ವರ್ಲಿಯ ಹಿಂದೂಜಾ ಚೌಕ್‌ನಲ್ಲಿ ಕಾರ್ಮಿಕ ಪಕ್ಷದ ಗಲಾಟೆ ನಿಯಂತ್ರಣ ಮೀರಿದೆ ಎಂಬ ಮಾಹಿತಿ ಮೊಬೈಲ್‌ನಲ್ಲಿ ಮೊಳಗಿದಾಗ ಹಸಿ ಮಾಂಸ ಕಂಡ ಹದ್ದಿನಂತೆ ಹೊರಟಿದ್ದೆ, ಖದರ್‌ಖಾಕಿ ಖತರ್‌ನಾರ್ ಖಾದಿ ನಡುವಿನ ಹೊಯ್ದಾಟದಲ್ಲಿ ದಿನದೂಡುವವರ ದೊಡ್ಡ ಗುಂಪೇ ಅಲ್ಲಿತ್ತು, ಬೆಳ್ಳಂಬೆಳ್ಳಗ್ಗೆಯೇ ಕಂಠಪೂರ್ತಿ ಕುಡಿದು ತಲೆಗೆ ಕೆಂಪು ಟವಲು ಸುತ್ತಿಕೊಂಡು ಮುಖವೆಲ್ಲಾ ಬೆವರು ಸುರಿಸಿಕೊಂಡು ಅರಚಾಡುತ್ತಿದ್ದ. ನಾಲ್ಕಾರು ಲೋಕಲ್ ರೌಡಿಗಳ ಆ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದರು. ಸುತ್ತುವರಿದಿದ್ದ ಜನಸಂದಣಿಯಿಂದಾಗಿ ಅಲ್ಲಿ ಏನು ನಡೆಯುತ್ತಿದೆ ಎಂದು ಕೂಡಾ ತಿಳಿಯುವಂತಿರಲಿಲ್ಲ. ಆದರೆ ಕಾರ್ಮಿಕ ಪಕ್ಷದ ಮುಖಂಡ ಶಿವದಾಸ್ ಚೌಗಲೆಗೆ ಜಿಂದಾಬಾದ್ ಎಂಬ ಘೋಷಣೆ ಮಾತ್ರ ಮುಗಿಲು ಮುಟ್ಟಿತ್ತು. ಸಹಚರ ಶಿರೋಡ್ಕ್‌ರ್ ಹತ್ತಿರ ಹೋಗಿ ಒಬ್ಬನಲ್ಲಿ ವಿಚಾರಿಸಿದ. ಹೋಟೆಲ್ ಕಾರ್ಮಿಕನ ಮೇಲಿನ ದೌರ್ಜನ್ಯ ಅದಕ್ಕುತ್ತರವಾಗಿ ಕಾರ್ಮಿಕ ಪಕ್ಷದ ಎಂಎಲೆ ಚೌಗಲೆ ಮತ್ತು ಆ ಹೋಟೆಲ್ ಮಾಲೀಕ ಬಬ್ಲೂಯಾದವ್ ನಡುವಿನ ಶೀತಲ ಸಮರವೇ ಈ ಪ್ರತಿಭಟನೆಯ ಸ್ವರೂಪ ಎಂದು ತಿಳಿದು ಬಂತು. ಜಿಪ್ಸಿಯಿಂದಲೇ ಚೌಗಲೆಗೆ ಸುಳಿವು ಕೊಟ್ಟೆ ಪ್ರತಿಭಟನೆ ಸಾಕೆಂಬ ಪ್ರತ್ಯುತ್ತರ ಬಂತು. ಮುಂದಿನ ಕ್ಷಣದಲ್ಲಿ ರಿಬೇಟ್ ಗ್ರೆನಾಡ ದಿಂದ ಸೈಲೆನ್ಸ್‌ರ್ ತೆಗೆದು ಸಿಡಿಸಿದ ಒಂದೇ ಒಂದು ಬುಲೆಟ್ಟಿನ ಸದ್ದು ನಕಲಿ ಪ್ರತಿಭಟನೆಗಾರರ ಕೆಂಪು ಕೊಳಚೆಯನ್ನು ನಿರ್ವಿವರ್ಣಗೊಳಿಸಿತ್ತು.
ಭೂಗತ ಲೋಕದ ಪೆವಿಲಿಯನ್‌ನಿಂದ ಬಂದು ದೌರ್ಜನ್ಯವನ್ನೇ ಬದುಕಿನ ದಿಕ್ಕಾಗಿಸಿಕೊಂಡ ಚಾಂದ್ ಶೆಟ್ಟಿಯಾದ ನನ್ನಂತವರ ಪಾಳಯ ಅಂಡರ್‌ವರ್ಲ್ಡ್‌ನ ಕರಿನೆರಳು ಅಲ್ಲಿ ಚಾಚಿದೆ ಎಂಬ ಸತ್ಯ ಇಡೀ ಮುಂಬೈನ ನಾಗರಿಕರಿಗೆ ದುಸ್ವಪ್ನವಾಗಿ ಕಾಡುತ್ತಿತ್ತು. ಇದೇ ಪರಿಸ್ಥಿತಿ ಸಾವಿನ ಮೇಲೆ ಸಂಶೋಧನೆ ನಡೆಸುವ ಸಿಸಿಬಿ ಪೋಲಿಸರದ್ದೂ ಕೂಡಾ, ಫಾಟ್‌ಕೋಪರ್‌ನ ಬಬ್ಲೂಯಾದವ್ ನಡೆಸುತ್ತಿದ್ದ ಕ್ಲಾಸಿಕ್ ಡಾನ್ಸ್ ಬಾರ್‌ನ ಕಾರ್ಮಿಕನೊಬ್ಬ ಗ್ಯಾಸ್ ಸಿಲಿಂಡರ್ ಸಿಡಿದು ಮೈಸುಟ್ಟು ಮೂರು ದಿನಗಳ ಹಿಂದೆಯೇ ಆಸ್ಪತ್ರೆ ಸೇರಿದ್ದ, ಇದೇ ಜಾಡಿನಲ್ಲಿ ಬಬ್ಬಿಗೆ ಸೇರಿದ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಶಿವದಾಸ್ ಚೇಲಾಗಳು ಹಫ್ತಾವಸೂಲಿ ಮಾಡುತ್ತಿದ್ದರೆ ಬಬ್ಲಿ ಚೌಗಲೆಯ ಮೇಲೆ ರಾಬರಿ ಕೇಸು ಹಾಕಿದ್ದ ಇದೇ ಜಿದ್ದಿಗೆ ಚೌಗಲೆ, ಆ ಕಾರ್ಮಿಕನ ಮೇಲೆ ಬಬ್ಲಿಯೇ ಗ್ಯಾಸ್ ಸಿಲಿಂಡರ್ ಸಿಡಿಸಿ ಅನಾಹುತ ಮಾಡಿದ್ದಾನೆಂದು ನಡುಬೀದಿಯಲ್ಲಿ ಗಲಾಟೆ ಎಬ್ಬಿಸಿದ್ದಾನೆಂಬುದು ಅನಂತರದ ಸುದ್ದಿ.
ಬಿರು ಬಿಸಿಲಿನ ಹೊತ್ತು ಬಬ್ಲಿಯ ಡ್ಯಾನ್ಸ್ ಬಾರ್‌ನ ಸುತ್ತ ನಾಲ್ಕಾರು ಜನ ಸೇರಿದ್ದರು . ಆಗಷ್ಟೇ ಪೋಲೀಸರು ಬಂದು ಹೋದ ಸುಳಿವೆಂಬಂತೆ. ಮುಚ್ಚಿದ್ದ ಅರ್ಧ ಶಟರ್ ಡೋರ್ ಕೆಳಗಿನಿಂದ ನುಸುಳಿಕೊಂಡು ಬಬ್ಲಿ ಹೊರಬಿದ್ದ. ಜಿಪ್ಸಿಯ ಬಾಗಿಲು ಬಳಿ ಬಂದು ಅಯಿಯೇ ಸಾಬ್ ಅಯಿಯೇ ಸಬ್ ಠೀಕ್ ಹೈ ಎಲ್ಲಾ ಸುಳ್ಳು ಬಾತ್ ನನ್ನ ಲೇಬರ‍್ಗೆ ಏನೂ ಆಗಿಲ್ಲ, ಹತ್ತಿರದ ತೆರೇಸಾ ಹಾಸ್ಪಿಟಲ್‌ಗೆ ಹಾಕಿದ್ದೀವಿ, ನಿಮ್ಮ ಸಾಹೇಬ್ರ ಬಾಂದ್ರಾ ಸೈಟ್ ಅಗಲೇ ಮೈನೇ ಮೇ ಛೋಡತಾ ಹೂಂ, ಕ್ಯಾಸೆಟ್ ಕಾರ್ನ್‌ರ್ ಹಪ್ತಾ ಮೇರೇ ಪಾಸ್ ನಹೀ ವಸೂಲಿ ಬಹುತ್ ಶಿರ್‌ದರ್ದ್ ಹೈ ಎಂದು ಒಂದೇ ಉಸುರಿಗೆ ಒದರಿ ನೋಟಿನ ಕಟ್ಟೊಂದನ್ನು ಡ್ಯಾಷ್ ಬೋರ್ಡ್ ಬಾಕ್ಸ್‌ಗೆ ಹಾಕಿ ಹೊರಡಲನುವಾದ ರುಕ್ ಜಾವೊ ಮೈಸುಟ್ಟುಕೊಂಡು ನಿನ್ನ ಹೋಟೆಲ್ ಕಾರ್ಮಿಕನನ್ನು ನಾನು ನೋಡಬೇಕು ಎಂದಿದ್ದಕ್ಕೆ ಸೀದಾ ತೆರೇಸಾ ಲೇಬರ್ ಆಸ್ಪತ್ರೆಗೆ ಕರೆದೊಯ್ದು ತಿಂಗಳುಗಳಿಂದ ನೀರು ಕಾಣದ ಟಾಯ್ಲೆಟ್ಟು, ಉಪಯೋಗಿಸಿ ಅಲ್ಲಲ್ಲೇ ಎಸೆದ ಔಷಧಿಯ ವಾಸನೆಯಿಂದಲೇ ಅಸಹ್ಯ ಹುಟ್ಟಿಸುವ ಆಸ್ಪತ್ರೆಯ ತುಕ್ಕು ಹಿಡಿದು ಕೊಳಕು ಮೆತ್ತಿಕೊಂಡಿದ್ದ ರೆಕ್ಸಿನ್ ಬೆಡ್‌ನಂಚಿನಲ್ಲಿ ಮೈಯೆಲ್ಲಾ ಸುಟ್ಟು ಮಲಗಿದ್ದ ಯುವಕನೊಬ್ಬನನ್ನು ನೋಡಿದ್ದೆ. ಆ ಕೂಡಲೇ ಅವನಿಗೆ ಏನಾದರೂ ಸಹಾಯ ಮಾಡಬೇಕು ಎಂಬ ಮಾನವೀಯತೆ ಮೂಡಿದ್ದು ಆಶ್ಚರ್ಯವೇ ಸರಿ ಆಸ್ಪತ್ರೆಯ ರಿಸ್ಸೆಪ್ಷನ್‌ನಲ್ಲಿ ವಿಚಾರಿಸಿ ಆ ಯುವಕನ ಅಡ್ರಸ್ ಪ್ರೂಫ್ ತಿಳಿದ ನನಗೆ ಆ ಹೊತ್ತು ನಿಜಕ್ಕೂ ಸತ್ತ ಅನುಭವ ಆಗಿತ್ತು.
ಹಂದಾಡಿ ಪಟೇಲರ ಮನೆಯ ವಿಶಾಲ ಕಂಬಳಗದ್ದೆಯ ಕೆಸರಿನಲ್ಲಿ ನಟ್ಟಿಯಲ್ಲಿ ಮೈಮರೆತಿದ್ದ ಶಿರ್ತಾಡಿತ್ಲಿನ ಚಿಕ್ಕಮ್ಮ ಶೆಡ್ತಿ ಗದ್ದೆಯ ಆಳೆತ್ತರದ ಕಂಠದ ಮೇಲೆ ನಿಂತಿದ್ದ ನನ್ನನ್ನು ನೋಡಿದ ಕೂಡಲೇ ಪುರಾಣ ಆರಂಭಿಸುತ್ತಿದ್ದಳು. ಈ ಗಂಡಿಗೆ ಶಾಲಿ ಬರು ಅಪದ್ಧು, ದಿವ್ಸಕ್ಕೆ ನಾಲ್ಕೈದು ರೂಪೈ ಬೇಕ್ ಮತ್ತೆ ನಮ್ಮ ಸುಧಾಕರನೊಟ್ಟಿಗೆ ಬಂಬಯ್‌ರಾರೂ ಕಳ್ಸಿಕೊಡುವ ಅಂದ್ಹೇಳಿಕೇಳ್ರೆ, ಅಂವ ಗಂಡಿಗೆ ಎಸ್.ಎಸ್.ಎಲ್.ಸಿ. ಪಾಸ್ ಮಾಡ್ಸಿನಾರೂ ಕಳ್ಸಿಕೊಡ ಅಂತ್ಹೇಳಿ ನಂಗೇ ಬಯ್ತ ಆ ಮಾಧು ಮಗ ಗೋಪಾಲನಾರೊ ಕಾಣ ಇಡೀ ಶಾಲಿಗೇ ಪಸ್ಟ್ಂಬ್ರ್ ಅವ್ಳ ಪಾಪ ಆ ಗಂಡೀನ ಓದ್ಸೊ ಸ್ಥಿತೀಲಿಲ್ಲೆ, ೭ನೇ ಕ್ಲಾಸ್ ಆದ ಕುಡ್ಲೇ ಹೋಟ್ಲಿಗೆ ಹಾಕತ್ಸರಂಬ್ರ ಎನ್ನುತ್ತದ್ದರೆ ಉಳಿದ ಹೆಂಗಸರೆಲ್ಲ ಅದ್ಕೇ ಹೇಳೂದ ಹಲ್ಲಿದ್ರೆ ಕಡ್ಲಿಯಿಲ್ಲೆ, ಕಡ್ಲಿಯಿದ್ರೆ ಹಲ್ಲಿಲ್ಲೆ ಅಂದಿಕೆ ಎಂದು ಮಾತು ಮುಗಿಸಿದ್ದರು.
ಮುಂಗಾರು ಮುಗಿದು ಭತ್ತ ಕೊಯ್ಲಿಗೆ ಬಂತು. ಗೋಪಾಲ ಮೊದಲೇ ಯೋಜನೆ ಹಾಕಿಕೊಂಡಂತೆ ಅಕ್ಬರ್ ಟ್ರಾವೆಲ್ಸ್ ಶೀನನ ಜೊತೆ ಕ್ಲೀನರ್ ಆಗಿ ಸೇರಿಕೊಂಡ. ಎಂಟನೇ ತರಗತಿಯನ್ನು ಸಿನಿಮಾ ಟೆಂಟಿನಲ್ಲೇ ಕಳೆದ ನಾನೋ ಆ ಹೊತ್ತಿಗೆ ಬಾಂಬೆ ಸೇರಿದ್ದೆ ಸದಾ ಅನೈತಿಕತೆಯ ಗೂಡಾಗಿದ್ದ ಸುಧಾಕರ ಮಾವನ ಸಯಿನ್‌ನ ಬಾರ್ ಒಂದರಲ್ಲಿ ಹಾಥ್ ಮೆ ಸಾಥ್ ಆಗುವುದರಲ್ಲಿ ಮೂರು ವರ್ಷ ಕಳೆದೋಡಿತ್ತು. ಆರಾಮದ ದುಡಿತ ಜೊತೆಗೇ ಕುಡಿತ, ಯಥೇಚ್ಚ ಕೊಬ್ಬು ಮಾಂಸಾಹಾರಗಳಿಂದ ಕೋಣನಂತೆ ಮೈಬೆಳೆಸಿಕೊಂಡು ನಾಲ್ಕಾರು ತಿಂಗಳಿನಲ್ಲಿಯೇ ಶೆಟ್ರ್ ಬಾರಿನ ಕಂಟ್ರೋಲರ್ ಆಗಿ ಬಿಟ್ಟಿದ್ದೆ. ಚಂದ್ರಶೇಖರ ಶೆಟ್ಟಿ ಎಂಬ ನನ್ನ ಮುದ್ದಾದ ಹೆಸರು ಕೂಡ ಚಾಂದ್‌ಶೆಟ್ಟಿ ಎಂದು ಬಣ್ಣ ಬದಲಿಸಿಕೊಂಡು ಭೂಗತ ಕ್ರೌರ್ಯಕ್ಕೆ ಮುಖವಾಣಿಯಂತಾಗಿತ್ತು. ಮುಂದಿನದ್ದು ಶರವೇಗ ಖಾಯಂ ಗಿರಾಕಿ ಶಾರ್ಪ್ ಶೂಟರ್ ಅಫ್ತಾಬ್‌ನ ಜೊತೆ ಸ್ನೇಹ, ಕದ್ದಮಾಲುಗಳ ದಾಸ್ತಾನು, ಭೂಗತ ದೊರೆ ಮೌಸಂ ಆಲಿಯ ಗ್ಯಾಂಗಿನಲ್ಲಿ ಸ್ಮಗ್ಲಿಂಗ್ ಪ್ರಾಕ್ಟೀಸು, ಸಣ್ಣಪುಟ್ಟ ಡೀಲ್‌ಗಳು, ಗೌಸಿಯಾಗಲ್ಲಿಯಲ್ಲಿ ಹಪ್ತಾ ವಸೂಲಿ, ಗೊಯೆಂಕಾ ಮಾಲ್‌ನಲ್ಲಿ ಮಾರವಾಡಿಗಳ ಎತ್ತಂಗಡಿಯ ನಂತರ ಹಿಂತಿರುಗಿ ನೋಡದ ನಾನು ಮಾಜಿ ಶಾಸಕಿ ಸರಳಾಗಾಂಧಿ ಸ್ಟ್ರೆಕ್ ಔಟ್‌ನ ನಂತರ ಪುಲ್‌ಟೈಂ ಸುಪಾರಿ ಕಿಲ್ಲರ್ ಆಗಿ ಬದಲಾಗಿ ಬಿಟ್ಟಿದ್ದೆ.
ಹಾಗೂ ಹೀಗೂ ನನ್ನ ದುರಾಕ್ರಮಣದ ಪಾಲೆಲ್ಲ ಮೋಜು ಮಜಾದಲ್ಲೇ ಕಳೆದು ಹೋಗಿತ್ತು, ಮಾವನ ಮೂಲಕ ಒಂದಷ್ಟು ಹಣ ಊರಿಗೆ ರವಾನೆಯಾಗುತ್ತಿದ್ದ ಸ್ವಲ್ಪ ನೆನಪು, ನನ್ನ ತಾಯಿ ಎನ್ನಿಸಿಕೊಂಡಿದ್ದ ಶಿರ್ತಾಡಿತ್ಲಿನ ಚಿಕ್ಕಮ್ಮ ಶೆಡ್ತಿ ಕೂಡ ತಿಂಗಳು ತಿಂಗಳಿಗೆ ಸರಿಯಾಗಿ ಬರುವ ಮನಿಯಾರ್ಡರ್ ಡ್ರಾ ಮಾಡಿಕೊಳ್ಳುವುದನ್ನು ಬಿಟ್ಟರೆ ಬೇರ‍್ಯಾವುದಕ್ಕೂ ತಲೆಬಿಸಿ ಮಾಡಿಕೊಂಡವಳಲ್ಲ. ಆದರೂ ಕಳೆದ ವರ್ಷ ಮಾಧು ಸತ್ತಾಗ ಬೆಂಕಿಯಿಡಲು ಸ್ವತಃ ಗೋಪಾಲ ಬಂದಿದ್ದನ್ನು ನೋಡಿಯೋ ಏನೋ ಯಾರ‍್ಯಾರನ್ನೋ ಹಿಡಿದು ಮಾವನಿಗೆ ಪೋನ್ ಮಾಡಿಸಿ ನಾನು ಬದುಕಿರುವುದನ್ನು ಖಚಿತಪಡಿಸಿಕೊಂಡಿದ್ದಳು. ಅಂಡರ್‌ವರ್ಲ್ಡ್‌ನ ಕೊಲೆ ಸುಲಿಗೆಗಳಿಂದ ಅರ್ಧಸತ್ತಿದ್ದ ನಾನು ಇಲ್ಲಿನ ಸಂಬಂಧಗಳನ್ನು ಕಡಿದುಕೊಂಡು ಮತ್ತೆ ಊರಿಗೆ ಹೋಗುವುದು ಅಸಾಧ್ಯ ಎಂಬ ಮಾತು ನಮ್ಮ ಆಪ್ತವಲಯದಲ್ಲಿ ಆಗಾಗ ಮೊಳಗುತ್ತಲೇ ಇತ್ತು. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ ನಾನು ಕಳೆದವಾರ ಛೋಟಾ ಶಕೀಲ್ ಗ್ಯಾಂಗ್ ವಿರುದ್ಧ ನಡೆಸಿದ್ದ ಗ್ಯಾಂಗ್‌ವಾರ್‌ನಿಂದಾಗಿ ಕ್ರೈಂಬ್ರಾಂಚ್ ಪೋಲೀಸರ ಕೆಂಗಣ್ಣೆಗೆ ಗುರಿಯಾಗಿದ್ದೆ. ಶಾಸಕ ಚೌಗಲೆ ಮೇಲಿನ ಕೇಸುಗಳಿಗೆ ಪ್ರಮುಖ ಸಾಕ್ಷಿಯಾಗಿದ್ದ ನನ್ನನ್ನು ಅದೇ ಕಾರಣಕ್ಕೆ ರೂಲಿಂಗ್ ಪಾರ್ಟಿಯವರು ಎನ್‌ಕೌಂಟರ್ ಆರ್ಡರ್‌ನಿಂದ ಹೊರತಾಗಿಸಿದ್ದರು. ಇಷ್ಟಾದರೂ ಪಾತಕ ಲೋಕವೊಂದನ್ನು ಬಿಟ್ಟರೆ ನನ್ನ ಅಕ್ಕಪಕ್ಕದಲ್ಲೆ ಇದ್ದ ಸೌತ್ ಕೆನರಾದವರ ಬಗ್ಗೆ ನಾನೇನೂ ತಲೆಕೆಡಿಸಿಕೊಂಡವನಲ್ಲ, ಸದಾ ದೌರ್ಜನ್ಯ, ಸ್ವಾರ್ಥದ ಪ್ರಪಂಚದಲ್ಲಿ. ಹಣ ಪ್ರತಿಷ್ಠೆ ಹುಡುಕಿದ್ದ ನನಗೆ ಅದರ ಅಗತ್ಯವೂ ಇರಲಿಲ್ಲ. ಭೂಗತ ಪ್ರವಂಚವೇ ಹಾಗೆ ನಿನ್ನೆಯಷ್ಷೇ ಶಾಸಕ ಶಿವದಾಸ್ ಚೌಗಲೆಯ ಮೇಲಿದ್ದ ಕ್ರಿಮಿನಲ್ ಆರೋಪಗಳೆಲ್ಲಾ ನಿರಾಧಾರ ಎಂದು ಮುನ್ಸಿಪಲ್ ಕೋರ್ಟ್‌ನಿಂದ ತೀರ್ಪು ಬಂದಿತ್ತು.
ಈಗ ನನಗೆ ಪೋಲಿಸ್ ಎನ್‌ಕೌಂಟರ್ ಭಯ ಕಾಡತೊಡಗಿತು. ಆಸ್ಪತ್ರೆಯ ICU ನಿಂದ ಹೊರಬರುತ್ತಿದ್ದ. ನನಗೆ ಹಮಾರಾ ಬಚಾವತ್ ಕೆ ಲಿಯೇ ಪುಲಿಸ್ ಹೈ ಪಾಲಿಟಿಕ್ಸ್ ಹೈ ತುಮಾರ ಕಾಮ್ ಖತಂ ಹುವಾ ಎಂಬ ಚೌಗಲೆಯ ಧ್ವನಿ ಅಸಂಖ್ಯ ಪ್ರತಿದ್ವನಿಯಾಗಿ ಅಣಕಿಸಿತ್ತು. ಜೊತೆಯಲ್ಲೇ ಆಡಿ ಬೆಳೆದ ಗೋಪಾಲ ಮುಂಬೈನ ದೌರ್ಜನ್ಯದ ದಳ್ಳುರಿಯಲ್ಲಿ ನೊಂದು ಬೆಂದು ಹದಿನೈದು ವರ್ಷಗಳ ನಂತರ ಮೈಸುಟ್ಟುಕೊಂಡು ಸಿಕ್ಕಿದ್ದ. ಅರಿಶಿನ ಗುಂಡಿಯಲ್ಲಿ ನೀರಿಗೆ ಹಾರಿ ಈಜು ಬರದೇ ಮುಳುಗಿ ಹೋಗುತ್ತಿದ್ದ ನನ್ನನು ಎತ್ತಿಹಾಕಿ ಭೂಗತಲೋಕಕೊಬ್ಬ ಚಾಂದಶೆಟ್ಟಿಯನ್ನು ಸೃಷ್ಟಿಸಿದ್ದ ಗೋಪಾಲನಿಗೆ ಪಕ್ಕದಲ್ಲಿದ್ದರೂ ಸಹಾಯ ಮಾಡದೇ ಹೋದ ಪಾಪಪ್ರಜ್ಷೆ ಕಾಡತೊಡಗಿತು. ಕೊನೆಯದಾಗೆ ಬಬ್ಲಿ ಕೊಟ್ಟಿದ್ದ ನೋಟಿನ ಕಟ್ಟುಗಳನ್ನು ಹಾಸ್ಪಿಟಲ್‌ನ ಬಿಲ್ಲಿಗೆ ಜಮಾ ಮಾಡಿದ್ದೆ. ಪಶ್ಚಾತಾಪದಿಂದ ಬಂದ ಎರಡೇ ಹನಿ ಕಣ್ಣೇರು ಸತ್ತಿದ್ದು ಸಾಕು ಬದುಕಬೇಕೆಂದು ಎಚ್ಚರಿಸಿತ್ತು ಪಾರ್ಕಿಂಗ್ ಲಾಂಜ್‌ನಲ್ಲಿದ್ದ ಜಿಪ್ಸಿಯ ಸಮೀಪ ಬರುವಷ್ಷರಲ್ಲಿ ಕಾಲ ಮಿಂಚಿಹೋಗಿತ್ತು ಪಕ್ಕದ ಟ್ಯಾಕ್ಸಿಯಿಂದ ಎರಗಿದ್ದ ೨ ಪ್ರೀಸ್ಟೈಲ್ ಬುಲೆಟ್ಟುಗಳು ಎದೆ, ಕತ್ತನ್ನು ಸೀದಾ ಸಾದಾ ಸೀಳಿ ಮುನ್ನುಗ್ಗಿದವು. ಭೂಗತ ಪಾತಕಿ ಚಾಂದಶೆಟ್ಟಿ ಪೋಲೀಸ್ ಎನ್‌ಕೌಂಟರ್‌ಗೆ ಬಲಿ ಎಂಬ ದಪ್ಪ ಕಪ್ಪಕ್ಷರದ ಬರಹದೊಡನೆ ಸಂಜೆಯ ಮಾತೃಭೂಮಿ ಪತ್ರಿಕೆ ಹೊತ್ತು ಕಂತುವ ಮುಂಚೆಯೇ ಸೋಲ್ಡ್ ಔಟ್ ಆಗಿತ್ತು.
-ಬಿ.ಬಾಲಕೃಷ್ಣ ಬೈಂದೂರು
ಕುಂದಾಪ್ರ ಡಾಟ್ ಕಾಂ- editor@kundapra.com