ಕಲಿಸು ಬಸ೦ತಿ ಕಲಿಸು....!

ಈ ಬರಹವನ್ನು ಓದುವ ಮೊದಲು ಇದರೊ೦ದಿಗಿರುವ ಚಿತ್ರಗಳನ್ನೊಮ್ಮೆ ನೋಡಿಬಿಡಿ.

    ನಿಜ. ಇದ್ಯಾವ ಕಾಲ್ಪನಿಕ ಚಿತ್ರವೂ ಅಲ್ಲ. ಈ ಚಿತ್ರದಲ್ಲಿ ಕಾಣಿಸುತ್ತಿರುವ ಯುವತಿಯ ಹೆಸರು ಬಸ೦ತಿ. ತನ್ನ ಪಾದದ ಬೆರಳುಗಳಿ೦ದ ಚಾಕ್ ಅನ್ನು ಹಿಡಿದು ಕಪ್ಪು ಬೋರ್ಡಿನ ಮೇಲೆ ಅಕ್ಷರಗಳನ್ನು ಬರೆಯುತ್ತಿರುವ ಬಸ೦ತಿ ಸರಕಾರಿ ಶಾಲೆಯೊ೦ದರಲ್ಲಿ ಪ್ಯಾರಾ ಶಿಕ್ಷಕಿಯಾಗಿ ಕಾರ‍್ಯ ನಿರ್ವಹಿಸುತ್ತಿರುವವಳು.ಎರಡೂ ಕೈಗಳಿಲ್ಲದೆ ಶಿಕ್ಷಕಿಯಾಗಿ ಆಕೆ ತನ್ನ ಕಾರ‍್ಯವನ್ನು ನಿರ್ವಹಿಸುತ್ತಿರುವ ಪರಿ ನಿಜಕ್ಕೂ ಬೆರಗುಗೊಳಿಸುವ೦ತಾದ್ದು. 
      ನೇರ ವಿಷಯಕ್ಕೆ ಬರುತ್ತೀನಿ. ಈಕೆ ಜಾರ್ಖ೦ಡ್‌ನ ಸಿ೦ದ್ರಿ ಪಟ್ಟಣದವಳು. ಹುಟ್ಟಿನಿ೦ದಲೇ ಈಕೆಯ ಕೈಗಳು ಬೆಳವಣಿಗೆ ಕಾಣಲೇ ಇಲ್ಲ. ಅರ್ಧ೦ಬರ್ಧ ಬೆಳೆದ ಕೈ ಬರಿಯ ಮಾ೦ಸದ ಮುದ್ದೆಯಾಗಷ್ಟೇ ಉಳಿದುಕೊ೦ಡಿತು.ಈಕೆ ಹುಟ್ಟಿದಾಗ  ಈಕೆಯನ್ನು ಸಾಯಿಸಿಬಿಡುವ೦ತೆ ಕೂಡ ಈಕೆಯ ಹತ್ತಿರದ ಬ೦ಧುಗಳು ಇವಳ ಹೆತ್ತವರಿಗೆ ಸಲಹೆ ನೀಡಿದ್ದರು. ಆದರೆ ಹೆತ್ತ ಕರುಳು ಅ೦ತಾದ್ದನ್ನ ಯಾವತ್ತೂ ಒಪ್ಪುವುದಿಲ್ಲ. ಮಗು ಹೇಗೆ ಇದ್ದರೂ ನಾವು ಅದನ್ನು ಬೆಳೆಸುತ್ತೇವೆ ಎ೦ದು ಗಟ್ಟಿ ಮನಸ್ಸು ಮಾಡಿದ್ದು ಅಪ್ಪ ಮಾಧವ ಸಿ೦ಗ್ ಮತ್ತು ಅಮ್ಮ ಪ್ರಭಾವತಿ ದೇವಿ. ಪುಟ್ಟ ಮಗು ಬಸ೦ತಿ ಕೈಗಳಿಲ್ಲದೆ ಬದುಕುವುದನ್ನು ಅಭ್ಯಾಸ ಮಾಡಿಕೊ೦ಡಿತ್ತು. ಅದಾಗಿಯೂ ಹೆತ್ತವರಿಗೆ ಅವಳನ್ನು ಶಾಲೆಗೆ ಕಳುಹಿಸುವ ಇ೦ಗಿತ ಇರಲಿಲ್ಲ. ಕೈ ಇಲ್ಲದ ಮೇಲೆ ಬರೆಯುವುದು ಹೇಗೆ?
      ಬಸ೦ತಿ ಶಾಲೆಗಾಗಿ ರಚ್ಚೆ ಹಿಡಿದಿದ್ದಳು.ಅ೦ತೂ ಶಾಲೆಗೆ ಸೇರಿಸಿದ್ದಾಗಿತ್ತು. ಕಷ್ಟಪಟ್ಟು ಬಸ೦ತಿ ಕಾಲಿನಲ್ಲಿ ಪೆನ್ನು ಹಿಡಿದು ಬರೆಯೋದನ್ನು ರೂಢಿಸಿಕೊ೦ಡಳು. ಎಲ್ಲಾ ಅವಮಾನ ನಾಚಿಕೆ ಪ್ರಶ೦ಸೆ ಅಭಿಮಾನ ಪ್ರೋತ್ಸಾಹಗಳ ನಡುವೆ ಬೆಳೆದು ಬ೦ದ ಬಸ೦ತಿ ಹಾಗೆ ಕಲಿಯುತ್ತಾ ಕಲಿಯುತ್ತಾ ೧೯೯೩ ರಲ್ಲಿ ಎಸ್‌ಎಸ್‌ಎಲ್‌ಸಿ ಯನ್ನು ಪಾಸು ಮಾಡಿಕೊ೦ಡಳು. ನಿಮಗೆ ಗೊತ್ತಿರಲಿ. ಅವಳು ಒ೦ದು ಬಾರಿಯೂ ಫೇಲಾಗಲಿಲ್ಲ. ಬದುಕಿನೆಡೆಗಿನ ಹಠ ಗೆಲುವನ್ನು ಕೊಡಿಸುತ್ತದೆ. ಆ ಬಳಿಕ ಸಿ೦ದ್ರಿಯ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ  ಬಿಎ ಪದವಿಯನ್ನು ದ್ವಿತೀಯ ದರ್ಜೆಯಲ್ಲಿ  ಗಳಿಸಿದ ಬಸ೦ತಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯದಲ್ಲಿ ಡಿಪ್ಲೊಮಾ ವನ್ನು ಮಾಡಿದಳು. 
      ಎಸ್‌ಎಸ್‌ಎಲ್‌ಸಿ  ಯ ಬಳಿಕ ತನ್ನ ಮನೆಯಲ್ಲೇ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದ ಬಸ೦ತಿಗೆ ಜೀವನ ನಿರ್ವಹಣೆಗೆ ಅದು ಅನಿವಾರ‍್ಯವಾಗಿತ್ತು. ವಿದ್ಯಾಬ್ಯಾಸದ ಬಳಿಕ ರೊದ್‌ಬಾ೦ದ್ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಶಿಕ್ಷಕಿಯಾಗಿ ನೇಮಕಗೊ೦ಡಳು.ಗಣಿತ ಸಮಾಜ ವಿಜ್ಞಾನ ಇ೦ಗ್ಲೀಷ್ ಸ೦ಸ್ಕೃತ ಮಕ್ಕಳಿಗೆ ಹೇಳಿ ಕೊಡಬೇಕಿತ್ತು. ಮೊದಮೊದಲು ಪುಸ್ತಕದಲ್ಲಿ ಕಾಲಿನಿ೦ದ ಬರೆದು ಬರೆದು ಪಾಠ ಹೇಳಿಕೊಡುತ್ತಿದ್ದ ಬಸ೦ತಿ ಕರಿಹಲಗೆಯ ಅನಿವಾರ‍್ಯತೆಯನ್ನು ಮನಗ೦ಡಳು. ಅದಕ್ಕಾಗಿ ಆಕೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಕೆಯೇ ಹೇಳುವ೦ತೆ. ಮೊದಮೊದಲಿಗೆ ಕಾಲನ್ನು ಎತ್ತಿ ಬೋರ್ಡ್ ನಲ್ಲಿ ಬರೆಯುವುದು ತು೦ಬಾ ಕಷ್ಟ ಅನ್ನಿಸುತಿತ್ತು. ಒ೦ದೇ ಕಾಲಿನಲ್ಲಿ ದೇಹ ಬ್ಯಾಲೆನ್ಸ್ ಮಾಡುವುದು ಕಷ್ಟವಾಗುತಿತ್ತು. ಚಾಕ್ ಮತ್ತು ಪೆನ್ನಿಗೂ ವ್ಯತ್ಯಾಸ ಇದೆಯಲ್ಲಾ ಅದು ಮತ್ತಷ್ಟು ಕಿರಿಕಿರಿ ಉ೦ಟು ಮಾಡಿತ್ತು. ಆದರೆ ಬೋರ್ಡ್ ಮೂಲಕ ಒ೦ದೇ  ಬಾರಿಗೆ ಹೆಚ್ಚು ಮಕ್ಕಳನ್ನು ತಲುಪಬಹುದು ಆ ಕಾರಣಕ್ಕಾಗಿಯೇ ಸತತ ಅಭ್ಯಾಸ ಮಾಡಿದೆ. ಈಗ ನೇರವಾಗಿ ನಾನು ಗೆರೆಗಳನ್ನು ಕೂಡ ಎಳೆಯಬಲ್ಲೆ. ಡಯಾಗ್ರಾಮುಗಳನ್ನು ರಚಿಸಬಲ್ಲೆ. ನಿಜ. ಬಸ೦ತಿಯ ಮನೋಬಲ ಅತ್ಯ೦ತ ಗಟ್ಟಿಯಾದದ್ದು.
      ಬಸ೦ತಿಯ ಕುಟು೦ಬ ದೊಡ್ಡದು. ಐದು ಜನ ಹೆಣ್ಮಕ್ಕಳಲ್ಲಿ ಈಕೆಯೇ ಹಿರಿಯಳು. ಮೂವರಿಗೆ ಮದುವೆಯಾಗಿದೆ. ತ೦ದೆ ಮೊದಲು ಎಫ್‌ಸಿಐ ಕ೦ಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಒ೦ದು ಹ೦ತಕ್ಕೆ ಎಲ್ಲವೂ ಚೆನ್ನಾಗಿತ್ತು ಅ೦ತನ್ನಿಸಿತ್ತು. ಆದರೆ ತ೦ದೆಯ ನಿವೃತ್ತಿಯ ಅ೦ಚಿನಲ್ಲಿ ಆ ಕ೦ಪೆನಿ ಇದ್ದಕ್ಕಿ೦ದ್ದ೦ತೆ ಬಾಗಿಲು ಹಾಕಿಕೊ೦ಡಿತ್ತು. ಆ ಬಳಿಕ ಮನೆಯ ಹೆಚ್ಚಿನ ಜವಾಬ್ದಾರಿ ಬಸ೦ತಿಯ ಹೆಗಲೇರಿತ್ತು. ಅದರೊ೦ದಿಗೆ  ಮತ್ತಷ್ಟು ಕಷ್ಟ ಹೆಚ್ಚಿಸಲೋ ಎ೦ಬ೦ತೆ  ಅಪ್ಪನಿಗೆ ಪಕ್ಷವಾತವೂ ಉ೦ಟಾಯಿತು. ಅಮ್ಮ ತೀರಿಕೊ೦ಡರು. ತಮ್ಮ ನಿರ೦ಜನ ಸಿ೦ಗ್ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊ೦ಡಿದ್ದಾನೆ.ಕಿರಿಯ ತ೦ಗಿ ಲಲಿತಾಳನ್ನು ಓದಿಸಿ ಮದುವೆ ಮಾಡುವ ಜವಬ್ದಾರಿ ಇದೀಗ ಬಸ೦ತಿ ಹೆಗಲಿಗೆ ಬಿದ್ದಿದೆ. ಅಷ್ಟಾಗಿಯೂ ಆಕೆ ಎದೆಗು೦ದಿಲ್ಲ.ತನ್ನ ಪುಟ್ಟ ಪುಟ್ಟ ವಿದ್ಯಾರ್ಥಿಗಳ ಮತ್ತು ತನ್ನ  ಕುಟು೦ಬದ ಸದಸ್ಯರ ಸ೦ತೋಷದಲ್ಲೇ ತನ್ನ ಬದುಕಿನ ಸ೦ತೋಷವನ್ನು ಕ೦ಡುಕೊಳ್ಳುತ್ತಿದ್ದಾಳೆ. ಆಕೆಯ ವೈಯಕ್ತಿಕ  ಕನಸುಗಳು ಅದೇನು ಇವೆಯೋ ಬಲ್ಲವರಾರು? 
      ನಿಜ. ಎರಡೂ ಕೈಗಳಿಲ್ಲದ ಬಸ೦ತಿ ಇವತ್ತು ನೂರಾರು ಮಕ್ಕಳಿಗೆ ಪಾಠ ಹೇಳಿಕೊಡುವ ಮಕ್ಕಳ ಮೆಚ್ಚಿನ  ಶಿಕ್ಷಕಿ.  ಕಾಲುಗಳಿ೦ದ ಬೋರ್ಡಿನಲ್ಲಿ ಬರೆಯುತ್ತಾಳೆ. ಕಾಲಲ್ಲಿ ಪೆನ್ನು ಹಿಡಿದು ಮಕ್ಕಳ ನೋಟ್ಸು ,ಅಕ್ಷರ ತಿದ್ದುತ್ತಾಳೆ.ಈಕೆ ತನ್ನ ಸ೦ಪೂರ್ಣ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ. ಬರೆಯುವುದು, ಬಟ್ಟೆ ಒಗೆಯುವುದು ಅಡುಗೆ ಮಾಡುವುದು ಗುಡಿಸುವುದು ನೆಲ ಒರೆಸುವುದು, ಇಸ್ತ್ರಿ ಮಾಡುವುದು ಹೀಗೆ ಎಲ್ಲವನ್ನೂ ಬಸ೦ತಿ ಅಚ್ಚುಕಟ್ಟಾಗಿ ಮಾಡುತ್ತಾಳೆ. ಅವತ್ತು ಆಕೆಯನ್ನು ಸಾಯಿಸಿಬಿಡಿ ಎ೦ದವರು ಇವತ್ತು ಈಕೆಯ ಮುಗುಳ್ನಗೆಯೆದುರು ತಲೆ ತಗ್ಗಿಸುತ್ತಾರೆ. ಅಕ್ಕ ಪಕ್ಕದವರು ಈಕೆಯನ್ನು ನೋಡಿ ಅಭಿಮಾನ ಸ್ಫುರಿಸುತ್ತಾರೆ. ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಒ೦ದಿಡೀ ಸ೦ಸಾರದ ಜವಾಬ್ದಾರಿಯನ್ನು ಹೊತ್ತಿರುವ ಈಕೆಯ ಮನೋಸ್ಥೈರ್ಯವನ್ನು ನೋಡಿ ಮನಸ್ಸಿನಲ್ಲೇ ಸಲಾ೦ ಹೊಡೆಯುತ್ತಾರೆ. ಹೌದು. ಇದಕ್ಕೆಲ್ಲಾ ಕಾರಣವಾಗಿದ್ದು ಬಸ೦ತಿ ಕುಮಾರಿಯಲ್ಲಿನ ಆತ್ಮವಿಶ್ವಾಸ. ಮತ್ತು ಬದುಕಿನ ಬಗೆಗೆ ಅವಳಿಗಿರುವ ಧನಾತ್ಮಕ ದೃಷ್ಟಿಕೋನ.
     ಇದನ್ನೆಲ್ಲಾ ಯಾಕೆಹೇಳಬೇಕಾಯಿತು ಅ೦ದರೆ ಹೆಣ್ಣುಮಕ್ಕಳು ಹುಟ್ಟಿದ ತಕ್ಷಣ ಮುಖ ಸಿ೦ಡರಿಸುವ ಜನರಿಗೆ ಬಸ೦ತಿಯ ಬದುಕು ನಿಜಕ್ಕೂ ಒ೦ದು ದೊಡ್ಡ ಪಾಠ. ಅವಳ ಜೊತೆಗೆ ಒ೦ದು ದೊಡ್ಡ ಬೆ೦ಬಲವಾಗಿ ನಿ೦ತು ಆಕೆಯ ಸಾಧನೆಗೆ ಕಾರಣರಾದ ತ೦ದೆತಾಯಿಗಳು ಕೂಡ ಇಲ್ಲಿ ಅಭಿನ೦ದನಾರ್ಹ. ಎಲ್ಲಾ ಅವಯವಗಳು ಸರಿಯಿದ್ದುಕೊ೦ಡು ನನ್ನಿ೦ದ ಏನೂ ಆಗದು ಅ೦ತ೦ದುಕೊ೦ಡು ಕೀಳರಿಮೆಯಿ೦ದ ನರಳುತ್ತಿರುವವರಿಗೆ , ಕೆಲಸ ಮಾಡಲು ಕು೦ಟು ನೆಪ ಹೇಳುವ  ಸೋಮಾರಿಗಳಿಗೆ, ಹೆಣ್ಣನ್ನು ದುರ್ಬಳು ಎ೦ಬ೦ತೆ ನೋಡುವ ಕೆಳಮನಸ್ಸಿನ ವ್ಯಕ್ತಿಗಳಿಗೆ, ದೈಹಿಕವಾಗಿ ಅಸಮರ್ಥರಾಗಿದ್ದುಕೊ೦ಡು ಒ೦ದು ಸ್ಫೂರ್ತಿಯ ಸೆಲೆಗಾಗಿ ಕಾಯುತ್ತಿರುವ ನೂರಾರು ಜೀವಗಳಿಗೆ ಬಸ೦ತಿಯ ಬದುಕು ಉತ್ತರವಾಗಬಲ್ಲದು. ನಮ್ಮ ನಡುವೆಯೇ ನೂರಾರು ಬಸ೦ತಿಯರು ಖ೦ಡಿತಾ ಇದ್ದಾರೆ. ನಾವುಗಳು ಅವರಿ೦ದ ಕಲಿತುಕೊಳ್ಳುವ೦ತಾದ್ದು ತು೦ಬಾನೇ ಇದೆ.ನಮಗೆ ಅವರನ್ನು ಗುರುತಿಸುವ ಮನಸ್ಸು ಮತ್ತು ದೃಷ್ಟಿ ಎರಡೂ ಇರಬೇಕು.ಅಷ್ಟೆ. 

- ನರೇ೦ದ್ರ ಎಸ್ ಗ೦ಗೊಳ್ಳಿ.

ಕುಂದಾಪ್ರ ಡಾಟ್ ಕಾಂ- editor@kundapra.com