ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬುಡಕಟ್ಟು, ಜನಪದೀಯ ಸಂಸ್ಕೃತಿಯ ಅನಾವರಣ

ಆದಿವಾಸಿಗಳಿಂದ ಮಾತ್ರ ನೈಜ ಸಂಸ್ಕೃತಿ ಅರಿಯಲು ಸಾಧ್ಯ: ಡಾ| ಎಚ್ ಶಾಂತಾರಾಮ್
ಕುಂದಾಪುರ: ಇಂದು ನಾಗರೀಕರು ಎಂದು ಬೀಗುವವರು ನಿಜವಾದ ನಾಗರೀಕತೆ ಏನು ಎಂಬುದನ್ನು ಅರಿಯಬೇಕಿದೆ. ಪಾಶ್ಚಾತ್ವ ಸಂಸ್ಕೃತಿಯ ವ್ಯಾಮೋಹ ಹಾಗೂ ಅನುಕರಣೆಯಿಂದಾಗಿ ನೈಜ ಭಾರತೀಯ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ನ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜಿನ ಕಲಾ ವಿಭಾಗದ ವತಿಯಿಂದ ಆರ್. ಎನ್. ಶೆಟ್ಟಿ ಸಂಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬುಡಕಟ್ಟು ಹಾಗೂ ಜನಪದ ಸಂಸ್ಕೃತಿಯ ಅನಾವರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
     ನಮ್ಮ ನಿಜವಾದ ಸಂಸ್ಕೃತಿಯ ಅರ್ಥವನ್ನು ಅರಿತುಕೊಳ್ಳಲು ಮತ್ತೆ ಆದಿವಾಸಿಗಳ ಸಂಸ್ಕೃತಿಯ ಅಧ್ಯಯನ ನಡೆಸುವುದು ಅಗತ್ಯ ಎಂದು ಅವರು ನುಡಿದರು
     ಸಮಾರಂಭವನ್ನು ದೀಪ ಬೆಳಗಿಸಿ ಬಳಿಕ ತೆಂಗಿನ ಫಸಲನ್ನು ಅರಳಿಸಿ ಉದ್ಘಾಟಿಸಿದ ಕುಂದಾಪುರದ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
      ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ ಗಂಗಾಧರ ದೈವಜ್ಞ  ಮಾತನಾಡಿ ಆದಿವಾಸಿಗಳ ಜೀವನಶೈಲಿಯನ್ನು ಅಧ್ಯಯನ ಮಾಡುವುದೆಂದರೆ ಸಂಸ್ಕೃತಿಯ ಅಧ್ಯಯನ ಮಾಡಿದಂತೆ. ಅವರಲ್ಲಿನ ಪಾರಂಪರಿಕ ಜ್ಞಾನವನ್ನು ನಾವು ಅರಿತುಕೊಳ್ಳಬೇಕಾಗಿದೆ.
     ಇಂದು ತಂತ್ರಜ್ಞಾನ ಆಧುನಿಕತೆ ಹೆಚ್ಚಿದಂತೆ ಮನುಷ್ಯನ ಆಯಸ್ಸು ಕೂಡ ಕ್ಷೀಣಿಸುತ್ತಿದೆ. ಇಂದು ನೂರು ಕೋಟಿಯನ್ನು ಮೀರಿರುವ ಜನಸಂಖ್ಯೆ ಕೆಲವೇ ವರ್ಷಗಳಲ್ಲಿ ಎಪ್ಪತ್ತು ಕೋಟಿಗೆ ಇಳಿದರೆ ಅಚ್ಚರಿಪಡಬೇಕಿಲ್ಲ. ಜನಪದಿಯರು ನಮಗೆ ಹಾಕಿಕೊಟ್ಟ ಸಂಸ್ಕೃತಿಯನ್ನು ಮತ್ತೆ ಅವಲೋಕಿಸುವುದು ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಉದ್ಯಮಿ ಕೆ. ಕಾರ್ತಿಕೇಯ ಮಧ್ಯಸ್ಥ ಉಪಸ್ಥಿತರಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್. ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ. ಎಂ. ಗೊಂಡ ಧನ್ಯವಾದಗೈದರು. ಕಾರ್ಯಕ್ರಮ ಸಂಯೋಜಕ ಪ್ರೋ. ಜಿ. ಎಂ. ಉದಯಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ನಿರೂಪಿಸಿದರು.
    ಬುಡಕಟ್ಟು ಸಮುದಾಯದ ಪರಿಕರಗಳ ಪ್ರದರ್ಶನ ಸಮಾರಂಭದ ವಿಶೇಷವಾಗಿತ್ತು. ಸಮಾರಂಭದ ವೇದಿಕೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. 

ಕುಂದಾಪ್ರ ಡಾಟ್ ಕಾಂ- editor@kundapra.com

ಕುಂದಾಪ್ರ ಡಾಟ್ ಕಾಂ- editor@kundapra.com