ನಮ್ಮತನವನ್ನು ಉಳಿಸಿಕೊಳ್ಳುವುದೇ ಬದುಕಿನ ನಿಜವಾದ ಮೌಲ್ಯ: ಓಂ ಗಣೇಶ್

ಕುಂದಾಪುರ: ಬದುಕಿನಲ್ಲಿ ಮೊದಲು ಸಿದ್ಧಿಯನ್ನು ಸಾಧಿಸಿದರೆ ಮಾತ್ರ ಪ್ರಸಿದ್ಧಿಯನ್ನು ಪಡೆಯಬಹುದು. ನಿಮ್ಮ ನೆಚ್ಚಿನ ಕ್ಷೇತ್ರ ಯಾವುದೇ ಆಗಿರಲಿ ಅಲ್ಲಿಯೇ ಇದ್ದು ಸಾಧಿಸಿ. ಸಣ್ಣ ಸಣ್ಣ ಗೆಲುವನ್ನು ನಮ್ಮದು ಮಾಡಿಕೊಳ್ಳುತ್ತಲೇ ಯಶಸ್ವೀ ವ್ಯಕ್ತಿಗಳಾಗಿ ಬೆಳೆಯಬಹುದು ಎಂದು ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ, ವಾಗ್ಮಿ ಓಂ ಗಣೇಶ್ ಉಪ್ಪುಂದ ಹೇಳಿದರು 
     ಅವರು ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಪತ್ರಿಕೆಯು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ’ಪರಿವರ್ತನೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
   ಟಿ.ವಿ., ಕಂಪ್ಯೂಟರ್, ಮೊಬೈಲ್‌ಗಳು ಯುವಜನರ ಭಾವನೆಗಳನ್ನು ಸಂಪೂರ್ಣ ನಾಶಮಾಡಿ ಮೇಸ್ತರದ ತೆವಲಾಗಿ ಪರಿಣಮಿಸಿವೆ. ಇವೆಲ್ಲವೂ ಮಾಹಿತಿಯ ಮೂಲವಾಗುವುದೇ ಹೊರತು ಅನುಭವಗಳನ್ನು ಕಟ್ಟಿಕೊಡುವುದಿಲ್ಲ. ಸಾಧ್ಯವಾದಷ್ಟು ನಮ್ಮವರನ್ನು ಪ್ರೀತಿಸೋದನ್ನು ಕಲಿಯೋಣ. ನಮ್ಮ ಹಿರಿಯರು ಪ್ರಕೃತಿಯೊಂದಿಗೆ ಬದುಕುವ; ನಮ್ಮ ದೇಶ, ಜನ, ಸಂಸ್ಕೃತಿ, ಆಚಾರ ವಿಚಾರಗಳೊಂದಿಗೆ ಬದುಕುವ ಮೌಲ್ಯ ನಮ್ಮದಾಗಬೇಕು. ಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳುವ ಯಶಸ್ವಿ ಚಿಂತಕರೇ ಬದುಕಿನಲ್ಲಿ ಶ್ರೇಷ್ಠರಾಗುತ್ತಾರೆ ಎಂದರು.
   ಕಾಲೇಜಿನ ಪ್ರಾಂಶುಪಾಲೆ ಸೀಮಾ ಪಿ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದಲ್ಲಿ ಎಲ್ಲಿ ನೋಡಿದರೂ ಕ್ರೌರ್ಯವನ್ನು ಕಾಣುತ್ತಿದ್ದೇವೆ. ಯುವಜನರು ಮತ್ತೊಬ್ಬರತ್ತ ಬೆರಳು ತೋರಿಸುವ ಬದಲು ತಮ್ಮ ತಮ್ಮ ನಡವಳಿಕೆಗಳಲ್ಲಿ ಬದಲಾವಣೆಯನ್ನು ತಂದುಕೊಂಡು ನಮ್ಮ ಜನ, ನಮ್ಮ ದೇಶದ ಒಳಿತಿಗಾಗಿ ಶ್ರಮಿಸಬೇಕು ಎಂದರು.
   ಎನ್.ಎಸ್.ಎಸ್. ನ ಯೋಜನಾಧಿಕಾರಿ ಸುಧಾಕರ ಪಾರಂಪಳ್ಳಿ ಸ್ವಾಗತಿಸಿ, ಉಪನ್ಯಾಸಕಿ ಮಮತಾ ಆಚಾರ್ಯ ವಂದಿಸಿದರು. ಕುಂದಾಪ್ರ ಡಾಟ್ ಕಾಂ ನ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಆಶಯಗೀತೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.ಕುಂದಾಪ್ರ ಡಾಟ್ ಕಾಂ- editor@kundapra.com