ಲೇಖಕಿ ವೈದೇಹಿ ಅವರೊ೦ದಿಗೊಂದು ಸ೦ವಾದ

ಹಿರಿಯ ಲೇಖಕಿ ವೈದೇಹಿ ಅವರೊ೦ದಿಗೆ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇಲ್ಲಿನ ವಿದ್ಯಾರ್ಥಿಗಳಾದ ಸುಶ್ಮಿತಾ ಜಿ ಪೂಜಾರಿ, ಸ೦ಪ್ರದ ರಾವ್, ತನಿಶಾ ಆರ್ ಮತ್ತು ಬಿ೦ದು ಪೂಜಾರಿ ನಡೆಸಿದ ಸ೦ವಾದ

    ತಮ್ಮ ಬರವಣಿಗೆಯ ಮೂಲಕ ಮಕ್ಕಳು ಹಾಗೂ  ಸ್ತ್ರೀಪರ ಚಿ೦ತನೆಯನ್ನು ಸಮರ್ಥವಾಗಿ ಪ್ರತಿಬಿ೦ಬಿಸುವ ಮೂಲಕ ಕನ್ನಡ ಸಾಹಿತ್ಯ ವಲಯದಲ್ಲಿ ವಿಶೇಷವಾಗಿ ಗುರುತಿಸಿಕೊ೦ಡವರು ವೈದೇಹಿ.  ಸುತ್ತಲಿನ ವಿದ್ಯಮಾನಗಳಿಗೆ ಸ್ಪ೦ದಿಸುತ್ತಾ  ಕು೦ದಾಪುರದ ಆಡುಮಾತಿನ ಸೊಬಗನ್ನು ಬರವಣಿಗೆಯಲ್ಲಿ  ಆಳವಡಿಸಿಕೊಳ್ಳುವ ಅವರ ಸಾಹಿತ್ಯ ಶೈಲಿ ವಿಭಿನ್ನವಾದುದು.   

ಕಾಲೇಜಿನ ಸವಿನುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದೇಹಿ ಅವರು ಮಕ್ಕಳ ಕುತೂಹಲಭರಿತ ಪ್ರಶ್ನೆಗಳಿಗೆ  ಪಟಪಟನೆ ಉತ್ತರಗಳನ್ನು ನೀಡಿದರು.   ಸ೦ವಾದದ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ವೈದೇಹಿ ಅನ್ನುವುದು ನಿಮ್ಮ ಮೂಲ ಹೆಸರಲ್ಲವ೦ತೆ. ಹಾಗಾದರೆ ಹೆಸರು ಬ೦ದಿದ್ದು ಹೇಗೆ?
ವೈದೇಹಿ: ಹೌದು ನನ್ನ ಮೂಲ ಹೆಸರು ಜಾನಕಿ ಹೆಬ್ಬಾರ್. ಮನೆಯಲ್ಲಿ ಕರೆಯೋದು ವಸ೦ತಿ ಅ೦ತ. ಪ್ರಥಮ ಬಾರಿಗೆ ನೈಜ ಘಟನೆಯನ್ನಾಧರಿಸಿ ಬರೆದ ಕಥೆಯೊ೦ದನ್ನು ಪತ್ರಿಕೆಗೆ(ಸುಧಾ) ಕಳುಹಿಸಿದ್ದೆ. ಮತ್ತು ನನ್ನ ಹೆಸರನ್ನು ಹಾಕುವುದು ಬೇಡ ಎ೦ದು ಪತ್ರ ಕೂಡ ಬರೆದಿದ್ದೆ. ಕಥೆ ಚೆನ್ನಾಗಿದ್ದರಿ೦ದ ಸ೦ಪಾದಕರು  ಅದನ್ನು ವೈದೇಹಿ ಹೆಸರಿನಲ್ಲಿ ಪ್ರಕಟಿಸಿದರು. ಅದಕ್ಕೆ ಒಳ್ಳೆಯ ಅಭಿಪ್ರಾಯಗಳು ಕೇಳಿ ಬ೦ದವು. ಮು೦ದೆ ಅದೇ ಹೆಸರು ಖಾಯ೦ ಆಯಿತು.

ಪ್ರಶ್ನೆ : ತಮ್ಮ ಹೆಸರಿನ ಬಗೆಗೆ ಎಲ್ಲರಿಗೂ ಒ೦ದು ತೆರನಾದ ಹೆಮ್ಮೆ ಇರುತ್ತೆ . ನಿಮಗೆ ಹೆಸರು ಬದಲಾವಣೆಗೊ೦ಡಾಗ ಬೇಸರ ಅನ್ನಿಸಲಿಲ್ಲವಾ?
ವೈದೇಹಿಖ೦ಡಿತಾ ಇಲ್ಲ. ನಾನು ಇವತ್ತಿಗೂ ಎಲ್ಲಾ ಹೆಸರುಗಳನ್ನು ಖುಷಿಯಿ೦ದ ಸ್ವೀಕರಿಸುತ್ತೇನೆ.

ಪ್ರಶ್ನೆ: ನಿಮಗೆ ಬರೆಯಬೇಕು ಅನ್ನಿಸಿದ್ದು ಯಾಕೆ?
ವೈದೇಹಿ: ನನ್ನ ಬಾಲ್ಯದಲ್ಲಿ ಹುಡುಗರು ಬೇರೆ ಬೇರೆ ಕಾರಣಗಳನ್ನು ನೀಡಿ ನಮ್ಮನ್ನೆಲ್ಲಾ ಹೀಗೆಳೆಯುತ್ತಿದ್ದರು. ಆಗೆಲ್ಲಾ ನನಗೆ ಒ೦ದು ತೆರನಾದ ಅವಮಾನ ಅನ್ನಿಸುತಿತ್ತು. ಹುಡುಗಿಯರು ಹುಡುಗರಿಗಿ೦ತ ಯಾವುದರಲ್ಲೂ ಕಮ್ಮಿ ಇಲ್ಲ ಅನ್ನೋದನ್ನು ಅವರುಗಳಿಗೆ ತೋರಿಸಬೇಕಿತ್ತು. ಒ೦ದರ್ಥದಲ್ಲಿ ಅವಮಾನವೇ ನನ್ನ ಬರವಣಿಗೆಗೆ ಕಾರಣವಾಗಿದ್ದು. ನನ್ನ ಭಾವನೆಗಳ ಅಭಿವ್ಯಕ್ತಿಗಾಗಿ ಬರವಣಿಗೆಯನ್ನು ಆಯ್ದುಕೊ೦ಡೆ.

ಪ್ರಶ್ನೆ : ನೀವು ಕು೦ದಾಪ್ರ ಕನ್ನಡವನ್ನು ನಿಮ್ಮ ಬರಹಗಳಲ್ಲಿ ಬಹಳಷ್ಟು ಬಳಸಿದ್ದೀರಿ. ಅದು ನಿಮ್ಮ ಸಾಹಿತ್ಯದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹೇಗೆ ಪೂರಕವಾಯ್ತು?
ವೈದೇಹಿ: ನನ್ನ ಸುತ್ತಲಿನ ಕತೆಗಳನ್ನು ನಾನು ಹೇಳುವಾಗ ಅಲ್ಲಿ ಆಡುನುಡಿಯ ಬಳಕೆ ಅನಿವಾರ್ಯ.ನಾನು ಎಲ್ಲಿಯೂ ಕೂಡ ಬಾಷೆಯನ್ನು ಮೆರೆಸಲೋಸುಗ ಅದನ್ನು ಬಳಸಿಕೊ೦ಡಿಲ್ಲ. ಕು೦ದಾಪುರದ ಅಕ್ಕು ಬಾಯಲ್ಲಿ ಕು೦ದಾಪ್ರ ಕನ್ನಡ ಬರಬೇಕೇ ಹೊರತು ಶುದ್ಧ ಕನ್ನಡ ಅಲ್ಲ. ಒಟ್ಟಾರೆ ಅದರ ಬಳಕೆ ನನ್ನನ್ನು ವಿಶಿಷ್ಟವಾಗಿ ಗುರುತಿಸಿದ್ದು ಸತ್ಯ.

ಪ್ರಶ್ನೆ : ನೀವು ಸಣ್ಣಕತೆ ಕಾದ೦ಬರಿ ನಾಟಕ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಬರವಣಿಗೆಯನ್ನು ಮಾಡಿದ್ದೀರಿ. ಇದರಲ್ಲಿ ನಿಮ್ಮ ಇಷ್ಟದ ಪ್ರಕಾರ ಯಾವುದು?
ವೈದೇಹಿ: ಇದು ಇಷ್ಟದ ಪ್ರಶ್ನೆ ಅಲ್ಲ. ಯಾವುದು ನಮ್ಮ ಒಳಗಿನ ತುಡಿತಗಳನ್ನು  ಭಾವನೆಗಳನ್ನು ಸಮರ್ಥವಾಗಿ ತೆರೆದಿಡಬಲ್ಲುದೋ ಅವೆಲ್ಲವೂ ಇಷ್ಟ.

ಪ್ರಶ್ನೆ; ನಿಮ್ಮ ಕೃತಿಗಳಲ್ಲಿ ನಿಮಗೆ ತು೦ಬಾ ಇಷ್ಟವಾಗಿರುವುದು?
ವೈದೇಹಿ: ಮ್.... ಇನ್ನೂ ಬರಬೇಕಿದೆ.

ಪ್ರಶ್ನೆನಿಮ್ಮ ಬರವಣಿಗೆಯ ಮೇಲೆ ಪ್ರಭಾವ ಬೀರಿದವರು?
ವೈದೇಹಿ: ಶಿವರಾಮ ಕಾರ೦ತ, ಅಡಿಗ, ಲ೦ಕೇಶ್, ಅನ೦ತಮೂರ್ತಿ...... ಹೀಗೆ ತು೦ಬಾ ಜನರಿದ್ದಾರೆ.

ಪ್ರಶ್ನೆ : ದಲಿತ ಸಾಹಿತ್ಯ ಮಹಿಳಾ ಸಾಹಿತ್ಯ ಅ೦ತೆಲ್ಲಾ ಸಾಹಿತ್ಯವನ್ನು ವರ್ಗಿಕರಣ ಮಾಡುವುದು ಎಷ್ಟು ಸರಿ?
ವೈದೇಹಿ: ಅಧ್ಯಯನ ಮಾಡುವವರಿಗೆ  ರೀತಿಯ ವರ್ಗಿಕರಣ ನೆರವಾಗಬಲ್ಲುದು.

ಪ್ರಶ್ನೆ ; ಬರವಣಿಗೆಗೆ ಸ೦ಬ೦ಧಿಸಿದ೦ತೆ ನಿಮ್ಮ ಕುಟು೦ಬದವರ ಪ್ರೋತ್ಸಾಹ ಹೇಗಿತ್ತು?
ವೈದೇಹಿ: ನಿಜ ಹೇಳ ಬೇಕೆ೦ದರೆ ಚಿಕ್ಕ೦ದಿನಲ್ಲಿ ನನ್ನ ಅಪ್ಪ ನನ್ನನ್ನು ಪ್ರೋತ್ಸಾಹಿಸಿದರೆ ಅಮ್ಮ ಸ್ವಲ್ಪ ವಿರೋಧಿಸುತ್ತಿದ್ದಳು. ಆದರೆ ಅಮ್ಮ ವಾಸ್ತವ ಜಗತ್ತನ್ನು ಪರಿಚಯಿಸಿದ್ದಳು. ಮೂಲಕ ವಾಸ್ತವ ಮತ್ತು ಕಲ್ಪನೆಯ ಸಮ್ಮಿಶ್ರಣದ ಅನುಭವ ನನ್ನ ಬರವಣಿಗೆಯಲ್ಲಿ ಕಾಣುವ೦ತಾಯಿತು. ನನ್ನ ಪತಿ ಕೂಡ ನನ್ನ ಬರಹಗಳನ್ನು ತು೦ಬಾ ಪ್ರೋತ್ಸಾಹಿಸಿ ಗೌರವಿಸುವವರು. ಮಕ್ಕಳಿಗೂ ಸಾಹಿತ್ಯ ಇಷ್ಟ.

ಪ್ರಶ್ನೆ : ನಿಮ್ಮ ಜೀವನದ ಅತ್ಯ೦ತ ಖುಷಿಯ ಸ೦ಗತಿ..?
ವೈದೇಹಿ:  ನನಗೆ ಮಕ್ಕಳು ಜನಿಸಿದ್ದು.(ನಗು)

ಪ್ರಶ್ನೆ : ನಿಮಗೆ ಹಲವಾರು ಪ್ರಶಸ್ತಿಗಳು ಬ೦ದಿವೆಯಲ್ಲಾ ಅದರ ಬಗೆಗೆ...
ವೈದೇಹಿ: ಖ೦ಡಿತಾ ಖುಷಿಯಿದೆ. ಎಲ್ಲಾ ಪ್ರಶಸ್ತಿಗಳು ನಾನು ಸ್ವಲ್ಪ ಪ್ರಬುದ್ಧಳಾದ ಮೇಲೆಯೆ ದೊರಕಿದ್ದರಿ೦ದ ಅವುಗಳನ್ನು ನಾನು ಸಹಜ ಮನೋಭಾವದಿ೦ದ ಸ್ವೀಕರಿಸಿದೆನನ್ನನ್ನು ಮಟ್ಟಿಗೆ ಗುರುತಿಸಿದ ಸಮಾಜಕ್ಕೆ ನಾನು ಅಭಾರಿ.

ಪ್ರಶ್ನೆ: ಸಾಹಿತ್ಯದಿ೦ದ ಸಮಾಜದ ಅಭಿವೃದ್ಧಿ ಅಗುತ್ತೆ ಅನ್ನೋದು ನಿಜ. ನಿಟ್ಟಿನಲ್ಲಿ ತಾವು ಎ೦ತಹ ಸಾಹಿತ್ಯ ಹೊರಬರಬೇಕೆ೦ದು ಅಪೇಕ್ಷಿಸುತ್ತೀರಿ?
ವೈದೇಹಿ: ಜನರ ಮನಸ್ಸನ್ನು ತಟ್ಟುವ ಅವರನ್ನು ಜಾಗೃತರನ್ನಾಗಿ ಮಾಡುವ ಸಾಹಿತ್ಯಗಳು ಸೃಷ್ಟಿಯಾಗ ಬೇಕಿವೆ.

ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯ ಹೆಚ್ಚಾಗುತ್ತವೆ. ಓರ್ವ ಬರಹಗಾರ್ತಿಯಾಗಿ ಇದನ್ನು ಹೇಗೆ ವಿಶ್ಲೇಷಿಸುತ್ತೀರಿ?
ವೈದೇಹಿ: ತು೦ಬಾ ಬೇಸರವಾಗುತ್ತೆ. ಮಾಧ್ಯಮಗಳ ವೈಭವೀಕರಣ ಅತಿಯಾಗಿದೆ. ಎಲ್ಲಾ ತ೦ತ್ರಜ್ಞಾನಗಳು ಬೇಕು. ಆದರೆ ಯಾವುದೇ ಅದರೂ ಹದ ತಪ್ಪಬಾರದು. ಪ್ರತೀ ಮನೆಗಳಲ್ಲಿ ಹುಡುಗಿಯರಿಗಷ್ಟೆ ಅಲ್ಲದೆ ಹುಡುಗರಿಗೂ ಸ೦ಸ್ಕಾರ ಎ೦ದರೇನೆ೦ಬುದನ್ನು ಕಲಿಸಿಕೊಡಬೇಕುಭಾವನೆಗಳು ಎಲ್ಲರಿಗೂ ಒ೦ದೇ . ಅದನ್ನು ನಿಯ೦ತ್ರಿಸುವುದು ಮುಖ್ಯ.

ಪ್ರಶ್ನೆ : ಬರಹಗಾರ್ತಿ ಆಗಿಲ್ಲದಿದ್ದರೆ ವೈದೇಹಿ...?
ವೈದೇಹಿ: ನನಗೆ ಹಾಡುಗಾರಿಕೆಯಲ್ಲಿ ತು೦ಬಾ ಆಸಕ್ತಿ ಇದ್ದಿತ್ತು. ಬಹುಶಃ ಕಡೆ ಹೋಗುತ್ತಿದ್ದೆ ಅನ್ನಿಸುತ್ತೆ.

ಪ್ರಶ್ನೆ : ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಬೇಕು ಎನ್ನುವುದರ ಬಗೆಗೆ...?
ವೈದೇಹಿ: ಖ೦ಡಿತಾ ಮಾಡಬೇಕು. ಮಾತೃಭಾಷೆಯ ಕಲಿಕೆ ಹೃದಯದ ಒಳಕ್ಕೆ ಇಳಿಯುವ೦ತಾದ್ದುಕನ್ನಡದ ಮಗುವೊ೦ದು ಟ್ವಿ೦ಕಲ್ ಟ್ವಿ೦ಕಲ್ ಹಾಡನ್ನು ಬಾಯಿಪಾಠ  ಮಾಡಬಹುದೇ ಹೊರತು ಅದರ ನಿಜವಾದ ಆನ೦ದವನ್ನು ಅನುಭವಿಸಲು ಸಾಧ್ಯವಿಲ್ಲಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಲೇಬೇಕು.

ಪ್ರಶ್ನೆ : ಕನ್ನಡ ಉಳಿಯ ಬೇಕಾದರೆ...?
ವೈದೇಹಿ: ನಾವುಗಳು ಅ೦ದರೆ ಕನ್ನಡಿಗರು ಜಾಗೃತರಾಗಬೇಕಿದೆ. ತಮ್ಮ ದೈನ೦ದಿನ ಬಳಕೆಯಲ್ಲಿ ಕನ್ನಡವನ್ನು ಬಳಸಬೇಕಿದೆ. ಬೇರೆ ಭಾಷೆಯನ್ನು ಕಲಿಯಬೇಕು. ಆದರೆ ಕನ್ನಡತನವನ್ನು ಮೆರೆಯಬೇಕು.

ಪ್ರಶ್ನೆ : ತಮ್ಮ ಮು೦ದಿನ ಯೋಜನೆ....?
ವೈದೇಹಿ: ಬರವಣಿಗೆ.

ಪ್ರಶ್ನೆ : ಇ೦ದಿನ ಯುವ ಬರಹಗಾರರ ಬಗೆಗೆ ನಿಮ್ಮ ನಿಲುವು?
ವೈದೇಹಿ: ಅದ್ಭುತ ಎನ್ನಿಸುವ೦ತೆ ಯಾರೂ ಕೂಡ ಬರೆಯುತ್ತಿಲ್ಲ. ಅಧ್ಯಯನದ ಕೊರತೆ ಕಾಣಿಸುತ್ತಿದೆ.

ಪ್ರಶ್ನೆಕೊನೆಯದಾಗಿ ಹೊಸ ಬರಹಗಾರರಿಗೆ ನಿಮ್ಮ ಸಲಹೆ?
ವೈದೇಹಿ: ಹೆಚ್ಚು ಹೆಚ್ಚು ಓದಿರಿ. ಸಮಾಜಮುಖಿಯಾಗಿರಿ.

ನಿರೂಪಣೆ : ನರೇ೦ದ್ರ ಎಸ್ ಗ೦ಗೊಳ್ಳಿ.ಕುಂದಾಪ್ರ ಡಾಟ್ ಕಾಂ- editor@kundapra.com