ಕ್ರಿಕೆಟ್ ಹಬ್ಬದಲ್ಲಿ ಟೀಮ್ ಕುಂದಾಪುರ!

ಟೀಮ್ ಇಂಡಿಯಾಕ್ಕೆ ಶುಭ ಹಾರೈಸಿದ ಕುಂದಾಪುರದ ಕ್ರಿಕೆಟಿಗರು
 ವಿಶಿಷ್ಟ ಕ್ರಿಕೆಟ್ ಪಿಚ್ ನಲ್ಲಿ ನೆನಪು ಬಿಚ್ಚಿಟ್ಟ ಕುಂದಾಪುರದ ಕ್ರಿಕೆಟ್ ದಿಗ್ಗಜರು!
ಕುಂದಾಪುರ: ಇಲ್ಲಿನ ಜ್ಯೂನಿಯರ್ ಕಾಲೇಜು ಕಲಾಮಂದಿರಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ಅನಾವರಣಗೊಂಡಿತ್ತು. ಕ್ರಿಕೆಟ್ ಪ್ರೇಮಿಯಾಗಿರುವ ಅಂತರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ವಿನೂತನ ಪರಿಕಲ್ಪನೆಯಲ್ಲಿ ರೋಟರಿ ಕುಂದಾಪುರ  ಹಾಗೂ ರೋಟರಿ ಕುಂದಾಪುರ ದಕ್ಷಿಣದ ಸಹಭಾಗಿತ್ವದಲ್ಲಿ ಭಾರತ ತಂಡದ ಕ್ರಿಕೆಟ್ ಆಟಗಾರರಿಗೆ ಶುಭ ಹಾರೈಸುವ ಸಲುವಾಗಿ ಕ್ರಿಕೆಟ್ ಹಬ್ಬವನ್ನು ಆಯೋಜಿಸಲಾಗಿತ್ತು. 
     ವಿಶಿಷ್ಟ ಕ್ರಿಕೆಟ್ ಪಿಚ್ ನಲ್ಲಿ ಜರುಗಿದ ಕಾರ್ಯಕ್ರಮವನ್ನು ಮ್ಯಾಚ್ ರೆಫರಿಯಾಗಿ ಭಾಗವಹಿಸಿದ್ದ ರೋಟರಿಯ ಅಸಿಸ್ಟಂಟ್ ಗವರ್ನರ್ ಗಣೇಶ್ ಶೆಟ್ಟಿ ಮೊಳಹಳ್ಳಿ ಟಾಸ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ಕುಂದಾಪುರದಲ್ಲಿ ಕ್ರಿಕೆಟ್ ಆಟವನ್ನು ಪ್ರೋತ್ಸಾಹಿಸಲು ಕ್ರಿಕೆಟ್ ಸಂಬಂಧಿ ಸಂಸ್ಥೆ ಹಾಗೂ ಉತ್ತಮ ಆಟದ ಮೈದಾನದ ಅವಶ್ಯಕತೆ ಇದೆ. ಕ್ರೀಡಾಪ್ರೇಮಿಗಳ ನೆರವಿನಿಂದ ಇಂದು ಸಾಕಾರಗೊಳ್ಳಲಿ ಎಂದರು.
      ಥರ್ಡ ಅಂಪೈರ್ ಆಗಿ ಕೆ. ಕೆ. ಕಾಂಚನ್, ರೋಟರಿ ಕುಂದಾಪುರದ ಮನೋಜ್ ನಾಯರಿ, ರೋಟರಿ ದಕ್ಷಿಣದ ಕೆ. ಪಿ. ಭಟ್ ಉಪಸ್ಥಿತರಿದ್ದರೇ, ಪಿಚ್ ಕಾರ್ಯಕ್ರಮವನ್ನು ಪತ್ರಕರ್ತ ರಾಮಕೃಷ್ಣ ಹೇರ್ಳೆ ನಿರ್ವಹಿಸಿದರು.
     ಸತೀಶ್ ಆಚಾರ್ಯ ಕ್ರಿಕೆಟ್ ದೇವರ ವ್ಯಂಗ್ಯಚಿತ್ರವನ್ನು ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೇ, ಕ್ಯಾನ್ವಾಸ್ ನಲ್ಲಿ ಅತಿಥಿಗಳು  ಟೀಮ್ ಇಂಡಿಯಾಕ್ಕೆ ಶುಭಕೋರಿದರು. 
   ಬಳಿಕ ಕುಂದಾಪುರ ಹಲವಾರು ಕ್ರಿಕೆಟ್ ದಿಗ್ಗಜರೊಂದಿಗೆ ತಮ್ಮ ಕ್ರೀಡಾಲೋಕದ ಅವಿಸ್ಮರಣೀಯ ಕ್ಷಣಗಳನ್ನು ಹಂಚಿಕೊಳ್ಳುವ ಹಾಗೂ ಅವರಿಗೆ ಸನ್ಮಾನಿಸುವ ಕಾರ್ಯಕ್ರಮ ಜರುಗಿತು. ಕುಂದಾಪುರದ ಕ್ರಿಕೆಟ್ ದಿಗ್ಗಜರುಗಳಾದ ಇಲೆವನ್ ಸ್ಟಾರ್ಸ್ ನ ರಾಮಣ್ಣ, ಟೋರ್ಪೆಡೋಸ್ ನಿತ್ಯಾನಂದ, ಪ್ರಕಾಶ್, ಗೋಪಾಲ್, ಹರೀಶ್, ಗೌತಮ್ ಶೆಟ್ಟಿ, ವಿನಯ್ ಪಾಯನ್, ಜಯಶಂಕರ್, ಚಕ್ರವರ್ತಿಯ ಗಣೇಶ್ ನಾವಡ, ರಾಜೀವ ಕೋಟ್ಯಾನ್, ಗಂಗಾಧರ್ ಆಚಾರ್, ಪ್ರದೀಪ್ ವಾಜ್, ಸತೀಶ್ ಕೋಟ್ಯಾನ್, ಸುರೇಶ್ ಆಚಾರ್, ಮನೋಜ್ ನಾಯರ್, ಚೇತನಾದ ಗೋಪಾಲ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕ್ರಿಕೆಟ್ ಬದುಕಿನ ಕ್ಷಣಗಳನ್ನು ಹಂಚಿಕೊಂಡರು.
    ಕ್ರಿಕೆಟ್ ಹಬ್ಬದಲ್ಲಿ ಸತೀಶ್ ಆಚಾರ್ಯರ ಅಪರೂಪದ ಕ್ರಿಕೆಟ್ ವ್ಯಂಗ್ಯಚಿತ್ರ ಪ್ರದರ್ಶನವೂ ಇದ್ದು ಇತ್ತಿಚಿಗೆ ಬಿಡುಗಡೆಗೊಂಡ ಅವರ ನಾನ್ ಸ್ರೈಕರ್ ಪುಸ್ತಕ ಕೂಡ ಮಾರಾಟಕ್ಕೆ ಲಭ್ಯವಿದೆ. 
    ಇಷ್ಟೇ  ಅಲ್ಲದೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿಡಿಯೋ ತುಣುಕುಗಳಿಗೆ ಕಾಮೆಂಟರ್ ಹೇಳುವುದು, ಕ್ರಿಕೆಟ್ ಡೈಲಾಗ್ ಹೊಡೆಯುವುದು, ಕ್ರಿಕೆಟಿಗರ ಕ್ಯಾರಿಕೇಚರ್ ಬಿಡಿಸುವುದು, ಕ್ರಿಕೆಟ್ ಸಂಬಂಧಿ ಪ್ರಶ್ನೆಗಳಿಗೆ ಉತ್ತರಿಸುವುದು ಮುಂತಾದ ಸ್ವರ್ಧೆಗಳು ಮತ್ತು ಅದಕ್ಕೆ ಆಕರ್ಷಕ ಬಹುಮಾನಗಳಿದ್ದು, ಕ್ರಿಕೆಟ್ ಅವತಾರದಲ್ಲಿ ನಿಮ್ಮ ಲೈವ್ ಕ್ಯಾರಿಕೇಚರ್ ಕೂಡ ಮಾಡಿಕೊಡಲಾಗುತ್ತಿದೆ.
    ಕಾರ್ಟೂನು ಪಿಚ್ ನಲ್ಲಿ ಕ್ರಿಕೆಟ್ ಹುಚ್ಚು ಎಂಬ ಟ್ಯಾಗ್ ಲೈನ್ ನೊಂದಿಗೆ ನಡೆಯುತ್ತಿರುವ ಕ್ರಿಕೆಟ್ ಹಬ್ಬ ಫೆಬ್ರವರಿ 13 ರಿಂದ 14ರ ತನಕ ಜರುಗಲಿದೆ.
ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com