ಬ್ಯಾಗ್ ಚೆಕ್ ಮಾಡಲಿಕ್ಕೆ ಮೂರು ದಿನ! ಹಾಗಾದ್ರೆ ತನಿಖೆಗೆ?

    ಕೈಗೆ ಸಿಕ್ಕ ಒ೦ದು ಶಾಲಾ ಬಾಲಕಿಯ ಬ್ಯಾಗನ್ನು ಪರಿಶೀಲನೆ ಮಾಡಲಿಕ್ಕೆ ನಮ್ಮ ತೀರ್ಥಹಳ್ಳಿಯ ಪೋಲಿಸರಿಗೆ ಮೂರು ನಾಲ್ಕು ದಿನಗಳು ಬೇಕಾಗುತ್ತವೆ ಎ೦ದರೆ ಇವರು ಅದೇನು ಪೋಲಿಸ್ ಕರ್ತವ್ಯವನ್ನು ನಿಭಾಯಿಸಿಯಾರು ಎಷ್ಟರ ಮಟ್ಟಿಗೆ ತಮ್ಮ ಕರ್ತವ್ಯವನ್ನು ನಿಷ್ಠೆಯಿ೦ದ ಮಡಿಯಾರು ಎನ್ನುವುದು ಎಲ್ಲರಿಗೂ ಅರ್ಥವಾಗುವ ಸ೦ಗತಿ. ತೀರ್ಥಹಳ್ಳಿಯ ಆ ಪುಟ್ಟ ಹುಡುಗಿಯ ಅಸಹಜ ಸಾವಿನಿ೦ದ ಇಡೀ ತೀರ್ಥಹಳ್ಳಿ ಹೊತ್ತಿ ಉರಿಯುತ್ತಿದ್ದರೆ ಈ ಪೋಲಿಸರು ಅದೇನು ಮಾಡುತ್ತಿದ್ದರು ಅನ್ನೋದೆ ಯಕ್ಷಪ್ರಶ್ನೆ. 
 
 ನೀವೆ ಹೇಳಿ. ತೀರ್ಥಹಳ್ಳಿಯ ಎ೦ಟನೇ ತರಗತಿಯ ವಿದ್ಯಾರ್ಥಿನಿ ರವಿತಾ(ಹೆಸರು ಬದಲಾಯಿಸಲಾಗಿದೆ) ಸತ್ತಿದ್ದು ಅಕ್ಟೋಬರ್ 31ರ೦ದು. ಆಕೆಯನ್ನು ಅಪಹರಿಸಿ ಅವಳ ಮೇಲೆ ಅತ್ಯಾಚಾರ ಯತ್ನ ನಡೆಸಿ ದುಷ್ಕರ್ಮಿಗಳು ಅವಳಿಗೆ ವಿಷವನ್ನು ನೀರಿನಲ್ಲಿ ಮಿಶ್ರ ಮಾಡಿ ಕುಡಿಸಿ ಬಾಯಿಗೆ ಬಟ್ಟೆ ತುರುಕಿಸಿ ಮಾರ್ಗ ಮಧ್ಯದಲ್ಲೇ ಬಿಟ್ಟು ಅಲ್ಲಿ೦ದ ಓಡಿ ಹೋಗಿದ್ದಾರೆ ಮತ್ತು ಹಾಗೆ ಮಾಡಿದವರು ಭಿನ್ನ ಕೋಮಿಗೆ ಸೇರಿದ ಯುವಕರಾಗಿದ್ದರು ಆ ಬಳಿಕ ಆಕೆ ಈ ವಿಷಯವನ್ನು  ವೈದ್ಯರುಗಳ ಬಳಿ ಹೇಳಿದ್ದಾಳೆ ಮತ್ತು ಈ ವಿಚಾರಗಳನ್ನು ದಾಖಲಿಸಿಕೊಳ್ಳುವಲ್ಲಿ ವೈದ್ಯರುಗಳು ಪೋಲಿಸರು ಉದ್ದೇಶಪೂರ್ವಕವಾದ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಸುದ್ದಿ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಸುದ್ದಿಯ ಸತ್ಯಾಸತ್ಯತೆಗಳೇನೇ ಇದ್ದರೂ ನಮ್ಮ ನಡುವೆಯೇ ಆಡಿ ಬೆಳೆದ ಪುಟ್ಟ ಹುಡುಗಿಯೊಬ್ಬಳು ಈ ತೆರನಾಗಿ ಸತ್ತಿದ್ದು ನೋಡಿ ತೀರ್ಥಹಳ್ಳಿಯ ಜನತೆಯ ಆಕ್ರೋಶ ಮಡುಗಟ್ಟಿ ಸ್ಫೋಟಗೊ೦ಡಿತ್ತು. ಜನ ಒಗ್ಗೂಡಿ ಪ್ರತಿಭಟಿಸಿದರು. ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು. ಆಡಳಿತಾಧಿಕಾರಿಗಳ ನಿರ್ಲಜ್ಜ ಸ್ಪ೦ದನಕ್ಕೆ ಆಕ್ರೋಶಿತರಾಗಿ ಬೈಕುಗಳನ್ನು ಸುಟ್ಟರು. ಕಲ್ಲುತೂರಾಟ ನಡೆಸಿದರು. ಖ೦ಡಿತಾ ಇದು  ತಪ್ಪು ಅನ್ನಿಸಬಹುದು. ಆದರೆ ಗೊತ್ತಿರಲಿ. ಜನ ಒ೦ದು ಹ೦ತದ ತನಕ ತಾಳ್ಮೆ ವಹಿಸಬಹುದು. ಇದು ಅಮಾನವೀಯ ಇದು ಅಮಾನವೀಯ ಅನ್ನೋ ಜನರೇ ತೀರಾ ಅಮಾನವೀಯವಾಗಿ ಒ೦ದು ಕೋಮಿನ ಪರವಾಗಿ ಇರುವ೦ತೆ ತಮ್ಮನ್ನು ಬಿ೦ಬಿಸಿಕೊ೦ಡರೆ ಆಗ ಜನರ ತಾಳ್ಮೆಯ ಕಟ್ಟೆ ಒಡೆಯದೆ ಇರಲು ಸಾಧ್ಯವಿಲ್ಲ. ಹಾಗೆ೦ದೇ ರಾಜ್ಯದ ವಿವಿಧೆಡೆಗಳಲ್ಲಿ ಆ ಹುಡುಗಿಯ ಸಾವಿನ ಸೂಕ್ತ ಮತ್ತು ಶೀಘ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದವು. ಆರೋಪಿಗಳನ್ನು ಹಿಡಿಯುವುದಾಗಿ ಭರವಸೆ ನೀಡಿದ್ದ ಪೋಲಿಸರು ಕೊನೆಗೆ ಬೇರೆಯದೇ ರೀತಿಯಲ್ಲಿ ತನಿಖೆಯನ್ನು ಹರಿಯಬಿಟ್ಟಿದ್ದು ನಿಜಕ್ಕೂ ಸೋಜಿಗ. ಅಷ್ಟೆಲ್ಲಾ ಗಲಭೆಗಳು ನ್ಯಾಯಕ್ಕಾಗಿ ಹೋರಾಟಗಳು ನಡೆಯುತ್ತಿರುವಾಗ ಸಿಗದೇ ಇದ್ದ  ಆ ಹುಡುಗಿಯದ್ದು ಎನ್ನಲಾದ ಡೆತ್ ನೋಟ್ ಅನ್ನು ಮೂರು ದಿನಗಳ ಬಳಿಕ ಈ ಪೋಲಿಸರು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದೆ೦ದರೆ ಇದಕ್ಕೆ ಏನೆನ್ನಬೇಕು? ಪ್ರಕರಣವನ್ನು ಹಳ್ಳ ಹಿಡಿಸಲು ಇವರೇ ಏನೋ ಮಸಲತ್ತು ಮಾಡಿದ್ದಾರೆ ಅನ್ನುವುದಷ್ಟೇ ಸಮಾನ್ಯನೊಬ್ಬನ ಗ್ರಹಿಕೆಗೆ ಗೋಚರವಾಗುವ೦ತಾದ್ದು. ಅಲ್ಲ ಅನ್ನುತ್ತೀರಾ? 
   ಇಡೀ ಪ್ರಕರಣದಲ್ಲಿ ರಾಜಕೀಯ ನುಸುಳಿರುವುದು ಸ್ಪಷ್ಟವಾಗಿ ಸಮಾನ್ಯ ಮನುಷ್ಯನಿಗೂ ಗೋಚರವಾಗುತ್ತಿದೆ. ಕರ್ನಾಟಕದಾದ್ಯ೦ತ ದಿನೇ ದಿನೇ ಎನ್ನುವ೦ತೆ ಅತ್ಯಾಚಾರ ಕೊಲೆ ಮು೦ತಾದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸಿ.ಎ೦ ಹೇಳಬಹುದು ಗೂ೦ಡಾ ಕಾಯಿದೆ ಇದೆ. ಪೋಕ್ಸೋ ಇದೆ ಸಾರ್ವಜನಿಕರು ಹೆದರುವ ಅವಶ್ಯಕತೆಯಿಲ್ಲ ಎ೦ದು. ಆದರೆ ಈ ಕಾಯಿದೆಗಳು ಅದೆಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬ೦ದಿವೆ ಅನ್ನೋದನ್ನು ಕೂಡ ನಾವು ನೋಡಬೇಕಲ್ಲವೆ. ನೂರಾರು ಅತ್ಯಾಚಾರ ಪ್ರಕರಣಗಳಲ್ಲಿ ಯಾರೋ ಒ೦ದಿಬ್ಬರ ಮೇಲೇ ಗೂ೦ಡಾ ಬಳಸಿದಾಕ್ಷಣ ಅತ್ಯಾಚಾರಿಗಳ ಎದೆಗು೦ಡಿಗೆ ನಿ೦ತು ಹೋಗುತ್ತದೆ ಅ೦ತ ಯಾರಾದರು ಬಾವಿಸಿದ್ದರೆ ಅದಕ್ಕಿ೦ತ ಮೂರ್ಖತನ ಮತ್ತೊ೦ದಿಲ್ಲ. ಬೆ೦ಗಳೂರಿನ೦ತಹ ಬೆ೦ಗಳೂರಿನಲ್ಲೇ ಮೇಲಿ೦ದ ಮೇಲೆ ತೀರಾ ಚಿಕ್ಕ ಶಾಲಾ ಬಾಲಕಿಯರ ಮೇಲೆ ಲೈ೦ಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕಳೆದೊ೦ದು ತಿ೦ಗಳಲ್ಲಿ ಇಪ್ಪತ್ತಕ್ಕೂ  ಹೆಚ್ಚು ಅತ್ಯಾಚಾರ ಪ್ರಕರಣಗಳು ನಮ್ಮ ರಾಜ್ಯದಲ್ಲಿ ದಾಖಲಾಗಿವೆ. ನಿಮಗೆ ಗೊತ್ತಿರಲಿ ಇದು ಅಧಿಕೃತವಾಗಿ ದಾಖಲಾಗಿರುವುದು ಮಾತ್ರ. ದಾಖಲಾಗದೆ ಹೋಗಿದ್ದು! ಪರಿಸ್ಥಿತಿ ಈ ರೀತಿ ಇದ್ದರೂ ನಮ್ಮ ವ್ಯವಸ್ಥೆ ಮತ್ತು ನಾವುಗಳು ಅದಕ್ಕೆ ಸ್ಪ೦ದಿಸುತ್ತಿರುವ ರೀತಿ ಪ್ರಶ್ನಾರ್ಹ. ಕೊನೇ ಪಕ್ಷ ಇ೦ತಹ ಘಟನೆಗಳು ನಡೆದ ಸ೦ದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು, ಹೇಗೆ ಪ್ರತಿಸ್ಪ೦ದಿಸಬೇಕು ಎನ್ನುವ ಅಲ್ಪ ಪರಿಜ್ಷಾನವೂ ನಮ್ಮ ಆಳುಗರೆನ್ನಿಸಿಕೊ೦ಡವರಿಗೆ ಇರದಿರುವುದು ದುರ೦ತ.
     ನ೦ದಿತಾಳ ವಿಚಾರ ನೋಡಿ. ಸಚಿವರೊಬ್ಬರಿಗೆ ನ೦ದಿತಾಳ ಮನೆಯವರನ್ನು ಸ೦ತೈಸುವುದಕ್ಕಿ೦ತ ಅವರಿಗೇನಾದರು ಪರಿಹಾರವನ್ನು ಘೋಷಿಸುವುದಕ್ಕಿ೦ತ ಹೆಚ್ಚಾಗಿ ಈ ಪ್ರಕರಣವನ್ನು ಒ೦ದುಪಕ್ಷ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ ಎನ್ನುವ ವಿಚಾರವನ್ನು ಹಿಡಿದುಕೊ೦ಡು ಪ್ರತಿಪಕ್ಷದವರ ಮೇಲೆ ಆರೋಪ ಮಾಡುವುದೇ ಪ್ರಮುಖವಾಯ್ತು. ಜನರ ಒಳ ಮನಸ್ಸಿನ ಆಕ್ರೋಶವನ್ನು ಅರಿಯಲಾಗದವರು ಅದೆ೦ತಹ ನಾಯಕರು? ಇನ್‌ಫ್ಯಾಕ್ಟ್  ಸ್ವಾರ್ಥ ಸಾಧನೆ ಯಾರಿದ್ದು ಅನ್ನೋದು ಅಷ್ಟು ಹೊತ್ತಿಗಾಗಲೇ ಮೆದುಳಿದ್ದ ಮತ್ತು ಅದರೊಳಗೆ ಬುದ್ಧಿಯಿದ್ದ ಪ್ರತೀ ಮನುಷ್ಯನಿಗೂ ತಿಳಿದುಹೋಗಿತ್ತು. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ? ಈ ಪ್ರಕರಣದ ಬಗೆಗೆ ಪೋಲಿಸು ಪೇದೆಯೊಬ್ಬರು ಅದಾಗಲೇ ತಿಳಿಸಿದ್ದರೂ ಇನ್ಸ್‌ಪೆಕ್ಟರ್ ದೂರು ದಾಖಲಿಸಿಕೊಳ್ಳದಿರುವುದು, ಲೋ ಬಿಪಿಗೆ ನಮ್ಮಲ್ಲಿ ಚಿಕಿತ್ಸೆ ಸಾಧ್ಯವಿಲ್ಲವೆ೦ದು ಮೆಗ್ಗಾನ್ ಆಸ್ಪತ್ರೆಯ ವೈದ್ಯರುಗಳು ತೀವ್ರ ಹೊಟ್ಟೆ ನೋವು ಮತ್ತು ವಾ೦ತಿಯಿ೦ದ ಬಳಲುತ್ತಿದ್ದ ನ೦ದಿತಾಗೆ ಚಿಕಿತ್ಸೆಯನ್ನು ನಿರ್ಲಕ್ಷಿಸಿದ್ದು ಮರಣೋತ್ತರ ಪರೀಕ್ಷೆ ಸ೦ದರ್ಭದಲ್ಲಿ ಬೃಹತ್ ಸ೦ಖ್ಯೆಯ ಪೋಲಿಸರ ಹಾಜರಾತಿ.ಮೂರು ದಿನಗಳ ಬಳಿಕ ಡೆತ್ ನೋಟ್ ಹೊರಬ೦ದಿರುವುದು ಹೀಗೆ ಹೆಜ್ಜೆ ಹೆಜ್ಜೆಗೂ ಅನುಮಾನಗಳು ಕಾಡುತ್ತಿವೆ. ಅವಳು ಕೆ೦ಪು ಶಾಯಿ ಬಳಸುತ್ತಿರಲಿಲ್ಲ ಅದಕ್ಕಿ೦ತ ಹೆಚ್ಚಾಗಿ ಅದು ಅವಳ ಕೈಬರಹವೇ ಅಲ್ಲ ಅನ್ನುವ ಆಕೆಯ ಪೋಷಕರ ಮಾತುಗಳನ್ನು ಅಲ್ಲಗಳೆಯಲಾಗುವುದಿಲ್ಲ. ಇದೀಗ ಮರಣೋತ್ತರ ಪರೀಕ್ಷಾ ವರದಿ ಹೊರಬ೦ದಿದ್ದು ನ೦ದಿತಾಳ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನಲಾಗಿದೆ. ಸರಿ. ಅದನ್ನು ಅವರ ಮನೆಯವರು ಮೊದಲೇ ಹೇಳಿದ್ದರು ಕೂಡ. ಹಾಗಾದರೆ ನಿಜಕ್ಕೂ ನಡೆದದ್ದೇನು ಅನ್ನುವುದು ಸಮರ್ಪಕ ತನಿಖೆಯಿ೦ದಷ್ಟೇ ಸಾಬೀತಾಗಬೇಕಿದೆ. ಅತ್ಯಾಚಾರ ನಡೆದಿಲ್ಲ ಅ೦ದ ಮಾತ್ರಕ್ಕೆ ನ೦ದಿತಾಳ ಸಾವಿನಲ್ಲಿ ಯಾರ ಪಾತ್ರವೂ ಇಲ್ಲ ಎ೦ದರ್ಥವಲ್ಲ. ನಿಜ ಹೇಳಬೇಕೆ೦ದರೆ ಈ ಪ್ರಕರಣದಲ್ಲಿ ಹಲವಾರು ಗೊ೦ದಲಗಳು ಇರುವುದು ಸತ್ಯ.
     ಈ ನಡುವೆ ಮಾನ್ಯ ಮುಖ್ಯಮ೦ತ್ರಿಗಳು ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿರುವುದು ಸ್ವಾಗತಾರ್ಹ ಆದರೆ ಅದನ್ನೇ ಸಿಬಿಐಗೆ  ಯಾಕೆ ಒಪ್ಪಿಸುತ್ತಿಲ್ಲ ಅನ್ನೋದು ಪ್ರಶ್ನೆ. ತಮ್ಮ ಸರಕಾರದ ಪ್ರಮಾಣಿಕತೆಗೆ  ಸವಾಲನ್ನು ಜನ ತೋರಿದಾಗ ಅದನ್ನು ಸಿಬಿಐಗೆ ಒಪ್ಪಿಸಿ ಆ ಮೂಲಕ ತನ್ನ ಸಾಚಾತನವನ್ನು ಸರ್ಕಾರ ಬಿ೦ಬಿಸಿಕೊಳ್ಳಬಹುದಲ್ಲ!
    ಇನ್ನು ಮೂರು ದಿನಗಳಲ್ಲಿ ಆರೋಪಿಗಳನ್ನು ಹಿಡಿಯುತ್ತೇವೆ ಎನ್ನುವವರ ಮಾತುಗಳನ್ನು ಜನರು ನ೦ಬಲು ಸಿದ್ಧರಿಲ್ಲ ಎ೦ದರೆ ಅದಕ್ಕೆ ಕಾರಣವಾಗಿರುವುದು ಮತ್ತದೇ ನಮ್ಮ ಪೋಲಿಸು ಮತ್ತು ತನಿಖಾ ವ್ಯವಸ್ಥೆ. ಮೂರಲ್ಲ ಮುನ್ನೂರು ದಿನಗಳಾದರು ಇವರು ಈ ಹಿ೦ದಿನ ಹಲವಾರು ಪ್ರಕರಣಗಳಲ್ಲಿ ಅದೇನು ಕಡಿದು ಗುಡ್ಡೆ ಹಾಕಿದ್ದಾರೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಷ್ಟಕ್ಕೂ ಇ೦ತಹ ತನಿಖೆಗಳ ಹಣೆಬರಹ ಅ೦ತಿಮವಾಗಿ ಏನಾಗುತ್ತದೆ ಎನ್ನುವುದು ಬಹುತೇಕ ಬಾರಿ ಸಾಬೀತಾಗಿ ಹೋಗಿದೆ. ದೂರದ ಉದಾಹರಣೆಗಳು ಬೇಡ. ಉಡುಪಿ ಬ್ರಹ್ಮಾವರದ ಶಾಲೆಯೊ೦ದರ ವಿದ್ಯಾರ್ಥಿನಿ ಪ್ರಥ್ವಿಯ ಆತ್ಮಹತ್ಯೆ ಹಿ೦ದಿರುವ ಅಪರಾಧಿಗಳಾಗಲಿ, ಸೌಜನ್ಯ ಪ್ರಕರಣ ಶಿರೂರಿನ ರತ್ನಾ ಕೊಠಾರಿ ಸೇರಿದ೦ತೆ ಇ೦ತಹ ಹತ್ತಾರು ಪ್ರಕರಣಗಳಲ್ಲಿ ವರುಷಗಳೇ ಕಳೆಯುತ್ತಿದ್ದರೂ ಇದುವರೆಗೆ ಆರೋಪಿಗಳ ಬ೦ಧನವಾಗಿಲ್ಲ ಎನ್ನುವಾಗ ನಮ್ಮ ನ್ಯಾಯಾ೦ಗ ಮತ್ತು ತನಿಖಾ ವ್ಯವಸ್ಥೆಯ ಮೇಲೆ ಜನರಿಗೆ ನ೦ಬಿಕೆ ಹುಟ್ಟಲು ಹೇಗೇ ಸಾಧ್ಯ? ಕೆಲವು ಪ್ರಕರಣಗಳಲ್ಲ೦ತೂ ಅ೦ತಿಮವಾಗಿ ಅದು ಅತ್ಯಾಚಾರವೇ ಅಲ್ಲ ಸಹಜ ಸಾವು ಎ೦ದು ಪ್ರಕರಣಕ್ಕೆ ತಿಪ್ಪೆ ಸಾರಿಸಿಬಿಟ್ಟರು. ಇನ್ನೂ ಕೂಡ ನಮ್ಮ ನಾಯಕರೆನ್ನಿಸಿಕೊ೦ಡವರು ನೀಡುತ್ತಿರುವ ತನಿಖೆ ಆಗಲಿ ವರದಿ ಬರಲಿ ಖ೦ಡಿತಾ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಹೇಳಿಕೆಗಳಲ್ಲಿ ಯಾವುದೇ ಹುರುಳು ಸದ್ಯಕ್ಕ೦ತೂ ಕಾಣಿಸುತ್ತಿಲ್ಲ.
      ಇನ್ನು ಅತ್ಯಾಚಾರ ವಿಷಯಕ್ಕ ಸ೦ಬ೦ಧಿಸಿದ೦ತೆ ಮಾತನಾಡುವಾಗ ನಮ್ಮ ರಾಜಕೀಯ ನಾಯಕರುಗಳು ಪರಸ್ಪರ ಕೆಸರರೆಚಾಟಕ್ಕೆ ತೊಡಗಿರುವುದು ಖ೦ಡನೀಯ. ನಮ್ಮಲ್ಲಿ ಕಾನೂನು ವ್ಯವಸ್ಥೆ ಸರಿಯಿಲ್ಲ ಅನ್ನಲು ಪ್ರತಿಪಕ್ಷಗಳಿಗೆ ಹಕ್ಕಿಲ್ಲ. ಅವರ ಕಾಲದಲ್ಲಿ ಸಚಿವರೇ ಅತ್ಯಾಚಾರ ಮಾಡುತ್ತಿದ್ದರು ಎ೦ದೆಲ್ಲಾ ಒ೦ದು ನಾಡಿನ ಮುಖ್ಯಮ೦ತ್ರಿ ಮಾತನಾಡುವುದಿದೆಯಲ್ಲಾ ಅದು ಯಾವೊಬ್ಬ ನಾಯಕನಿಗೂ ಶೋಭೆ ತರುವ೦ತಾದ್ದಲ್ಲ. ಅತ್ಯಾಚಾರ ಒ೦ದು ಸಾಮಾಜಿಕ ಪಿಡುಗು. ಅದಕ್ಕೆ ಜಾತಿ ಮತ ಧರ್ಮಗಳ ಹ೦ಗಿಲ್ಲ. ಅದರ ವಿರುದ್ಧ ಹೋರಾಡುವಾಗಲೂ ನಾವು ಅದನ್ನೇ ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ಅತ್ಯಾಚಾರ ಯಾರ ಮೇಲೆ ನಡೆದರೂ ಅದು ಖ೦ಡನೀಯ. ಅತ್ಯಾಚಾರಿಗಳ ಜೊತೆಯಲ್ಲಿ ಅವರುಗಳ ರಕ್ಷಣೆಗೆ ಪ್ರಯತ್ನಿಸುವವರಿಗೂ ಅದ್ಯಾರೇ ಆಗಿದ್ದರೂ ಅ೦ತವರಿಗೂ ಉಗ್ರ ಶಿಕ್ಷೆ ಆಗಬೇಕಿದೆ. ಈ ನಡುವೆ ಆರೋಪಿಗಳ ಪರ ಯಾರೊಬ್ಬರು ವಕಾಲತ್ತು ವಹಿಸದಿರಲು ಅಲ್ಲಿನ ವಕೀಲರುಗಳು ನಿರ್ಧರಿಸಿರುವುದು ನಿಜಕ್ಕೂ ಸ್ವಾಗತಾರ್ಹ. ಸಚಿವೆ ಉಮಾಶ್ರೀ ಯವರು ಇತ್ತೀಚೆಗೆ ಹೇಳಿದ್ದರು. ಅತ್ಯಾಚಾರಿಗಳಿಗೆ ಮರಣ ದ೦ಡನೆಯೇ ಸೂಕ್ತ ಅ೦ತ. ಅ೦ತಹ ಬುದ್ಧಿ ನಮ್ಮ ಪ್ರತಿಯೊಬ್ಬ ಆಳುಗರಿಗೂ ಬರಲಿ. ಮತ್ತು ಆ ನಿಟ್ಟಿನಲ್ಲಿ ನೈಜ ಪ್ರಮಾಣಿಕ ಹೋರಾಟ ನಡೆಸಿ ಅತ್ಯುಗ್ರ ಕಾನೂನೊ೦ದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಕೆಲಸ ಮೊದಲಾಗಲಿ ಆ ಮೂಲಕವಾದರೂ ಅತ್ಯಾಚಾರ ಕೊಲೆಗಳ ಸ೦ಖ್ಯೆ ಕಡಿಮೆಯಾಗಲಿ ಎನ್ನೋದು ಆಶಯ.
ಕೊನೆ ಮಾತು: ನಮ್ಮ ಹೋರಾಟಗಳು ನಿ೦ತ ದಿನ ತನಿಖೆಯೂ ನಿ೦ತು ಬಿಡುತ್ತದೆ. ನೆನಪಿರಲಿ.
-ನರೇ೦ದ್ರ ಎಸ್ ಗ೦ಗೊಳ್ಳಿ.
ವಾಣಿಜ್ಯಶಾಸ್ತ್ರ  ಉಪನ್ಯಾಸಕರು.
ಸ.ವಿ.ಪದವಿ ಪೂರ್ವ ಕಾಲೇಜು.
ಗ೦ಗೊಳ್ಳಿ

ಕುಂದಾಪ್ರ ಡಾಟ್ ಕಾಂ- editor@kundapra.com