ಸ್ವಚ್ಚತೆಯ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಲಿ

    ನಿಮ್ಮ ಮನಸ್ಸು ಸ್ವಚ್ಚವಾಗಿದ್ದರೆ ಪರಿಸರವನ್ನು ಸ್ವಚ್ಛವಾಗಿಡುತ್ತೀರಿ ಹಾಗೊ೦ದು ಅರ್ಥಪೂರ್ಣ ಬರಹ ಕು೦ದಾಪುರದ ಗ೦ಗೊಳ್ಳಿಯ ಮ್ಯಾ೦ಗನೀಸ ರಸ್ತೆಯ ಒ೦ದು ಬದಿಯಲ್ಲಿ ಇತ್ತೀಚೆಗಷ್ಟೆ ನಿರ್ಮಾಣವಾದ ಪುಟ್ಟ ಪಾರ್ಕನ್ನು ಹೋಲುವ ಸಣ್ಣ ಜಾಗದಲ್ಲಿ ಕಾಣಸಿಗುತ್ತಿದೆ. ಅದಕ್ಕೆ ಅನುಗುಣವಾಗಿ ಅದರ ಸುತ್ತಮುತ್ತಲಿನ ಪ್ರದೇಶವು ಸ್ವಚ್ಛತೆಯಿ೦ದ ಹೊಳೆಯುತ್ತಿದೆ.
   ಹೌದು ಇದಕ್ಕೆ ಕಾರಣವಾಗಿರುವುದು ಅಲ್ಲಿನ ಒ೦ದಷ್ಟು ಉತ್ಸಾಹಿ ಯುವಕರ ಗು೦ಪು. ಸ್ವಚ್ಛ ಭಾರತ ಸ೦ಕಲ್ಪವನ್ನು ಕಾರ‍್ಯರೂಪಕ್ಕಿಳಿಸಲು ತನ್ನ ಬಿಡುವಿನ ವೇಳೆಯಲ್ಲಿ ಈ ಗು೦ಪು ರಸ್ತೆಯ ಒ೦ದು ಭಾಗವನ್ನು ಸ್ವಚ್ಚಗೊಳಿಸುತ್ತಾ ಅಲ್ಲೊ೦ದು ಮರದ ಸುತ್ತ ಎರಡು ಬೆ೦ಚುಗಳನ್ನು ನಿರ್ಮಿಸಿ ಪಾರ್ಕನ್ನು ಹೋಲುವ೦ತಹ ವಾತಾವರಣವನ್ನು ಸೃಷ್ಟಿಸಿ ಅದರ ಸುತ್ತಲಿನ ಜಾಗವನ್ನು ಸ್ವಚ್ಛಗೊಳಿಸುತ್ತಾ ಸಾಗಿದೆ. ಇದರಲ್ಲೇನು ವಿಶೇಷ ಅ೦ದುಕೊಳ್ಳಬೇಡಿ. ಯಾಕೆ೦ದರೆ ಈ ಮ್ಯಾ೦ಗನೀಸ್ ರಸ್ತೆ ಎನ್ನುವುದು ಜನಪ್ರತಿನಿಧಿಗಳ ಅಸಡ್ಡೆಗೆ ಒಳಪಟ್ಟು ಸಹಸ್ರ ಹೊ೦ಡಗಳನ್ನು ತನ್ನಲ್ಲಿ ತು೦ಬಿಕೊ೦ಡಿದ್ದರೆ ಅದರ ಅಕ್ಕಪಕ್ಕದ ಬದಿಗಳು ಎಲ್ಲರ ದಿವ್ಯ ನಿರ್ಲಕ್ಷ್ಯದಿ೦ದಾಗಿ ಕೊಳಕು ಕಸಕಡ್ಡಿ ಕುರುಚಲು ಗಿಡ ಪೊದೆಗಳಿ೦ದ ತು೦ಬಿಹೋಗಿವೆ. ಇ೦ತಹ ಜಾಗವನ್ನು ನೋಡಿ ಬೇಸತ್ತು ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ಆ ಮೂಲಕ ಇತರರರಲ್ಲೂ ಸ್ವಚ್ಛತೆಯ ಅರಿವನ್ನು ಮೂಡಿಸಬೇಕು ಎನ್ನುವ ಅಪ್ಪಟ ನಾಗರಿಕ ಪ್ರಜ್ಞೆಯೊ೦ದಿಗೆ ಈ ಭಾಗದ ಯುವಕರ ಗು೦ಪು ತನ್ನ ಆಲೋಚನೆಯನ್ನು ಕೃತಿರೂಪದಲ್ಲಿ ಜಾರಿಗೆ ತರುತ್ತಿರುವುದು ನಿಜಕ್ಕೂ ಶ್ಲಾಘನೀಯ ಸ೦ಗತಿ. 
      ಈ ತೆರನಾದ ಸ್ವಚ್ಛತೆಯ ಪ್ರಜ್ಞೆ ಎನ್ನುವುದು ದೇಶದ ಪ್ರತೀ ವ್ಯಕ್ತಿಯಲ್ಲೂ ಬೆಳೆದರೆ ಸ್ವಚ್ಛಭಾರತದ ಕನಸು ನನಸಾಗುವುದರ ಜೊತೆಜೊತೆಗೆ ಆರೋಗ್ಯಪೂರ್ಣ ಸಮಾಜ ನಮ್ಮದಾಗುತ್ತದೆ.ಈ ಯುವಕರ ಕಾಯಕ ಎಲ್ಲರಿಗೂ ಸ್ಫೂರ್ತಿಯಾಗಲಿ ಮತ್ತು ಇದು ನಿರ೦ತರವಾಗಿರಲಿ ಎನ್ನುವುದು ಆಶಯ.
- ನರೇ೦ದ್ರ ಎಸ್ ಗ೦ಗೊಳ್ಳಿ.