ಶ್ರವಣಬೆಳಗೊಳದಲ್ಲಿ ನುಡಿಜಾತ್ರೆಗೆ ಮುಂಖ್ಯಮಂತಿಗಳಿಂದ ಚಾಲನೆ.

ಶ್ರವಣಬೆಳಗೊಳ: ಪ್ರತಿಯೊಂದು ರಾಜ್ಯದ ರಾಜ್ಯ ಭಾಷೆಯು ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿ, ಮಾನ್ಯ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಯಾ ರಾಜ್ಯಗಳ ರಾಜ್ಯ ಭಾಷೆ ಸಾರ್ವಭೌಮ ಭಾಷೆಯಾಗಬೇಕು. ಬೇರಾವುದೇ ಭಾಷೆ ಆ ನೆಲದ ಬದುಕಿನ ಮೇಲೆ ಆದಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ. ಸ್ಥಳೀಯತ್ವವನ್ನು ಉಳಿಸಿಕೊಂಡೇ, ಅರ್ಥಾತ್ ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೇ, ಅನ್ಯ ಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ ಎಂದು ಕರ್ನಾಟಕದ ಮುಖ್ಯವಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.
ಅವರು ಶ್ರವಣಬೆಳಗೊಳದಲ್ಲಿ ಆರಂಭವಾದ ೪ ದಿನಗಳ ೮೧ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ಕನ್ನಡ ಭಾಷೆ ಅಷ್ಟೆ ಅಲ್ಲ ಎಲ್ಲಾ ಪ್ರಾದೇಶಿಕ ಭಾಷೆಗಳು ಬಹುದೊಡ್ಡ ಆತಂಕಗಳನ್ನು ಎದುರಿಸುತ್ತಿದೆ. ಅವುಗಳ ಅಸ್ತಿತ್ವಕ್ಕೆ ಧಕ್ಕೆ ತರುವ ರೀತಿಯೊಳಗೆ ವಿದ್ಯಮಾನಗಳು ಬೆಳೆಯುತ್ತಿವೆ. ಇತ್ತೀಚಿಗೆ ಭಾರತ ಸವೋಚ್ಚ ನ್ಯಾಯಾಲಯವೂ ಕೂಡ ಮಗು ಯಾವ ಭಾಷೆಯಲ್ಲಿ ಕಲಿಯಬೇಕೆಂಬ ತೀರ್ಮಾನ ಪಾಲಕರಿಗೆ ಸೇರಿದ್ದು ಎಂಬ ತೀರ್ಪು ನೀಡಿದೆ. ಇದು ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲ ದೇಶದ ಎಲ್ಲಾ ರಾಜ್ಯ ಭಾಷೆಗಳಿಗೆ ಬಂದಿರುವ ಕುತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು ಎಂದು ಅವರು ಶಾಸನ ಅಧ್ಯಯನ ಕೇಂದ್ರ ಸ್ಥಾಪನೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಅಗತ್ಯ ಬಿದ್ದರೆ ಮತ್ತೊಂದು ಕೋಟಿ ರೂಪಾಯಿ ನೀಡಲು ಸಿದ್ದ ಎಂದು ಭರವಸೆ ನೀಡಿದರು.
ಆಶಯ ಭಾಷಣ
ಈ ಸಮ್ಮೇಳನ ಕನ್ನಡಿಗರನ್ನು ಕಟ್ಟುವ, ಅವರ ಬದುಕನ್ನು ಹಸನಗೊಳಿಸುವ ಅವರ ಬದುಕಿನ ಆಶಯಗಳಿಗೆ ಮುಖವಾಣಿಯಾಗಿ ಈ ಸಮ್ಮೇಳನವಾಗಿ ಮೂಡಿ ಬರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಆಶಯ ವ್ಯಕ್ತಪಡಿಸಿದರು.
ಈ ಸಮ್ಮೇಳನದಲ್ಲಿ ಸಾಹಿತ್ಯಕ ಚರ್ಚೆಗಿಂತ ಹೆಚ್ಚಾಗಿ ನಾಡು ನುಡಿ ಜನ ಬದುಕು ಆತಂಕಗಳನ್ನು ವಿಷಯವಾಗಿಸಿದ್ದೇವೆ. ಕನ್ನಡ ಮಾಧ್ಯಮದ ಕುರಿತು ಸರ್ಕಾರ ಗಂಭೀರ ಚಿಂತನೆ ಮಾಡಿ ಸಾರ್ವತ್ರಿಕ ಪರಿಹಾರ ಮಾಡಬೇಕು ಎಂದು ಅವರು ಆಗ್ರಹಿಸಿದರು.
ದಲಿತ ಅಕ್ಷರ ದೈತ್ಯನನ್ನು ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡಿರುವುದು, ಕನ್ನಡದ ಕೆಲಸ ಕನ್ನಡ ಮಾಧ್ಯಮದ ಆಂದೋಲನ ವೇದಿಕೆಯಾಗಿ ಈ ಸಮ್ಮೇಳನವನ್ನು ಮಾಡಲು ನಿರ್ಧರಿಸಿ ಕಾರ್ಯಪ್ರವೃತ್ತವಾಗಿದೆ. ಎಂದು ಹಾಲಂಬಿ ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷರ ಭಾಷಣ:
ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣ ಮಾಡುವುದೊಂದೇ ಮಾತೃಭಾಷಾ ಶಿಕ್ಷಣ ಸಮಸ್ಯೆಗೆ ಪರಿಹಾರ. ಆಗ ಮಾಲಿಯ ಮಗ ಮತ್ತು ಮಾಲೀಕನ ಮಗ ಪ್ರಧಾನ ಮಂತ್ರಿಯ ಮಗ ಮತ್ತು ಪೌರಕಾರ್ಮಿಕನ ಮಗ ಒಂದೇ ಬೆಂಚಿನ ಮೇಲೆ ಕುಳಿತುಕೊಳ್ಳುವ ಅವಕಾಶ ಸಿಗುತ್ತದೆ ಎಂದು ಸಮ್ಮೇಳನಾಧ್ಯಕ್ಷ ಸಿದ್ಧಲಿಂಗಯ್ಯ ಅವರು ಅಭಿಪ್ರಾಯ ಪಟ್ಟರು.
ಕನ್ನಡ ಭಾಷೆಯ ಉಳಿವಿಗಾಗಿ ಶ್ರಮಿಸಿದ ಪೂರ್ವ ಸೂರಿಗಳನ್ನು ನೆನಪಿಸಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಾಧ್ಯಕ್ಷ ಸಿದ್ಧಲಿಂಗಯ್ಯ ಅವರು ಕನ್ನಡ ಭಾಷೆಯ ಕುರಿತ ಗಂಭೀರ ವಿಷಯಗಳನ್ನು ೨೨ ಪುಟಗಳ ಮುದ್ರಿತ ಭಾಷಣವನ್ನು ಓದಿದರು.
ಕರ್ನಾಟಕವು ದೇಶದಲ್ಲೆ ಕಲೆ, ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಗಳಲ್ಲಿ ಶ್ರೀಮಂತವಾದ ರಾಜ್ಯ. ಇದರ ರಾಜಧಾನಿ ಬೆಂಗಳೂರು ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ವಾಣಿಜ್ಯ ನಗರವಾಗಿ ಐತಿಹಾಸಿಕ ನೆನಪುಗಳನ್ನು ಇಟ್ಟುಕೊಂಡಿದೆ. ಈ ನಗರ ವ್ಯಾಪಾರ, ಮಾಹಿತಿ, ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಶಿಕ್ಷಣ ಮತ್ತು ವಾಸ್ತುಶಿಲ್ಪ ಮುಂತಾದ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆದಿದೆ. ದೇಶ ವಿದೇಶಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸಿದೆ. ಇಂತಹ ಬೆಂಗಳೂರು ಅತ್ಯಗತ್ಯವಾಗಿ ಕನ್ನಡೀಕರಣಗೊಳ್ಳಬೇಕಾಗಿದೆ. ಆದ್ದರಿಂದ ಬೆಂಗಳೂನಲ್ಲಿ ಸಮಗ್ರ ಕರ್ನಾಟಕ ಅನನ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದರು.
ನಾ.ಡಿಸೋಜಾ ಅವರು ಸಮ್ಮೇಳನಾ ಪೂರ್ವ ಅಧ್ಯಕ್ಷರ ಭಾಷಣ ಮಾಡಿ ಕನ್ನಡ ಧ್ವಜವನ್ನು ಹಸ್ತಾಂತರಿಸಿದರು.
ಸಚಿವರಾದ ರಾಮಲಿಂಗರೆಡ್ಡಿ, ಟಿ.ಬಿ.ಜಯಚಂದ್ರ, ಉಮಾಶ್ರೀ, ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆ, ಮೊದಲಾದವರು ವೇದಿಕೆಯಲ್ಲಿದ್ದರು.
ಎಸ್ ಎಲ್ ಬೈರಪ್ಪ ಪರಿಷತ್ತಿನ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು, ವಿವಿಧ ಪತ್ರಿಕೆಗಳ ವಿಶೇಷಾಂಕವನ್ನು ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು.
 ಉಸ್ತುವಾರಿ ಸಚಿವ ಸಮಿತಿಯ ಕಾರ್ಯಾಧ್ಯಕ್ಷ ಎಚ್.ಸಿ ಮಹಾದೇವಪ್ಪ ಸ್ವಾಗತಿಸಿದರು. ಶ್ರವಣಬೆಳಗೊಳಗೊಳದ ಶಾಸಕ ಸಿ.ಎಸ್.ಬಾಲಕೃಷ್ಣ  ಅವರು ಆತೀಥ್ಯದಲ್ಲಿ ತೊಡಗಿದ್ದರು.