವಾಸ, ಖಾರ್ವಿ ಸಮಾಜದ ಮುಖಂಡ ಜಯಾನಂದ್ ಖಾರ್ವಿ, ಕನ್ನಡ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಕಾರ್ಯದರ್ಶಿ ಉದಯ ಶೆಟ್ಟಿ, ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ರಾಬರ್ಟ್ ಡಿಸೋಜ, ಅಧ್ಯಕ್ಷ ನಾಗರಾಜರಾಯಪ್ಪನ ಮಠ, ಕಾರ್ಯದರ್ಶಿ ರಾಜ ಮಠದ ಬೆಟ್ಟು ಉಪಸ್ಥಿತರಿದ್ದರು.



















ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com