ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರದಲ್ಲಿ ನುಡಿತೇರು

ಆಂಗ್ಲಮಾಧ್ಯಮ ಕಲಿಕೆಯ ಸುನಾಮಿಯಿಂದ ಕನ್ನಡದ ಮಕ್ಕಳನ್ನು ಪಾರುಮಾಡಬೇಕು: ವಾದಿರಾಜ ಭಟ್

ಕೊಲ್ಲೂರು ಶ್ರೀ ಮೂಕಾಂಬಿಕೆಯ ದಿವ್ಯ ಸನ್ನಿಧಿಯಲ್ಲಿ ಕನ್ನಡಮ್ಮನ ಸಾಹಿತ್ಯದ ತೇರಿಗೆ ಶ್ರೀ ಮೂಕಾಂಬಿಕಾ ಸಭಾಭವನದ ಶ್ರೀ ಜಗನ್ಮಾತೆ ಮೂಕಾಂಬಿಕೆಯ ವೇದಿಕೆಯ ಆದಿಶಂಕರಾಚಾರ್ಯ ಸಭಾಂಗಣದಲ್ಲಿ ಚಾಲನೆ ದೊರೆಯಿತು. ಕೊಲ್ಲೂರಿನಲ್ಲಿ ಎರಡನೇ ಬಾರಿಗೆ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಸಮ್ಮೇಳನ ಸಾಹಿತ್ಯಾಭಿಮಾನಿಗಳಿಗೆ ಸಂಭ್ರಮವನ್ನುಂಟುಮಾಡಿದೆ.
ಸಮ್ಮೇಳನಾಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ, ಜನಪದ ವಿದ್ವಾಂಸ ಡಾ. ವಾದಿರಾಜ ಭಟ್ ಮಾತನಾಡಿ  ಆಂಗ್ಲ ಮಾಧ್ಯಮ ಕಲಿಕೆಯ ಸುನಾಮಿಯಿಂದ ನಮ್ಮ ಕನ್ನಡದ ಮಕ್ಕಳನ್ನು ಪಾರುಮಾಡಬೇಕು. ಎಳೆಯ ಮಕ್ಕಳ ಪಾಲಕರು ಇಂಗ್ಲಿಷ್ ನ ಔಚಿತ್ಯವನ್ನು ಅರಿತು ಕನ್ನಡ ನುಡಿಯ ಮಹತ್ವನ್ನು ತಿಳಿದು ಕನ್ನಡ ಮಾಧ್ಯಮವನ್ನು ಪ್ರೋತ್ಸಾಹಿಸಿ ಕನ್ನಡ ಶಾಲೆಗಳನ್ನು ಉಳಿಸಬೇಕಾಗಿದೆ ಎಂದರು.
      ಭಾಷೆಯ ಸಂಬಂಧ ಕೇವಲ ಭಾವನಾತ್ಮಕವಾದುದಲ್ಲ, ಅತಿಶಯೋಕ್ತಿಯೂ ಅಥವಾ ವೈಭವಿಕರಣವೂ ಅಲ್ಲ ಕನ್ನಡಾಂಭೆ ಎಂದು ದೇವಿಯ ರೂಪದಲ್ಲಿ ಪೂಜಿಸುವುದು, ಮೆರವಣಿಗೆ ಮಾಡುವುದು ಕನ್ನಡಿಗರ ಹೆಚ್ಚುಗಾರಿಕೆ. ಜನ್ಮನೀಡಿದ ತಾಯಿಗಿಂತಲೂ ಮಿಗಿಲಾದ ದಿವ್ಯತೆ ಕನ್ನಡ ನುಡಿಗಿದೆ ಎಂಬುದನ್ನು ದೃಢಪಡಿಸಲು ದೇವಿರೂಪ ಸಂಕೇತವಾಗಿದೆ ಎಂದರು
    ಪಕೃತಿ ಬೀಡಾಗಿದ್ದ ಕುಂದನಾಡಿನಲ್ಲಿ ಯಾಂತ್ರಿಕತೆ, ತಂತ್ರಜ್ಞಾನ, ಗಗನಚುಂಬಿ ಕಟ್ಟಡಗಳು, ಸಾರಿಗೆ ಸೌಕರ್ಯ ಹೆಚ್ಚಾಗಿದೆ. ನುಗ್ಗಿ ನುಸುಳುವ ಬೈಕುಗಳು, ಅಸಂಖ್ಯ ವಾಹನಗಳನ್ನು ಕಾಣುತ್ತಿದ್ದೇವೆ. ಜನಪದರ ಬುದುಕು, ಸಾಹಿತ್ಯ ಸಂಸ್ಕೃತಿಯ ದಿಕ್ಕನ್ನೇ ಬದಲಾಯಿಸಿರುವ ಆಧುನಿಕತೆ ಯಾವ ಗುರಿಯತ್ತ ಸಾಗುತ್ತಿದೆಯೋ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
     ಸಮ್ಮೇಳನವನ್ನು ಉದ್ಘಾಟಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ. ಕರುಣಾಕರ ಶೆಟ್ಟಿ ಮಾತನಾಡಿ ಕನ್ನಡ ಭಾಷೆ, ನಾಡು, ನುಡಿ, ಸಂಸ್ಕೃತಿ ಎಲ್ಲೆಡೆಯೂ ಬೆಳಗಲಿ. ಕನ್ನಡದ ಕಂಪು ಸುತ್ತೆಲ್ಲಾ ಹರಡಲಿ. 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೆ ಸುಂದರ ನೆನಪುಗಳನ್ನು ನೀಡಲಿ ಎಂದು ಆಶಿಸಿದರು.
     ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿ ಕನ್ನಡ ಸಾಹಿತ್ಯ ಪರಿಷತ್‌ನ 100ರ ಸಂಭ್ರಮಾಚರಣೆಯ ಈ ಸಂದರ್ಭದಲ್ಲಿ ಮೊದಲ ತಾಲೂಕು ಕನ್ನಡ ಸಮ್ಮೇಳನ ಕೊಲ್ಲೂರಿನಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 16 ಸಮ್ಮೇಳನಗಳು ನಡೆದಿವೆ. ಕನ್ನಡದ ಶ್ರೇಷ್ಠ ಪರಂಪರೆ ಯುವ ಮನಸ್ಸುಗಳಲ್ಲಿ ಹುಟ್ಟುಹಾಕುವ ನಿಟ್ಟಿನಲ್ಲಿ ಕವಿಕೃತಿ ಸಂಸ್ಕೃತಿ ಎಂಬ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು. 
  . ಹದಿಮೂರನೇ ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳಾನಾಧ್ಯಕ್ಷ ಕೆ. ಕೆ. ಕಾಳವಾರ್ಕರ್, ಕೊಲ್ಲೂರು ಗ್ರಾ. ಪಂ. ಅಧ್ಯಕ್ಷೆ ಲಕ್ಷ್ಮೀದೇವಿ, ನಿವೃತ್ತ ಉಪನ್ಯಾಸಕ ಜನಾರ್ಧನ ಎಸ್. ಮರವಂತೆ, ಶ್ರೀನಿವಾಸ ಭಟ್, ಪುಸ್ತಕದ ಲೇಖಕರುಗಳಾದ ಮೊಗೇರಿ ಶೇಖರ ದೇವಾಡಿಗ, ಸಂತೋಷ ಕುಮಾರ್. ಎ, ಜಗದೀಶ ದೇವಾಡಿಗ ಮೊದಲಾದವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ಸ್ವಾಗತಿ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಅತಿಥಿಗಳನ್ನು ಸ್ವಾಗತಿಸಿರು. ಕಾರ್ಯದರ್ಶಿ ನಾಗರಾಜ ಶೇರಿಗಾರ ವಂದಿಸಿದರು ರಾಘವೇಂದ್ರ ನಾವಡ ನಿರೂಪಿಸಿದರು.
     ಸಮ್ಮೇಳನದ ಉದ್ಘಾಟನೆಗೂ ಮೊದಲು ಸಮ್ಮೇಳನಾಧ್ಯಕ್ಷರನ್ನು ಆಕರ್ಷಕ ಮೆರವಣಿಗೆಯಲ್ಲಿ ಕರೆತರಲಾಯಿತು.

ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಿ ಐತಾಳ್ ಮೆರವಣಿಗೆಗೆ ಚಾಲನೆ ನೀಡಿದರು. ಸಮ್ಮೇಳನ ಸಭಾಂಗಣಕ್ಕೆ ಆಗಮಿಸಿದ ಸಮ್ಮೇಳನಾಧ್ಯಕ್ಷರನ್ನು ಸಾಂಪ್ರದಾಯಿಕವಾಗಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
   ಸಮ್ಮೇಳನದ ಪುಸ್ತಕ ಮಳಿಗೆಯನ್ನು ಎಸ್. ಜನಾರ್ಧನ್ ಮರವಂತೆ ಉದ್ಘಾಟಿಸಿದರು. ಕಲೈಕಾರ್ ಅವರ ವಸ್ತು ಪ್ರದರ್ಶನವನ್ನು ಶ್ರೀನಿವಾಸ ಭಟ್ ಉದ್ಘಾಟಿಸಿದರು. ವಿವಿಧ ಲೇಖಕರುಗಳ ಪುಸ್ತಕಗಳನ್ನು ಸಮ್ಮೇಳನದಲ್ಲಿ ಬಿಡುಗಡೆಗೊಂಡವು.
    ಕಸಾಪ ರಾಜ್ಯ ಘಟಕ 100ರ ಸಂಭ್ರಮದ ಹಿನ್ನೆಲೆಯಲ್ಲಿ ಕೊಲ್ಲೂರು ಮೂಕಾಂಬಿಕಾ ಪ್ರೌಢಶಾಲೆಯ 100 ವಿದ್ಯಾರ್ಥಿಗಳು ನಾಡಗೀತೆಯನ್ನು ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು.
   ಸಮ್ಮೇಳನದಲ್ಲಿ ಜಿ.ಬಿ.ಕಲೈಕಾರ್ ಅವರ ಅಪೂರ್ವ ವಸ್ತುಗಳ ಪ್ರದರ್ಶನ, ಪುಸ್ತಕ ಪ್ರದರ್ಶನ, ಪ್ರಜಾಪಿತ ಈಶ್ವರೀಯ ವಿದ್ಯಾಲಯದ ಪುಸ್ತಕ ಪ್ರದರ್ಶನ ಹಾಗೂ ಕೊಡ್ಲಾಡಿ ಲಾವಣ್ಯ ಡೆಕೊರೇಟರ್ ಅವರ ತರಕಾರಿ ಕಲಾಕೃತಿ ಕೆತ್ತನೆ ಗಮನಸೆಳೆಯಿತು.

ಜನಪ್ರತಿನಿಧಿಗಳಿಲ್ಲದ ಕಾರ್ಯಕ್ರಮ:
ಸಮ್ಮೇಳನದಲ್ಲಿ ಜನಪ್ರತಿನಿಧಿ ಗೈರು ಎದ್ದು ಕಾಣುತ್ತಿತ್ತು. ಸಮ್ಮೇಳನದ ಉದ್ಘಾಟನೆಗೆ ಆಗಮಿಸಬೇಕಾಗಿದ್ದ ಸಂಸದರು, ಧ್ವಜಾರೋಹಣಕ್ಕೆ ಆಗಮಿಸಬೇಕಾಗಿದ್ದ ಶಾಸಕರು, ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಬೇಕಿದ್ದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರು ಕಾರ್ಯಕ್ರಮಕ್ಕೆ ಹಾಜರಾಗದಿದ್ದುದು ಎದ್ದು ಕಾಣುತ್ತಿತ್ತು.


ಮತ್ತಷ್ಟು ಛಾಯಾಚಿತ್ರಗಳು
ಕುಂದಾಪ್ರ ಡಾಟ್ ಕಾಂ- editor@kundapra.com