ಸೌಪರ್ಣಿಕೆ ಸ್ವಚ್ಚಗೊಳ್ಳದಿದ್ದರೆ ಉಗ್ರ ಹೋರಾಟ ನಡೆಯಲಿದೆ: ಕೇಮಾರು ಶ್ರೀ

ಜಿಲ್ಲಾಡಳಿತಕ್ಕೆ ಕೇಮಾರು ಶ್ರೀ ಎಚ್ಚರಿಕೆ. ಉಪವಾಸ ಸತ್ಯಾಗ್ರಹಕ್ಕೆ ಉತ್ತಮ ಸ್ಪಂದನೆ.

ಕೊಲ್ಲೂರು:  ಸೌಪರ್ಣಿಕಾ ನದಿ ಹಾಗೂ ಕೊಲ್ಲೂರು ಪರಿಸರದ ಸ್ವಚ್ಚತೆಯನ್ನು ಕಾಪಾಡುವಂತೆ ಕೊಲ್ಲೂರಿನ ಸ್ವರ್ಣಮುಖಿ ಮಂಟಪದಲ್ಲಿ ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್, ಪರಶುರಾಮ ಸೇನೆ ಕೊಲ್ಲೂರು ಮತ್ತು ನಾನಾ ಸಂಘಟನೆಗಳ ನೇತತ್ವದಲ್ಲಿ ಸೌಪರ್ಣಿಕಾ ಉಳಿಸಿ ಹೋರಾಟದಡಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಯಿತು. 
     ಕಾರ್ಕಳ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಉಪವಾಸ ಸತ್ಯಾಗ್ರಹವನ್ನುದ್ದೇಶಿಸಿ, ಸೌಪರ್ಣಿಕಾ ನದಿಗೆ ಬಾಗಿನ ಅರ್ಪಿಸಿ ಮಾತನಾಡಿ ಸೌಪರ್ಣಿಕ ನದಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಈ ಹಿಂದೆಯೇ ಜಿಲ್ಲಾಡಳಿತಕ್ಕೆ ಎಚ್ಚರಿದ್ದೆವು. ಜಿಲ್ಲಾಡಳಿತ ನದಿಗೆ ಬರುವ ನೀರನ್ನು ಶುದ್ಧಿಕರಿಸಿ ಬಿಡುವ ಭರವಸೆಯನ್ನು ನೀಡಿತ್ತು. ಆದರೆ ಈಗಲೂ ನದಿಗೆ ಕಲುಷಿತ ನೀರು ಬರುತ್ತಿದೆ. ಹಿಂದೂ ಧರ್ಮದಲ್ಲಿ ದೇವರಷ್ಟೇ, ತೀರ್ಥವೂ ಪ್ರಾಧಾನ್ಯವಾಗಿದ್ದು ನದಿ ಕಲುಷಿತಗೊಳ್ಳುದನ್ನು ನಿಲ್ಲಿಸಬೇಕು ಎಂದರು.
    ಕೊಲ್ಲೂರು ಧಾರ್ಮಿಕ ಕ್ಷೇತ್ರಕ್ಕಿಂತ ಹೆಚ್ಚಾಗಿ ವ್ಯಾವಹಾರಿಕ ಕ್ಷೇತ್ರವಾಗಿ ಬೆಳೆಯುತ್ತಿದ್ದು, ಲಾಡ್ಡ್ ಹಾಗೂ ಮುಂತಾದೆಡೆ ದುಪ್ಪಟ್ಟು ದರ ನಿಗದಿ ಮಾಡಿ ಭಕ್ತರನ್ನು ಸುಲಿಗೆ ಮಾಡುವ ಕೆಲಸವಾಗುತ್ತಿದೆ. ಈ ವ್ಯವಸ್ಥೆ ಕೊನೆಗೊಳ್ಳಬೇಕು. ಕೊಲ್ಲೂರಿನಲ್ಲಿ ಮೂಕಾಂಬಿಕೆ ದೇವಸ್ಥಾನವಲ್ಲದೇ ಇತರ ದೇವಸ್ಥಾನಗಳೂ ಇದ್ದು ಅದರ ಅಭಿವೃದ್ಧಿ ಕೂಡ ಆಗಬೇಕಾಗಿದೆ. ಇಲ್ಲಿನ ಆರೋಗ್ಯ ವ್ಯವಸ್ಥೆ ಸುಧಾರಿಸಬೇಕಾಗಿದೆ. ಕೊಲ್ಲೂರಿನ  ತ್ಯಾಜ್ಯ ವಿಲೇವಾರಿಗೆ ಗ್ರಾ. ಪಂ. ಸೂಕ್ತ ಮಾರ್ಗ ಕಂಡುಕೊಳ್ಳಬೇಕು ಹಾಗೂ ದೇವಸ್ಥಾನದಲ್ಲಿ ಸ್ಥಳೀಯರಿಗೆ ಪ್ರಾಧಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಬಾಗಿನ ಅರ್ಪಿಸಿದ ಬಳಿಕ ಸೌಪರ್ಣಿಕಾ ನದಿ ತೀರದಿಂದ ದೇವಸ್ಥಾನದ ತನಕ ಸಾಗಿ ದರ್ಶನ ಪಡೆದು ನಂತರ ಕೊಲ್ಲೂರಿನ ಆಡಳಿತ ಮಂಡಳಿಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಕೊಲ್ಲೂರು ಆಡಳಿತ ಮಂಡಳಿಯ ಆಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತ್ತಾಯ, ದೇವಳದ ವತಿಯಿಂದ ಕೊಲ್ಲೂರು ನಗರ ಹಾಗೂ ಸೌಪರ್ಣಿಕ ನದಿಯ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಳಚರಂಡಿ ವ್ಯವಸ್ಥೆಗೂ ಕೂಡ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದರು.
     ಕೇಮಾರು ಶ್ರೀ ಅವರ ಉಪವಾಸ ಸತ್ಯಾಗ್ರಹ ಸಂಜೆಯ ತನಕ ಮುಂದುವರಿಯಿತು, ಕೊಡಚಾದ್ರಿ ಸಂರಕ್ಷಣಾ ಟ್ರಸ್ಟ್ ನ ಕೆ. ಕೆ. ಸಾಬು, ಕೊಲ್ಲೂರು ಪರಶುರಾಮ ಸೇನೆಯ ಹರೀಶ ತೋಳಾರ್, ಜೈ ಭಾರ್ಗವ ಬಳಗ ಕೋಟ ಇದರ ಸದಸ್ಯರು,  ಮುಖಂಡರಾದ ಕುಮಾರಸ್ವಾಮಿ, ಪ್ರದೀಪ್ ಪೂಜಾರಿ ಸಂಗಮ್, ರಮೇಶ್ ಟಿ.ಟಿ.ರಸ್ತೆ ಕುಂದಾಪುರ, ರಾಘವೇಂದ್ರ ಹಾರ್ಮಣ್ಣು, ವಿನಯ ನಾಯರಿ ಮರವಂತೆ, ವಿನೋದ್, ಸುಭಾಷ್ ಸಂಗಮ್, ಹಿಂದೂ ಯುವ ಸೇನೆ, ಭಾರ್ಗವ ಸೇನೆ, ಗಂಗೊಳ್ಳಿ ವೀರಸಾರ್ವಕರ್ ಬಳಗ, ಗಂಗೊಳ್ಳಿ ಕ್ರಾಂತಿಕಾರಿ ಅಭಿಮಾನಿ ಬಳಗ, ವಸಂತ ಗಿಳಿಯಾರು,  ಸುಧೀರ್ ಕಾಪು, ಪ್ರಥ್ವಿರಾಜ್ ಕುಂದಾಪುರ ಮೊದಲಾದವರು ಸತ್ಯಾಗ್ರಹದಲ್ಲಿ ಪಾಲ್ಗೋಂಡಿದ್ದರು.






















ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com